ಇಂದು ಬೆಂಗಳೂರಿಗೆ ಆಗಮಿಸಲಿರುವ ವಾಜಪೇಯಿ ಅಸ್ಥಿ ಕಲಶ; ರಾಜ್ಯದ ಎಂಟು ನದಿಗಳಲ್ಲಿ ವಿಸರ್ಜನೆ

news18
Updated:August 22, 2018, 11:39 AM IST
ಇಂದು ಬೆಂಗಳೂರಿಗೆ ಆಗಮಿಸಲಿರುವ ವಾಜಪೇಯಿ ಅಸ್ಥಿ ಕಲಶ; ರಾಜ್ಯದ ಎಂಟು ನದಿಗಳಲ್ಲಿ ವಿಸರ್ಜನೆ
  • Advertorial
  • Last Updated: August 22, 2018, 11:39 AM IST
  • Share this:
ನ್ಯೂಸ್ 18 ಕನ್ನಡ

ಬೆಂಗಳೂರು (ಆಗಸ್ಟ್ 22): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ಬುಧವಾರ ಬೆಂಗಳೂರಿಗೆ ಆಗಮಿಸಲಿದ್ದು, ರಾಜ್ಯ ಬಿಜೆಪಿ ನಾಯಕರು ಅಸ್ಥಿ ಕಲಶವನ್ನು ಸ್ವಾಗತಿಸಲಿದ್ದಾರೆ. ಆ.23 ಮತ್ತು 24ರಂದು ರಾಜ್ಯದ ಎಂಟು ನದಿಗಳಲ್ಲಿ ಅಸ್ಥಿಯನ್ನು ವಿಸರ್ಜಿಸಲಾಗುವುದು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಅಸ್ಥಿ ಕಲಶ ತರಲು ದೆಹಲಿಗೆ ತೆರಳಿದ್ದು, ಇಂದು ಮಧ್ಯಾಹ್ನ ವಿಮಾನದ ಮೂಲಕ ಕಲಶ ತರಲಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ''ಬುಧವಾರ ಮಧ್ಯಾಹ್ನ 3.30ಕ್ಕೆ ದೆಹಲಿಯಿಂದ ವಾಪಸಾಗುತ್ತಿದ್ದೇನೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಮಾಜಿ ಡಿಸಿಎಂ ಆರ್‌.ಅಶೋಕ್‌ ಅವರು ಅಟಲ್‌ಜೀ ಅವರ ಅಸ್ಥಿ ಕಲಶವನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವರು. ಅಲ್ಲಿಂದ ಬಿಜೆಪಿ ಕಚೇರಿವರೆಗೂ ಮೆರವಣಿಗೆಯಲ್ಲಿ ತರಲಾಗುವುದು. ಕಚೇರಿ ಮುಂದೆ ಪುಷ್ಪಾರ್ಚನೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ,'' ಎಂದು ತಿಳಿಸಿದ್ದಾರೆ.

ಇದೇ 23 ರಂದು (ಗುರುವಾರ) ಬಿಜೆಪಿ ಕಚೇರಿಯಿಂದ ಬೆಳಿಗ್ಗೆ 9 ಗಂಟೆಗೆ ಹೊರಡುವ 'ಅಸ್ಥಿ ಕಲಶ'ವು ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ತಲುಪಿ ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ವಿಸರ್ಜನೆಯಾಗಲಿದೆ. ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್‌, ಅಶೋಕ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಸಂಸದ ಪ್ರತಾಪ ಸಿಂಹ ಅವರು ಭಾಗವಹಿಸಲಿದ್ದಾರೆ.

ಇದೇ 25 ರಂದು ಶನಿವಾರ ವಾಜಪೇಯಿ ಅವರ ಅಸ್ಥಿಯನ್ನು ರಾಜ್ಯದ ಪ್ರಮುಖ 7 ನದಿಗಳಲ್ಲಿ ಬಿಜೆಪಿಯ ಪ್ರಮುಖ ನಾಯಕರ ನೇತೃತ್ವದ ತಂಡಗಳು ವಿಸರ್ಜನೆ ಮಾಡಲಿವೆ. 

ಆ.26 ರಂದು ಭಾನುವಾರ ಬೆಂಗಳೂರಿನಲ್ಲಿ ವಾಜಪೇಯಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರದ ನಾಯಕರನ್ನು ಆಹ್ವಾನಿಸಲಾಗುವುದು ಎಂದು ಯಡಿಯೂರಪ್ಪ ಅವರು ವಿವರಿಸಿದರು.

ಯಾವ ನದಿಯಲ್ಲಿ, ಯಾರಿಂದ ವಿಸರ್ಜನೆ?

ಮಂಗಳೂರು, ಉಡುಪಿ ಜಿಲ್ಲೆಯ ನೇತ್ರಾವತಿ ನದಿಯಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ ಕಟೀಲು, ಶಾಸಕ ಸಿ.ಟಿ.ರವಿ ತಂಡ ಅಸ್ಥಿ ವಿಸರ್ಜಿಸಲಿದೆ.

ಧಾರವಾಡ-ಹುಬ್ಬಳ್ಳಿ, ಗದಗ, ಹಾವೇರಿ ಜಿಲ್ಲೆಯ ಮಲಪ್ರಭಾ ನದಿಯಲ್ಲಿ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಸಂಸದ ಪ್ರಹ್ಲಾದ್‌ ಜೋಶಿ, ಶಾಸಕರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ ತಂಡ ಅಸ್ಥಿ ವಿಸರ್ಜಿಸಲಿದೆ.

ವಿಜಯಪುರ, ಬಾಗಲಕೋಟೆಯ ಕೃಷ್ಣಾ ನದಿಯಲ್ಲಿ ಕೇಂದ್ರ ಸಚಿವರಾದ ರಮೇಶ್‌ ಜಿಗಜಿಣಗಿ, ಸಂಸದ ಪಿ.ಸಿ.ಗದ್ದಿಗೌಡರ್‌, ಶಾಸಕ ಗೋವಿಂದ ಕಾರಜೋಳ ಅವರು ನೆರವೇರಿಸಲಿದ್ದಾರೆ.

ಬೀದರ್‌, ಕಲಬುರ್ಗಿಯ ಕಾರಂಜಾ ನದಿಯಲ್ಲಿ ಮೇಲ್ಮನೆ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ಭಗವಂತ ಖೂಬಾ ತಂಡ ಅಸ್ಥಿ ವಿಸರ್ಜಿಸಲಿದೆ.

ಬಳ್ಳಾರಿ, ಕೊಪ್ಪಳ ಜಿಲ್ಲೆಯ ತುಂಗಭದ್ರಾ ನದಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ, ಸಂಸದ ಕರಡಿ ಸಂಗಣ್ಣ, ಶಾಸಕ ಬಿ.ಶ್ರೀರಾಮುಲು ಅವರು ಕಾರ್ಯ ನೆರವೇರಿಸಲಿದ್ದಾರೆ.

ಹೊನ್ನಾವರದ ಶರಾವತಿ ನದಿಯಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್‌ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆ.ಜಿ.ನಾಯ್ಕ ತಂಡ ಅಸ್ಥಿ ವಿಸರ್ಜನೆ ಕಾರ್ಯ ನೆರವೇರಿಸಲಿದೆ.

ಶಿವಮೊಗ್ಗದ ತುಂಗಾ ನದಿಯಲ್ಲಿ ಶಾಸಕ ಆಯನೂರು ಮಂಜುನಾಥ್‌, ಮಾಜಿ ಸಂಸದ ಬಿ.ವೈ.ರಾಘವೇಂದ್ರ ಅವರು ಈ ಕಾರ್ಯ ನೆರವೇರಿಸಲಿದ್ದಾರೆ.
First published:August 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ