Eevning Digest: ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ

Latha CG | news18
Updated:August 6, 2019, 6:07 PM IST
Eevning Digest: ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
  • News18
  • Last Updated: August 6, 2019, 6:07 PM IST
  • Share this:
1. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಚೀನಾ ಆಕ್ರಮಿತ ಪ್ರದೇಶವೂ ಭಾರತದ ಭಾಗವೇ: ಅಮಿತ್ ಶಾ

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಚೀನಾ ಆಕ್ರಮಿತ ಅಕ್ಸಾಯ್ ಚಿನ್ ಪ್ರದೇಶಗಳು ಒಳಗೊಂಡಿವೆ. ಇವೆರಡೂ ಕೂಡ ಭಾರತದ ಅವಿಭಾಜ್ಯ ಅಂಗಗಳೇ ಆಗಿವೆ ಎಂದು ಅಮಿತ್ ಶಾ ಮಹತ್ವದ ಸಂದೇಶ ಹೊರಗೆಡವಿದ್ದಾರೆ. ಇವತ್ತು ಜಮ್ಮು-ಕಾಶ್ಮೀರ ವಿಶೇಷಾಧಿಕಾರ ಹಿಂಪಡೆಯುವ ನಿರ್ಣಯ ಮತ್ತು ಜಮ್ಮು-ಕಾಶ್ಮೀರ ಪುನಾರಚನೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮೇಲಿ ಚರ್ಚೆಯ ವೇಳೆ ಅಮಿತ್ ಶಾ ಈ ಮಾತುಗಳನ್ನಾಡಿದ್ಧಾರೆ.

 2. ಕಂದಕಕ್ಕೆ ಶಾಲಾ ಬಸ್​ ಉರುಳಿ 9 ವಿದ್ಯಾರ್ಥಿಗಳು ಸಾವು

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವ್ಯಾನ್​​​​ ಕಂದಕಕ್ಕೆ ಬಿದ್ದು, 9 ವಿದ್ಯಾರ್ಥಿಗಳು ಮೃತಪಟ್ಟಿರುವ ದುರಂತ ಘಟನೆ ಉತ್ತರಾಖಂಡದ ತೆಹ್ರಿ ಸಮೀಪ ನಡೆದಿದೆ. ತೆಹ್ರಿ ನಗರವು ಡೆಹ್ರಾಡೂನ್​ನಿಂದ 110 ಕಿ.ಮೀ. ದೂರದಲ್ಲಿದೆ. ಚಾಲಕನ ನಿಯಂತ್ರಣ ತಪ್ಪಿದ ವಾಹನ ಕಂದಕಕ್ಕೆ ಉರುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಹನದಲ್ಲಿ ಸುಮಾರು 20 ಮಕ್ಕಳಿದ್ದರು ಎಂದು ತಿಳಿದು ಬಂದಿದೆ.

3. ಕಲಂ 370 ರದ್ದು ಮಾಡುವ ಬಿಜೆಪಿ ನಿರ್ಣಯ ದೇಶದ ಭದ್ರತೆಗೆ ಆತಂಕ ತಂದೊಡ್ಡಲಿದೆ; ರಾಹುಲ್ ಗಾಂಧಿ ಎಚ್ಚರಿಕೆ!

ಜಮ್ಮು-ಕಾಶ್ಮೀರದ ವಿಶೇಷಾಧಿಕಾರವನ್ನು ಕಸಿದುಕೊಳ್ಳುವ ಮೂಲಕ ಆಡಳಿತರೂಢ ಬಿಜೆಪಿ ಪಕ್ಷ ತನ್ನ ಕಾರ್ಯನಿರ್ವಾಹಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ. ಅಲ್ಲದೆ, ಈ ಕ್ರಮವು ದೇಶದ ಭದ್ರತೆ ಸೇರಿದಂತೆ ಅನೇಕ ವಿಚಾರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರ ಸೋಮವಾರ ಜಮ್ಮು ಮತ್ತು ಕಾಶ್ಮೀರ ಪುನಾರಚನೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿತ್ತು. ಈ ವಿಧೇಯಕಕ್ಕೆ ಬಿಜೆಪಿಯ ಕಟು ವಿರೋಧಿ ಪಕ್ಷಗಳಾದ ಆಮ್ ಆದ್ಮಿ ಹಾಗೂ ಬಿಎಸ್​ಪಿ ಬೆಂಬಲ ಸೂಚಿಸಿದರೆ, ಎನ್​ಡಿಎ ಮಿತ್ರಪಕ್ಷವಾದ ಜೆಡಿಯು ಬಹಿರಂಗವಾಗಿ ತನ್ನ ವಿರೋಧವನ್ನು ವ್ಯಕ್ತಪಡಿಸಿತ್ತು.

4. ಜಮ್ಮು-ಕಾಶ್ಮೀರದಲ್ಲಿ ಶಾಂತಿ ಕಾಪಾಡಿ; ಭಾರತ ಮತ್ತು ಪಾಕಿಸ್ತಾನಕ್ಕೆ ಸೂಚನೆ ನೀಡಿದ ವಿಶ್ವಸಂಸ್ಥೆಕಣಿವೆ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕಾಪಾಡುವಂತೆ ಭಾರತ ಮತ್ತು ಪಾಕಿಸ್ತಾನದ ಸರ್ಕಾರಗಳಿಗೆ ಅಮೇರಿಕಾ ಹಾಗೂ ವಿಶ್ವಸಂಸ್ಥೆ ತಾಕೀತು ಮಾಡಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ವಿಧೇಯಕವನ್ನು ಗೃಹ ಸಚಿವ ಅಮಿತ್ ಶಾ ಸೋಮವಾರ ರಾಜ್ಯಸಭೆಯಲ್ಲಿ ಮಂಡಿಸಿದರು. ಪರಿಣಾಮ ಕಣಿವೆ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಡೀ ರಾಜ್ಯದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಪ್ರಮುಖ ರಾಜಕೀಯ ನಾಯಕರನ್ನು ಬಂಧನದಲ್ಲಿಡಲಾಗಿದೆ.

5. ಮಹಾಮಳೆಗೆ ಎರಡು ಬಲಿ

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ನಿನ್ನೆ ಒಬ್ಬ ವ್ಯಕ್ತಿ ಬಲಿಯಾಗಿದ್ದ. ಇಂದು ಮಹಾಮಳೆಗೆ ಮತ್ತೆರಡು ಜೀವಗಳು ಬಲಿಯಾಗಿವೆ.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಶ್ರಿಂಗೇರಿ ಗ್ರಾಮದಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ಧಾನೆ. ಮೃತ ವ್ಯಕ್ತಿ ಶಿವಪ್ಪ ಸೊಟ್ಟಕ್ಕನವರ (50) ಎಂದು ತಿಳಿದು ಬಂದಿದೆ. ಇನ್ನು, ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅವಾಂತರಕ್ಕೆ ಮತ್ತೊಂದು ಬಲಿಯಾಗಿದೆ.  ಟ್ರಾಫಿಕ್ ನಿಯಂತ್ರಣದಲ್ಲಿ ತೊಡಗಿದ್ದ ಪಿಎಸ್‌ಐ ಸಾವನ್ನಪ್ಪಿದ್ದಾರೆ.  ಕರ್ತವ್ಯ ನಿರತ ಪಿಎಸ್‌ಐ ಈರಣ್ಣ ಲಟ್ಟಿ ಮೃತಪಟ್ಟ ವ್ಯಕ್ತಿ.

6.ಮಹಾಮಳೆಗೆ ಕುಸಿದ ಐತಿಹಾಸಿಕ ಕಿತ್ತೂರು ರಾಣಿ ಚೆನ್ನಮ್ಮ ಕೋಟೆ

ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ 10 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಸಂಪೂರ್ಣ ಅಸ್ಯವ್ಯಸ್ತವಾಗಿದೆ. ಆ ಭಾಗದ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ನೆರೆಪೀಡಿತ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. ಆದರೆ ಈ ನಡುವೆಯೇ ಕುಂದಾನಗರಿ ಬೆಳಗಾವಿಯಲ್ಲಿ ಐತಿಹಾಸಿಕ ಕೋಟೆಯ ಗೋಡೆ ಕುಸಿದಿದೆ.
ಹೌದು, ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿರುವ ಐತಿಹಾಸಿಕ ಕೋಟೆ ಎಂದೇ ಹೆಸರಾದ ಕಿತ್ತೂರು ರಾಣಿ ಚೆನ್ನಮ್ಮ ಕೋಟೆಯ ಗೋಡೆ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿದೆ. ಕಳೆದ 10 ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿರುವುದರಿಂದ ಕೋಟೆಯ ಗೋಡೆಗಳು ಶಿಥಿಲಗೊಂಡಿವೆ. ಐತಿಹಾಸಿಕ ಕೋಟೆಯ ಒಟ್ಟು ಮೂರು ಕಡೆ ಗೋಡೆ ಕುಸಿತವಾಗಿದೆ.

7. ದೆಹಲಿಯಲ್ಲಿ ಕರ್ನಾಟಕ ಭವನದ ನೂತನ ಕಟ್ಟಡದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ದೆಹಲಿಗೆ ತೆರಳಿರುವ ಸಿಎಂ ಬಿಎಸ್​ ಯಡಿಯೂರಪ್ಪ ಇಂದು ಕರ್ನಾಟಕ ಭವನದ ನೂತನ ಕಟ್ಟಡದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. ಇಂದು ಕರ್ನಾಟಕ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನೂತನ ಕಟ್ಟಡದಲ್ಲಿ ಕರ್ನಾಟಕದ ಸಂಸ್ಕೃತಿ, ಅತಿಥಿ ಸತ್ಕಾರ  ಮತ್ತು  ಹೆಚ್ಚು ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡಲು  ಸೂಚನೆ ನೀಡಿದರು. ಇದೇ ವೇಳೆ ಹೊಸ ಕಟ್ಟಡದ ನೀಲಿನಕ್ಷೆ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ವಿಸ್ತೃತ ಚರ್ಚೆ ನಡೆಸಿದ ಅವರು, ಹಳೆಯ ನಕಾಶೆಯಲ್ಲಿ ಕಚೇರಿ ಕಟ್ಟಡಕ್ಕೆ ಎರಡು ಅಂತಸ್ತುಗಳನ್ನು ಕಾಯ್ದಿರಿಸಲಾಗಿದೆ. ಕರ್ನಾಟಕ ಸಂಸ್ಕೃತಿ ಬಿಂಬ ಕಾಣುತ್ತಿಲ್ಲ, ಈ ಹಿನ್ನೆಲೆ ನಕಾಶೆಯಲ್ಲಿ ಕೊಂಚ ಬದಲಾವಣೆ ಮಾಡುವಂತೆ ಸಲಹೆ ನೀಡಿದರು.

8. ರಾಜ್ಯದಲ್ಲಿ ಜಲಪ್ರಳಯ: ಬರದ ನಾಡಲ್ಲೂ ಪ್ರವಾಹ, ಹೈಅಲರ್ಟ್​​​ ಘೋಷಣೆ

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ, ಕೃಷ್ಣಾ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದ ನದಿಪಾತ್ರದ ಜನರು ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಎಲ್ಲೆಡೆ ಧಾರಾಕಾರ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಳತರಿಸಲಾಗುತ್ತಿದೆ. ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಪ್ರದೇಶಗಳ ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕರಾವಳಿ ತೀರದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

9. ಸಿದ್ದರಾಮಯ್ಯ ತವರಲ್ಲೇ ಇಂದಿರಾ ಕ್ಯಾಂಟೀನ್​ ಬಂದ್​

ಮಾಜಿ ಸಿಎಂ ಸಿದ್ದರಾಮಯ್ಯ ತವರಿನಲ್ಲಿಯೇ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್​ ಸೇವೆಯನ್ನು ಬಂದ್​ ಮಾಡಲಾಗಿದೆ. ನಂಜನಗೂಡಿನಲ್ಲಿ ಟೆಂಡರ್​ ದಾರ ಹಣ ಪಾವತಿ ಮಾಡದ ಹಿನ್ನೆಲೆ ವ್ಯವಸ್ಥಾಪಕರು ಇಂದಿನಿಂದ ಇಂದಿರಾ ಕ್ಯಾಂಟೀನ್ ಸೇವೆ ಬಂದ್​ ಮಾಡಲು ನಿರ್ಧರಿಸಿದ್ದು, ಇದರಿಂದಾಗಿ ಜನರು ತೊಂದರೆ ಪಡುವಂತೆ ಆಗಿದೆ.

10. ಇಂದು ಅಂತಿಮ ಟಿ-20; ಸರಣಿ ಕ್ಲೀನ್ ಸ್ವೀಪ್ ಮಾಡಲು ಕೊಹ್ಲಿ ಮಾಸ್ಟರ್​ ಪ್ಲ್ಯಾನ್​​

ಕೆರಿಬಿಯನ್ ಪ್ರವಾಸವನ್ನು ಭರ್ಜರಿ ಆಗಿ ಆರಂಭಿಸಿರುವ ಟೀಂ ಇಂಡಿಯಾ ಇಂದು ಅಂತಿಮ ಟಿ-20 ಪಂದ್ಯವನ್ನಾಡಲಿದೆ. ಈಗಾಗಲೇ ಮೂರು ಪಂದ್ಯಗಳ ಟಿ-20 ಸರಣಿ ಪೈಕಿ 2-0 ಮುನ್ನಡೆ ಸಾಧಿಸಿ ಸರಣಿ ವಶ ಪಡಿಸಿಕೊಂಡಿರುವ ಕೊಹ್ಲಿ ಪಡೆ ಕ್ಲೀನ್ ಸ್ವೀಪ್​ ನತ್ತ ಚಿತ್ತ ನೆಟ್ಟಿದೆ. ಇತ್ತ ವೆಸ್ಟ್​ ಇಂಡೀಸ್ ಪ್ರತಿಷ್ಠೆಗಾದರು ಇಂದಿನ ಪಂದ್ಯ ಗೆಲ್ಲ ಬೇಕೆಂದು ಪಣತೊಟ್ಟಿದೆ. ಇದರ ಜೊತೆಗೆ ಭಾರತ ತಂಡದಲ್ಲಿ ಬೆಂಚ್ ಕಾಯುತ್ತಿರುವ ಆಟಗಾರರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.
First published:August 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ