ಬೆಂಗಳೂರು; ಸಚಿವ ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಈ ಗೊಂದಲ ಸಂಜೆಯೊಳಗೆ ಬಗೆಹರಿಯುತ್ತದೆ. ಈ ಬಗ್ಗೆ ಸಿಎಂ ನಮ್ಮೊಂದಿಗೆ ಯಾವ ಚರ್ಚೆ ಮಾಡಿಲ್ಲ. ಹಿರಿಯ ಸಚಿವರನ್ನು ಕೈ ಬಿಡಬೇಕು ಎಂಬ ಯಾವ ಸೂಚನೆಯೂಇಲ್ಲ. ಅಚ್ಚರಿಯ ವ್ಯಕ್ತಿಗಳ ಆಯ್ಕೆ ಅಂದರೆ ಯಾರನ್ನೇ ಮಾಡಿದರೂ ಕೂಡ ಎಂಎಲ್ಎ, ಎಂಎಲ್ಸಿಗಳನ್ನೇ ಮಾಡಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ ಅವರು, ರಾಜ್ಯದಲ್ಲಿ ಇನ್ನೂ ಕೋವಿಡ್ ಹರಡುತ್ತಲೇ ಇದೆ. ಹಾಗಾಗಿ ಸದ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ಬೇಡ ಅನ್ನೋದು ಎಲ್ಲ ರಾಜಕೀಯ ಪಕ್ಷಗಳದ್ದೂ ಅಭಿಪ್ರಾಯವಾಗಿದೆ. ಇದನ್ನು ಚುನಾವಣಾ ಆಯೋಗಕ್ಕೂ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಇದನ್ನು ಓದಿ: ಮಕ್ಕಳ ಮಧ್ಯಾಹ್ನದ ಊಟ ನೀಡಲು ಯೋಗ್ಯತೆಯಿಲ್ಲ, ಈಗ ಪ್ರಾಧಿಕಾರಕ್ಕೆ ಹಣ ಎಲ್ಲಿಂದ ಬಂತು; ಸಿದ್ದರಾಮಯ್ಯ ಪ್ರಶ್ನೆ
ಮರಾಠ ಸಮುದಾಯ ಅಭಿವೃದ್ದಿ ನಿಗಮ ಮಾಡಿದ್ದೇವೆ ಹೊರತು ಭಾಷೆಯ ಆಧಾರದ ಮೇಲೆ ಅಲ್ಲ. ಕುರುಬ ಸಮುದಾಯ ಅಭಿವೃದ್ದಿ ನಿಗಮಕ್ಕೆ ನಾನು ಒತ್ತಾಯಿಸುವುದಿಲ್ಲ. ಆದರೆ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ದೆಹಲಿಗೆ ತೆರಳಿದ್ದಾರೆ. ಇಂದು ಸಂಜೆ ಹೈಕಮಾಂಡ್ ನಾಯಕರನ್ನು ಬಿಎಸ್ವೈ ಭೇಟಿಯಾಗಲಿದ್ದಾರೆ. ಸಂಜೆ 4 ಗಂಟೆಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ. ಬಳಿಕ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಸಚಿವಾಕಾಂಕ್ಷಿಗಳ ಪಟ್ಟಿಯೊಂದಿಗೆ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದಾರೆ. ಹೆಚ್ಚಿನ ಜನರಿಗೆ ಸಚಿವ ಸಂಪುಟದ ಪುನರ್ರಚನೆಗೆ ಅವಕಾಶಕ್ಕೆ ಸಿಎಂ ಬಿಎಸ್ವೈ ಅವರು ಹೈಕಮಾಂಡ್ ನಾಯಕರ ಬಳಿ ಮನವಿ ಮಾಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ