Evening Digest: ಈ ದಿನದ ಟಾಪ್​ 10 ಸುದ್ದಿಗಳು ಇಲ್ಲಿವೆ

Latha CG | news18
Updated:August 13, 2019, 5:59 PM IST
Evening Digest: ಈ ದಿನದ ಟಾಪ್​ 10 ಸುದ್ದಿಗಳು ಇಲ್ಲಿವೆ
ಸಾಂರ್ಭಿಕ ಚಿತ್ರ
  • News18
  • Last Updated: August 13, 2019, 5:59 PM IST
  • Share this:
1.ವಿಮಾನ ಅಲ್ಲ, ಸ್ವಾತಂತ್ರ್ಯ ಬೇಕು; ಜಮ್ಮು ಕಾಶ್ಮೀರಕ್ಕೆ ಆಹ್ವಾನಿಸಿದ ರಾಜ್ಯಪಾಲರಿಗೆ ತಿರುಗೇಟು ನೀಡಿದ ರಾಹುಲ್​ ಗಾಂಧಿ

ರಾಜ್ಯದಲ್ಲಿ ಹಿಂಸೆ ನಡೆಯುತ್ತಿದೆ ಎಂದು ಮಾತನಾಡುವ ಬದಲು ಇಲ್ಲಿಗೆ ಬಂದು ಸ್ಥಿತಿಗತಿ ಅರಿಯಿರಿ ಎಂಬ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್​ ಆಹ್ವಾನ ಸ್ವೀಕರಿಸಿರುವ ರಾಹುಲ್​ ಗಾಂಧಿ, ನನ್ನೊಟ್ಟಿಗೆ ವಿಪಕ್ಷಗಳನ್ನು ಕರೆ ತರುತ್ತೇನೆ.  ರಾಜ್ಯದಲ್ಲಿ ಓಡಾಡಲು ವಿಮಾನದ ನೀಡುವ ಬದಲು ಮುಕ್ತವಾಗಿ ಸಂಚರಿಸುವ ಸ್ವಾತಂತ್ರ್ಯ ನೀಡಿ ಎಂದು ತಿರುಗೇಟು ನೀಡಿದ್ದಾರೆ.

2. ದಾಖಲೆ ಬೆಲೆ ಏರಿಕೆ ಕಂಡ ಬಂಗಾರ; 39 ಸಾವಿರ ಗಡಿಯತ್ತ ಚಿನ್ನ, ಬೆಳ್ಳಿ ಕೂಡ ದುಬಾರಿ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ ಕಂಡಿದ್ದು, 39 ಸಾವಿರ ಗಡಿಯತ್ತ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಇಳಿಕೆಯಾಗಿದ್ದು,  ಡಾಲರ್​ ದರ 71ರೂ ಏರಿಕೆ ಕಂಡಿದೆ. ಇದರಿಂದಾಗಿ ದೇಶಿಯ ಬಂಗಾರದ ಬೆಲೆ ಹೆಚ್ಚಳಗೊಂಡಿದೆ. ಈ ಹಿನ್ನೆಲೆ ಬಂಗಾರದ ಬೆಲೆ 10 ಗ್ರಾಂಗೆ 38,716 ರೂ ಆಗಿದೆ ಎಂದು ಪಿಟಿಐ ತಿಳಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಬಂಗಾರದ ಹೂಡಿಕೆ ಹೆಚ್ಚಾಗಿರುವುದು ಬಂಗಾರದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ಈ ವರ್ಷದಲ್ಲಿ ಶೇ 17 ರಷ್ಟು ಬಂಗಾರದ ಬೆಲೆ ಹೆಚ್ಚಳ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

3. ನೆರೆಪೀಡಿತ ಕರ್ನಾಟಕಕ್ಕೆ ಸದ್ಯಕ್ಕಿಲ್ಲ ಕೇಂದ್ರದ ವಿಶೇಷ ಪ್ಯಾಕೇಜ್ 

ಭೀಕರ ಪ್ರವಾಹಕ್ಕೆ ತುತ್ತಾಗಿರುವ ರಾಜ್ಯಕ್ಕೆ ಈಗ ನೆರವಿನ ಹಸ್ತ ಬೇಕಾಗಿದೆ. ಮುಕ್ಕಾಲು ಪಾಲು ರಾಜ್ಯ ಪ್ರವಾಹಕ್ಕೆ ತುತ್ತಾಗಿದ್ದು, ಜನರು ಮನೆ ಮಠ ಕಳೆದುಕೊಂಡು ಸಂತ್ರಸ್ತರ ಕೇಂದ್ರ ಸೇರಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸುವ ಜೊತೆಗೆ ಹೊಸ ಬದುಕು ಕಟ್ಟಿಕೊಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ರಾಜ್ಯದಲ್ಲಿ ಈಗಾಗಲೇ ಮಳೆಗೆ 30 ಸಾವಿರ ಕೋಟಿ ಹಾನಿ ಸಂಭವಿಸಿದ್ದು, ಕೇಂದ್ರದಿಂದ ಮೊದಲ ಹಂತದಲ್ಲಿ 3000 ಕೋಟಿ  ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಕೋರಿದೆ. ಭಾನುವಾರ ಪ್ರವಾಹ ಪರಿಶೀಲನೆ ನಡೆಸಿದ ಗೃಹ ಸಚಿವ ಅಮಿತ್​ ಷಾ ರಾಜ್ಯದ ಸ್ಥಿತಿಗತಿ ಅರಿತ ಅವರು ನೆರವಿಗೆ ಮುಂದಾಗುತ್ತಾರೆ ಎಂಬ ಭರವಸೆ ಮೂಡಿತು. ಅಲ್ಲದೇ  ಇಂದು ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಕ್ಕೆ ವಿಶೇಷ ಪ್ಯಾಕೇಜ್​ ಘೋಷಣೆ ಮಾಡುವ ಭರವಸೆಯನ್ನು ರಾಜ್ಯ ಹೊಂದಿತ್ತು. ಆದರೆ, ಈ ಭರವಸೆ ಹುಸಿಯಾಗಿದೆ.

4.ಮನೆ ಕಟ್ಟಿಕೊಡಲಿಲ್ಲಂದ್ರ ಈ ಸರ್ಕಾರವನ್ನೇ ಕೆಡವಿಬಿಡ್ತೀನಿ: ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆಬೆಳಗಾವಿಯ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಮತ್ತು ಜೆಡಿಎಸ್​ನ ಮೈತ್ರಿ ಸರ್ಕಾರವನ್ನೇ ಪತನಗೊಳಿಸಿದ ಪ್ರಮುಖ ಸೂತ್ರಧಾರರು. ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜಾರಕಿಹೊಳಿ ಸಹೋದರರೊಬ್ಬರು ಸರ್ಕಾರ ಬೀಳಿಸುವ ಮಾತನ್ನಾಡಿದ್ಧಾರೆ. ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲಿಲ್ಲವೆಂದರೆ ಸರ್ಕಾರವನ್ನೇ ಕೆಡವಿ ಬಿಡ್ತೀನಿ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ಧಾರೆ.

5. ತುಂಗಭದ್ರೆಯಲ್ಲಿ ಪ್ರವಾಹ; ವಿಶ್ವ ಪ್ರಸಿದ್ಧ ಹಂಪಿ-ವಿರುಪಾಪೂರಗಡ್ಡಿಯಲ್ಲಿ ಸಿಲುಕಿದ್ದ 400ಕ್ಕೂ ಹೆಚ್ಚು ಜನರ ರಕ್ಷಣೆ

ತುಂಗಭದ್ರಾ ನದಿಯಲ್ಲಿ ಸೋಮವಾರ ಕಾಣಿಸಿಕೊಂಡಿದ್ದ ಭಾರೀ ಪ್ರವಾಹದ ಕಾರಣದಿಂದ ವಿಶ್ವವಿಖ್ಯಾತ ಹಂಪಿಯ ವಿರುಪಾಪೂರಗಡ್ಡಿಯ ನಡು ಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ವಿದೇಶಿಗರೂ ಸೇರಿದಂತೆ 400ಕ್ಕೂ ಹೆಚ್ಚು ಸಂತ್ರಸ್ತರನ್ನು ಎರಡು ದಿನಗಳ ಸತತ ಕಾರ್ಯಾಚರಣೆಯ ಮೂಲಕ ಇಂದುಯಶಸ್ವಿಯಾಗಿ ರಕ್ಷಿಸಲಾಗಿದೆ.
ಮಲೆನಾಡಿನಲ್ಲಿ ಮುಂದುವರೆದಿದ್ದ ಭಾರೀ ಮಳೆ ಹಾಗೂ ತುಂಗಭದ್ರಾ ಜಲಾಶಯದಿಂದ ತೆರೆದು ಬಿಡಲಾಗದ್ದ 2.50 ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರಿನಿಂದ ತುಂಗಭದ್ರಾ ನದಿಯಲ್ಲಿ ಭಾನುವಾರ ಪ್ರವಾಹದ ಪರಿಸ್ಥಿತಿ ಉಂಟಾಗಿತ್ತು. ವಿಶ್ವ ಪ್ರಸಿದ್ಧ ಹಂಪಿ ಸಂಪೂರ್ಣ ಜಲಾವೃತವಾಗಿದ್ದರೆ, ವಿದೇಶಿಗರ ನೆಚ್ಚಿನ ತಾಣವಾದ ವಿರುಪಾಪೂರಗಡ್ಡಿಯೂ ನಡುಗಡ್ಡೆಯಾಗಿತ್ತು. ಇಲ್ಲಿ ಸಿಕ್ಕಿಕೊಂಡಿದ್ದ 400ಕ್ಕೂ ಹೆಚ್ಚು ಜನರನ್ನು ರಕ್ಷಿಸುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿತ್ತು.

6. ಫೋನ್​ಗೆ ಕಳ್ಳಗಿವಿ; ಮೈತ್ರಿ ಸರ್ಕಾರದ ವೇಳೆ 300 ನಾಯಕರ ಫೋನ್​ ಟ್ಯಾಪ್​?

ಮೈತ್ರಿ ಸರ್ಕಾರದ ವೇಳೆ ಮೂರು ಪಕ್ಷಗಳ ಪ್ರಮುಖ ಮುಖಂಡರು, ಮಾಧ್ಯಮ ಪ್ರತಿನಿಧಿಗಳು, ಐಪಿಎಸ್​ ಅಧಿಕಾರಿಗಳು ಸೇರಿದಂತೆ 300ಕ್ಕೂ ಹೆಚ್ಚು ಜನರ ಫೋನ್​ಗಳನ್ನು ಟ್ಯಾಪ್​ ಮಾಡಲಾಗಿತ್ತು. ಸುಮಾರು ಆರು ತಿಂಗಳ ಕಾಲ ಸತತವಾಗಿ ಎಲ್ಲರ ಮಾತುಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಫೋನ್​ ಕದ್ದಾಲಿಕೆ ಪ್ರಕರಣ ಸಂಬಂಧ ಡಿಜಿಗೆ ಮಧ್ಯಂತರ ವರದಿ ಸಲ್ಲಿಕೆಯಾಗಿದ್ದು, ವರದಿಯಲ್ಲಿ 300 ಜನರ ಫೋನ್​ಗಳು ಟ್ಯಾಪ್​ ಆಗಿರುವುದನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ನ್ಯೂಸ್​ 18 ಕನ್ನಡದಲ್ಲಿ ಈ ಬಗ್ಗೆ ವಿಶೇಷ ವರದಿ ಪ್ರಸಾರವಾದ ಬಳಿಕ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

7.2022ರ ಕಾಮನ್​ವೆಲ್ತ್​​ ಗೇಮ್ಸ್​ಗೆ ಮಹಿಳಾ ಟಿ-20 ಕ್ರಿಕೆಟ್ ಸೇರ್ಪಡೆ; 2028ರ ಒಲಿಂಪಿಕ್ಸ್​ ಮೇಲೂ ಕಣ್ಣು

2022ರಲ್ಲಿ ಇಂಗ್ಲೆಂಡ್‍ನ ಬರ್ಮಿಂಗ್‍ಹ್ಯಾಂನಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಗೇಮ್ಸ್​ಗೆ ಮಹಿಳಾ ಕ್ರಿಕೆಟ್ ಸೇರ್ಪಡೆಯಾಗಿದೆ. ಈ ಬಗ್ಗೆ ಐಸಿಸಿ ಹಾಗೂ ಕಾಮನ್ ವೆಲ್ತ್ ಒಕ್ಕೂಟ ಖಚಿತ ಪಡಿಸಿದೆ. ಕಾಮನ್‍ವೆಲ್ತ್ ಕ್ರಿಕೆಟ್ ಗೇಮ್ಸ್​ನಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆ ಮಾಡಲು ಐಸಿಸಿ ಕಳೆದ ವರ್ಷ ಕಾಮನ್​ವೆಲ್ತ್ ಗೇಮ್ಸ್ ಆಯೋಜಕರಿಗೆ ಮನವಿ ಸಲ್ಲಿಸಿಕೆ ಮಾಡಿತ್ತು. ಮಹಿಳಾ ಕ್ರಿಕೆಟ್‍ಗೆ ಜಾಗತಿಕ ಮನ್ನಣೆ ಕಲ್ಪಿಸಲು ಐಸಿಸಿ ಮತ್ತು ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ಕ್ರಮಕ್ಕೆ ಮುಂದಾಗಿತ್ತು. ಇದಕ್ಕೆ ಈಗ ಮನ್ನಣೆ ಸಿಕ್ಕಿದೆ.

8. ರೆಬೆಲ್ ಶಾಸಕರಿಗೆ ಮತ್ತೊಮ್ಮೆ ಹಿನ್ನಡೆ; ಅನರ್ಹತೆಯನ್ನು ಪ್ರಶ್ನಿಸಿದ್ದ ಅರ್ಜಿಯ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದ ಸುಪ್ರೀಂ!

ಶಾಸಕ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿರುವ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ಪ್ರಶ್ನಿಸಿದ್ದ ರೆಬೆಲ್ ಶಾಸಕರ ಅರ್ಜಿಯ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಖಚಿತಪಡಿಸಿದೆ. ಈ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ರೆಬೆಲ್ ಶಾಸಕರಿಗೆ ಮತ್ತೊಂದು ಹಿನ್ನಡೆಯಾದಂತಾಗಿದೆ. ರಾಮ ಜನ್ಮ ಭೂಮಿ ವಿವಾದದ ಕುರಿತ ವಿಚಾರಣೆ ಪ್ರತಿದಿನ ನಡೆಯುತ್ತಿದ್ದು, ಪ್ರಸ್ತುತ ಅನರ್ಹ ಶಾಸಕರ ಅರ್ಜಿ ಕುರಿತು ತುರ್ತು ವಿಚಾರಣೆ ಸಾಧ್ಯವಿಲ್ಲ. ಆದರೆ, ಶೀಘ್ರದಲ್ಲಿ ವಿಚಾರಣಾ ದಿನಾಂಕವನ್ನು ತಿಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

9.ಭಾರೀ ಪ್ರವಾಹಕ್ಕೆ ತತ್ತರಿಸಿದ ಚಿಕ್ಕಮಗಳೂರು; ನೆಲಕ್ಕುರುಳಿದ 600ಕ್ಕೂ ಹೆಚ್ಚು ಮನೆಗಳು!

ಭಾರೀ ಪ್ರವಾಹಕ್ಕೆ ಇಡೀ ರಾಜ್ಯ ತತ್ತರಿಸಿದೆ. ಕಾಫಿ ನಾಡು ಚಿಕ್ಕಮಗಳೂರಂತೂ ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಜಿಲ್ಲೆಯಲ್ಲಿ ಈವರೆಗೆ ಮಳೆಯಿಂದಾಗಿ 652 ಮನೆಗಳು ನೆಲ ಕಚ್ಚಿವೆ. ಜಿಲ್ಲೆ ಕಂಡ ಭೀಕರ ಪ್ರವಾಹಗಳ ಸಾಲಿಗೆ ಈ ಬಾರಿಯ ಮಳೆಗಾಲವೂ ಸೇರಿಕೊಂಡಿದೆ. ಮಳೆಯ ಅಬ್ಬರಕ್ಕೆ ರಸ್ತೆಗಳು ಹಾನಿಗೊಳಗಾಗಿವೆ. ಇದರಿಂದ ಉಂಟಾದ ಹಾನಿ 84 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 31 ಪಿಡಬ್ಯೂಡಿ ಸೇತುವೆಗಳು, 66 ಆರ್​ಪಿಡಿಆರ್ ಸೇತುವೆ ಹಾನಿಗೊಳಗಾಗಿವೆ. ಇವುಗಳಿಂದ 30 ಕೋಟಿ ರೂ. ನಷ್ಟ ಉಂಟಾಗಿದೆ. ಕೆರೆ ಕಟ್ಟೆಗಳು ಕುಸಿದಿದ್ದು, 3 ಕೋಟಿ ರೂ. ನಷ್ಟ ಉಂಟಾಗಿದೆ. ಮೆಸ್ಕಾಂಗೆ 1.13 ಕೋಟಿ ರೂ., ಬಿಎಸ್​ಎನ್​ಎಲ್​ಗೆ 39 ಲಕ್ಷ ರೂ. ಹೊರೆಯಾಗಿದೆ. 1451 ಹೆಕ್ಟೇರು ಬೆಳೆ ನಾಶ, ತೋಟಗಾರಿಕೆಯ 118 ಎಕರೆ ಪ್ರದೇಶ ಕೊಚ್ಚಿ ಹೋಗಿದೆ.

 10. ನೆರೆ ಬಂತು, ಮನೆ- ಆಸ್ತಿ ಹೋಯ್ತು ಆದ್ರೆ, ಜಾತಿ ಮಾತ್ರ ಹೋಗಲಿಲ್ಲ; ಮೈಸೂರಿನಲ್ಲಿ ಜಾತಿಗೊಂದು ಪರಿಹಾರ ಕೇಂದ್ರ ತೆರೆದ ಜಿಲ್ಲಾಡಳಿತ!

ತೀವ್ರ ಪ್ರವಾಹಕ್ಕೆ ಸಿಲುಕಿ ಇಡೀ ರಾಜ್ಯ ಇಂದು ತತ್ತರಿಸುತ್ತಿದೆ. ಜಾತಿಭೇದ ಮರೆತು ಜನರೆಲ್ಲಾ ಒಂದುಗೂಡಲು ಇಂತಹ ಪರಿಸ್ಥಿತಿಗಳು ನೆರವಾಗುತ್ತವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನಾಭಿಪ್ರಾಯ ರೂಪುಗೊಳ್ಳುತ್ತಿರುವ ಇದೇ ದಿನಗಳಲ್ಲಿ ಮೈಸೂರಿನಲ್ಲಿ ಜಾತಿಗೊಂದು ಪರಿಹಾರ ಕೇಂದ್ರ ತೆರೆಯುವಂತಹ ದೈನೇಸಿ ಸ್ಥಿತಿ ಉಂಟಾಗಿದೆ. ಈ ಮೂಲಕ ಎಂತಹಾ ನೆರೆ ಬಂದರು ನಮ್ಮೊಳಗಿನ ಜಾತಿ ಎಂಬ ವಿಷ ಮಾತ್ರ ದೂರವಾಗಲಾರದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಾವೇರಿ ಸೇರಿದಂತೆ ಉಪನದಿಗಳಾದ ಕಪಿಲ, ಹೇಮಾವತಿ ನದಿಗಳ ಜಲಾನಯನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ ಸಾಮಾನ್ಯವಾಗಿ ಕಾವೇರಿ ತುಂಬಿ ಹರಿದಿತ್ತು. ಹೀಗಾಗಿ ಮಂಡ್ಯದಿಂದ ಚಾಮರಾಜ ನಗರದ ಕೊಳ್ಳೆಗಾಲದ ವರೆಗೆ ನದಿ ಪಾತ್ರದ ಅನೇಕ ಗ್ರಾಮಗಳು ಜಲಾವೃತವಾಗಿತ್ತು. ಹೀಗಾಗಿ ಈ ಎಲ್ಲಾ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.
First published:August 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ