Chikkamagaluru: ಚಾರ್ಮಾಡಿ ಘಾಟಿನಲ್ಲಿ ಪ್ರವಾಸಿಗರ ಮೋಜು ಮಸ್ತಿ, ಸಾರ್ವಜನಿಕರಿಂದ ಆಕ್ರೋಶ

ಪ್ರವಾಸಿಗರು ಜಾರು ಬಂಡೆಗಳ ಮೇಲೆ ಹತ್ತಿ ಹುಚ್ಚಾಟ ಮಾಡುತ್ತಾ, ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡುತ್ತಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್​ನಲ್ಲಿ ನಡೆದಿದ್ದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕಮಗಳೂರು (ಜೂ 27) : ಪ್ರವಾಸಿಗರು (Tourists) ಜಾರು ಬಂಡೆಗಳ ಮೇಲೆ ಹತ್ತಿ ಹುಚ್ಚಾಟ ಮಾಡುತ್ತಾ, ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಡ್ಯಾನ್ಸ್ (Dance) ಮಾಡುತ್ತಾ, ಟಿಕ್‍ಟಾಕ್ ಮಾಡುತ್ತಿರೋ ದೃಶ್ಯಗಳು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ (Charmadi Ghati) ನಡೆದಿದೆ. ಚಾರ್ಮಾಡಿ ಘಾಟಿನಲ್ಲಿ ರಸ್ತೆಯುದ್ದಕ್ಕೂ ಜಲಪಾತಗಳಿವೆ. ಅಲ್ಲಿನ ಕಲ್ಲು ಬಂಡೆಗಳ ಮೇಲೆ ನಿರಂತರವಾಗಿ ನೀರು ಬಿದ್ದು ಕಲ್ಲಿನ ಮೇಲೆ ಪಾಚಿ ಬೆಳೆದು ಸಿಕ್ಕಾಪಟ್ಟೆ ಜಾರುತ್ತದೆ. ಅಲ್ಲಿಂದ ಬಿದ್ದರೆ ಕೈ-ಕಾಲು ಮುರಿದು ಹೋಗುವುದರಲ್ಲಿ ಅನುಮಾನವಿಲ್ಲ. ಆದರೆ, ಕೆಲ ಹುಚ್ಚು ಪ್ರವಾಸಿಗರು ಅಂತಹಾ ಜಾರುವ ಬಂಡೆಗಳ ಮೇಲೆ ಹತ್ತಿ ಮೋಜು-ಮಸ್ತಿ ಮಾಡ್ತಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಮೋಜು ಮಸ್ತಿ

ಈ ಹಿಂದೆ ಕೂಡ ಜಲಪಾತಗಳ ಮೇಲೆ ಹತ್ತಿ ಬಿದ್ದು ಕೈ-ಕಾಲು ಮುರಿದುಕೊಂಡು, ತಲೆ ಹೊಡೆದುಕೊಂಡವರಿದ್ದಾರೆ. ಕೆಲವರದ್ದು ಪ್ರಾಣವೂ ಹೋಗಿದೆ. ಆದರೂ, ಪ್ರವಾಸಿಗರು ಈ ಹುಚ್ಚಾಟ ಬಿಟ್ಟಿಲ್ಲ. ಚಾರ್ಮಾಡಿ ಘಾಟಿ ರಸ್ತೆ ಅತ್ಯಂತ ಕಿರಿದಾದ ರಸ್ತೆ. ಇಲ್ಲಿ ಎರಡು ವಾಹನಗಳು ಸಲೀಸಾಗಿ ಹೋಗುವುದೇ ಕಷ್ಟ. ಇಂತಹಾ ಕಿರಿದಾದ ರಸ್ತೆಯಲ್ಲಿ ಪ್ರವಾಸಿಗರು ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡುತ್ತಿದ್ದು ವಾಹನ ಸವಾರರು ತೀವ್ರ ಸಂಕಷ್ಟ ಪಡುವಂತಾಗಿದೆ.

ಟಿಕ್​ಟಾಕ್​ ಶೋಕಿಗೆ ಟ್ರಾಫಿಕ್ ಜಾಮ್ 

ಟ್ರಾಫಿಕ್ ಜಾಮ್ ಆಗಿದ್ದರೂ ಪ್ರವಾಸಿಗರ ಹುಚ್ಚಾಟ ಬಿಡುತ್ತಿಲ್ಲ. ಕೆಲವರಿಗೆ ರಸ್ತೆ ಮಧ್ಯೆ ಟಿಕ್‍ಟಾಕ್ ಮಾಡೋ ಶೋಕಿಯೂ ಇದೆ. ಹಾಗಾಗಿ, ಪ್ರವಾಸಿಗರೇ ಪ್ರವಾಸಿಗರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪೊಲೀಸರು ಸೂಕ್ರ ಕ್ರಮಕೈಗೊಳ್ಳಬೇಕು. ಇಲ್ಲಿ ಆಗಾಗ್ಗೆ ಗಸ್ತು ತಿರುಗುತ್ತಾ, ಬಂಡೆಗಳ ಮೇಲೆ ಹತ್ತುವವರು, ರಸ್ತೆ ಮಧ್ಯೆ ಟ್ರಾಫಿಕ್ ಜಾಮ್ ಮಾಡುವವರ ವಿರುದ್ಧ ಸೂಕ್ರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: BJP Government: ಕಾಶಿ ಯಾತ್ರೆ ಹೋಗುವವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಬಿಗ್ ಆಫರ್

ಚಾರ್ಮಾಡಿಘಾಟಿ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು :

ಕಾಫಿನಾಡು ಚಿಕ್ಕಮಗಳೂರು ಅಂದ್ರೆ ಸಾಕು. ಅಲ್ಲಿನ ಸೌಂದರ್ಯ ರಾಶಿ ಕಣ್ಮುಂದೆ ಬಂದು ನಿಲ್ಲುತ್ತೆ. ಬೆಟ್ಟ-ಗುಡ್ಡಗಳ ಸಾಲು. ಬಾನಿಗೆ ಮುತ್ತಿಕ್ಕೋ ಮಂಜಿನ ರಾಶಿ ಕಣ್ಣಮುಂದೆ ಬರುತ್ತೆ. ಹೌದು ಸತತ ಮಳೆಯಿಂದ ಚಾರ್ಮಾಡಿ ಘಾಟ್ನ ರಸ್ತೆಯುದ್ದಕ್ಕೂ ಹತ್ತಾರು ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸೋ ಪ್ರವಾಸಿಗರು ಚಾರ್ಮಾಡಿ ಒಡಲಿನಿಂದ ಹಾಲ್ನೊರೆಯಂತೆ ಸೂಸೋ ಫಾಲ್ಸ್ ಗಳನ್ನ ಕಣ್ತುಂಬಿಸಿಕೊಂಡು ಖುಷಿ ಪಡ್ತಿದ್ದಾರೆ.ಹೊಸದೊಂದು ಲೋಕ ಸೃಷ್ಟಿಸಿದೆ ಜಲಪಾತಗಳು

ಚಾರ್ಮಾಡಿ ಘಾಟ್​ನ ರಸ್ತೆಯುದ್ದಕ್ಕೂ ಧುಮ್ಮಿಕ್ಕಿ ಹರಿಯುತ್ತಿರೋ ಜಲಪಾತಗಳು ಹೊಸದೊಂದು ಲೋಕವನ್ನೇ ಸೃಷ್ಠಿಸಿವೆ. ಮುಂಗಾರು ಮಳೆಯ ಸಿಂಚನದಿಂದ ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಂತೂ ನಿಸರ್ಗ ಮಾತೆಯ ನೈಜ ಸೊಬಗು ಅನಾವರಣಗೊಂಡಿದೆ. ಬಾನೆತ್ತರದ ಶಿಖರಗಳಿಂದ ರಭಸವಾಗಿ ಚಿಮ್ಮೋ ಜಲಪಾತಗಳು ರಮಣೀಯ ನೋಟವನ್ನ ಸೃಷ್ಠಿಸಿದ್ರೆ, ದಟ್ಟ ಕಾನನದ ನಡುವಿನ ಜುಳು-ಜುಳು ನಿನಾದೊಂದಿಗೆ ಹರಿಯೋ ಝರಿಗಳು ಮನಕ್ಕೆ ಮುದ ನೀಡುತ್ತವೆ. ಚಾರ್ಮಾಡಿ ಭೇಟಿ ಕೊಟ್ಟು ಖುಷಿ ಪಟ್ಟು ವಾಪಸ್​ ಆಗ್ತಾರೆ.

ಇದನ್ನೂ ಓದಿ: Fly Over: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬೆಂಗಳೂರಿನಲ್ಲಿ 4 ಹೊಸ ಫ್ಲೈ ಓವರ್, ಎಲ್ಲೆಲ್ಲಿ ನಿರ್ಮಾಣವಾಗಲಿದೆ ಮೇಲ್ಸೇತುವೆ?

ಘಾಟಿ ಪ್ರದೇಶದ ಸೌಂದರ್ಯ ವೀಕ್ಷಣೆಗೆ ಮಾತ್ರ ಸೀಮಿತ ಎಂಬುದನ್ನು ಅರ್ಥ ಮಾಡಿಕೊಳ್ಳದ ಪ್ರವಾಸಿಗರು ಇಲ್ಲಿನ ಜಲಪಾತವೊಂದರ ಬಂಡೆಗಳನ್ನು ಏರಿ, ಇಳಿಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಎರಡು ವರ್ಷಗಳ ಹಿಂದೆ ಯುವಕನೊಬ್ಬ ಜಲಪಾತ ಏರಲು ಹೋಗಿ ಅಲ್ಲಿಂದ ಬಿದ್ದು ಗಂಭೀರ ಗಾಯಗೊಂಡ ಘಟನೆ ಜರುಗಿದೆ.

ಇಂತಹ ಚಟುವಟಿಕೆಗಳಿಂದ ಹಲವು ಪ್ರವಾಸಿಗರು ಆಗಾಗ ಸಣ್ಣಪುಟ್ಟ ಅಪಾಯಗಳಿಗೊಳಗಾಗುತ್ತಿದ್ದಾರೆ. ಆದರೂ ಮತ್ತೆ ಮತ್ತೆ ಅನಗತ್ಯ ಮೋಜು ನಡೆಯುತ್ತಲೇ ಇದೆ. ರಸ್ತೆ ಬದಿ ಸಿಗುವ ವನ್ಯಮೃಗಗಳಿಗೆ ಉಪಟಳ ನೀಡುವವರೂ ಇದ್ದಾರೆ. ಸುಂದರವಾದ ಘಾಟಿ ಪ್ರದೇಶ ಕೆಲವು ಪ್ರವಾಸಿಗರ ಅನಪೇಕ್ಷಿತ ಕೃತ್ಯಗಳಿಂದ ಮಲಿನಗೊಳ್ಳುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ.
Published by:Mahmadrafik K
First published: