ಟಿ ಬಿ ಡ್ಯಾಮ್ ಹಿನ್ನೀರಿನಲ್ಲಿದೆ ಅಂಕಸಮುದ್ರ ಪಕ್ಷಿಧಾಮ ಕೆರೆ

news18
Updated:September 4, 2018, 5:17 PM IST
ಟಿ ಬಿ ಡ್ಯಾಮ್ ಹಿನ್ನೀರಿನಲ್ಲಿದೆ ಅಂಕಸಮುದ್ರ ಪಕ್ಷಿಧಾಮ ಕೆರೆ
news18
Updated: September 4, 2018, 5:17 PM IST
-ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಸೆ.04) :  ತುಂಗಭದ್ರ ಜಲಾಶಯ ಭರ್ತಿಯಾಗಿ ಮೈದುಂಬಿ ಹರಿಯುತ್ತಿದೆ. ಆದರೇನು ಉಪಯೋಗ? ಜಲಾಶಯದ ಹಿನ್ನೀರಿನ ಪಕ್ಕದಲ್ಲಿಯೇ ದೇಶದಲ್ಲಿಯೇ ವಿಶಿಷ್ಟವಾದ ಪಕ್ಷಿಧಾಮವಿರುವ ಕೆರೆ ತುಂಬದೇ ಸೊರಗಿತ್ತು. ಈ ಕುರಿತು ಹಲವು ಬಾರಿ ಪಕ್ಷಿಪ್ರೇಮಿಗಳು, ಸ್ಥಳೀಯರು ಸರಕಾರಕ್ಕೆ ಮನವಿ ಮಾಡಿದ್ದರು. ಸಣ್ಣ ನೀರಾವರಿ ಇಲಾಖೆ, ಅರಣ್ಯ ಇಲಾಖೆ ಮಾಡಬೇಕಾದ ಕೆಲಸವನ್ನು ಪಕ್ಷಿಪ್ರಿಯರು ಮಾಡಿ ಪಕ್ಷಿಧಾಮದ ಕೆರೆ ನೀರು ತುಂಬಿಸಿದ್ದಾರೆ.

ಸಮುದ್ರದ ನೆಂಟಸ್ತನ ಮಾಡಿದರೂ ಉಪ್ಪಿಗೆ ಬಡತನವಿದೆಯೆಂತೆ. ಹಾಗಾಯ್ತು ಈ ಸ್ಟೋರಿಯ ಕತೆ. ಯಾಕೆಂದರೆ ರಾಜ್ಯದ ಮೂರು ಜಿಲ್ಲೆ ಹಾಗೂ ನೆರೆಯ ಆಂಧ್ರ, ತೆಲಂಗಾಣದ ಹಲವು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯ ಈ ವರ್ಷ ಮೈದುಂಬಿ ಹರಿಯುತ್ತಿದೆ. ಈ ಜಲಾಶಯದ ಹಿನ್ನೀರಿನ ಕೆಲ ಮೀಟರ್ ಹತ್ತಿರದಲ್ಲಿಯೇ ಇರುವ ಅಂಕಸಮುದ್ರ ಪಕ್ಷಿಧಾಮವಿರುವ ಕೆರೆಯು ನೀರಿಲ್ಲದೆ ಬಣಗುಡುತ್ತಿದೆ. ಕಳೆದ ಮೂರು ವರುಷಗಳಿಂದ ಮಳೆ ನೀರಿನ ಮೇಲೆ ಸಾವಿರಾರು ದೇಶವಿದೇಶಿ ಪಕ್ಷಿಗಳು ಸಂತೋನತ್ಪತ್ತಿ ನಡೆಸಿವೆ.

ಇತ್ತೀಚಿಗಷ್ಟೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಬರುವ ಅಂಕಸಮುದ್ರ ಪಕ್ಷಿಧಾಮವನ್ನು ಸಂರಕ್ಷಿತ ತಾಣವೆಂದು ಘೋಷಿಸಿದೆ. ಆದರೇನು ಉಪಯೋಗ ಈ ಪಕ್ಷಿಧಾಮವಿರುವ ಕೆರೆಗೆ ಜಲಾಶಯದ ಹಿನ್ನೀರಿನ ಮೂಲಕ ಕೆರೆ ತುಂಬಿಸುವ ಕೆಲಸವಾಗಿಲ್ಲ. ಕಳೆದ 15 ವರುಷದಲ್ಲಿ ಒಂದು ಬಾರಿ ಮಾತ್ರ ಜಾಕ್ ವೆಲ್ ಮೂಲಕ ನೀರೆತ್ತಿ ಕೆರೆ ತುಂಬಿಸಲಾಗಿತ್ತು. ಆದರೆ ಈ ಬಾರಿ ಹಿನ್ನೀರು ತುಂಬ ಹತ್ತಿರ ಬಂದರೂ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯಾಗಲಿ, ಅರಣ್ಯ ಇಲಾಖೆಯಾಗಲಿ ಕೆರೆ ನೀರು ತುಂಬಿಸುವ ಗೋಜಿಗೆ ಹೋಗಿಲ್ಲ.

ಬರುವ ಬೇಸಿಗೆಯಲ್ಲಿ ಪಕ್ಷಿಗಳ ಸಮೂಹ ಧಾಮದಲ್ಲಿ ಎದುರಿಸುವ ಸಂಕಷ್ಟ ಊಹಿಸಿ ಪಕ್ಷಿಪ್ರಿಯರು ತಮ್ಮ ಸ್ವಂತ ಖರ್ಚಿನಲ್ಲಿ ಕೆರೆ ತುಂಬಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಪಕ್ಷಿಪ್ರೇಮಿ ವಿಜಯ್ ಇಟಗಿ, ರೈತ ಆಪ್ ನಿರ್ಮಾತೃ ಆನಂದ್ ಬಾಬು ಸೇರಿದಂತೆ ಅಂಕಸಮುದ್ರ ಗ್ರಾಮದ ಯುವ ಬ್ರಿಗೇಡ್ ತಂಡ ಹಿನ್ನೀರಿನ ಬಳಿ ದುಸ್ತಿತಿಯಲ್ಲಿರುವ ಏತನೀರಾವರಿ ಜಾಕ್ ವೆಲ್ ತಮ್ಕ ಸ್ವಂತ ಖರ್ಚಿನಲ್ಲಿ ದುರಸ್ಥಿಗೊಳಿಸಿ, ಮುತುವರ್ಜಿ ವಹಿಸಿ ಕೆರೆಗೆ ನೀರುಣಿಸುವ ಕಾರ್ಯ ಮಾಡಿದ್ದಾರೆ. 244 ಎಕರೆ ಪ್ರದೇಶದ ಅಂಕಸಮುದ್ರ ಕೆರೆ ಪಕ್ಷಿಧಾಮಕ್ಕೆ ನೀರಿನ ಗಣಿಯಾಗಿದೆ. ಕೆರೆಯಲ್ಲಿ ಬೆಳೆದ ಜಾಲಿ ಗಿಡಗಳೇ ಹೆಚ್ಚಿರುವುದರಿಂದ ಇಲ್ಲಿ ದೇಶವಿದೇಶ ವಿಶಿಷ್ಟ ಪಕ್ಷಿಗಳ ಸಂತತಿ ಇಲ್ಲಿದೆ.


Loading...

ವಿರಳವಾಗಿ ಸಿಗುವ ನೀರು ನವಿಲು, ಗ್ಲಾಸಿ ಐಬಿಸ್ ಸೇರಿದಂತೆ 15ಕ್ಕೂ ಹೆಚ್ಚು ಸಂತಿತಿಗಳು ಇಲ್ಲಿ ಸಿಗುತ್ತವೆ. ಇನ್ನುಳಿದಂತೆ ಪೇಂಟೆಂಡ್ ಸ್ಟಾರ್ಕ್, ಓಪನ್ ಬಿಲ್ಡ್, ಸ್ಪಾಟ್ ಬಿಲ್ಡ್ ಡಕ್, ಲಿಟಲ್ ಕಾರ್ಮೊರೆಂಟ್, ಓರಿಯಂಟಲ್ ಡಾರ್ಟರ್ ಪಕ್ಷಿಗಳ ಸಮೂಹವೇ ಇಲ್ಲಿದೆ. ಇಂಥ ವಿಶಿಷ್ಟ ವಿರಳ ಪಕ್ಷಿಧಾಮದಲ್ಲಿರುವ ಕೆರೆಗೆ ಬೇಸಿಗೆಯಲ್ಲಿ ನೀರು ಸಿಗದೇ ಹೋದರೆ ಕಷ್ಟವಾಗುತ್ತದೆ. ಹಾಗಂತ ಸರಕಾರವನ್ನು ನಂಬಿಕೂತರೆ ಕೆಲಸವಾಗುವುದು ಕಷ್ಟವೆಂದರಿತು ತಮ್ಮ ಕೈಲಾದ ಕೆಲಸ ಮಾಡಿ ಕೆರೆಗೆ ನೀರುಣಿಸುವ ಕೆಲಸ ಇಲ್ಲಿಯ ಪಕ್ಷಿಪ್ರಿಯರು ಮಾಡಿದ್ದಾರೆ.

ಈ ಕುರಿತು ಪಕ್ಷಿಪ್ರಿಯರು, ಸ್ಥಳೀಯ ಅಂಕಸಮುದ್ರ ಯುವಕರ ಪಡೆ ಸ್ಥಳೀಯ ಶಾಸಕ ಭೀಮಾನಾಯ್ಕ್ ಅವರ ಗಮನಕ್ಕೆ ತಂದು ವೆಂಕವಾಧೂತ ಏತನೀರಾವರಿ ಮೂಲಕ ಕೆರೆ ನೀರು ಹರಿಯುವಂತೆ ಸೂಚಿಸಲಾಗಿದೆ. ಕಳೆದ ವರುಷ ಕೆರೆಗೆ ಹೋಗುವ ನೀರನ್ನು ಅಡ್ಡಗಟ್ಟಿ ಕೃಷಿಮಾಡುತ್ತಿದ್ದ ರೈತರನ್ನು ಮನವೊಲಿಸಲಾಗಿದೆ.

ದೇಶದಲ್ಲಿ ಹೆಸರುವಾಸಿಯಾದ ಅಂಕಸಮುದ್ರ ಕೆರೆಗೆ ನೀರನ್ನು ತರಿಸಲು ಸರಕಾರ ಕೆಲಸಕ್ಕಾಗಿ ಕಾಯದೇ ತಾವು ಮುಂದೆ ನಿಂತು ಪಕ್ಷಿಸಮೂಹದ ತಾಣಕ್ಕೆ ಯಾವುದೇ ಸಂಕಷ್ಟ ಬಾರದ ರೀತಿಯಲ್ಲಿ ನೋಡಿಕೊಂಡ ಪಕ್ಷಿಪ್ರಿಯರ ಕಾರ್ಯಕ್ಕೆ ನಮ್ಮದೊಂದು ಸಲಾಂ!
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...