ಗಣಿನಾಡಿನಲ್ಲೂ ಪೂರ್ಣಗೊಳ್ಳದ ಯೋಜನೆಗಳಿಗೆ ಉದ್ಘಾಟನೆ ಭಾಗ್ಯ


Updated:March 13, 2018, 6:15 PM IST
ಗಣಿನಾಡಿನಲ್ಲೂ ಪೂರ್ಣಗೊಳ್ಳದ ಯೋಜನೆಗಳಿಗೆ ಉದ್ಘಾಟನೆ ಭಾಗ್ಯ

Updated: March 13, 2018, 6:15 PM IST
- ಶರಣು ಹಂಪಿ, ನ್ಯೂಸ್18 ಕನ್ನಡ

ಬಳ್ಳಾರಿ(ಮಾ. 13): ಸಾರ್ವತ್ರಿಕ ಚುನಾವಣೆ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಕ್ಕೆ ಚುನಾವಣಾ ನೀತಿ ಸಂಹಿತೆಯ ಗುಮ್ಮ ತೊಡರುಗಾಲು ಹಾಕುತ್ತಿದೆ. ಈ ಕಾರಣಕ್ಕೆ ಗಣಿನಾಡು ಬಳ್ಳಾರಿಯಲ್ಲಿ ತರಾತುರಿಯಲ್ಲಿ ಬಸ್ ನಿಲ್ದಾಣ, ಡಿಪೋ ಉದ್ಘಾಟನೆ ಭಾಗ್ಯ ದೊರೆಯುತ್ತಿದೆ. ಕನಿಷ್ಠ ಸೌಲಭ್ಯಗಳು ಇಲ್ಲದೆ ಬಸ್ ನಿಲ್ದಾಣ ಉದ್ಘಾಟನೆಯಾಗಿದ್ದಕ್ಕೆ ಜನತೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಈಗೇನಿದ್ದರೂ ರಿಬ್ಬನ್ ಕಟ್ಟಿಂಗ್ ಮಾಡಿ ಉದ್ಘಾಟನೆ ಮಾಡುವ ಪದ್ಧತಿ ಇದೆ. ಕಳೆದ ನಾಲ್ಕು ವರ್ಷದಲ್ಲಿ ಕಾಣಿಸಿದ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಇದೀಗ ದಿಢೀರ್ ತೆರೆ ಮೇಲೆ ಬರಲು ಯತ್ನಿಸಿದಂತೆ ಕಾಣುತ್ತಿದೆ. ನಿನ್ನೆ ಸಂಡೂರು ತಾಲೂಕಿನ ಯಶವಂತನಗರ ನೂತನ ಬಸ್ ನಿಲ್ದಾಣ ಕನಿಷ್ಠ ಶೌಚಾಲಯವೂ ನಿರ್ಮಿಸದೇ ಉದ್ಘಾಟನೆ ಮಾಡಲು ಸ್ಥಳೀಯ ಆಡಳಿತರೂಢ ಕಾಂಗ್ರೆಸ್ ಶಾಸಕ ತುಕಾರಾಂ ಆಗಮಿಸಿದ್ದರು.

ಕೆಲ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ‌. ಶೌಚಾಲಯ ನಿರ್ಮಿಸದೇ ನೂತನ ಬಸ್ ನಿಲ್ದಾಣ ಉದ್ಘಾಟಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಈ ವಿರೋಧಕ್ಕೆ ಸೊಪ್ಪು ಹಾಕದೆ ಉದ್ಘಾಟನೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಶಾಸಕರ ಬೆಂಬಲಿಗರು ಹಾಗೂ ಸ್ಥಳೀಯರ ಮಧ್ಯೆ ವಾಗ್ವಾದ, ನೂಕಾಟ ನಡೆಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ಹೆಚ್​.ಎಂ.ರೇವಣ್ಣ, ಇದನ್ನು ರಾಜಕೀಯಗೊಳಿಸಬಾರದು, ತಮ್ಮ ಇಲಾಖೆಯಿಂದ ಬಸ್ ನಿಲ್ದಾಣ ನಿರ್ಮಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

ಹೆಚ್.ಎಂ.ರೇವಣ್ಣ ಅವರಿಂದ ಉದ್ಘಾಟನೆ


ಜಿಲ್ಲೆಯ ಬಳ್ಳಾರಿ ನಗರ, ಕುರುಗೋಡು, ಸಿರುಗುಪ್ಪ ಪಟ್ಟಣದ ಬಸ್ ನಿಲ್ದಾಣ, ನೂತನ ಡಿಪೋ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಇಂದು ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಚಾಲನೆ ನೀಡಿದರು. ಬಳ್ಳಾರಿ ನಗರದಲ್ಲಿರುವ ಸಿಟಿ ಟರ್ಮಿನಲ್‌ ಬಸ್ ನಿಲ್ದಾಣವೂ ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗಿದೆ ಎಂಬ ಅಪಸ್ವರ ಕೇಳಿಬಂದಿದೆ. ನಗರದ ಹೃದಯಭಾಗದಲ್ಲಿರುವ ಹಳೆಯ ಬಸ್ ನಿಲ್ದಾಣದಲ್ಲಿ ಹೊಸದಾಗಿ 15 ಕೋಟಿ ವೆಚ್ಚದಲ್ಲಿ ಕೇವಲ ಹತ್ತು ತಿಂಗಳಲ್ಲಿ ಕಾಮಗಾರಿ ಸಂಪೂರ್ಣಗೊಳಿಸಿದ್ದಾರೆ ಎಂದು ಇಲಾಖೆ ಹೇಳುತ್ತಿದೆ. ಆದರೆ ವಾಸ್ತವವಾಗಿ ಇನ್ನೂ ಕೆಲಸ ಬಾಕಿಯಿದೆ. ಚುನಾವಣೆ ನೀತಿ ಸಂಹಿತೆಗೆ ಹೆದರಿ ಸರ್ಕಾರ ಉದ್ಘಾಟನೆ ಭಾಗ್ಯಕ್ಕೆ ಜೋತು ಬಿದ್ದಿದೆ. ತರಾತುರಿಯಲ್ಲಿ ಕಟ್ಟಡಗಳಿಗೆ ಉದ್ಘಾಟನೆ ಭಾಗ್ಯ ದೊರೆತು ಮುಂದೆ ಅನಾಹುತವಾಗಬಾರದು ಎಂದು ಸ್ಥಳೀಯರು ಅಭಿಪ್ರಾಯಪಡುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗವು ಚುನಾವಣೆ ನೀತಿ ಸಂಹಿತೆಯನ್ನು ಯಾವಾಗಲಾದರೂ ಘೋಷಿಸಬಹುದು. ಅಷ್ಟರೊಳಗಾಗಿ ಸಾಧ್ಯವಾದಷ್ಟು ಉದ್ಘಾಟನಾ ಭಾಗ್ಯ ನೀಡಿ ಮತದಾರರ ಮುಂದೆ ಹೋಗಲು ರಾಜ್ಯಸರ್ಕಾರ ಮುಂದಾಗಿದೆ. ಇದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದರೆ, ತರಾತುರಿಯಲ್ಲಿ ಉದ್ಘಾಟನೆಯಾದ ಬಸ್ ನಿಲ್ದಾಣ ಬಳಕೆ ಮಾಡುವ ಜನತೆ ಯಾವುದೇ ಕಾರಣಕ್ಕೂ ಅನಾಹುತವಾಗದಿರಲಿ ಎಂದು ದೇವರಿಗೆ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ