ಕೋಟ್ಯಂತರ ರೂಪಾಯಿ ನಷ್ಟದಲ್ಲಿ ಮುಳುಗಿದೆ ಸಾರಿಗೆ ಇಲಾಖೆ; ಸಚಿವ ತಮ್ಮಣ್ಣ ವಿರುದ್ಧ ನೌಕರರ ಆಕ್ರೋಶ

ಸಾರಿಗೆ ನಿಗಮಗಳ ಅಭಿವೃದ್ಧಿ ಹಾಗೂ ನೌಕರರ ಶ್ರೇಯೋಭಿವೃದ್ಧಿಯ ಚಿಂತನ-ಮಂಥನದ ಕೇಂದ್ರವಾಗಬೇಕಿದ್ದ ಸೆಂಟ್ರಲ್ ಹಾಗೂ ಬ್ರಾಂಚ್ ಆಫೀಸ್ ಗಳು ವರ್ಗಾವಣೆ, ಗುತ್ತಿಗೆ, ಅನಗತ್ಯ ಯೋಜನೆಗಳ ದಂಧೆಯ ಕೇಂದ್ರಗಳಾಗುತ್ತಿವೆ. ಅಷ್ಟೇ ಅಲ್ಲದೇ,  ಗುತ್ತಿಗೆದಾರರಿಂದ ಸಚಿವರಿಗೆ ಕಿಕ್ ಬ್ಯಾಕ್ ಸಲ್ಲಿಕೆಯಾಗುತ್ತಿದೆ ಎನ್ನುವ ಆರೋಪವೂ ಇದೆಯಂತೆ.

Latha CG | news18
Updated:June 6, 2019, 5:31 PM IST
ಕೋಟ್ಯಂತರ ರೂಪಾಯಿ ನಷ್ಟದಲ್ಲಿ ಮುಳುಗಿದೆ ಸಾರಿಗೆ ಇಲಾಖೆ; ಸಚಿವ ತಮ್ಮಣ್ಣ ವಿರುದ್ಧ ನೌಕರರ ಆಕ್ರೋಶ
ಸಚಿವ ಡಿ.ಸಿ.ತಮ್ಮಣ್ಣ
Latha CG | news18
Updated: June 6, 2019, 5:31 PM IST
ಬೆಂಗಳೂರು,(ಜೂ.06): ಮೈತ್ರಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡು ವರ್ಷದ ಮೇಲಾದರೂ ಈ ಮಹಾನುಭಾವ ಸಚಿವ ಇಲಾಖೆಯಲ್ಲಿ ಏನಾಗುತ್ತಿದೆ ಎಂಬುದನ್ನು ಪರಿಶೀಲಿಸುವ ಗೋಜಿಗೆ ಹೋಗಿಲ್ಲ. ಇವರ ನಿರ್ಲಕ್ಷ್ಯ ನೋಡಿದರೆ ಆ ಕಾಳಜಿ ಹಾಗೂ ಬದ್ಧತೆ ಎರಡೂ ಅವರಲ್ಲಿ ಕಾಣಿಸುತ್ತಿಲ್ಲ ಅನ್ನಿಸುತ್ತದೆ. ಇವರ ಬೇಜವಾಬ್ದಾರಿಯಿಂದಲೇ ಇಲಾಖೆಯ  ನಷ್ಟ ಸಾರ್ವಕಾಲಿಕ ದಾಖಲೆ ಕ್ರಮಿಸಿದೆ. ಸಾರಿಗೆ ಇಲಾಖೆಯನ್ನು ಈ ಪರಿ ನಷ್ಟಕ್ಕೆ ತಂದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ.

ನಾಲ್ಕು ಸಾರಿಗೆ ನಿಗಮಗಳನ್ನು ಒಂದಲ್ಲಾ ಎರಡಲ್ಲ ಬರೋಬ್ಬರಿ 1263 ಕೋಟಿಯಷ್ಟು ಬೃಹತ್​ ನಷ್ಟಕ್ಕೆ ಸಿಲುಕಿಸಿ ಅಕ್ಷರಶಃ ಮುಳುಗುವ ಹಡಗನ್ನಾಗಿಸಿದ್ದಾರೆ. ಹೀಗಾಗಿ ಸಚಿವ ತಮ್ಮಣ್ಣ ವಿರುದ್ಧ ಸಾರಿಗೆ ಯೂನಿಯನ್​ಗಳಲ್ಲಿ 'ತಮ್ಮಣ್ಣ ಹಠಾವೊ' ಅಭಿಯಾನ ಶುರುವಾಗಿದೆ. ಜನಸಾಮಾನ್ಯರ ಜೀವನಾಡಿ ಸಾರಿಗೆ ಇಲಾಖೆಯ ಸಚಿವರಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಇಲಾಖೆಗೆ ಇಂದು ಇಂತಹ ದಯನೀಯ ಪರಿಸ್ಥಿತಿ ಬರುತ್ತಿರಲಿಲ್ಲ. ಸಚಿವರ ಬೇಜವಾಬ್ದಾರಿತನ, ನಿರ್ಲಕ್ಷ್ಯ ಹಾಗೂ ಅನಗತ್ಯ ನಿರ್ಧಾರಗಳಿಂದ 4 ನಿಗಮಗಳೂ ಶೋಚನೀಯ ಹಂತಕ್ಕೆ ಬಂದು ತಲುಪಿವೆ.

ಸಾರಿಗೆ ನಿಗಮಗಳಲ್ಲಿ ಏನಾಗುತ್ತಿದೆ? ನಷ್ಟಕ್ಕೆ ಕಾರಣವೇನು? ಅದನ್ನು ಸರಿಪಡಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತು ತಮ್ಮಣ್ಣನವರಿಗೆ ಇಲ್ಲವಾಗಿದೆ. ಸಾರಿಗೆ ಇಲಾಖೆ ಕಂಡ ಅತ್ಯಂತ ದುರ್ಬಲ ಸಚಿವ ಎನ್ನುವ ಕುಖ್ಯಾತಿಗೆ ಪಾತ್ರರಾಗಿದ್ದಾರೆ ಡಿ.ಸಿ ತಮ್ಮಣ್ಣ. ಇವರ ಅಧಿಕಾರಾವಧಿಯಲ್ಲಿ ಉದ್ಧಾರವಾಗಬೇಕಿದ್ದ ಇಲಾಖೆ ನಷ್ಟದ ಸುಳಿಗೆ ಸಿಲುಕಿ ನಲುಗುತ್ತಿದೆ. ಬಿಎಂಟಿಸಿ, ಕೆಎಸ್ ಆರ್ ಟಿಸಿ ಸೇರಿದಂತೆ ಒಟ್ಟು ನಾಲ್ಕು ನಿಗಮಗಳ ಸ್ಥಿತಿ ದಿನ ಕಳೆದಂತೆಲ್ಲಾ ಶೋಚನೀಯವಾಗುತ್ತಿದೆ ಎನ್ನುವುದಕ್ಕೆ ನಿಗಮಗಳು ಅನುಭವಿಸುತ್ತಿರುವ 1263 ಕೋಟಿ ನಷ್ಟವೇ ನಿದರ್ಶನ.

ಇದನ್ನೂ ಓದಿ: ಆಂಧ್ರ ಸಿಎಂ ಜಗನ್​​ ನೇತೃತ್ವದಲ್ಲಿ ಹೊಸ ಸಂಪುಟ ರಚನೆ: ಯಾವ ಸಮುದಾಯಕ್ಕೆ ಎಷ್ಟು ಸಚಿವ ಸ್ಥಾನ?

ಸ್ಪೇರ್ ಪಾರ್ಟ್, ಬ್ಯಾಟರಿ ಖರೀದಿ ಮಾಡಲೂ ಹಣವಿಲ್ಲದಂತಾಗಿದೆ. ಬ್ರೇಕ್ ಡೌನ್ಸ್​​ನಿಂದಾಗಿ ಆಕ್ಸಿಡೆಂಟ್ಸ್, ಸಾವು-ನೋವು ವಿಪರೀತವಾಗುತ್ತಿವೆ. ವರ್ಕ್ ಶಾಪ್​​ಗಳಿಂದ ಹೊರ ಬರುವ ಅದೆಷ್ಟೋ ಬಸ್​ಗಳು ಸುಸ್ಥಿತಿಯಲ್ಲಿ ಇರುವುದೇ ಇಲ್ಲ. ಆದರೂ ಅಧಿಕಾರಿಗಳ ಅವಾಜ್​ಗೆ ಹೆದರಿ ಚಾಲಕರು ವಿಧಿಯಿಲ್ಲದೇ ಆತಂಕದಲ್ಲೇ ಬಸ್ ಗಳನ್ನು ರಸ್ತೆಗಿಳಿಸುತ್ತಿದ್ದಾರಂತೆ. ಸಚಿವ ತಮ್ಮಣ್ಣರ ವೈಫಲ್ಯಗಳು ಇಷ್ಟಕ್ಕೆ ಸೀಮಿತವಾಗುವುದಿಲ್ಲ. ಸಾರಿಗೆ ನಿಗಮಗಳ ಅಭಿವೃದ್ಧಿ ಹಾಗೂ ನೌಕರರ ಶ್ರೇಯೋಭಿವೃದ್ಧಿಯ ಚಿಂತನ-ಮಂಥನದ ಕೇಂದ್ರವಾಗಬೇಕಿದ್ದ ಸೆಂಟ್ರಲ್ ಹಾಗೂ ಬ್ರಾಂಚ್ ಆಫೀಸ್ ಗಳು ವರ್ಗಾವಣೆ, ಗುತ್ತಿಗೆ, ಅನಗತ್ಯ ಯೋಜನೆಗಳ ದಂಧೆಯ ಕೇಂದ್ರಗಳಾಗುತ್ತಿವೆ. ಅಷ್ಟೇ ಅಲ್ಲದೇ,  ಗುತ್ತಿಗೆದಾರರಿಂದ ಸಚಿವರಿಗೆ ಕಿಕ್ ಬ್ಯಾಕ್ ಸಲ್ಲಿಕೆಯಾಗುತ್ತಿದೆ ಎನ್ನುವ ಆರೋಪವೂ ಇದೆಯಂತೆ.

ನಿಗಮಗಳ ಉದ್ಧಾರಕ್ಕೆ ಸಲಹೆ ಕೊಡುವಂತಹ ಅಧಿಕಾರಿಗಳನ್ನು ದೂರವಿಟ್ಟು, ಬಹುಪರಾಕ್​​ ಹಾಕುವಂತಹ ಭ್ರಷ್ಟರನ್ನೇ ಆಸ್ಥಾನ ಕಲಾವಿದರನ್ನಾಗಿ ಇಟ್ಟುಕೊಂಡಿದ್ದಾರಂತೆ ತಮ್ಮಣ್ಣ. ಇದರಿಂದ ಬೇಸತ್ತಿರುವ ಸಾರಿಗೆ ಯೂನಿಯನ್​​ಗಳು ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಡಿ.ಸಿ.ತಮ್ಮಣ್ಣನವರಂತಹ  ದುರ್ಬಲ ಹಾಗೂ ನಿಷ್ಕ್ರಿಯ  ಸಾರಿಗೆ ಸಚಿವರನ್ನು ಕಿತ್ತೊಗೆಯಿರಿ ಎಂದು ಪತ್ರ ಬರೆಯಲು ಮುಂದಾಗಿವೆ. ಹೀಗಂತ ಕೆಎಸ್ ಆರ್ ಟಿಸಿ ನೌಕರರ ಎಐಟಿಯುಸಿ ಯೂನಿಯನ್ ರಾಜ್ಯಾಧ್ಯಕ್ಷ ಅನಂತ ಸುಬ್ಬರಾವ್ ಹೇಳುತ್ತಾರೆ.
Loading...

ತಮಗೆ ಸಂಬಂಧವೇ ಇಲ್ಲದ  ವರ್ಗಾವಣೆ ವಿಷಯದಲ್ಲಿ ಡಿ ಗ್ರೂಪ್ ನೌಕರರ ವರ್ಗಾವಣೆಯೂ ತನ್ನ ಅಣತಿ ಮೇರೆಗೆ ನಡೆಯಬೇಕೆಂದು ಆದೇಶವಿತ್ತ ಮೊದಲ ಸಾರಿಗೆ ಸಚಿವ ತಮ್ಮಣ್ಣ. ನಿಗಮಗಳ ಉದ್ಧಾರಕ್ಕೆ ಶ್ರಮಿಸಬೇಕೆನ್ನುವ ಕಿಂಚಿತ್ತೂ ಕಾಳಜಿಯೂ ತಮ್ಮಣ್ಣನವರಿಗೆ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.  ಅವರ ವಿರುದ್ಧ ರಾಜ್ಯದ ಲಕ್ಷಾಂತರ ನೌಕರರು ಬಂಡಾಯ ಏಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೂ ಮುನ್ನ ಸಚಿವ ಡಿ.ಸಿ.ತಮ್ಮಣ್ಣ ಎಚ್ಚೆತ್ತುಕೊಂಡು ಮುಳುಗುವ ಹಡಗಿನಂತಿರುವ ಸಾರಿಗೆ ನಿಗಮಗಳನ್ನು ಕಾಪಾಡುವ ಕೆಲಸ ಮಾಡಬೇಕಿದೆ.

-ಥಾಮಸ್ ಪುಷ್ಪರಾಜ್  

First published:June 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...