ಮುಷ್ಕರ ನಿಲ್ಲಿಸದಿದ್ದರೆ ಹೊರ ರಾಜ್ಯಗಳಿಂದ ಬಸ್: ಸಾರಿಗೆ ಇಲಾಖೆ ಅಧಿಕಾರಿ ಅಂಜುಂ ಪರ್ವೇಜ್

ಸಾರಿಗೆ ನೌಕರರ ಎಂಟು ಬೇಡಿಕೆ ಈಡೇರಿಸಿದ್ದೇವೆ. 6ನೇ ವೇತನ ಜಾರಿ ಮಾತ್ರ ಸಾಧ್ಯ ಇಲ್ಲ ಎಂದಿದ್ದೇವೆ. ಅವರು ಹಠಮಾರಿತನ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಕೋರಿದ್ದಾರೆ.

ಬೆಂಗಳೂರು ಸಾರಿಗೆ ಸಂಸ್ಥೆ

ಬೆಂಗಳೂರು ಸಾರಿಗೆ ಸಂಸ್ಥೆ

  • Share this:
ಬೆಂಗಳೂರು(ಏ. 08): ನಿನ್ನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವ ಸಾರಿಗೆ ನೌಕರರ ಒತ್ತಡಕ್ಕೆ ಸರ್ಕಾರವೂ ಬಗ್ಗುವ ಲಕ್ಷಣ ಕಾಣುತ್ತಿಲ್ಲ. ಸಾರಿಗೆ ನೌಕರರು ಮುಷ್ಕರ ನಿಲ್ಲಿಸದಿದ್ದರೆ ಹೊರ ರಾಜ್ಯಗಳಿಂದ ಬಸ್​ಗಳನ್ನ ಕರೆಸಲೂ ಸರ್ಕಾರ ಚಿಂತನೆ ನಡೆಸಿದೆ. ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಅವರು ಈ ವಿಚಾರವನ್ನು ಇಂದು ತಿಳಿಸಿದ್ದಾರೆ. ಈಗಾಗಲೇ ಆಂಧ್ರ, ತೆಲಂಗಾಣ ಮತ್ತು ಕೇರಳದ ಸಾರಿಗೆ ಸಂಸ್ಥೆಗಳ ಜೊತೆ ಚರ್ಚೆ ಮಾಡಲಾಗಿದೆ. ಅಗತ್ಯ ಬಿದ್ದರೆ ಈ ರಾಜ್ಯಗಳಿಂದ ಬಸ್​ಗಳನ್ನ ತಂದು ಓಡಿಸುತ್ತೇವೆ ಎಂದು ಸಾರಿಗೆ ಇಲಾಖೆ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಈಗ ಯುಗಾದಿ ಹಬ್ಬ ಬರುತ್ತಿದೆ. ಸಾರ್ವಜನಿಕರ ಅನುಕೂಲವು ಸರ್ಕಾರಕ್ಕೆ ಮೊದಲ ಆದ್ಯತೆಯಾಗಿದೆ. ಅವಶ್ಯಕತೆ ಬಿದ್ದರೆ ಹೊರ ರಾಜ್ಯಗಳಿಂದ ಬಸ್ ತರಿಸುತ್ತೇವೆ. ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗಬಾರದು ಅಷ್ಟೇ ಎಂದು ಅಂಜುಂ ಪರ್ವೇಜ್ ಹೇಳಿದ್ದಾರೆ.

ರಾಜ್ಯದ ಸಾರಿಗೆ ನಿಗಮಗಳು ದೇಶದಲ್ಲೇ ಅಗ್ರಸ್ಥಾನದಲ್ಲಿವೆ. ಬೆಂಗಳೂರಿನ ಬಿಎಂಟಿಸಿ ಬಸ್ಸುಗಳಲ್ಲಿ ನಿತ್ಯವೂ 50 ಲಕ್ಷ ಜನರು ಸಂಚರಿಸುತ್ತಾರೆ. ನಿನ್ನೆ ಮುಷ್ಕರದಿಂದ ರಾಜ್ಯ ಸಾರಿಗೆ ನಿಗಮಗಳಿಗೆ 20 ಕೋಟಿ ರೂ ನಷ್ಟ ಆಗಿದೆ. ಬಿಎಂಟಿಸಿಗೂ ಹಲವು ಸಮಸ್ಯೆ ಆಗುತ್ತಿದೆ. ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರು ಕೆಲಸಕ್ಕೆ ವಾಪಸ್ ಬರಬೇಕೆಂದು ನಾನು ಮನವಿ ಮಾಡುತ್ತೇನೆ. ಸಭೆ ನಡೆಸಿ ಕೂತು ಮಾತನಾಡೋಣ. ಆದರೂ ಮಾತು ಕೇಳದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ರೈತರನ್ನೇ ದಾರಿ ತಪ್ಪಿಸಿದವರು, KSRTC ನೌಕರರನ್ನ ತಪ್ಪಿಸದೇ ಇರುತ್ತಾರಾ? ಖಾಸಗೀಕರಣಕ್ಕೆ ಅವಕಾಶ ಕೊಡಬೇಡಿ: ಪ್ರತಾಪ್ ಸಿಂಹ

ನಾನೂ ಕೂಡ ಕೆಎಸ್​ಆರ್​ಟಿಸಿ ಎಂಡಿ ಆಗಿ ಕಾರ್ಯನಿರ್ವಹಿಸಿದ್ದೇನೆ. ನನಗೆ ಸಾರಿಗೆ ನೌಕರರ ಕಷ್ಟ ಏನು ಅಂತ ಗೊತ್ತು. ಅವರ ಒಂಬತ್ತು ಬೇಡಿಕೆಗಳಲ್ಲಿ ಎಂಟನ್ನು ಈಡೇರಿಸಿದ್ದೇವೆ. ಅಂತರ್ ನಿಗಮ ವರ್ಗಾವಣೆಗೆ ಅವಕಾಶ ನೀಡಿದ್ದೇವೆ. ತರಬೇತಿ ಅವಧಿಯನ್ನು ಕಡಿಮೆ ಮಾಡಲು ಒಪ್ಪಿದ್ದೇವೆ. ಆದರೆ ಆರನೇ ವೇತನ ಜಾರಿ ಮಾಡಲು ಸಾಧ್ಯ ಇಲ್ಲ ಎನ್ನುತ್ತಿದ್ದೇವೆ. ಆರ್ಥಿಕ ಪರಿಸ್ಥಿತಿ ನೋಡಿ ಅದಕ್ಕೆ ತಕ್ಕಂತೆ ಸಂಬಳ ಹೆಚ್ಚಳ ಮಾಡಿದ್ದೇವೆ ಎಂದು ಅಂಜುಮ್ ಪರ್ವೇಜ್ ಸ್ಪಷ್ಪಪಡಿಸಿದ್ದಾರೆ.

ಇದೇ ವೇಳೆ, ಸರ್ಕಾರ ಕೂಡ ನಾಳೆವರೆಗೂ ಕಾದು ನೋಡಿ, ಮುಷ್ಕರ ಮುಂದುವರಿಸುವವರ ಮೇಲೆ ಎಸ್ಮಾ ಕಾಯ್ದೆ ಜಾರಿ ಮಾಡಲು ಗಂಭೀರ ಚಿಂತನೆ ನಡೆಸಿದೆ. ಮುಷ್ಕರ ನಿರತರಿಗೆ ಸಂಬಳ ಕಡಿತ ಮಾಡುವುದು ಸೇರಿದಂತೆ ವಿವಿಧ ಶಿಸ್ತು ಕ್ರಮಕ್ಕೂ ಸರ್ಕಾರ ಮುಂದಾಗಿದೆ. ವಿಜಯಪುರದಲ್ಲಿ ಈಗಾಗಲೇ ಮುಷ್ಕರನಿರತ ಸಾರಿಗೆ ನೌಕರರಿಗೆ ಕ್ವಾರ್ಟರ್ಸ್ ಸೌಲಭ್ಯ ಹಿಂಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಕ್ವಾರ್ಟರ್ಸ್ ಖಾಲಿ ಮಾಡುವಂತೆ ನೌಕರರ ಮನೆಗಳಿಗೆ ನೋಟೀಸ್ ಜಾರಿ ಮಾಡಿರುವುದು ತಿಳಿದುಬಂದಿದೆ. ಆದರೂ ಕೂಡ ಇವತ್ತು ಸಾರಿಗೆ ನೌಕರರ ಮುಷ್ಕರ ಮುಂದುವರಿದಿದೆ. ನೌಕರರ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರು ಸರ್ಕಾರ ಎಸ್ಮಾ ಕಾಯ್ದೆ ಜಾರಿ ಮಾಡುವುದು ಸರಿಯಾದ ಕ್ರಮ ಅಲ್ಲ ಎಂದು ಟೀಕಿಸಿದ್ದಾರೆ.

ಎಲ್ಲಾ ನಿಗಮಗಳಲ್ಲೂ ಆರನೇ ವೇತನ ಜಾರಿ ಮಾಡಲಾಗಿದೆ. ಸಾರಿಗೆ ನಿಗಮಗಳಿಗೆ ಮಾತ್ರ ಯಾಕೆ ಮಲತಾಯಿ ಧೋರಣೆ? ಸಾರಿಗೆ ನೌಕರರನ್ನೂ ಸರ್ಕಾರಿ ನೌಕರರನ್ನಾಗಿ ಮಾಡಿ ಸರ್ಕಾರ ಈ ಸಮಸ್ಯೆ ಬಗೆಹರಿಸುವತ್ತ ಗಮನ ಕೊಡಬೇಕು. ಸರ್ಕಾರದ ಸ್ಪಂದನೆ ನೋಡಿಕೊಂಡು ನಾಳೆ ಮುಷ್ಕರ ನಡೆಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದ್ಧಾರೆ.

ವರದಿ: ಗಂಗಾಧರ ವಾಗಟ
Published by:Vijayasarthy SN
First published: