ಬೆಂಗಳೂರು (ಮಾರ್ಚ್ 26); ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ರೈತರು ಪ್ರತಿಭಟನೆ ಆರಂಭಿಸಿ ಇಂದಿಗೆ 4 ತಿಂಗಳು ತುಂಬಿದೆ. ಈ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚ ಕರೆಕೊಟ್ಡಿದ್ದ ಭಾರತ್ ಬಂದ್ ಗೆ ರಾಜಧಾನಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯ್ತು. ಬಂದ್ ನಿಂದ ರೈತ ಮುಖಂಡರೇ ಹಿಂದೆ ಸರಿದರೆ, ಕೆಲ ಸಂಘಟನೆಗಳ ಸಮ್ಮುಖದಲ್ಲಿ ನಡೆಯಬೇಕಿದ್ದ ಮೆರವಣಿಗೆ ರ್ಯಾಲಿ ಆರಂಭಕ್ಕೂ ಮೊದಲೇ ಪೊಲೀಸರು ಹತ್ತಿಕ್ಕಿದರು. ನೋಡಿದ ಕಡೆ ಎಲ್ಲ ಪೊಲೀಸರ ಸರ್ಪಗಾವಲು, ಪ್ರತಿಭಟನಾಕಾರರನ್ನು ಬಂಧಿಸಲು ಸಿದ್ಧಗೊಂಡ ಬಿಎಂಟಿಸಿ ಬಸ್, ಕಣ್ತಪ್ಪಿಸಿ ಪುರ ಭವನಕ್ಕೆ ಬಂದವರಿಗೆ ಬಂಧನದ ಬಿಸಿ, ರೈತ ಮುಖಂಡರ ಅರೆಸ್ಟ್. ಇದು ರಾಜ್ಯ ರಾಜಧಾನಿಯಲ್ಲಿಂದು ನಡೆದ ಭಾರತ್ ಬಂದ್ ಹೈಲೇಟ್ಸ್.
ದೆಹಲಿ ರೈತರ 4 ತಿಂಗಳು ಪೂರೈಸಿದ ಚಳವಳಿಯನ್ನು ಬೆಂಬಲಿಸಿ ಇಂದು ಕರೆಕೊಡಲಾಗಿದ್ದ ಭಾರತ್ ಬಂದ್ ಗೆ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯ್ತು. ಕೊರೋನಾ ಸಂಕಷ್ಟದಲ್ಲಿ ಬಂದ್ ಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಕೆಲ ಸಂಘಟನೆಗಳು ಹಿಂದೆ ಸರಿದರೆ, ಬಂದ್ ಹಿನ್ನೆಲೆ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಲು ಮುಂದಾದವರನ್ನು ಪೊಲೀಸರು ಬಂಧಿಸಿದರು. ಬಂದ್ ಗಾಗಲಿ ಪ್ರತಿಭಟನೆಗಾಗಲಿ ಅವಕಾಶ ಇಲ್ಲ ಎಂದ ಪೊಲೀಸರು ಟೌನ್ ಹಾಲ್ ಬಳಿ ಪ್ರತಿಭಟನಾಕಾರರು ಬರುತ್ತಿದಂತೆ ಬಂಧಿಸಲಾಯಿತು.
ರೈತರ ಬಂದ್ ಪ್ರತಿಭಟನೆಗೆ ಬಿಗಿ ಪೊಲೀಸ್ ಬಂದೋ ಬಸ್ತ್ ಹಾಕಲಾಗಿತ್ತು. 3 ಎಸಿಪಿ, 8 ಇನ್ಸ್ಪೆಕ್ಟರ್ ಸೇರಿ 350ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಪ್ರತಿಭಟನಾಕಾರರ ಆಗಮನಕ್ಕೆ ಮೊದಲೆ ಪೊಲೀಸರು ಬಂಧಿಸಿರುತ್ತಿರುವುದನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರೋಧಿಸಿದ್ರು. ಪ್ರತಿಭಟನೆಯನ್ನು ಹತ್ತಿಕ್ಕುವುದೇ ಸರ್ಕಾರದ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಮೆಜೆಸ್ಟಿಕ್‌ಲ್ಲಿ ಕನ್ನಡ ವಾಟಳ್ ಚಳುವಳಿ ಪಕ್ಷದ ಅಧ್ಯಕ್ಷ ವಾಟಳ್ ನಾಗರಾಜ್ ಪ್ರತಿಭಟನೆಗೆ ಮುಂದಾದ ಪೊಲೀಸರು ತಡೆದು ಬಂಧಿಸುವ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿದರು. ಇಂದು ದೇಶ ಗಂಭೀರವಾದ ಪರಿಸ್ಥಿತಿಯಲ್ಲಿದೆ. ಕರ್ನಾಟಕ ರಾಜ್ಯ ಇಷ್ಟೊಂದು ಹದಗೆಟ್ಟಿದ್ದು ಕಂಡಿರಲಿಲ್ಲ. ಚಳುವಳಿ ಮಾಡೋದಕ್ಕೆ ಮುಂಚೆ ಚಳುವಳಿಗಾರರನ್ನು ಬಂಧಿಸುವುದು ಸರಿಯಲ್ಲ. ಇದು ನಾಚಿಕೆಗೆಟ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ