ಅಣ್ಣಾ ಹಜಾರೆ ರೀತಿ ಮಾದರಿ ಕೆಲಸ: ಶಾಲಾ ಶಿಕ್ಷಕರ ಸೇವೆಗೊಂದು ಸಲಾಂ

news18
Updated:August 3, 2018, 11:46 AM IST
ಅಣ್ಣಾ ಹಜಾರೆ ರೀತಿ ಮಾದರಿ ಕೆಲಸ: ಶಾಲಾ ಶಿಕ್ಷಕರ ಸೇವೆಗೊಂದು ಸಲಾಂ
news18
Updated: August 3, 2018, 11:46 AM IST
- ಜಿ.ಹರೀಶಕುಮಾರ, ನ್ಯೂಸ್ 18 ಕನ್ನಡ

ಬೆಂಗಳೂರು (ಆಗಸ್ಟ್ . 03) :  ಈ ಸರ್ಕಾರಿ ಶಾಲೆಯ ಶಿಕ್ಷಕರು ವಾರಕ್ಕೊಮ್ಮೆ ಕಾರ್ಮಿಕರಾಗುತ್ತಾರೆ. ತರಗತಿ ಮುಗಿಸಿ, ಮನೆಗೆ ಹೊರಡುವ ಮುನ್ನ ಶಾಲೆಯ ಶೌಚಾಲಯ ತೊಳೆಯುವ ಶಿಕ್ಷಕರಿಗೆ, ಮಕ್ಕಳು ಸಾಥ್ ನೀಡುತ್ತಾರೆ. 

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹುತ್ಗಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಗಣೇಶನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಕಾಯಕ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಶಾಲೆಯಲ್ಲಿ ಕ್ರೀಡಾ ಚಟುವಟಿಕೆಗೆಂದು ರಚನೆಯಾಗಿರುವ ಎಂಟು ತಂಡಗಳಿವೆ. ಮುಖ್ಯ ಶಿಕ್ಷಕರೂ ಒಳಗೊಂಡು, ಪ್ರತಿ ತಂಡಕ್ಕೆ ಒಬ್ಬರು ಶಿಕ್ಷಕರು ಮುಖ್ಯಸ್ಥರು.

ಈ ತಂಡದ ನೇತೃತ್ವದಲ್ಲಿ ಪ್ರತಿ ಶನಿವಾರ ಶೌಚಾಲಯ ಸ್ವಚ್ಛತಾ ಕಾರ್ಯ ನಡೆಯುತ್ತದೆ. ಸರದಿ ಪ್ರಕಾರ ಪ್ರತಿ ತಂಡಕ್ಕೆ ನಾಲ್ಕು ವಾರಕ್ಕೊಮ್ಮೆ ಈ ಕೆಲಸ. ಆದರೆ, ಮುಖ್ಯ ಶಿಕ್ಷಕ ಎಂ.ಎಚ್.ನಾಯ್ಕ, ದೈಹಿಕ ಶಿಕ್ಷಣ ಶಿಕ್ಷಕ ಶ್ರೀಧರ ಎಸ್.ಪಿ, ಡಿ ದರ್ಜೆ ನೌಕರ ಇರ್ಫಾನ್ ಇವರೆಲ್ಲರೂ ಪ್ರತಿವಾರ ಎಲ್ಲಾ ತಂಡಗಳೊಂದಿಗೆ ಇರುತ್ತಾರೆ.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ಶಾಲೆಗಳಿಗೆ ವಾರ್ಷಿಕವಾಗಿ ದೊರೆಯುವ 50ಸಾವಿರ ರೂಪಾಯಿ ಅನುದಾನವು ವಿಜ್ಞಾನ, ಕ್ರೀಡೆ, ದಿನಪತ್ರಿಕೆ ಖರೀದಿ, ಕಚೇರಿ ನಿರ್ವಹಣೆಗೆ ಬಳಕೆಯಾಗುತ್ತದೆ. ಲಭ್ಯವಿರುವ ಅನುದಾನದಲ್ಲಿ ಪ್ರತಿ ವಾರ ಹೊರಗಿನವರನ್ನು ಕರೆತಂದು ಶೌಚಾಲಯ ಸ್ವಚ್ಛಗೊಳಿಸಲು ಕಷ್ಟ. ಒಮ್ಮೆ ಶೌಚಾಲಯ ತೊಳೆದರೆ 1000 ರೂಪಾಯಿಯಷ್ಟು ಸಂಬಳ ನೀಡಬೇಕು. ಶಿಕ್ಷಕರ ನಡುವೆ ಇದರ ಬಗ್ಗೆ ಚರ್ಚೆ ನಡೆದು, ಈ ಕಾರ್ಯಕ್ಕೆ ಮುಂದಾಗುವುದೆಂದು ನಿರ್ಧರಿಸಿದ್ದಾರೆ.

ಸಾಬರಮತಿ ಆಶ್ರಮದಲ್ಲಿ ಶೌಚಾಲಯ ಸ್ವಚ್ಛತೆಗೆ ಮಹಾತ್ಮಾಗಾಂಧಿ ನೀಡುತ್ತಿದ್ದ ಆದ್ಯತೆ. ಹೋರಾಟಗಾರ ಅಣ್ಣಾ ಹಜಾರೆ ಅವರ ತವರು ರಾಲೇಗಾಂವ್ ಸಿದ್ದಿಯ ಶಾಲೆಯಲ್ಲಿ ಮಕ್ಕಳು, ಶಿಕ್ಷಕರು ಸೇರಿ ಶೌಚಾಲಯ ತೊಳೆಯುವ ಮಾದರಿ ನನಗೆ ಮುಖ್ಯ ಪ್ರೇರಣೆ. ಮಕ್ಕಳಲ್ಲಿ ಸ್ವಾವಲಂಬಿ ಬದುಕಿನ ಕಲ್ಪನೆ ಬೆಳೆಸಲು ನಾವು ಅನುಷ್ಠಾನಗೊಳಿಸಿರುವ ಈ ಕಾರ್ಯಕ್ರಮ ಒಳ್ಳೆಯ ಫಲಿತಾಂಶ ಕೊಟ್ಟಿದೆ.

ಶೈಕ್ಷಣಿಕ ವರ್ಷದ ಆರಂಭದಲ್ಲಿ ಕರೆಯುವ ಪಾಲಕರ ಸಭೆಯಲ್ಲಿ ಈ ವಿಷಯವನ್ನು ಮುಂದಿಡುತ್ತೇವೆ. ಪಾಲಕರು ಖುಷಿಯಿಂದ ಒಪ್ಪಿಕೊಳ್ಳುತ್ತಾರೆ. ಮಕ್ಕಳು ಶಾಲೆಯ ಶೌಚಾಲಯವನ್ನು ಹೆಚ್ಚು ಬಳಸುವ ಕಾರಣ, ಬಡ ಕೂಲಿಕಾರ್ಮಿಕರ ಕುಟುಂಬದವರೇ ವಾಸವಿರುವ ಗಣೇಶನಗರದಲ್ಲಿ ಈಗ ಎಲ್ಲ ಮನೆಗಳಲ್ಲೂ ಶೌಚಾಲಯ ನಿರ್ಮಾಣವಾಗಿದೆ ಎನ್ನುತ್ತಾರೆ ಶಾಲೆಯ ಶಿಕ್ಷಕರು.

ನಮಗೆ ಮನೆಯಲ್ಲಿ ಶೌಚಾಲಯ ತೊಳೆಯಲು ಅಸಹ್ಯವಾಗುತ್ತಿತ್ತು. ಶಾಲೆಯ ಸಾಮೂಹಿಕ ಕಾರ್ಯದಲ್ಲಿ ಭಾಗವಹಿಸುವುದರಿಂದ ನನ್ನಲ್ಲಿರುವ ನಕಾರಾತ್ಮಕ ಭಾವನೆ ಬದಲಾಗಿದೆ. ನಮ್ಮ ಮನೆಯಲ್ಲಿ ಈಗ ಶೌಚಾಲಯ ಸ್ವಚ್ಛತಾ ಕಾರ್ಯ ನನ್ನದೇ ಎನ್ನುತ್ತಾರೆ ವಿದ್ಯಾರ್ಥಿಗಳು

ಗುಟ್ಕಾ, ಪಾನ್, ನಶ್ಯದಂತಹ ದುಶ್ಚಟ ರೂಢಿಸಿಕೊಂಡಿದ್ದ ಮಕ್ಕಳು ಶಾಲೆಗೆ ಬರುತ್ತಿದ್ದರು. ಇದನ್ನು ದೂರ ಮಾಡಲು ಶಾಲೆಯ ಆವರಣದಲ್ಲಿ ಬಾಳೆ, ಪೇರಲೆ ಗಿಡಗಳನ್ನು ಬೆಳೆಸಿ, ಮಕ್ಕಳಿಗೆ ಹಣ್ಣನ್ನು ತಿನ್ನಲು ಕೊಡಲಾಗುತ್ತಿದೆ. ಶಾಲೆಯ ಆವರಣದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಹುಟ್ಟುಹಬ್ಬಕ್ಕೆ ಮಕ್ಕಳು ಚಾಕೊಲೆಟ್ ಬದಲಾಗಿ, ಸಿಹಿ ವಿತರಿಸಿ, ಪರಿಸರ ಸ್ನೇಹಿ ಹವ್ಯಾಸ ಬೆಳೆಸಿಕೊಂಡಿದ್ದು, ಸ್ವಚ್ಛತೆಯ ಪಾಠವೂ ಹೇರಳವಾಗಿ ನಡೆಯುತ್ತಿದ್ದು ಇತರ ಸರ್ಕಾರಿ ಶಾಲೆಗಳಿಗೂ ಮಾದರಿಯಾಗಿದೆ.

ಮಕ್ಕಳು ಶಾಲೆಯ ಶೌಚಾಲಯ ಹೆಚ್ಚು ಬಳಸುವ ಕಾರಣ, ಬಡ ಕೂಲಿಕಾರ್ಮಿಕರ ಕುಟುಂಬದವರೇ ವಾಸವಿರುವ ಗಣೇಶನಗರದಲ್ಲಿ ಎಲ್ಲ ಮನೆಗಳಲ್ಲೂ ಶೌಚಾಲಯ ನಿರ್ಮಾಣವಾಗಿದೆ.

ಎಂ.ಎಚ್. ನಾಯ್ಕ, ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಗಣೇಶನಗರ


 

 
First published:August 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ