Evening Digest: ಈ ದಿನ ನೀವು ಓದಲೇಬೇಕಾದ ಹತ್ತು ಪ್ರಮುಖ ಸುದ್ದಿಗಳು

Latha CG | news18
Updated:June 12, 2019, 5:53 PM IST
Evening Digest: ಈ ದಿನ ನೀವು ಓದಲೇಬೇಕಾದ ಹತ್ತು ಪ್ರಮುಖ ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: June 12, 2019, 5:53 PM IST
  • Share this:
1. ಚಂದ್ರಯಾನ-2 ಉಡಾವಣೆಗೆ ಸಜ್ಜಾದ ಇಸ್ರೋ; ಜುಲೈ15ರಂದು ಆಗಸಕ್ಕೆ ಹಾರಲಿರುವ ನೌಕೆ

ಮೊದಲ ಚಂದ್ರಯಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ) ಈಗ ಚಂದ್ರಯಾನ 2 ಉಡಾವಣೆಗೆ ಸಜ್ಜಾಗಿದೆ. ಚಂದ್ರನ ಅಂಗಳಕ್ಕೆ ಎರಡನೇ ಬಾರಿ ಉಪಗ್ರಹ​ ಉಡಾವಣೆಗೆ ಸಜ್ಜಾಗಿರುವ ಇಸ್ರೋ ಇದೇ ಜುಲೈ 15ರಂದು ಮುಂಜಾನೆ 2.15ಕ್ಕೆ ಉಡಾವಣೆಯಾಗಲಿದೆ. ಸೆಪ್ಟೆಂಬರ್​ 6ರಂದು ಯಶಸ್ವಿಯಾಗಿ ತನ್ನ ಕಕ್ಷೆಗೆ ಸೇರಬಹುದು ಎಂಬ ನಿರೀಕ್ಷೆ ಇದೆ.

2. ತಾವರ್​ ಚಂದ್​ ಗೆಹ್ಲೋಟ್​ ರಾಜ್ಯಸಭೆ ನಾಯಕ, ಪಿಯೂಷ್​ ಗೋಯೆಲ್​ ಉಪನಾಯಕ

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್​ ಚಂದ್​ ಗೆಹ್ಲೋಟ್​ ಅವರನ್ನು ರಾಜ್ಯಸಭಾ ನಾಯಕನಾಗಿ ಹಾಗೂ ರೈಲ್ವೆ ಮತ್ತು ವಾಣಿಜ್ಯ ಸಚಿವ ಪಿಯೂಷ್​ ಗೋಯೆಲ್​ ಅವರನ್ನು ರಾಜ್ಯಸಭಾ ಉಪನಾಯಕನನ್ನಾಗಿ ನೇಮಿಸಲಾಗಿದೆ. ಮೋದಿ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ತಾವರ್ ಚಂದ್​ ಗೆಹ್ಲೋಟ್​ ಜೂನ್​ 4ರಂದು ಅಧಿಕಾರ ವಹಿಸಿಕೊಂಡಿದ್ದರು. ಇವರು ಈ ಹಿಂದಿನ ಮೋದಿ ಸರ್ಕಾರದ ಸಚಿವ ಸಂಪುಟದಲ್ಲಿಯೂ ಕಾರ್ಯನಿರ್ವಹಿಸಿದ್ದರು.

3. ಉತ್ತರ ಪ್ರದೇಶದಲ್ಲಿ ಮತ್ತೋರ್ವ ಪತ್ರಕರ್ತನ ಮೇಲೆ ಹಲ್ಲೆ:

ಉತ್ತರ ಪ್ರದೇಶದಲ್ಲಿ ಪತ್ರಕರ್ತರ ಮೇಲಿನ ಹಲ್ಲೆ ನಿರಂತರವಾಗಿ ನಡೆಯುತ್ತಲೇ ಇದೆ. ಫೇಸ್​ಬುಕ್​ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಕುರಿತ ಬರವಣಿಗೆಗೆ ಜೈಲು ಪಾಲಾಗಿದ್ದ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಮರುದಿನವೇ, ಮತ್ತೋರ್ವ ಪತ್ರಕರ್ತನ ಮೇಲೆ ರೈಲ್ವೆ ಪೊಲೀಸರೆ ಅಮಾನವೀಯವಾಗಿ ಹಲ್ಲೆ ನಡೆಸಿ ಮೂತ್ರಪಾನ ಮಾಡಿಸಿರುವ ಘಟನೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ವಿರೋಧಕ್ಕೆ ಕಾರಣವಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಸ್ಥಳೀಯ ಪತ್ರಕರ್ತ ಅಮಿತ್​ ಶರ್ಮಾ ಎಂದು ಗುರುತಿಸಲಾಗಿದೆ. ದಿಮ್ನಾಪುರ್ ಬಳಿಯ ರೈಲ್ವೆ ನಿಲ್ದಾಣದಲ್ಲಿ ಘಟನೆ ಜರುಗಿದೆ.

4. ನೀರವ್​ ಮೋದಿಗೆ ಜಾಮೀನು ನಿರಾಕರಿಸಿದ ಲಂಡನ್​ ಹೈಕೋರ್ಟ್​ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಿಂದ 13 ಸಾವಿರ ಕೋಟಿ ವಂಚಿಸಿ ದೇಶದಿಂದ ಪಲಾಯನಗೈದು ಲಂಡನ್​ನಲ್ಲಿ ಸೆರೆಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿಗೆ ಲಂಡನ್​ ಹೈಕೋರ್ಟ್​ ಜಾಮೀನು ನಿರಾಕರಿಸಿದೆ. ಹೀಗಾಗಿ ನೀರವ್​ ಮೋದಿ ಪಶ್ಚಿಮ ಯುರೋಪ್​ನ ಅತಿದೊಡ್ಡ ಕಾರಾಗೃಹ ವಾಂಡ್ಸ್​ವರ್ಥ್​ನಲ್ಲಿ ಜೈಲೇ ಗತಿಯಾಗಿದೆ.

5. ರಾಹುಲ್ ಗಾಂಧಿ ಕಾಂಗ್ರೆಸ್​ ಅಧ್ಯಕ್ಷರಾಗಿಯೇ ಇರಲಿದ್ದಾರೆ; ರಂದೀಪ್ ಸುರ್ಜೇವಾಲಾ

ಕಾಂಗ್ರೆಸ್​​ ಅಧ್ಯಕ್ಷ ಸ್ಥಾನದಲ್ಲಿ ರಾಹುಲ್​​ ಗಾಂಧಿಯವರೇ ಮುಂದುವರೆಯಲಿದ್ದಾರೆ ಎಂದು ಪಕ್ಷದ ವಕ್ತಾರ ರಂದೀಪ್ ಸುರ್ಜೇವಾಲಾ ಹೇಳಿದ್ಧಾರೆ. ಅಲ್ಲದೇ ರಾಹುಲ್​​ ಜೀ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು, ಅಧ್ಯಕ್ಷರಾಗಿದ್ದಾರೆ, ಇನ್ಮುಂದೆಯೂ ಅಧ್ಯಕ್ಷರಾಗಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆ ಬಳಿಕ ಸುದ್ದಿಗಾರರ ಜತೆ ಮಾತಾಡಿದ ಸುರ್ಜೆವಾಲ, ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಸ್ತಾಪ ಮಾಡಿದ್ದರು. ಈ ಪ್ರಸ್ತಾಪವನ್ನು ಕಾಂಗ್ರೆಸ್​ ನಾಯಕರು ತಿರಸ್ಕರಿಸಿದರು. ಅಲ್ಲದೇ ಅಧ್ಯಕ್ಷ ಸ್ಥಾನ ತ್ಯಜಿಸಬೇಡಿ ಎಂದು ಒತ್ತಾಯಿಸಿದರು ಎಂದರು.

6. ರೈತರಿಗೆ ಸಮಸ್ಯೆಯಾದರೆ ಜಿಲ್ಲಾಧಿಕಾರಿಗಳೇ ಹೊಣೆ: ಸಿಎಂ ಕುಮಾರಸ್ವಾಮಿ ಖಡಕ್​ ಎಚ್ಚರಿಕೆ

ಸಿಎಂ ಕುಮಾರಸ್ವಾಮಿ ಇಂದು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಬರ ನಿರ್ವಹಣೆಗೆ ಮೊದಲ ಆದ್ಯತೆ ಕೊಡಿ ಎಂದು ಖಡಕ್​ ಎಚ್ಚರಿಕೆ ನೀಡಿದರು. "ಜನರಿಗೆ ಕುಡಿಯುವ ನೀರಿ‌ನ ಸಮಸ್ಯೆ ಆಗಬಾರದು. ನೀರಿನ ಸಮಸ್ಯೆಯಿದ್ದರೆ ಖಾಸಗಿಯಿಂದ ಪಡೆದು ಕೊಡಿ. ಅದಕ್ಕೆ ಎಷ್ಟೇ ಹಣ ಬೇಕಾದರೂ ಸರ್ಕಾರ ಕೊಡುತ್ತದೆ. ಯಾವ ಕಾರಣಕ್ಕೂ ನೀರಿನ ಸಮಸ್ಯೆ ಆಗಬಾರದು. ಏನಾದರೂ ನೀರಿನ ಸಮಸ್ಯೆ ಎದುರಾದರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ. ಪಿಡಿ ಅಕೌಂಟ್​​ನಲ್ಲಿ ಸಾಕಷ್ಟು ಹಣ ಇಡಲಾಗಿದೆ. ಆ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿ. ಖಾಲಿಯಾದರೆ 24 ಗಂಟೆಯೊಳಗೆ ಹಣ ಹಾಕಲು ಸಿದ್ದ. ಜನರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮವಹಿಸಿ" ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದರು.

7. ನಾಲ್ಕನೇ ಶನಿವಾರ ರಜೆ; ಈ ತಿಂಗಳನಿಂದಲೇ ಜಾರಿಗೆ ಸರ್ಕಾರದಿಂದ ಅಧಿಕೃತ ಆದೇಶ
ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಸರ್ಕಾರಿ ಕಚೇರಿ ಸೇರಿದಂತೆ ಶಾಲಾ-ಕಾಲೇಜಿಗೆ ರಜೆಗೆ ಸಂಪುಟದಲ್ಲಿ ಅಸ್ತು ಸಿಕ್ಕ ಬೆನ್ನಲ್ಲೇ ಈ ಆದೇಶವನ್ನು ತತ್​ಕ್ಷಣದಿಂದಲೇ ಜಾರಿತರುವಂತೆ ಸರ್ಕಾರ ಆದೇಶಿಸಿದೆ. ತಿಂಗಳ ನಾಲ್ಕನೇ ಶನಿವಾರದಂದು ರಜೆ ನೀಡಿ, 15 ದಿನಗಳ ಸಾರ್ವತ್ರಿಕ ರಜೆಗಳಿಗಳನ್ನು 10 ದಿನಕ್ಕೆ ಕಡಿತಮಾಡಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧರ ಕೈಗೊಳ್ಳಲಾಗಿತ್ತು. ಈ ಆದೇಶ ಇದೇ ತಿಂಗಳಿನಿಂದ ಜಾರಿಯಾಗಲಿದೆ ಎಂದು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಿಬ್ಬಂದಿ ಇಂದು ಅಧಿಕೃತ ಸುತ್ತೋಲೆ ಹೊರಡಿಸಿದೆ.

8. IMA Jewels Scam: ಡಿಐಜಿ ರವಿಕಾಂತೇಗೌಡ ನೇತೃತ್ವದಲ್ಲಿ ಎಸ್​ಐಟಿ ರಚನೆ

ಲಕ್ಷಾಂತರ ಜನರ ಕೋಟಿ-ಕೋಟಿ ಹಣ ನುಂಗಿರುವ ಐಎಂಎ ಜ್ಯುವೆಲರಿ ಕಂಪನಿಯ ವಂಚನೆ ಪ್ರಕರಣವನ್ನು ತನಿಖೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಡಿಐಜಿ ರವಿಕಾಂತೇಗೌಡ ನೇತೃತ್ವದಲ್ಲಿ 10 ಜನ ತನಿಖಾಧಿಕಾರಿಗಳ ಎಸ್​ಐಟಿ ತಂಡವನ್ನು ರಚನೆ ಮಾಡಿದೆ. ಈ ಸಂಬಂಧ ಎಸ್‌ಐಟಿಯಲ್ಲಿ ಅಧಿಕಾರಿಗಳ ಮಾಹಿತಿಯನ್ನು ಟ್ವಿಟರ್‌ ಮೂಲಕ ತಿಳಿಸಿದ್ದಾರೆ. 10 ಮಂದಿಯನ್ನು ಒಳಗೊಂಡ ಎಸ್‌ಐಟಿಯನ್ನು ಪ್ರಸ್ತುತ ಅಗ್ನಿಶಾಮಕ ದಳದ ಡಿಐಜಿಯಾಗಿ ಸೇವೆ ಸಲ್ಲಿಸುತ್ತಿರುವ ಬಿ.ಆರ್. ರವಿಕಾಂತೇಗೌಡ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

9. ICC World Cup - ಶಿಖರ್ ಧವನ್ ಗಾಯ ಹಿನ್ನೆಲೆ, ರಿಷಬ್ ಪಂತ್​ಗೆ ಬುಲಾವ್
ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶಿಖರ್ ಧವನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ರಿಷಬ್ ಪಂತ್ ಅವರನ್ನು ಬ್ಯಾಕಪ್ ಆಟಗಾರನಾಗಿ ಇಂಗ್ಲೆಂಡ್​ಗೆ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ. ಜೂನ್ 9ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಆಡುವ ವೇಳೆ ಶಿಖರ್ ಧವನ್ ಗಾಯಗೊಂಡಿದ್ದರು. ಕೈ ಬೆರಳಿಗೆ ಗಾಯವಾಗಿದ್ದು ಕನಿಷ್ಠ 3 ಪಂದ್ಯಗಳಲ್ಲಿ ಧವನ್ ಅಲಭ್ಯರಾಗಿದ್ಧಾರೆ. ಧವನ್ ಅವರಿಗೆ ಬದಲೀ ಆಟಗಾರನಿಲ್ಲ ಎಂದು ನಿನ್ನೆಯೇ ಸ್ಪಷ್ಟಪಡಿಸಿದ್ದ ಬಿಸಿಸಿಐ ಇದೀಗ ರಿಷಬ್ ಪಂತ್ ಅವರನ್ನು ಬ್ಯಾಕಪ್ ಆಗಿ ಇಂಗ್ಲೆಂಡ್​ಗೆ ಕಳುಹಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಅಂದರೆ, ಟೀಮ್ ಇಂಡಿಯಾದ 15 ಆಟಗಾರರ ಪಟ್ಟಿಯಲ್ಲಿ ಸದ್ಯಕ್ಕಂತೂ ರಿಷಬ್ ಪಂತ್​ಗೆ ಸ್ಥಾನ ನೀಡಲಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

10. Rashmika Mandanna: ರಶ್ಮಿಕಾ-ನಿತಿನ್​ ಅಭಿನಯದ 'ಭೀಷ್ಮ' ಚಿತ್ರಕ್ಕೆ ಸಿಕ್ತು ಕಿಕ್​ ಸ್ಟಾರ್ಟ್​
ಟಾಲಿವುಡ್​ನಲ್ಲಿ ವಿಭಿನ್ನವಾದ ಟೈಟಲ್​ ಇರುವ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸೋದು ನಟ ನಿತಿನ್​. ಅದಕ್ಕೆ ಈ ಸಲವೂ ಅವರು ಭಿನ್ನವಾದ ಶೀರ್ಷಿಕೆ ಇರುವ ಸಿನಿಮಾದಲ್ಲಿ ಅಭಿನಯಿಸೋಕೆ ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಮತ್ತೊಂದು ವಿಶೇಷವಿದೆ. ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ನಿತಿನ್​ಗೆ ನಾಯಕಿಯಾಗಿದ್ದಾರೆ. ರಶ್ಮಿಕಾ ಹಾಗೂ ನಿತಿನ್​ ಜೊತೆಯಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಟಾಕ್​ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿತ್ತು. ಅದಕ್ಕೆ ತಕ್ಕಂತೆ ರಶ್ಮಿಕಾ ಸಹ ಸಾಮಾಜಿಕ ಜಾಲತಾಣದ ಸೇರಿದಂತೆ ಸಂದರ್ಶನಗಳಲ್ಲಿ ಈ ಸಿನಿಮಾ ಕುರಿತು ಆಗಾಗ ಮಾಹಿತಿ ಕೊಡುತ್ತಲೇ ಇದ್ದರು. ಈಗ ಈ ಚಿತ್ರದ ಮುಹೂರ್ತ ನೆರವೇರಿದೆ.
First published:June 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading