ಚಾರ್ಮಾಡಿ ಘಾಟ್​ನಲ್ಲಿ ಭಾರೀ ಟ್ರಾಫಿಕ್​; ವಾಹನ ಸವಾರರ ಪರದಾಟ

news18
Updated:September 9, 2018, 3:42 PM IST
ಚಾರ್ಮಾಡಿ ಘಾಟ್​ನಲ್ಲಿ ಭಾರೀ ಟ್ರಾಫಿಕ್​; ವಾಹನ ಸವಾರರ ಪರದಾಟ
news18
Updated: September 9, 2018, 3:42 PM IST
-ವೀರೇಶ್​ ಜಿ ಹೊಸೂರ್, ನ್ಯೂಸ್​ 18 ಕನ್ನಡ

ಚಿಕ್ಕಮಗಳೂರು,(ಸೆ.09):  ನಾಳೆ ಭಾರತ್ ಬಂದ್. ಮಂಗಳವಾರ ಒಂದೇ ದಿನ. ಬುಧವಾರ-ಗುರುವಾರ ಗೌರಿ-ಗಣೇಶ ಹಬ್ಬದ ರಜ. ಶುಕ್ರವಾರ-ಶನಿವಾರ ರಜೆ, ಇಎಲ್-ಸಿಎಲ್ ಹಾಕಿಕೊಂಡರೆ ವಾರಪೂರ್ತಿ ರಜೆ. ಚಾರ್ಮಾಡಿಯಲ್ಲಿ ನಿಲ್ಲುವುದಕ್ಕೂ ಆಗದಂತ ಜನಸಂದಣಿ. ಕಿ.ಮೀ.ಗಟ್ಟಲೇ ಸರದಿ ಸಾಲಲ್ಲಿ ನಿಂತಿರುವ ವಾಹನಗಳು ಆಮೆಗತಿಯಲ್ಲಿ ಸಾಗುವುದಕ್ಕೂ ಸಾಧ್ಯವಾಗುತ್ತಿಲ್ಲ. ಶಿರಾಡಿ ದುರಸ್ಥಿ, ಸಂಪಾಜೆ ಬಂದ್ ಹಿನ್ನೆಲೆ, ಧರ್ಮಸ್ಥಳ ಹಾಗೂ ಮಂಗಳೂರಿಗೆ ಹೋಗುತ್ತಿರುವ ಭಾರೀ ವಾಹನಗಳಿಂದ ಚಾರ್ಮಾಡಿಯಲ್ಲಿ ಉಂಟಾಗಿರುವ ಭಾರೀ ಟ್ರಾಫಿಕ್ ಜಾಮ್​​ನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

ಹೌದು, ಹಾಸನದ ಶಿರಾಡಿ ದುರಸ್ಥಿಯಲ್ಲಿದ್ದು, ಮಂಗಳೂರಿನ ಸಂಪಾಜೆ ಬಂದ್ ಆಗಿರುವ  ಹಿನ್ನೆಲೆ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್ ಹಾಗೂ ಕುದುರೆಮುಖ ಮಾರ್ಗ ಭಾರೀ ವಾಹನಗಳಿಂದ ಗಂಟೆಗಟ್ಟಲೇ ಟ್ರಾಫಿಕ್ ಜಾಮ್‍ನಿಂದ ಕಿ.ಮೀ.ಗಟ್ಟಲೇ ವಾಹನಗಳು ನಿಂತಲ್ಲೇ ನಿಲ್ಲುವಂತಾಗಿದೆ. ನಾಳೆ ಭಾರತ್ ಬಂದ್ ಹಾಗೂ ಎರಡು ದಿನ ಹಬ್ಬದ ರಜೆ ಹಿನ್ನೆಲೆ ಸರ್ಕಾರಿ ನೌಕರರು ಹಾಗೂ ಐಟಿ-ಬಿಟಿಗಳಲ್ಲಿ ಕೆಲಸ ಮಾಡುವವರು ಮಂಗಳವಾರ, ಶುಕ್ರವಾರ, ಶನಿವಾರ ರಜೆ ಹಾಕಿಕೊಂಡು ಮನೆ, ಪ್ರವಾಸ, ಧರ್ಮಸ್ಥಳ-ಸುಬ್ರಹ್ಮಣ್ಯ ಅಂತ ಪ್ರವಾಸ ಕೈಗೊಳ್ಳುತ್ತಿರುವುದರಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಕಿರಿದಾದ ರಸ್ತೆಯಲ್ಲಿ ವೇಗವಾಗಿ ಸಾಗಲು ಆಗದೆ ವಾಹನಗಳು ಆಮೆಗತಿಯಲ್ಲಿ ಸಾಗುತ್ತಿವೆ. ಈ ಮಧ್ಯೆ ಅಲ್ಲಲ್ಲೇ ಕೆಟ್ಟು ನಿಲ್ಲುತ್ತಿರುವ ಬಸ್, ಲಾರಿ, ಕಾರುಗಳಿಂದ ಸಂಚಾರ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ.

ಚಾರ್ಮಾಡಿಯಲ್ಲಿ ಮಳೆ ಇಲ್ಲದಿದ್ದರೂ, ಭಾರೀ ಮಂಜು ಸಂಚಾರಕ್ಕೆ ಅಡ್ಡಿಯುಂಟುಮಾಡಿದೆ. ಚಾರ್ಮಾಡಿಯಲ್ಲಿ ಇಂದು ಬೆಳಗ್ಗೆ ಕೂಡ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಲಾರಿ ಕೆಟ್ಟು ನಿಂತ ಪರಿಣಾಮ ಬೆಳಗ್ಗಿನ ಜಾವ ನಾಲ್ಕರಿಂದ ಚಾರ್ಮಾಡಿಯ ಮೂರನೇ ತಿರುವಿನಲ್ಲಿ ಸುಮಾರು 10 ಕಿ.ಮೀ. ವಾಹನಗಳು ನಿಂತಲ್ಲೇ ನಿಂತು ವಾಹನ ಸವಾರರು ಪರದಾಡಿದರು. ಮಂಗಳೂರು-ಬೆಂಗಳೂರು ಮಾರ್ಗದ ಐರಾವತ, ರಾಜಹಂಸ ಸೇರಿದಂತೆ 8, 10, 12 ಚಕ್ರದ ದೊಡ್ಡ-ದೊಡ್ಡ ವಾಹನಗಳು ಕುದುರೆಮುಖ ಮಾರ್ಗದಲ್ಲಿ ಸಂಚರಿಸುತ್ತಿರುವುದರಿಂದ ತಿರುವುಗಳಲ್ಲಿ ದೊಡ್ಡ ವಾಹನಗಳನ್ನ ಟರ್ನ್ ಮಾಡಲಾಗದೆ ಅಲ್ಲೂ ಕೂಡ ಆಗಾಗ್ಗೆ ಟ್ರಾಫಿಕ್ ಜಾಮ್ ಸಂಭವಿಸಿ ವಾಹನ ಸವಾರರು ಪರಿಪಟಾಲು ಅನುಭವಿಸ್ತಿದ್ದಾರೆ. ಆದರೆ ಅಲ್ಲಿ ಕುದುರೆಮುಖ ಪೊಲೀಸರು, ಇಲ್ಲಿ ಬಣಕಲ್ ಪೊಲೀಸರು ಭಾರೀ ಪ್ರಮಾಣದಲ್ಲಿ ಬರ್ತಿರೋ ವಾಹನಗಳನ್ನ ನಿಯಂತ್ರಿಸುವುದಕ್ಕೆ ಹರಸಾಹಸ ಪಡ್ತಿದ್ದಾರೆ.

ಒಟ್ಟಾರೆ, ಚಾರ್ಮಾಡಿಯಲ್ಲಿ ಮಳೆ ಇಲ್ಲ. ತಕ್ಕಮಟ್ಟಿಗೆ ಗಾಳಿ ಹಾಗೂ ಮಂಜಿನ ವಾತಾವರಣವಿದೆ. ಆದರೆ ಭಾರೀ ವಾಹನಗಳು ಸಂಚರಿಸುತ್ತಿದ್ದು, ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತಿರುವುದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಯಾವುದೇ ತೊಂದರೆ ಇಲ್ಲ. ಆದರೆ ಚಾರ್ಮಾಡಿ ಹಾಗೂ ಕುದುರೆಮುಖ ಮಾರ್ಗದ ಭಾರೀ ವಾಹನಗಳ ಸಂಚಾರ, ಟ್ರಾಫಿಕ್ ಜಾಮ್, ಕೆಟ್ಟು ನಿಲ್ಲುತ್ತಿರುವ ವಾಹನಗಳಿಂದ ಪೊಲೀಸರು ಮಾತ್ರ ಹೈರಾಣಾಗಿ, ಶಿರಾಡಿ ಹಾಗೂ ಸಂಪಾಜೆ ಯಾವಾಗ ಓಪನ್ ಆಗುತ್ತೋ ಅಂತಿದ್ದಾರೆ.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ