ಸುಪ್ರೀಂಕೋರ್ಟ್​​ನಲ್ಲಿ ಇಂದು 17 ಅನರ್ಹ ಶಾಸಕರ ಭವಿಷ್ಯ ನಿರ್ಧಾರ; ನಡೆಯುತ್ತಾ ಉಪಚುನಾವಣೆ?

ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಇಂದಿನ ತೀರ್ಪು ಶಾಸಕರ ಪರವಾಗಿ ಬಂದರೆ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಒಂದು ವೇಳೆ ನ್ಯಾಯಾಲಯ ಸ್ಪೀಕರ್ ಆದೇಶವನ್ನು ಎತ್ತಿಹಿಡಿದರೆ ಅನರ್ಹ ಶಾಸಕರ ರಾಜಕೀಯ ಭವಿಷ್ಯದ ಮೇಲೆ ತೀವ್ರ ಹೊಡೆತ ಬೀಳಲಿದೆ.

HR Ramesh | news18-kannada
Updated:November 13, 2019, 7:23 AM IST
ಸುಪ್ರೀಂಕೋರ್ಟ್​​ನಲ್ಲಿ ಇಂದು 17 ಅನರ್ಹ ಶಾಸಕರ ಭವಿಷ್ಯ ನಿರ್ಧಾರ; ನಡೆಯುತ್ತಾ ಉಪಚುನಾವಣೆ?
ಅನರ್ಹ ಶಾಸಕರು
  • Share this:
ನವದೆಹಲಿ: ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿರುವ ಅರ್ಜಿಯ ತೀರ್ಪು ಇಂದು ಪ್ರಕಟಗೊಳ್ಳಲಿದ್ದು, ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿದೆ.

ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಅವರಿರುವ ತ್ರಿಸದಸ್ಯ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಎರಡು ಕಡೆ ವಕೀಲರಿಂದ ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯದ ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಪ್ರಕಟಿಸಲಿದೆ. ಬೆಳಗ್ಗೆ 10.30ರಿಂದ 11ರೊಳಗೆ ತೀರ್ಪು ಪ್ರಕಟಗೊಳ್ಳಲಿದೆ. ನ್ಯಾಯಾಲಯದ ನೀಡುವ ತೀರ್ಪನ್ನು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದು, ಈಗಾಗಲೇ ರಮೇಶ್ ಜಾರಕಿಹೋಳಿ, ಮುನಿರತ್ನ, ಎಸ್.ಟಿ ಸೋಮಶೇಖರ್, ಬಿಸಿ ಪಾಟೀಲ್, ಬೈರತಿ ಬಸವರಾಜ್, ಹೆಚ್. ವಿಶ್ವನಾಥ್, ರೋಷನ್ ಬೇಗ್, ಆರ್ ಶಂಕರ್, ಶಿವರಾಮ್ ಹೆಬ್ಬಾರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಇಂದಿನ ತೀರ್ಪು ಶಾಸಕರ ಪರವಾಗಿ ಬಂದರೆ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಒಂದು ವೇಳೆ ನ್ಯಾಯಾಲಯ ಸ್ಪೀಕರ್ ಆದೇಶವನ್ನು ಎತ್ತಿಹಿಡಿದರೆ ಅನರ್ಹ ಶಾಸಕರ ರಾಜಕೀಯ ಭವಿಷ್ಯದ ಮೇಲೆ ತೀವ್ರ ಹೊಡೆತ ಬೀಳಲಿದೆ.

ಸುಪ್ರೀಂಕೋರ್ಟ್‌ನಲ್ಲಿ ಏನಾಗಬಹುದು?

  • ಸ್ಪೀಕರ್ ಆದೇಶವನ್ನು ಸಂಪೂರ್ಣವಾಗಿ ಎತ್ತಿ ಹಿಡಿಯಬಹುದು. ಆಗ ಅನರ್ಹ ಶಾಸಕರಿಗೆ 2023 ರವರಗೆ ಚುನಾವಣೆ ಸ್ಪರ್ಧಿಸುವಂತಿಲ್ಲ.

  • ಅನರ್ಹತೆಯನ್ನು ಮಾತ್ರ ಎತ್ತಿ ಹಿಡಿದು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬಹುದು.
  • ಅನರ್ಹತೆ ಮಾತ್ರ ಎತ್ತಿ ಹಿಡಿದು ಚುನಾವಣೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟರೆ 2023 ರವರೆಗೆ ಮತ್ತೆ ಗೆಲ್ಲುವವರೆಗೆ ಲಾಭದಾಯಕ ಹುದ್ದೆ ಪಡೆಯುವಂತಿಲ್ಲ (ಮಂತ್ರಿಗಿರಿ, ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ)

  • ಹಿಂದಿನ ಸ್ಪೀಕರ್ ತೀರ್ಮಾನ ರದ್ದುಪಡಿಸಿ ಹೊಸ ತೀರ್ಮಾನ ಕೈಗೊಳ್ಳುವಂತೆ ಹಾಲಿ ಸ್ಪೀಕರ್​ಗೆ ಸೂಚಿಸಬಹುದು.

  • ಆಗ ಹೊಸ ಸ್ಪೀಕರ್ ತೀರ್ಮಾನ ಕೈಗೊಳ್ಳುವವರೆಗೆ ಅನರ್ಹರು ಶಾಸಕರಾಗಿಯೇ ಇರಲಿದ್ದಾರೆ. ಆದರೆ ಸಚಿವ ಅಥವಾ ಮತ್ತಿತರ ಹುದ್ದೆ ಹೊಂದುವಂತಿಲ್ಲ.

  • ಸ್ಪೀಕರ್ ರಾಜೀನಾಮೆ ಸ್ವೀಕರಿಸಿದರೆ ಬಳಿಕ ಮಂತ್ರಿಗಳಾಗಿ ಚುನಾವಣೆ ಎದುರಿಸಬಹುದು. ಆದರೆ ನೀತಿ ಸಂಹಿತೆ ಕಾರಣಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ.


ಇದನ್ನು ಓದಿ: ಸ್ಪೀಕರ್ ರಾಜೀನಾಮೆ; 17 ಜನ ಶಾಸಕರನ್ನು ಅನರ್ಹಗೊಳಿಸಿದ ಮರುದಿನವೇ ಸ್ಥಾನ ತ್ಯಜಿಸಿ ಅಚ್ಚರಿ ಮೂಡಿಸಿದ ರಮೇಶ್ ಕುಮಾರ್!

ಏನಿದು ಪ್ರಕರಣ?

ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಉಭಯ ಪಕ್ಷಗಳ 17 ಶಾಸಕರು ರಾಜೀನಾಮೆ ನೀಡುವ ಮೂಲಕ ಸರ್ಕಾರ ಪತನಕ್ಕೆ ಕಾರಣವಾಗಿದ್ದರು. ಶಾಸಕರು ನೀಡಿರುವ ರಾಜೀನಾಮೆ ಸಕಾರಣದಿಂದ ಕೂಡಿಲ್ಲ ಎಂಬ ಕಾರಣ ನೀಡಿ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಕುಮಾರ್ ಅವರು 17 ಶಾಸಕರನ್ನು ಅನರ್ಹಗೊಳಿಸಿ ಜುಲೈ 28ರಂದು ಮಹತ್ವದ ಆದೇಶ ಹೊರಡಿಸಿದ್ದರು. ಸ್ಪೀಕರ್ ಆದೇಶ ಪ್ರಶ್ನಿಸಿ ಎಲ್ಲ ಅನರ್ಹರು ಆಗಸ್ಟ್ 1ರಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಪ್ರಕಟಿಸಲಿದೆ. ಹೀಗಾಗಿ ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ.

First published:November 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ