news18-kannada Updated:December 28, 2020, 11:12 AM IST
ಸೂರ್ಯಾಸ್ತ
ಕೊಡಗು(ಡಿ.28): ದಿನವಿಡೀ ಜಗವ ಬೆಳಗಿದ ಭಾಸ್ಕರನು, ಪಡುವ ಕಡಲಲ್ಲಿ ಮುಳುಗುವ ಮುನ್ನ ಪಶ್ಚಿಮಾಲಯದ ಆಗಸಕ್ಕೆಲ್ಲಾ ಬಣ್ಣ ಬಳಿದಿದ್ದ. ಮುಗಿಲ ಚುಂಬಿಸುವ ಬೆಟ್ಟಗಳ ನಡುವೆ, ದಿನಕರನು ನಾಚಿ ಕೆಂಪಾಗಾಗಿದ್ದ. ಅಷ್ಟೇ ಅಲ್ಲ ಇಡೀ ಆಗಸ ಹೊಂಬಣ್ಣಕ್ಕೆ ತಿರುಗಿ ಅದ್ಭುತ ಜಗತ್ತನ್ನೇ ಸೃಷ್ಟಿಸಿಬಿಟ್ಟಿದ್ದ. ಹೌದು, ಇಂತಹ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದ್ದು ಕರ್ನಾಟಕದ ಕಾಶ್ಮೀರ ಮಂಜಿನಗರಿಯಲ್ಲಿರುವ ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ರಾಜಾಸೀಟ್. ಹೌದು ಕಣ್ಣಾಯಿಸದಷ್ಟು ದೂರಕ್ಕೂ ಕಾಣುವ ಹಸಿರ ಕಾನನಗಳ ಹೊದ್ದು ಮಲಗಿರುವ ಬೆಟ್ಟಗಳ ಸಾಲು. ಎತ್ತರದ ಪ್ರದೇಶದಲ್ಲಿ ನಿಂತು ಅಸ್ತಂಗತವಾಗುವ ಸೂರ್ಯನನ್ನು ಕಣ್ತುಂಬಿಕೊಳ್ಳುವುದೇ ಪ್ರವಾಸಿಗರಿಗೆ ವಿಸ್ಮಯವೇ ಸರಿ. ಇಂತಹ ಕ್ಷಣಗಳ ನೋಡಲು ವಿವಿಧ ಜಿಲ್ಲೆಗಳಷ್ಟೇ ಅಲ್ಲ, ಬೇರೆ ಬೇರೆ ರಾಜ್ಯಗಳಿಂದಲೂ ಆಗಮಿಸುತ್ತಾರೆ.
ಹಾಗೆ ಮೂರು ದಿನಗಳಿಂದ ನಿರಂತರವಾಗಿ ರಜೆ ಇದ್ದ ಹಿನ್ನೆಲೆಯಲ್ಲಿ ಭಾನುವಾರವೂ ಕೂಡ ಮಡಿಕೇರಿಯ ರಾಜಾಸೀಟ್ನ ವ್ಹೀವ್ ಪಾಯಿಂಟ್ ನಲ್ಲಿ ನಿಂತು ದಿನದ ಸೂರ್ಯಾಸ್ತವನ್ನು ನೋಡಲು ಸಾವಿರಾರು ಜನರು ನೆರೆದಿದ್ದರು. ವ್ಹೀವ್ ಪಾಯಿಂಟ್ ಸ್ಟೆಪ್ ಗಳಲ್ಲಿ ನೂರಾರು ಜನರು ಕುಳಿತಿದ್ದರೆ, ಜಾಗ ಸಾಕಾಗದ ಹಿನ್ನೆಲೆಯಲ್ಲಿ ರಾಜಾಸೀಟ್ನ ಎಲ್ಲೆಡೆಯೂ ನಿಂತಿದ್ದರು. ವೀವ್ ಪಾಯಿಂಟ್ ಅಕ್ಕ ಪಕ್ಕಗಳಲ್ಲಿ ಹಾಕಿರುವ ಹತ್ತಾರು ಬೆಂಚುಗಳಲ್ಲಿ ಕುಳಿತು ಆ ಅದ್ಭುತ ಕ್ಷಣಗಳಿಗಾಗಿ ಕಾತುರದಿಂದಲೇ ಕಾದು ಕುಳಿತಿದ್ರು. ಕ್ಷಣ ಕ್ಷಣಕ್ಕೂ ಇಡೀ ಆಕಾಶವೇ ಕೆಂಪಗಾಗುತ್ತಾ ಸ್ವಲ್ಪ ಸ್ವಲ್ಪವೇ ಸೂರ್ಯ ಪಡುವ ಕಡಲಲ್ಲಿ ಮುಳುಗಿಯೇ ಬಿಟ್ಟ. ಆ ಕ್ಷಣ ಪ್ರವಾಸಿಗರ ಸಂತೋಷ, ಸಂಭ್ರಮಕ್ಕೆ ಪಾರವೇ ಇರಲಿಲ್ಲ. ನೂರಾರು ಜನರು ಓ ಎಂದು ಉದ್ಘಾರ ಮಾಡಿ ಕೂಗಿದರೆ, ಮತ್ತೆಷ್ಟೋ ಜನರು ಸಿಳ್ಳೆ ಹಾಕಿ ಸಂಭ್ರಮಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಶೇ. 81.66 ರಷ್ಟು ಮತದಾನ; ಇಂದು ಮುಂಜಾನೆ ಭದ್ರತಾ ಕೊಠಡಿ ಸೇರಿದ ಮತಪೆಟ್ಟಿಗೆಗಳು
ಇದೆಲ್ಲವೂ ಪ್ರವಾಸಿಗರ ಸಂತೋಷದ ಕ್ಷಣಗಳಾದರೆ, ಇಡೀ ದೇಶದಲ್ಲಿ ಕೊರೊನಾ ಎಂಬ ಮಹಾಮಾರಿಯು ಎರಡನೇ ಅಲೆಯಲ್ಲಿ ಜನರ ಹೆಗಲೇರುವ ಸಾಧ್ಯತೆ ಇದೆ ಎನ್ನೋದನ್ನು ಮರೆತೇ ಬಿಟ್ಟಿದ್ದರು. ಹೌದು, ಮಂಜಿನ ನಗರಿ ಮಡಿಕೇರಿ ಸೇರಿದಂತೆ ಕರ್ನಾಟಕದ ಕಾಶ್ಮೀರ ಎಂದು ಕರೆಸಿಕೊಳ್ಳುವ ಇಡೀ ಕೊಡಗು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಸಾಲು ಸಾಲು ರಜೆಗಳು ಬಂದಿದ್ದು ಹಾಗೇ ಇಯರ್ ಎಂಡ್ ಆಗಿರುವುದರಿಂದ ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳಿಂದ ಪ್ರವಾಸಿಗರು ನದಿಯಂತೆ ಹರಿದು ಬಂದಿದ್ದಾರೆ. ಪರಿಣಾಮ ಪ್ರವಾಸಿತಾಣಗಳಲ್ಲಿ ಜನಜಾತ್ರೆಯಾಗಿದೆ. ರಾಜಾಸೀಟ್ ನಲ್ಲಿ ಸನ್ ಸೆಟ್ ನೋಡುವುದಕ್ಕಾಗಿ ಸಾವಿರಾರು ಪ್ರವಾಸಿಗರು ಒಮ್ಮೆಲೇ ಜಮಾಯಿಸಿದ್ದರಿಂದ ಸಂಪೂರ್ಣ ನೂಕು ನುಗ್ಗಲಿನಂತಾಗಿತ್ತು.
ವ್ಹೀವ್ ಪಾಯಿಂಟ್ ನಲ್ಲಿ ನೂರಾರು ಜನರು ಸಾಮಾಜಿಕ ಅಂತರ ಮರೆತು ಒಟ್ಟೊಟ್ಟಿಗೆ ಕುಳಿತು ಸೂರ್ಯಾಸ್ತವನ್ನು ಕಣ್ತುಂಬಿಕೊಂಡು ಸಂತೋಷಪಟ್ಟರು. ಅಷ್ಟೇ ಅಲ್ಲ, ಎಷ್ಟೋ ಜನರು ಕನಿಷ್ಠ ಮಾಸ್ಕ್ ಗಳನ್ನು ಹಾಕಿಕೊಳ್ಳದೆ, ಸಂತೋಷ ಪಡುತ್ತಲೇ ಕೊರೊನಾವನ್ನು ಜೊತೆಗೆ ಕೊಂಡೊಯ್ಯಲು ಬಂದಿದ್ದಾರೆ ಎನ್ನುವಂತಿತ್ತು.
ಚಿಕ್ಕ ಮಕ್ಕಳು, ವೃದ್ಧರು ಇದ್ದರೂ, ಅವರಿಗೂ ಮಾಸ್ಕ್ ಹಾಕದೆ ಕೊರೊನಾ ನಿಯಮವನ್ನು ಸಂಪೂರ್ಣ ಉಲ್ಲಂಘನೆ ಮಾಡಿದ್ರು. ಇದರಿಂದ ಕಳೆದ 15 ದಿನಗಳಿಂದ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಕೊರೋನಾ ಪಾಸಿಟಿವ್ ಪ್ರಕರಣಗಳು ಮತ್ತೆ ಜಾಸ್ತಿಯಾಗಿಬಿಡುವ ಆತಂಕವನ್ನು ತಂದೊಡ್ಡಿದೆ.
Published by:
Latha CG
First published:
December 28, 2020, 11:12 AM IST