HOME » NEWS » State » TRANSPORT EMPLOYEES STRIKE HOW MUCH DOES THE DEPARTMENT LOSS IN A SINGLE DAY AMTV MAK

ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ; ಒಂದೇ ದಿನಕ್ಕೆ ಸಾರಿಗೆ ಇಲಾಖೆಗೆ ಆದ ನಷ್ಟ ಎಷ್ಟು ಗೊತ್ತಾ?

ಸಾರಿಗೆ ನೌರಕರು ಕಳೆದ ಡಿಸೆಂಬರ್ ನಲ್ಲಿ ಹೋರಾಟ ಮಾಡಿದಾಗ ಸರ್ಕಾರ ಸ್ಪಂದಿಸಿ ಆಶ್ವಾಸನೆ ನೀಡಿ ಹಲವನ್ನ ಈಡೇರಿಸಿತ್ತು. ಆದ್ರೆ ಇದೀಗ ಸರ್ಕಾರದ ವರಸೆ ಬದಲಾಗಿದೆ. ಸರ್ಕಾರ ತನ್ನ ಪ್ರತಿಷ್ಠೆ ಮುಂದುವರೆಸಿದೆ. ಆರ್ಥಿಕ ಸಂಕಷ್ಟದ ನೆಪವೊಡ್ಡಿ ಚೌಕಾಶಿಗೆ ಇಳಿದಿದೆ.

news18-kannada
Updated:April 7, 2021, 7:21 PM IST
ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ; ಒಂದೇ ದಿನಕ್ಕೆ ಸಾರಿಗೆ ಇಲಾಖೆಗೆ ಆದ ನಷ್ಟ ಎಷ್ಟು ಗೊತ್ತಾ?
ಸಾರಿಗೆ ನೌಕರರ ಪ್ರತಿಭಟನೆ.
  • Share this:
ಬೆಂಗಳೂರು (ಏಪ್ರಿಲ್ 07); ಸರ್ಕಾರ ಮತ್ತು ಸಾರಿಗೆ ನೌಕರರ ಜಟಾಪಟಿ ಮುಂದುವರಿದಿದೆ. ನಾ ಕೊಡೆ ನೀ ಬಿಡೇ ಎನ್ನುವಂತಹ ಸ್ಥಿತಿ ಇಂದು ನಿರ್ಮಾಣವಾಗಿದೆ. ಹೀಗಾಗಿ ನಾಳೆಗೆ ಸರ್ಕಾರ, ಹೋರಾಟವನ್ನು ವಿಫಲಗೊಳಿಸುವ ಪ್ರಯತ್ನ ನಡೆಸುತ್ತಿದೆ. ಇದರ ನಡುವೆ ಸಾರಿಗೆ ನಿಗಮಗಳಿಗೆ ಕೋಟಿ ಕೋಟಿ ನಷ್ಟ ಉಂಟಾಗಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಇಳಿದಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಬಸ್ ನಿಲ್ದಾಗಳು, ರಸ್ತೆಗಳು ಬಸ್ ಗಳು ಇಲ್ಲದೆ ಬಿಕೋ ಎನ್ನುತ್ತಿತ್ತು. ನಾಲ್ಕು ನಿಗಮಗಳಿಂದಲೂ ಇಂದು ರಸ್ತೆಗೆ ಇಳಿದಿದ್ದು ಕೇವಲ 145 ಬಸ್‌ಗಳು ಮಾತ್ರ.  ಅದ್ರಲ್ಲೂ ರಸ್ತೆ ಮೇಲೆ ಸದಾ ಕಾಣ ಸಿಗುತ್ತಿದ್ದ ಬಿಎಂಟಿಸಿ ಬಸ್ ಗಳು ಓಡಾಡಿದ್ದು 35 ಮಾತ್ರ. ಈ ಒಂದೇ ದಿನದಲ್ಲಿ ಬಿಎಂಟಿಸಿಗೆ 3.5 ಕೋಟಿ ರೂಪಾಯಿ ನಷ್ಟವಾದರೆ, ಒಟ್ಟಾರೆಯಾಗಿ ನಾಲ್ಕು ನಿಗಮಗಳಿಗೂ 16 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.

ಪಟ್ಟು ಸಡಿಲಿಸದ ಸಾರಿಗೆ ನೌಕರರು.. ಸರ್ಕಾರದ ಖಾಸಗಿ  ತಂತ್ರಕ್ಕೆ ನೌಕರರ ಪ್ರತಿತಂತ್ರ.!!

ಸಾರಿಗೆ ನೌರಕರು ಕಳೆದ ಡಿಸೆಂಬರ್ ನಲ್ಲಿ ಹೋರಾಟ ಮಾಡಿದಾಗ ಸರ್ಕಾರ ಸ್ಪಂದಿಸಿ ಆಶ್ವಾಸನೆ ನೀಡಿ ಹಲವನ್ನ ಈಡೇರಿಸಿತ್ತು. ಆದ್ರೆ ಇದೀಗ ಸರ್ಕಾರದ ವರಸೆ‌ ಬದಲಾಗಿದೆ. ಸರ್ಕಾರ ತನ್ನ ಪ್ರತಿಷ್ಠೆ ಮುಂದುವರೆಸಿದೆ. ಆರ್ಥಿಕ ಸಂಕಷ್ಟದ ನೆಪವೊಡ್ಡಿ ಚೌಕಾಶಿಗೆ ಇಳಿದಿದೆ. ಸರ್ಕಾರ ಸಾರಿಗೆ ನೌಕರರನ್ನು ಖಾಸಗಿ‌ ಬಸ್ ಅಸ್ತ್ರ ದ ಮೂಲಕ ವಿಫಲಗೊಳಿಸಲು ಹೊರಟಿದೆ. ಒಟ್ಟು ಬಿಎಂಟಿಸಿ ಸಂಚರಿಸೋ ವ್ಯಾಪ್ತಿಯಲ್ಲಿ ನಾಳೆ ನಾಲ್ಕು ಸಾವಿರ ಬಸ್, ಮ್ಯಾಕ್ಸಿ ಕ್ಯಾಬ್, ಶಾಲಾ ಬಸ್ ಓಡಿಸಲು ತೀರ್ಮಾನಿಸಿದೆ. ಅಲ್ಲದೇ ಕೆ ಎಸ್ ಆರ್ ಟಿಸಿ ಬಸ್ ಗೆ ಪರ್ಯಾಯವಾಗಿ 3 ಸಾವಿರಕ್ಕೂ ಅಧಿಕ ಬಸ್ ಗಳನ್ನು ರಸ್ತೆಗಿಳಿಸುವ ಚಿಂತನೆಯಲ್ಲಿದೆ.

ಅಲ್ಲದೇ ಖಾಸಗಿ ಬಸ್ ಮಾಲೀಕರಿಗೆ ಸರ್ಕಾರದ ಮೇಲೆ ಅಸಮಾಧಾನವಿದ್ದು ಅವರಿಗೆ ಟ್ಯಾಕ್ಸ್ ಕಡಿತ ಸೇರಿ ಹಲವು ಬೇಡಿಕೆಯನ್ನ ಈಡೇರಿಸಲು ನಿರ್ಧರಿಸಿದೆ. ಹಾಗೇ ಹೋರಾಟ ಒಂದು ವಾರದವರೆಗೆ ನಡೆದರೂ ಕೂಡ ಖಾಸಗಿ ಬಸ್ ಗಳಿಗೆ ಸರ್ಕಾರಿ ಬಸ್ ರೂಟ್ ಗಳಲ್ಲಿ‌ ಓಡಾಡಲು ಪರ್ಮಿಟ್ ವಿಸ್ತರಿಸೋದಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಕಿರುಕುಳ ಕೊಟ್ಟರೆ ಹುಷಾರ್.. ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಕೋಡಿಹಳ್ಳಿ.!!

ಇನ್ನು ಅತ್ತ ಸರ್ಕಾರ ಸಾರಿಗೆ ನೌಕರರ ಮುಷ್ಕರ ದಮನಿಸಲು ಕಾರ್ಯತಂತ್ರ ರೂಪಿಸ್ತಿದ್ರೆ, ಇತ್ತ ಸಾರಿಗೆ ನೌಕರರ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಕೋಡಿಹಳ್ಳಿ, ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡ್ತಿದೆ. ಈಗಾಗಲೇ ನಾವು ಸಾಕಷ್ಟು ಗಡುವುಗಳನ್ನು ಸರ್ಕಾರಕ್ಕೆ ಕೊಟ್ಟಿದ್ದೇವೆ.

ಅವರು ಮಾಡಿಲ್ಲ ಅನ್ನೋ ಅನಿರ್ವಾಯಕ್ಕೆ ಬಿದ್ದು ಹೋರಾಟ ಮಾಡುತ್ತಿದ್ದೇವೆ. ಎಸ್ಮಾ ಜಾರಿ ಮಾಡ್ತೇವೆ ಅಂತ ಬೆದರಿಸಿದರೆ ನಾವು ಬೆದುರುವುದಿಲ್ಲ. ಇಲ್ಲಿ ನಮಗೆ ನ್ಯಾಯಾಲಯ ಇದೆ ಅಂತ ಎಸ್ಮಾ ಜಾರಿಯಾದರೆ ಕಾನೂನಾತ್ಮ ಹೋರಾಟದ ಸುಳಿವು ಕೊಟ್ಟರು.ಸರ್ಕಾರದ ಖಾಸಗಿ ಅಸ್ತ್ರಕ್ಕೆ ಸಾರಿಗೆ ನೌಕರರ ಸೆಡ್ಡು..!

ಸರ್ಕಾರ ಖಾಸಗಿ‌ ಬಸ್ ಮಾಲೀಕರ ಮೂಲಕ ಸಾರಿಗೆ ಹೋರಾಟವನ್ನು ನ್ಯೂಟ್ರಲ್ ಮಾಡಲು ಹೊರಟಿದೆ. ಆದ್ರೆ ಇದಕ್ಕೆ ಸರ್ಕಾರಿ ಸಾರಿಗೆ ನೌಕರರರು ಖಾಸಗಿ ಬಸ್ ಮಾಲೀಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಮ್ಮನ್ನ ಹತ್ತಿಕ್ಕಲು ನಿಮ್ಮನ್ನ ಎತ್ತಿ‌ಕಟ್ಟುತ್ತಿದ್ದಾರೆ. ನಾಳೆ ನಿಮ್ಮ ಮೇಲೆ ಇನ್ನ್ಯಾರನ್ನೋ ತಂದು ಬಿಡ್ತಾರೆ. ಹೀಗೇ ಸರ್ಕಾರ ಮೂಗಿಗೆ ತುಪ್ಪ ಸವರಿ ಮೂಗು‌ ಕತ್ತರಿಸೋದು ಗ್ಯಾರಂಟಿ.

ಇದನ್ನೂ ಓದಿ: ಯಾದಗಿರಿಯಲ್ಲಿ ಸಾರಿಗೆ ನೌಕರರ ಮುಷ್ಕರಕ್ಕೆ ಜನ ಸಾಮಾನ್ಯರ ಪರದಾಟ; ಖಾಸಗಿ ವಾಹನಗಳಿಂದ ಹೆಚ್ಚಿನ ವಸೂಲಿ...!

ಖಾಸಗಿ ಬಸ್ ಮಾಲೀಕರಿಗೆ ಟ್ಯಾಕ್ಸ್  ಕಡಿತ ಸೇರಿ ಹಲವು ಬೇಡಿಕೆಯಿದ್ದು ಹೋರಾಟಕ್ಕೆ ಕೈ ಜೋಡಿಸುವಂತೆ ಖಾಸಗಿ ಬಸ್ ಮಾಲೀಕರ ಮನವೊಲಿಕೆಗೆ ಮುಂದಾಗಿದ್ದಾರೆ. ಅಲ್ಲದೇ ಇವತ್ತಿನ ಹೋರಾಟಕ್ಕೆ ಸರ್ಕಾರ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ನಾಳೆ ಕೊರೋನಾ ಇಲ್ಲದ ಜಿಲ್ಲೆಗಳಲ್ಲಿ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಸುವ ನಿರ್ಧಾರಕ್ಕೆ ಸಾರಿಗೆ ನೌಕರರು ‌ಮುಂದಾಗಿದ್ದಾರೆ‌.

ಅಲ್ಲದೇ ನಾಳೆ  ಮತ್ತಷ್ಟು ‌ಸಾರಿಗೆ ನೌಕರನ್ನ ಮನವೊಲಿಸಿ‌ ಯಾವೊಂದು‌ ಬಸ್ ಓಡಾಡದಂತೆ ಮಾಡಲು ಚಿಂತನೆ ನಡೆದಿದೆ. ಸರ್ಕಾರ ಜಗ್ಗಲ್ಲ ಅಂತಿದ್ರೆ ನಾವು ಬಗ್ಗಲ್ಲ ಅಂತ ಸಾರಿಗೆ ಮುಖಂಡರು ಹೇಳ್ತಿದ್ದಾರೆ. ಒಟ್ನಲ್ಲಿ ನಾಳೆನೂ‌ ಕೂಡ ಸಾರಿಗೆ ಮುಷ್ಕರ ಮುಂದುವರಿಯಲಿದ್ದು ಹೋರಾಟ ಎಲ್ಲಿಗೆ ಹೋಗಿ‌ ಮುಟ್ಟುತ್ತೋ ಅನ್ನೊದನ್ನ ಕಾದುನೋಡಬೇಕಿದೆ.

(ವರದಿ- ಆಶಿಕ್ ಮುಲ್ಕಿ)
Published by: MAshok Kumar
First published: April 7, 2021, 7:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories