ಹಬ್ಬಗಳಂದು ಕೆಎಸ್​ಆರ್​ಟಿಸಿ ದರ ಏರಿಕೆಯಿಲ್ಲ; ಹೆಚ್ಚುವರಿ ಬಸ್​ ಸಂಚಾರಕ್ಕೆ ಕ್ರಮ; ಸಚಿವ ಡಿ.ಸಿ. ತಮ್ಮಣ್ಣ ಭರವಸೆ

news18
Updated:September 4, 2018, 3:17 PM IST
ಹಬ್ಬಗಳಂದು ಕೆಎಸ್​ಆರ್​ಟಿಸಿ ದರ ಏರಿಕೆಯಿಲ್ಲ; ಹೆಚ್ಚುವರಿ ಬಸ್​ ಸಂಚಾರಕ್ಕೆ ಕ್ರಮ; ಸಚಿವ ಡಿ.ಸಿ. ತಮ್ಮಣ್ಣ ಭರವಸೆ
news18
Updated: September 4, 2018, 3:17 PM IST
ಜನಾರ್ದನ ಹೆಬ್ಬಾರ್​, ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 4): ಯಾವುದಾದರೂ ಹಬ್ಬ ಬಂತೆಂದರೆ ಸಾಕು.. ಆ ವಾರವಿಡೀ ಖಾಸಗಿ ಬಸ್​ಗಳ ದರ ದುಪ್ಪಟ್ಟು ಕೆಲವೊಮ್ಮೆ ಮೂರು ಪಟ್ಟು ಆಗಿರುತ್ತದೆ. ಇದರಿಂದಾಗಿ ಹಬ್ಬದ ಸಮಯದಲ್ಲಿ ಪ್ರಯಾಣಿಕರು ಪರದಾಡುವಂತಾಗುತ್ತದೆ. ಇನ್ನೇನು ಮುಂದಿನ ವಾರ ಗಣೇಶ ಚತುರ್ಥಿ ಹಬ್ಬ ಇರುವುದರಿಂದ ಆ ಸಂದರ್ಭದಲ್ಲಿ ಹೆಚ್ಚುವರಿ ಬಸ್​ಗಳ ಸಂಚಾರಕ್ಕೆ ವ್ಯವಸ್ಥೆ ಮಾಡುವ ಮೂಲಕ ಊರಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಸಾರಿಗೆ ಇಲಾಖೆ ಮುಂದಾಗಿದೆ.

ಹಬ್ಬಗಳ ದಿನದಂದು ಸರ್ಕಾರಿ ಬಸ್​ಗಳ ಟಿಕೆಟ್​ನಲ್ಲಿ ಏರಿಕೆಯಿಲ್ಲ. ಅಂದು ಹೆಚ್ಚುವರಿ ಬಸ್​ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಬಸ್​ಗಳು ಹಬ್ಬದ ದಿನಗಳಲ್ಲಿ ಪ್ರಯಾಣಿಕರಿಂದ ಹಣ ದೋಚುತ್ತಿರುವ ಸಂಗತಿ ಗೊತ್ತಿದೆ. ಆದರೆ, ಯಾರೂ ಈ ಬಗ್ಗೆ ದೂರು ನೀಡುವುದಿಲ್ಲ. ಹೀಗಾಗಿ, ನಾವೂ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿಧಾನಸೌಧದಲ್ಲಿ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದ್ದಾರೆ.

ಅನಾವಶ್ಯಕ ಬಸ್​ ಸಂಚಾರದಿಂದ ನಷ್ಟ:

ಸಾರಿಗೆ ಇಲಾಖೆಯಿಂದ ಹಲವು ಯೋಜನೆಗಳ ಜಾರಿಗೆ ಚಿಂತನೆ ನಡೆಸಲಾಗಿದೆ.  ಸರ್ಕಾರ ಅಧಿಕಾರಕ್ಕೆ ಬಂದು 3 ತಿಂಗಳಾಗಿದೆ. ಯೋಜನೆಗಳ ಜಾರಿಗೆ ಸಮಯಾವಕಾಶ ಬೇಕು. ಯೋಜನಾಬದ್ಧ, ಸಮರ್ಪಕವಾಗಿ ಹೊಸ ಯೋಜನೆ ಜಾರಿಗೊಳಿಸಲಾಗುವುದು. ಅನಾವಶ್ಯಕ ಬಸ್​ಗಳಿಗೆ ಕಡಿವಾಣ ಹಾಕಲು ಚಿಂತನೆ ನಡೆಸಲಾಗಿದೆ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇವೆ. ಅನಾವಶ್ಯಕ ಬಸ್​ಗಳ ಸಂಚಾರದಿಂದ ನಷ್ಟವಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಸಾರಿಗೆ ಇಲಾಖೆ ಅಧಿಕಾರಿಗಳ ಬಗ್ಗೆಯೂ ದೂರು ಇದೆ:

ಅಗತ್ಯವಿಲ್ಲದಿದ್ದರೂ ಹೊಸ ಬಸ್​ಗಳ ಖರೀದಿ ಮಾಡುವ ಬಗ್ಗೆ ಕಡಿವಾಣ ಹಾಕಲಾಗಿದೆ. ಖಾಸಗಿ ಬಸ್​ಗಳ ಮಾಲೀಕರ ಜೊತೆ ಸಾರಿಗೆ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಮಾಹಿತಿಗಳು ಬಂದಿವೆ. ಇದಕ್ಕೂ ಹಂತ ಹಂತವಾಗಿ ಕಡಿವಾಣ ಹಾಕುತ್ತೇವೆ. ಅಧಿಕಾರಿಗಳು ಮತ್ತು ಖಾಸಗಿ ಬಸ್ ಗಳ ಮಾಲೀಕರ ನಡುವೆ ಇದು ತುಂಬಾ ವರ್ಷಗಳಿಂದ  ನಡೆದುಕೊಂಡು ಬಂದಿದೆ ಎಂದು ಸಚಿವ ಡಿ.ಸಿ. ತಮ್ಮಣ್ಣ ಹೇಳಿದ್ದಾರೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ