Evening Digest: ಈ ದಿನದ ಟಾಪ್​ 10 ಸುದ್ದಿಗಳು ಇಲ್ಲಿವೆ

Latha CG | news18-kannada
Updated:September 10, 2019, 5:57 PM IST
Evening Digest: ಈ ದಿನದ ಟಾಪ್​ 10 ಸುದ್ದಿಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
  • Share this:
1 .ಕೆಜಿಎಫ್​ನಲ್ಲಿ ದುರಂತ; ಗಣೇಶ ವಿಸರ್ಜನೆ ವೇಳೆ 6 ಮಕ್ಕಳು ನೀರುಪಾಲು

ಗಣೇಶ ವಿಸರ್ಜನೆ ಮಾಡುವಾಗ 6 ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್​​ ತಾಲೂಕಿನ ಮರದಘಟ್ಟ ಗ್ರಾಮದಲ್ಲಿ ನಡೆದಿದೆ. ಮೃತ ಮಕ್ಕಳನ್ನು ರಕ್ಷಿತಾ, ತೇಜಸ್ವಿ, ವೀಣಾ, ವೈಷ್ಣವಿ, ರೋಹಿತ್, ಧನುಷ್ ಎಂದು ಗುರುತಿಸಲಾಗಿದೆ. ಮೃತರಲ್ಲಿ ನಾಲ್ಕು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು ಎಂದು ತಿಳಿದು ಬಂದಿದೆ.

2. ಪಾಕಿಸ್ತಾನವನ್ನು ತ್ಯಜಿಸಿ ಭಾರತದ ಆಶ್ರಯ ಪಡೆಯಲು ಮುಂದಾದ ಇಮ್ರಾನ್ ಖಾನ್ ಪಕ್ಷದ ಶಾಸಕ; ಕಾರಣವೇನು ಗೊತ್ತಾ?

ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂದು ಆರೋಪಿಸಿರುವ ಅಲ್ಲಿನ ಸಿಖ್ ಸಮುದಾಯದ ಶಾಸಕ ಬಲದೇವ್ ಸಿಂಗ್ ಇದೀಗ ಕುಟುಂಬ ಸಮೇತರಾಗಿ ಭಾರತಕ್ಕೆ ತಲುಪಿದ್ದು, ಇಲ್ಲೇ ಆಶ್ರಯ ಪಡೆಯಲು ಮುಂದಾಗಿರುವ ವಿಚಾರ ಪಾಕಿಸ್ತಾನ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡು ಮಾಡುವಂತಾಗಿದೆ. ಬಲದೇವ್ ಸಿಂಗ್ (43) ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಅಲ್ಪ ಸಂಖ್ಯಾತ ಸಮುದಾಯದ ಶಾಸಕ. ಬ್ಯಾರಿಕೋಟ್ ಜಿಲ್ಲೆಯ ಮೀಸಲು ಕ್ಷೇತ್ರವಾದ ಖೈಬರ್ ಫಖ್ತುನ್ ಖ್ವಾ ವಿಧಾನಸಭಾ ಕ್ಷೇತ್ರದಿಂದ ಇವರು ಶಾಸಕನಾಗಿ ಆಯ್ಕೆಯಾಗಿದ್ದಾರೆ.

3. ಕಣಿವೆ ರಾಜ್ಯದಲ್ಲಿ ಜನರನ್ನು ಬೆದರಿಸುತ್ತಿದ್ದ 8 ಲಷ್ಕರ್​​​ ಉಗ್ರರ ಬಂಧನ

ಜಮ್ಮು ಕಾಶ್ಮೀರದಲ್ಲಿ ಜನರನ್ನು ಬೆದರಿಸುತ್ತಿದ್ದ ಮತ್ತು ಭಯ ಹುಟ್ಟಿಸುತ್ತಿದ್ದ ಲಷ್ಕರ್​-ಎ-ತೋಯ್ಬಾ ಸಂಘಟನೆಯ 8 ಮಂದಿ ಉಗ್ರರನ್ನು ಸೋಮವಾರ ಕಾಶ್ಮೀರದ ಸೋಪೋರ್​ನಲ್ಲಿ ಬಂಧಿಸಲಾಗಿದೆ.  ಬಂಧಿತ ಉಗ್ರರನ್ನು ಅಯಿಜಾಜ್​ ಮಿರ್, ಓಮರ್ ಮಿರ್, ತವ್​ಸೀಪ್​ ನಜರ್, ಇಮಿಟಿಯಾಜ್​ ನಜಾರ್, ಓಮರ್ ಅಕ್ಬರ್, ಫೈಜಾನ್​ ಲತೀಫ್​, ದಣೀಶ್​ ಹಬೀಬ್​ ಮತ್ತು ಶೋಕಾತ್ ಅಹಮದ್​ ಮಿರ್ ಎಂದು ಗುರುತಿಸಲಾಗಿದೆ.  ಉಗ್ರರು ಬಳಸಿದ್ದ ಕಂಪ್ಯೂಟರ್, ಪೋಸ್ಟರ್​​​​ಗಳ ತಯಾರಿಕೆಗೆ ಬಳಸಿದ್ದ ಇನ್ನಿತರ ಸಾಮಾಗ್ರಿಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

4. ಗಾಂಜಾ ಸೇವನೆಯಲ್ಲಿ ದೆಹಲಿಗೆ ಪ್ರಪಂಚದಲ್ಲೇ 3ನೇ ಸ್ಥಾನ; ಇಲ್ಲಿದೆ ರಾಜಧಾನಿಯ ಮತ್ತೊಂದು ರೂಪನಿಷೇಧಿತ ಗಾಂಜಾ ಬಳಕೆ ಮಾಡುವ ನಗರಗಳ ಪೈಕಿ ಭಾರತದ ರಾಜಧಾನಿ ದೆಹಲಿ ಪ್ರಪಂಚದಲ್ಲೇ ಮೂರನೇ ಅತೀ ದೊಡ್ಡ ನಗರ ಎಂದು ವರದಿಯೊಂದು ಹೇಳುತ್ತಿದೆ. ವರ್ಷಾಂತ್ಯಕ್ಕೆ ಕೇವಲ ದೆಹಲಿಯಲ್ಲೇ 38.68ಲಕ್ಷ ಮೆಟ್ರಿಕ್ ಟನ್​​ನಷ್ಟು ಕ್ಯಾನಬಿಸ್ ಸೇವನೆ ಮಾಡಲಿದ್ದಾರೆ ಎಂದು ಇತ್ತೀಚೆಗಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಎಬಿಸಿಡಿ ಎಂಬ ಕಂಪನಿಯೂ "ಕ್ಯಾನಬಿಸ್​ ಬೆಲೆ ಸೂಚ್ಯಂಕ 2018" ಬಗ್ಗೆ ಅಧ್ಯಯನ ನಡೆಸಿತ್ತು. ಈ ಅಧ್ಯಯನ ಯಾವ ದೇಶ ಗಾಂಜಾ ಬಳಕೆ ಮಾಡುವದರಲ್ಲಿ ಮುಂದಿದೆ ಎಂಬುದಾಗಿತ್ತು. ಹೀಗಾಗಿಯೇ ಪ್ರಪಂಚದ ಸುಮಾರು 120 ನಗರಳ ಬಗ್ಗೆ ಅಧ್ಯಯನ ಮಾಡಲಾಗಿತ್ತು. ಇದೀಗ ಗಾಂಜಾ ಸೇವನೆ​ ಮಾಡುವ ಪ್ರಮುಖ ನಗರಗಳ ಪೈಕಿ ದೆಹಲಿ ಪ್ರಪಂಚದ ಮೂರನೇ ದೊಡ್ಡ ನಗರ ಎಂದು ತಿಳಿದು ಬಂದಿದೆ.

5.  ಕಾಶ್ಮೀರ ಕಣಿವೆ ಕೃಷಿಕರಿಗೆ ಸಿಹಿಸುದ್ದಿ; ಸಂಕಷ್ಟದಲ್ಲಿದ್ದ ಸೇಬು ಬೆಳೆಗಾರರಿಗೆ ಕೇಂದ್ರ ಸರ್ಕಾರದ ಸಹಾಯಹಸ್ತ

370ನೇ ವಿಧಿ ರದ್ದುಪಡಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿ ಗ್ರಾಹಕರಿಲ್ಲದೆ ಸೇಬು ಬೆಳೆಗಾರರು ನಷ್ಟ ಅನುಭವಿಸಿದ್ದರು. ಈ ಸಮಸ್ಯೆಗೆ ಕೇಂದ್ರ ಸರ್ಕಾರ ಈಗ ಪರಿಹಾರ ಕಂಡುಹಿಡಿಯುವ ಮೂಲಕ ಕಾಶ್ಮೀರ ಕಣಿವೆಯ ಸೇಬು ಕೃಷಿಕರಿಗೆ ಸಿಹಿಸುದ್ದಿ ನೀಡಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ 370ನೇ ವಿಧಿ ರದ್ದು ಪಡಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ವಾಪಾಸ್​ ಪಡೆದಿತ್ತು. ಇದಕ್ಕೆ ದೇಶಾದ್ಯಂತ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಸರ್ಕಾರದ ಈ ದಿಢೀರ್ ನಿರ್ಧಾರದಿಂದ ಜಮ್ಮು-ಕಾಶ್ಮೀರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು.

6. ಪಕ್ಷದ ಆಂತರಿಕ ರಾಜಕೀಯಕ್ಕೆ ಬೇಸತ್ತು ಕಾಂಗ್ರೆಸ್​ ತೊರೆದ ನಟಿ ಊರ್ಮಿಳಾ ಮಾತೋಂಡ್ಕರ್​​​

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಸೇರಿದ್ದ ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್​​ ಕೈಗೆ ವಿದಾಯ ಹೇಳಿದ್ದಾರೆ. ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪಕ್ಷದಲ್ಲಿನ ಆಂತರಿಕ ರಾಜಕೀಯ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮೇ 16ರಂದು ಮುಂಬೈ ಕಾಂಗ್ರೆಸ್​ ಅಧ್ಯಕ್ಷ ಮಿಲಿಂಡ ಡಿಯೋರಾಗೆ ಪತ್ರ ಬರೆದಿರುವ ಅವರು, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

7. ಸಿಎಂ, ಸಚಿವರ ಮಕ್ಕಳ ಆಟಗಳಿಗೆ ಹೈಕಮಾಂಡ್ ಅಂಕುಶ; ಆಡಳಿತದಲ್ಲಿ ತಲೆಹಾಕಿಸದಂತೆ ಕಟ್ಟುನಿಟ್ಟಿನ ಸೂಚನೆ

ಆಡಳಿತ ಯಂತ್ರದಲ್ಲಿ ಸಿಎಂ ಹಾಗೂ ಸಚಿವರ ಮಕ್ಕಳು ಸರ್ಕಾರಿ ಅಧಿಕಾರ ವಲಯದಲ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯ ಸರ್ಕಾರಕ್ಕೆ ​ ಖಡಕ್​ ಸಂದೇಶ ರವಾನೆ ಮಾಡಿದೆ. ಕುಟುಂಬಸ್ಥರನ್ನು ಹೊರಗಿಟ್ಟು ಆಡಳಿತ ನಡೆಸುವಂತೆ ಬಿಜೆಪಿ ಹೈಕಮಾಂಡ್​ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ.
ಪಕ್ಷದ ಸಂಘಟನಾತ್ಮಕ ಜವಾಬ್ದಾರಿ ಇರುವ ವ್ಯಕ್ತಿ ಹೈ ಕಮಾಂಡ್​​ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಸರ್ಕಾರದಲ್ಲಿ ಸಿಎಂ ಹಾಗೂ ಸಚಿವರ ಕುಟುಂಬ ಸದಸ್ಯರ ಹಸ್ತಕ್ಷೇಪ ಹೈ ಕಮಾಂಡ್​ ಗಮನಕ್ಕೆ ಬಂದ ತಕ್ಷಣ ಬಿಜೆಪಿ ನಾಯಕರಿಗೆ ಸೂಚನೆ ನೀಡಿದೆ.

8. ಡಿಕೆಶಿ ಮಗಳು ಐಶ್ವರ್ಯಾಗೂ ಕಾಡಿದ ಇ.ಡಿ. ಸಂಕಷ್ಟ; ವಿಚಾರಣೆಗೆ ಬರುವಂತೆ ಸಮನ್ಸ್​ ನೀಡಿದ ಅಧಿಕಾರಿಗಳು

ಹಣ ಪತ್ತೆ ಪ್ರಕರಣ ಸಂಬಂಧ ಡಿ.ಕೆ. ಶಿವಕುಮಾರ್ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕಳೆದ ಏಳು ದಿನಗಳಿಂದ ಇ.ಡಿ. ವಶದಲ್ಲಿರುವ ಡಿಕೆಶಿ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದೀಗ ಡಿಕೆಶಿ ಮಗಳಿಗೂ ಇ.ಡಿ. ಸಂಕಷ್ಟ ತಟ್ಟಿದೆ. ಸೆ.12ರಂದು ವಿಚಾರಣೆಗೆ ಬರುವಂತೆ ಡಿ.ಕೆ.ಶಿವಕುಮಾರ್ ಅವರ ಮಗಳು ಐಶ್ವರ್ಯಾ ಅವರಿಗೆ ಇ.ಡಿ. ಅಧಿಕಾರಿಗಳು ಇಂದು ಸಮನ್ಸ್​ ನೀಡಿದ್ದಾರೆ. ಇಂದು ಮಧ್ಯಾಹ್ನ ಸದಾಶಿವನಗರದಲ್ಲಿರುವ ಡಿಕೆಶಿ ಮನಗೆ ತೆರಳಿದ ಅಧಿಕಾರಿಗಳು ಮಗಳು ಐಶ್ವರ್ಯಾ ಅವರಿಗೆ ಸಮನ್ಸ್​ ನೀಡಿ ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಿದ್ದಾರೆ.

9.ಪ್ರವಾಹ ಸಂತ್ರಸ್ತ ಗ್ರಾಮಗಳು ಸ್ಥಳಾಂತರಕ್ಕೆ ಒಪ್ಪಿದರೆ ಸರ್ಕಾರದಿಂದ ನವಗ್ರಾಮ ನಿರ್ಮಾಣ; ಬಿಎಸ್​ ಯಡಿಯೂರಪ್ಪ

ಮಹಾರಾಷ್ಟ್ರ ಮಳೆಯಿಂದಾಗಿ ಉತ್ತರ ಕರ್ನಾಟಕದ ಜನರು ಭೀಕರ ಪ್ರವಾಹದಿಂದ ನಲುಗಿದ್ದಾರೆ. ಪ್ರವಾಹ ಇಳಿಯಿತು ಎನ್ನುವ ವೇಳೆ ಮತ್ತೆ ಜಿಲ್ಲೆಯಲ್ಲಿ ನೆರೆ ಆವರಿಸಿದ್ದು, ಜನರು ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಗೆ ಇಂದು ಸಿಎಂ ಭೇಟಿ ನೀಡಿದ್ದು, ಸಂತ್ರಸ್ತರಿಗೆ ಭರವಸೆ ನೀಡಿದ್ದಾರೆ. ರಾಮದುರ್ಗ ತಾಲೂಕಿನ ಚಿಕ್ಕ ಹಂಪಿಹೊಳಿ ಮತ್ತು ಹೀರೆ ಹಂಪಿಹೊಳಿ ಗ್ರಾಮಕ್ಕೆ ಸಿಎಂ ಬಿ.ಎಸ್​​ ಯಡಿಯೂರಪ್ಪ ಭೇಟಿ ನೀಡಿ ಇಲ್ಲಿನ ನೆರೆಪೀಡಿತ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು.  ಹಾಗೆಯೇ ಸುರೇಬಾನ್ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳ ಆಲಿಸಿದರು.

10. ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ ಎದುರು ಕಾಶ್ಮೀರ ವಿಚಾರ ಪ್ರಸ್ತಾಪಕ್ಕೆ ಮುಂದಾದ ಪಾಕ್​; ತಿರುಗೇಟು ನೀಡಲು ಭಾರತ ಸಿದ್ಧತೆ

ಕಾಶ್ಮೀರ ವಿಷಯವಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನ ಇದೀಗ ಕಣಿವೆ ರಾಜ್ಯದಲ್ಲಿ ಭಾರತ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಎದುರು ದೂರು ನೀಡಲು ಸಜ್ಜಾಗಿದೆ. ಇಂದಿನಿಂದ ಜಿನಿವಾದಲ್ಲಿ ಮೂರು ದಿನಗಳ ಕಾಲ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ ಸಭೆ ನಡೆಯಲಿದ್ದು, ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್​ ಖುರೇಷಿ ಸಭೆಯಲ್ಲಿ ಕಾಶ್ಮೀರದಲ್ಲಿ ಭಾರತ ಸರ್ಕಾರ ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆ ಕುರಿತ ವಿಷಯವನ್ನು ಮುಂದಿಡಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ.
First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ