ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಸದ್ಯಕ್ಕಂತೂ ಮುಗಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಇಂದು ಗುರುವಾರ ದೀಪ ಚಳುವಳಿ ಮಾಡಿ 6ನೇ ವೇತನ ಆಯೋಗ ಆಗುವವರೆಗೂ ಹೋರಾಟ ತೀವ್ರಗೊಳಿಸಲಿದ್ದಾರೆ. ಆದರೆ ಸರ್ಕಾರ ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ಪರ್ಯಾಯ ವ್ಯವಸ್ಥೆ ಮಾಡುತ್ತಿದೆ. ಇದೇ ವೇಳೆ, ಸಾರಿಗೆ ನೌಕರರ ಮುಷ್ಕರಕ್ಕೆ ನಟ ಯಶ್ ಅವರ ಬೆಂಬಲ ಕೋರಲಾಗಿದೆ. ಈ ನಿಟ್ಟಿನಲ್ಲಿ ಯಶ್ಗೆ ಪತ್ರ ಬರೆದಿರುವ ಸಾರಿಗೆ ನೌಕರರ ಕೂಟವು, ನಿಮ್ಮ ತಂದೆ ಬಿಎಂಟಿಸಿಯಲ್ಲಿ ಕೆಲಸ ಮಾಡಿದ್ದರು. ಅವರ ಕಷ್ಟ ಏನು ಎಂಬುದು ನಿಮಗೆ ಗೊತ್ತಿರುತ್ತದೆ. ಇದನ್ನು ಅರಿತು, ಈಗ ನಡೆಯುತ್ತಿರುವ ಸಾರಿಗೆ ಮುಷ್ಕರಕ್ಕೆ ನೀವು ಬೆಂಬಲ ಕೊಡುತ್ತೀರಿ ಎಂದು ಭಾವಿಸಿದ್ದೇನೆ ಎಂದು ಆಶಿಸಿದ್ದಾರೆ.
ಇನ್ನು, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿನ್ನೆ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ವಾದ್ಯ, ಮೃದಂಗಗಳ ಜೊತೆಗೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಾಟಾಣ್ ನಾಗರಾಜ್ ಪುಷ್ಪ ನಮನ ಸಲ್ಲಿಸಿದ್ದರು. ಆ ಬಳಿಕ ಮಾತನಾಡಿದ ಅವರು, ಜನರ ಪ್ರತಿಭಟನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹತ್ತಿಕ್ಕುತ್ತಿದೆ. ಸಾರಿಗೆ ನೌಕರರಿಗೆ ಸರ್ಕಾರ ಮೊದಲು ಸಂಬಳ ಬಿಡುಗಡೆ ಮಾಡಬೇಕು. ಮುಖ್ಯಮಂತ್ರಿಗಳು ನೌಕರರನ್ನು ಮೊದಲು ಕರೆದು ಮಾತನಾಡಲಿ. ಇಲ್ಲವಾದರೆ ಸಿಎಂ ರಾಜೀನಾಮೆ ನೀಡಲಿ. ಸಾರಿಗೆ ನೌಕರರಿಗೆ ತೊಂದರೆ ಕೊಡುತ್ತಿರುವುದು ಸರಿಯಲ್ಲ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Sringeri Rape Case - ಶೃಂಗೇರಿ ಬಾಲಕಿ ಅತ್ಯಾಚಾರ ಪ್ರಕರಣ: ಪೋಕ್ಸೋ ಕೋರ್ಟ್ನಲ್ಲಿ ಚಾರ್ಜ್ಶೀಟ್ ಸಲ್ಲಿಕೆ
ಮೋಂಬತ್ತಿ ಹಿಡಿದು ಇಂದು ಪ್ರತಿಭಟನೆ:
ಹಲವು ದಿನಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟನೆಗಳ ಮೂಲಕ ಗಮನ ಸೆಳೆದಿರುವ ಸಾರಿಗೆ ನೌಕರರು ಇಂದು ಮೋಂಬತ್ತಿ ಪ್ರತಿಭಟನೆ ನಡೆಸಲಿದ್ದಾರೆ. ರಾಜ್ಯಾದ್ಯಂತ ಸಂಜೆ 7ಕ್ಕೆ ಮೋಂಬತ್ತಿ ಹಚ್ಚಿ ಕೈಯಲ್ಲಿಡಿದು ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ನಾಳೆ ಶಾಸಕ ಮನೆ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಇದೇ ವೇಳೆ, ಸಾರಿಗೆ ನೌಕರರ ಮುಷ್ಕರದಿಂದ ರಾಜ್ಯದ ಸಾರಿಗೆ ನಿಗಮಗಳಿಗೆ ಭಾರೀ ನಷ್ಟವಾಗುತ್ತಿದೆ. ನಾಲ್ಕು ಸಾರಿಗೆ ನಿಗಮಗಳಿಂದ ನಿತ್ಯವೂ 17 ಕೋಟಿ ರೂ ಆದಾಯ ಬರುತ್ತಿತ್ತು. ಯುಗಾದಿ ಹಬ್ಬದ ವೇಳೆ ಆದಾಯ ಇನ್ನೂ ಹೆಚ್ಚಿರುತ್ತಿತ್ತು. ಆದರೆ, ಮುಷ್ಕರದಿಂದ ಅಂದಾಜು 152 ಕೋಟಿ ರೂ ನಷ್ಟವಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Maski By Election: ಚುನಾವಣಾ ಪ್ರಚಾರದಲ್ಲಿ ಭಾಗಿಯಾದವರಿಗೆ ಕೊರೋನಾ ಸೋಂಕು ಹರಡುವ ಭೀತಿ
ಸಾರಿಗೆ ನೌಕರರ ಮುಷ್ಕರದಿಂದ ಯಾವ್ಯಾವ ನಿಗಮಗಳಿಗೆ ಆಗಿರುವ ನಷ್ಟ ಇಷ್ಟು:
ಕೆಎಸ್ಸಾರ್ಟಿಸಿ: 70 ಕೋಟಿ ರೂ
ಬಿಎಂಟಿಸಿ: 20 ಕೋಟಿ ರೂ
ವಾಯವ್ಯ ಸಾರಿಗೆ (NWKRTC): 31 ಕೋಟಿ ರೂ
ಈಶಾನ್ಯ ಸಾರಿಗೆ (NEKRTC): 31 ಕೋಟಿ ರೂ
ಅತ್ತ ಸಾರಿಗೆ ನೌಕರರ ಬೇಡಿಕೆಗೆ ಸರ್ಕಾರ ಕೊಡುತ್ತಿಲ್ಲ. ಇತ್ತ ಬಿಗಿಪಟ್ಟು ಹಿಡಿದು ಕುಳಿತಿರುವ ಸಾರಿಗೆ ನೌಕರರು ಬಿಡ್ತಿಲ್ಲ. ಇದರಿಂದಾಗಿ ಇಲ್ಲಿಯವರೆಗೆ 150 ಕೋಟಿ ಆದಾಯ ಖೋತಾ ಆಗಿದ್ದು, ಸಾರ್ವಜನಿಕರು ದಿನೆ ದಿನೆ ಸಂಕಷ್ಟ ಅನುಭವಿಸೋದಿಲ್ಲ ನಿಲ್ಲುತ್ತಿಲ್ಲ.
ವರದಿ: ಶರಣು ಹಂಪಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ