Laxman Savadi: ಮೂರು ಸಾವಿರ ರೂಗಾಗಿ ಸರ್ಕಾರಿ ಡಿಸೇಲ್ ಹಾಕಿಸಿಕೊಳ್ಳುವ ನಿರ್ಗತಿ ನನಗೆ ಬಂದಿಲ್ಲ: ಸಾರಿಗೆ ಸಚಿವ ಸವದಿ

ನನಗೆ ಆಗದೆ ಇರುವವರು ಈ ಘಟನೆಯನ್ನು ಪ್ರಚಾರ ಮಾಡುತ್ತಿದ್ದರೆ, ಅವರಿಗೆ ಒಳ್ಳೆದು ಆಗಲಿ

ಡಿಸಿಎಂ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

  • Share this:
ಅಥಣಿ (ಜ. 9): ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಖಾಸಗಿ ಕಾರಿಗೆ ​ ಸರ್ಕಾರಿ ಡಿಪೋದಲ್ಲಿ ಡಿಸೇಲ್​ ಹಾಕಿಸಿರುವ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ. ನಿಗಮ ನಷ್ಟದಲ್ಲಿದೆ ಎಂದು ನೌಕರರಿಗೆ ಹೇಳುವ ಸಚಿವರು ಹೀಗೆ ಸೌಲಭ್ಯಗಳನ್ನು ತಮ್ಮ ಸ್ವ ಹಿತಾಸಕ್ತಿಗೆ ಬಳಸಿಕೊಂಡ ಕ್ರಮ ಎಷ್ಟು ಸರಿ ಎಂಬ ಟೀಕೆಗಳು ವ್ಯಕ್ತವಾಗಿದೆ. ಈ ಘಟನೆ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನಲೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರದಂತೆ  ಸಚಿವರ ಖಾಸಗಿ ಕಾರಿಗೆ ಡೀಸೆಲ್​ ಹಾಕಿದ ಘಟಕದ ಕಿರಿಯ ಸಾಹಯಕರಿಗೆ ಕಾರಣ ಕೇಳಿ ಶೋಕಾಸ್​ ನೋಟಿಸ್​ ಕೂಡ ಜಾರಿ ಮಾಡಲಾಗಿದೆ. ಇದು ಸಿಬ್ಬಂದಿಯಿಂದ ಆದ ಆಚಾತುರ್ಯ ಎಂದು ಘಟನೆ ಮಾರೆಮಾಚುವ ಯತ್ನ ನಡೆದಿದೆ. ಈ ನಡುವೆ ಈ ಕುರಿತು ಹೇಳಿಕೆ ನೀಡಿರುವ ಸಚಿವರು, ಮೂರು ಸಾವಿರ ರೂಗಾಗಿ ಸರ್ಕಾರಿ ಡಿಸೇಲ್ ಹಾಕುವ ನಿರ್ಗತಿ ಇನ್ನು ನನಗೆ  ಬಂದಿಲ್ಲ ಎಂದು ಕಿಡಿಕಾರಿದ್ದಾರೆ.

"ದೇವರು ನಮ್ಮ ಕುಟುಂಬಕ್ಕೆ ಆರ್ಥಿಕವಾಗಿ ತುಂಬಾ ನೀಡಿದ್ದಾನೆ. ನನ್ನ ಖಾಸಗಿ ಕಾರಿನಲ್ಲಿ ಖಾಸಗಿ ಡ್ರೈವರ್ ಜೊತೆಗೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಇಲ್ಲಿನ ಸರ್ಕಾರಿ ಬಸ್​ ಡಿಪೋ ಆವರಣದಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಡ್ರೈವರ್‌ ಡಿಸೇಲ್ ಹಾಕಿಸಬೇಕು ಎಂದು ಅಲ್ಲಿನವರನ್ನು ವಿಚಾರಿಸಿದ್ದಾರೆ. ಇಲ್ಲಿ ಸಮೀಪದಲ್ಲಿ ಪಂಪ್ ಇದೆಯಾ ಎಂದು ಕೇಳಿದ್ದಾರೆ. ಅದಕ್ಕೆ ಸ್ಥಳೀಯ ದೂರ ಯಾಕೆ ಇಲ್ಲೆ ಪಂಪ್​​ ಇದೆ ಇಲ್ಲಿಯೇ ಹಾಕಿಸಿ ಎಂದು ಹೇಳಿದ್ದಾರೆ. ಈ ವೇಳೆ ನಮ್ಮ ಡ್ರೈವರ್ ಗೆ ಅರಿವು ಇಲ್ಲದ ಕಾರಣ, ಹೊರಗಡೆ ಹೋಗದೆ ಡಿಪೋದ ಒಳಗಡೆಯಿದ್ದ ಪಂಪ್​​ನಲ್ಲಿ ಡಿಸೇಲ್ ಹಾಕಿಕೊಂಡಿದ್ದಾರೆ. ಕಾರ್ಯಕ್ರಮದಿಂದ ಹೊರ ಬಂದಾಗ ನನಗೆ ವಿಷಯ ಗೊತ್ತಾಗಿದೆ" ಎಂದರು.

"ಇಲ್ಲಿ ಪಂಪ್ ಮ್ಯಾನೇಜರ್ ಕರ್ತವ್ಯ ಲೋಪ ಎಸಗಿದ್ದಾರೆ. ಅವರು ಹೇಳಬೇಕಾಗಿತ್ತು ಇಲ್ಲಿ ಖಾಸಗಿ ವಾಹನಗಳ ಡಿಸೇಲ್ ಹಾಕಲ್ಲ ಎಂದು ಸ್ಪಷ್ಟಪಡಿಸಬೇಕಿತ್ತು. ಆದರೆ ಅದು ಆಗಿಲ್ಲ. ಇದು ಅಚಾತುರ್ಯದಿಂದ ನಡೆದಿರುವ ಘಟನೆ. ನನಗೆ ಆಗದೆ ಇರುವವರು ಇದನ್ನ ಪ್ರಚಾರ ಮಾಡುತ್ತಿದ್ದರೆ, ಅವರಿಗೆ ಒಳ್ಳೆದು ಆಗಲಿ" ಎಂದರು.

ಇದನ್ನು ಓದಿ: ವರ್ಷದೊಳಗೆ ಚಿಕ್ಕಬಳ್ಳಾಪುರದಲ್ಲಿ ಹಲವು ಕೈಗಾರಿಕೆಗಳ ಸ್ಥಾಪನೆ ನಿಶ್ಚಿತ : ಸಚಿವ ಸುಧಾಕರ್

ಏನಿದು ಘಟನೆ: 

ನಿನ್ನೆ  ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನೆಗೆ ಬೆಳಗಾವಿಗೆ ಡಿಸಿಎಂ ಲಕ್ಷ್ಮಣ್ ಸವದಿ ಆಗಮಿಸಿದ್ದರು. ಈ  ವೇಳೆ ತಮ್ಮ ಖಾಸಗಿ ವಾಹನಕ್ಕೆ ಬೆಳಗಾವಿಯ ಡಿಪೋ‌ ನಂಬರ್ 3ರ ಪೆಟ್ರೋಲ್ ಬಂಕ್‌ನಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಕಾರು ಚಾಲಕ  ಡೀಸೆಲ್ ಹಾಕಿಸಿಕೊಂಡಿದ್ದರು. ಸಂಸ್ಥೆಯ ನಿಯಮ ಉಲ್ಲಂಘಿಸಿ 44 ಲೀಟರ್ ಇಂಧನ ಪೂರೈಕೆ ಮಾಡಲಾಗಿದೆ. ಕೆಎ03 ಎನ್.ಎಫ್.8989 ವಾಹನಕ್ಕೆ 44 ಲೀಟರ್ ಇಂಧನ ಹಾಕಲಾಗಿದೆ.

ಈ ಬಗ್ಗೆ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಬೆಳಗಾವಿ ವಾಯುವ್ಯ ಸಾರಿಗೆ ನಿಗಮದ ಅಧಿಕಾರಿ   ಸಾರಿಗೆ ಇಲಾಖೆ ಕಿರಿಯ ಸಹಾಯಕ ಕಿಶೋರ ಬಿ.ಎಸ್ ಗೆ ನೋಟಿಸ್ ಜಾರಿ ಮಾಡಿದ್ದಾರೆ. ಸಂಸ್ಥೆ ನಿಯಮ ಉಲ್ಲಂಘಿಸಿ ಇಂಧನ ಹಾಕಿದ್ದಕ್ಕೆ, ಯಾಕೆ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಬಾರದು? ಏಳು ದಿನಗಳ ಒಳಗಾಗಿ ನೋಟಿಸ್ ಗೆ ಉತ್ತರಿಸುವಂತೆ ವಾಕರಸಾ ಸಂಸ್ಥೆ ಬೆಳಗಾವಿ 3ನೇ ಘಟಕದ ವ್ಯವಸ್ಥಾಪಕರಿಂದ ನೋಟಿಸ್ ಜಾರಿ ಮಾಡಲಾಗಿದೆ.
Published by:Seema R
First published: