ಉಡುಪಿಯ ಮಲ್ಪೆ ತೀರದಲ್ಲಿ ಕೊರೋನಾ ಮುನ್ನೆಚ್ಚರಿಕೆ ಮರೆತು ಪ್ರವಾಸಿಗರ ಮಸ್ತಿ

ಉಡುಪಿಯ ಕಡಲ ಕಿನಾರೆಯಲ್ಲಿ ಕಿಕ್ಕಿರಿದು ಜನರು ಸೇರುತ್ತಿದ್ದು,  ಕೊರೋನಾ ಆತಂಕ ಮರೆತು ಸಂಭ್ರಮ ಪಡುತ್ತಿದ್ದಾರೆ.

ಮಲ್ಪೆ ತೀರ

ಮಲ್ಪೆ ತೀರ

  • Share this:
ಉಡುಪಿ (ಡಿ. 29): ರೂಪಾಂತರ ಕೊರೋನಾ ವೈರಸ್​ ಆತಂಕದ ನಡುವೆಯೂ ಜನರು ಹೊಸ ವರ್ಷ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ಅವಕಾಶ ಇಲ್ಲದ ಕಾರಣ ಬಹುತೇಕರು ಇದೀಗ ರಾಜ್ಯದ ಬೇರೆ ಬೇರೆ ಪ್ರವಾಸಿತಾಣಗಳತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲಿಯೂ ಉಡುಪಿಯ ಕಡಲ ಕಿನಾರೆಯಲ್ಲಿ ಕಿಕ್ಕಿರಿದು ಜನರು ಸೇರುತ್ತಿದ್ದು,  ಕೊರೋನಾ ಆತಂಕ ಮರೆತು ಸಂಭ್ರಮ ಪಡುತ್ತಿದ್ದಾರೆ. ಜಿಲ್ಲೆ ಪ್ರವಾಸಿತಾಣದ ಜೊತೆಗೆ ಧಾರ್ಮಿಕ ಕ್ಷೇತ್ರವೂ ಆಗಿರುವುದರಿಂದ ವರ್ಷಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಬೆಳಗ್ಗಿನ ಹೊತ್ತು ಉಡುಪಿ ಕೃಷ್ಣ ಮಠ ಸೇರಿದಂತೆ ಸುತ್ತಮುತ್ತ ಧಾರ್ಮಿಕ ಕ್ಷೇತ್ರಗಳಲ್ಲಿ ಜನರು ಭೇಟಿ ನೀಡುತ್ತಿದ್ದು, ಸಂಜೆಯಾಗುತ್ತಿದ್ದಂತೆ ಮಲ್ಪೆ ಸೇರಿದಂತೆ ಅನೇಕ ಕಡಲ ತೀರದಲ್ಲಿ ಜನರು ಮಸ್ತ್​ ಎಂಜಾಯ್​ ಮಾಡುತ್ತಿದ್ದಾರೆ. 

ಕಾಪು, ತ್ರಾಸಿ, ಮರವಂತೆ, ಮಲ್ಪೆ ಬೀಚ್ ಸೇರಿದಂತೆ‌ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕೊರೋನಾ ನಿಯಮಾವಳಿಗಳನ್ನು ಮರೆತಿದ್ದಾರೆ. ಬೋಟ್ ರೈಡಿಂಗ್, ಬನಾನಾ ಬೋಟ್, ಪ್ಯಾರಾಸೇಲಿಂಗ್, ಬನಾನಾ ಜೆಟ್ ಸ್ಕೀ ನಂತಹ ಜಲಕ್ರೀಡೆಗಳನ್ನು ಆಡಿ ಖುಷಿ ಪಡುತ್ತಿದ್ದಾರೆ. ಇನ್ನು ಈಗಾಗಲೇ ರೆಸ್ಟೋರೆಂಟ್​, ಹೋಟೆಲ್​ಗಳು ಪ್ರವಾಸಿಗರಿಂದ ತುಂಬಿ ಹೋಗಿದೆ.ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಯಾವುದೇ ಹೊಸ ವರ್ಷ ಸಂಭ್ರಮಾಚರಣೆ ನಡೆಸುವಂತೆ ಇಲ್ಲ. ಅಲ್ಲದೇ ರೆಸ್ಟೋರೆಂಟ್, ಸ್ಟಾರ್ ಹೊಟೇಲ್ ಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಸಾರ್ವಜನಿಕವಾಗಿಯೂ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶ ಇಲ್ಲ. ನಿಮ್ಮ ಮನೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಿ ಅಂತ ಜಿಲ್ಲಾಧಿಕಾರಿ ಜಿ ಜಗದೀಶ್ ಸೂಚನೆ ಕೊಟ್ಟಿದ್ದಾರೆ.

ಇದನ್ನು ಓದಿ: ಮಗಳ ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ನಟ ರಮೇಶ್

ಹೊಸ ವರ್ಷದಂದು ಇಲ್ಲಿನ ಕೃಷ್ಣ ಮಠದಲ್ಲಿ ಭಕ್ತರಿಗೆ ಮುಕ್ತ ಪ್ರವೇಶ ಇರಲಿದೆ. ಈ ಹಿನ್ನಲೆ ದೇವರ ದರ್ಶನಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ. ಮಠದಲ್ಲಿ  ಕೊರೋನಾ ನಿಯಮಾವಳಿ ಅನ್ವಯ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ, ಮಲ್ಪೆ ಕಡಲ ತೀರ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಜನರೇ ಸ್ವಯಂ ಈ ನಿಯಮ ಪಾಲಿಸಬೇಕು ಎಂಬುದು ಜಿಲ್ಲಾಡಳಿತ ತಿಳಿಸಿದೆ. ಆದರೆ, ಜನರು ಮಾತ್ರ ಈ ನಿಯಮಾವಳಿಗಳನ್ನು ಮರೆತು ಎಂಜಾಯ್​ ಮಾಡುತ್ತಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಇಳಿಕೆ ಕಂಡಿದ್ದ ಕೊರೋನಾ ಪ್ರಕರಣ ಈಗ ಪ್ರವಾಸಿಗರ ನಿರ್ಲಕ್ಷ್ಯದಿಂದ ಏರಿಕೆಯಾದರೆ ಎಂಬ ಆತಂಕ ಕೂಡ ಮನೆ ಮಾಡಿದೆ. ಈ ನಡುವೆ ರೂಪಾಂತರ ಕೊರೋನಾ ಪ್ರಕರಣ ಭಯ ಕೂಡ ಮೂಡಿದ ಹಿನ್ನಲೆ ಜಿಲ್ಲಾಡಳಿತ ಯಾವ ಕ್ರಮಕ್ಕೆ ಮುಂದಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
Published by:Seema R
First published: