ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಗೌರಿ- ಗಣೇಶ ಹಬ್ಬ (Gowri Ganesha Festival) ಬರಲಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಬಿಕ್ಕಟ್ಟಿನಿಂದಾಗಿ (COVID-19 Crisis) ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ನಿರಾಕರಣೆ ಮಾಡಲಾಗಿತ್ತು. ಈ ಬಾರಿಯಾದರೂ ಸಾರ್ವಜನಿಕ ಗಣೇಶ ಹಬ್ಬ ಆಚರಣೆಗೆ ಅನುಮತಿ ಸಿಗಲಿದೆಯಾ? ಇಲ್ಲವಾ? ಎಂಬುದು ಇನ್ನು ಗೊಂದಲದ ಗೂಡಾಗಿದೆ. ಏಕೆಂದರೆ ಕೋವಿಡ್ ಮಹಾಮಾರಿ ಇನ್ನೂ ರಾಜ್ಯದಿಂದ ಸಂಪೂರ್ಣವಾಗಿ ತೊಲಗಿಲ್ಲ. ಅಲ್ಲದೇ, ತಜ್ಞರು ಮೂರನೇ ಅಲೆಯ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಗಣೇಶ ಉತ್ಸವ ಆಚರಣೆಗೆ ಅನುಮತಿ ನೀಡಬೇಕಾ? ಬೇಡವಾ? ಎಂಬ ಗೊಂದಲದಲ್ಲಿ ಸರ್ಕಾರ ಇದೆ. ಒಂದು ಕಡೆ ಅನುಮತಿ ನಿರಾಕರಿಸಿದರೆ ಧಾರ್ಮಿಕ ಭಾವನೆಗಳಿಗೆ ತೊಂದರೆಯಾಗಬಹುದು, ಅನುಮತಿ ನೀಡಿದರೆ ಕೋವಿಡ್ ಮಹಾಮಾರಿ ಮತ್ತೆ ಹೆಮ್ಮಾರಿಯಾಗಿ ಬಿಡಬಹುದೆಂಬ ಆತಂಕ ಸರ್ಕಾರಕ್ಕೆ ಇದೆ. ಇದೇ ಕಾರಣಕ್ಕೆ ಇಂದು ಈ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಹಾಗೂ ತಜ್ಞರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ಒಂದು ಅಂತಿಮ ಮಾರ್ಗಸೂಚಿ ಸೂಚಿಸಲಿದ್ದಾರೆ.
ಇನ್ನೂ ಕಳೆದ ಬಾರಿಯ ಆಚರಣೆಗಿಂತ ಈ ಬಾರಿ ಹೆಚ್ಚು ವಿನಾಯಿತಿ ನೀಡುವ ನಿರೀಕ್ಷೆ ಇದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದ್ದು, ಕೋವಿಡ್ ಕ್ರಮಗಳೊಂದಿಗೆ ಹೆಚ್ಚು ವಿನಾಯಿತಿ ನೀಡುವ ವಿಶ್ವಾಸ ಇದೆ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ತಿಳಿಸಿದ್ದರು.
ಗಡಿ ಜಿಲ್ಲೆಗಳಾದ ಚಾಮರಾಜನಗರ, ಹಾಸನ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಡಿಸಿಗಳು, ಎಸ್ಪಿಗಳ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಶನಿವಾರ ವೀಡಿಯೋ ಕಾನ್ಪೆರೆನ್ಸ್ ಮೂಲಕ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲೆಗಳ ಕೋವಿಡ್ ಪರಿಸ್ಥಿತಿ ಬಗ್ಗೆ ಅವಲೋಕಿಸಿದರು. ಬಳಿಕ ಈ ಜಿಲ್ಲೆಗಳಲ್ಲಿ ಗಣೇಶ ಹಬ್ಬ ಆಚರಣೆ ಸಂಬಂಧವೂ ಅಗತ್ಯ ಮಾಹಿತಿಯನ್ನು ಸಿಎಂ ಬೊಮ್ಮಾಯಿ ಅವರು ಪಡೆದರು. ಸಭೆ ನಂತರ ಮಾತಾಡಿದ ಸಿಎಂ ಬೊಮ್ಮಾಯಿ, ಈ ಜಿಲ್ಲೆಗಳಲ್ಲಿನ ಕೋವಿಡ್ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ ಹಬ್ಬ ಆಚರಣೆ ಬಗ್ಗೆ ಡಿಸಿಗಳ ಜೊತೆ ಚರ್ಚೆ ಮಾಡಿಲ್ಲ. ಆದರೆ ರಾಜ್ಯದಲ್ಲಿ ಒಟ್ಟಾರೆ ಗಣೇಶ ಹಬ್ಬವನ್ನು ಯಾವ ರೀತಿ ಆಚರಣೆ ಮಾಡಬೇಕು ಎಂದು ಭಾನುವಾರ ಸಭೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದರು.
ಇದನ್ನು ಓದಿ: Ganesha Festival: ಗಣೇಶ ಹಬ್ಬದ ಆಚರಣೆಗೆ ಓಕೆ.. ಆದ್ರೆ ಷರತ್ತು ಇರುತ್ತೆ ಜೋಕೆ..!
ಬೆಂಗಳೂರಿನಲ್ಲಿ ವಾರ್ಡಿಗೊಂದು ಗಣಪತಿ?
ರಾಜಧಾನಿ ಬೆಂಗಳೂರಿನಲ್ಲಿ ಬಿಗಿ ನಿಯಮಗಳೊಂದಿಗೆ, ನಗರದ ವಾರ್ಡ್ ನಲ್ಲಿ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರ್ಮಿಷನ್ ಸಿಗಲಿದೆ. ವಾರ್ಡ್ ನಲ್ಲಿ ಒಂದು ಗಣೇಶ ವಿಗ್ರಹವನ್ನು ಸಾರ್ವಜನಿಕವಾಗಿ ಕೂರಿಸಲು ಬಿಬಿಎಂಪಿ ಅನುಮತಿ ನೀಡಲಿದ್ದು, ಗಣೇಶ ವಿಗ್ರಹ 4 ಅಡಿ ಎತ್ತರ ಮೀರದಂತೆ ಸೂಚನೆ ನೀಡಲಾಗುತ್ತೆ ಎನ್ನಲಾಗಿದೆ. ಇನ್ನು ಸಾರ್ವಜನಿಕ ಗಣೇಶೋತ್ಸವದಲ್ಲಿ 20 ರಿಂದ 30 ಮಂದಿ ಮಾತ್ರ ಭಾಗಿಯಾಗಲು ಅವಕಾಶ ನೀಡಲಾಗುತ್ತೆ. ಈಗಾಗಲೇ ಸ್ಥಳೀಯ ಪಾಲಿಕೆ, ನಗರಸಭೆ, ಪುರಸಭೆಗೂ ಸಹ ಸರ್ಕಾರದ ಸಮಿತಿ ಪತ್ರ ಬರೆದಿದೆ. ಪ್ರತಿ ಏರಿಯಾ ಹಾಗೂ ವಾರ್ಡ್ ನಲ್ಲಿ ವಾಟರ್ ಟ್ಯಾಂಕ್ ಇರುವ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತೆ ಅಂತ ಹೇಳಲಾಗಿದೆ. ವಾಟರ್ ಟ್ಯಾಂಕ್ ವಾಹನದಲ್ಲಿ ಗಣೇಶ ವಿಸರ್ಜನೆಗೆ ವ್ಯವಸ್ಥೆ ಇರಲಿದ್ದು, ಮನೆಯಲ್ಲಿ ಕೂರಿಸುವ ಗಣೇಶ ಮೂರ್ತಿಯನ್ನು ಅದೇ ವಾಟರ್ ಟ್ಯಾಂಕ್ ನಲ್ಲಿ ವಿಸರ್ಜಿಸಲು ಸೂಚನೆ ನೀಡಲಾಗುತ್ತೆ. ಜೊತೆಗೆ ಪ್ರತಿ ವಾರ್ಡ್ ಮತ್ತು ಏರಿಯಾಗೆ ವಾಟರ್ ಟ್ಯಾಂಕ್ ವ್ಯವಸ್ಥೆ ಮಾಡಲು ಬಿಬಿಎಂಪಿಗೆ ಈಗಾಗ್ಲೇ ಸೂಚನೆ ನೀಡಲಾಗಿದ್ಯಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ