Rain in Bangalore| ಬೆಂಗಳೂರಿನಲ್ಲಿ ಇಂದೂ ಮುಂದುವರಿಯಲಿದೆ ಮಳೆ, ಹಳದಿ ಅಲರ್ಟ್​ ಘೋಷಣೆ; ತಗ್ಗು ಪ್ರದೇಶದ ಜನರಲ್ಲಿ ಆತಂಕ!

ಪ್ರತಿ ಬಾರಿ ಮಳೆ ಬಂದಾಗ್ಲೂ ಇಲ್ಲಿನ ರಸ್ತೆ ಮತ್ತು ಅಂಡರ್​ಪಾಸ್​ಗಳಲ್ಲಿ ನೀರು ನಿಲ್ಲುತ್ತದೆ. ಹೀಗಾಗಿ ‌ಮಳೆ ಕಾಮಗಾರಿ ಅಂತ ಕೋಟಿ ಕೋಟಿ ಹಣ ಖರ್ಚು ಮಾಡೋದು ಎಲ್ಲಿಗೆ ಹೋಗುತ್ತೆ? ಸಮಸ್ಯೆ ಬಗೆಹರಿಯಲ್ಲ.‌ ಆದರೆ, ಕಾಮಗಾರಿ ಮಾತ್ರ ಪ್ರತಿ ವರ್ಷ ನಡೆಯುತ್ತದೆ ಅಂದರೆ ಅರ್ಥ ಏನು? ಎಂಬುದು ಜನ ಸಾಮಾನ್ಯರ ಪ್ರಶ್ನೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು (ಸೆಪ್ಟೆಂಬರ್​ 21); ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇನ್ನೂ ಬೆಂಗಳೂರಿನಲ್ಲಿ ಪ್ರತಿ ದಿನ ಸಂಜೆ ಮಳೆಯಾಗುವುದು ವಾಡಿಕೆಯಾಗಿದೆ.  ಕರ್ನಾಟಕ ದಲ್ಲಿ ಮುಂಗಾರು ಚುರುಕುಗೊಂಡಿದ್ದು(Karnataka Monsoon 2021), ಸೆಪ್ಟೆಂಬರ್ ತಿಂಗಳ ಆರಂಭದಿಂದಲೂ ಎಡೆಬಿಡದೆ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ಬೆಂಗಳೂರಿನಲ್ಲಿ ‌ಇಂದು‌ ಕೂಡ ಮಳೆಯಾಗಲಿದೆ ಎಂದು ತಿಳಿಸಿದೆ. ಅಲ್ಲದೆ, ಮುನ್ನೆಚ್ಚರಿಕೆ ಕ್ರಮವಾಗಿ ಹಳದಿ ಅಲರ್ಟ್ (Yellow Alert) ಘೋಷಿಸಿದೆ. ಹೀಗಾಗಿ ಇಂದು ಮತ್ತೆ ಮಳೆಯಾದರೆ, ಬೆಂಗಳೂರು ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನಲಾಗುತ್ತಿದೆ.

  ಅಸಲಿಗೆ ನಿನ್ನೆ ಸುರಿದ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ನಲುಗಿ ಹೋಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ಥವಾಗಿತ್ತು. ಆರ್ ಆರ್ ನಗರದ ಪ್ರಮೋದ್ ಲೇಔಟ್, ಹೊಸಕೆರೆಹಳ್ಳಿ, ಹೊರಮಾವಿನ ಸಾಯಿ ಲೇಔಟ್, ಎಚ್ ಬಿ ಆರ್ ಲೇಔಟ್ , ಶಾಂತಿನಗರ ಸೇರಿ ಕೆಲವು ಹೆಚ್ಚು ಭಾಗಗಳಲ್ಲಿ ಮಳೆ ಆತಂಕವನ್ನು ಸೃಷ್ಟಿಸಿತ್ತು. ಏಕೆಂದರೆ ಮಳೆ ಬಂತೆಂದರೆ ಸಾಕು ಈ ಭಾಗದ ರಾಜಕಾಲುವೆ ನೀರು ಮನೆಗಳಿಗೆ ‌ನುಗ್ಗುವುದು ಸಾಮಾನ್ಯ. ಹೀಗಾಗಿ ಇಂದೂ ಸಹ ಮಳೆಯಾದರೆ ಏನು ಮಾಡುವುದು? ಎಂಬ ಆತಂಕದಲ್ಲಿ ಜನ ಬದುಕುವಂತಾಗಿದೆ.

  ಈ ಭಾಗಗಳಲ್ಲಿ ಹಲವು ವರ್ಷಗಳಿಂದ ಇದೇ ಸಮಸ್ಯೆ ಮುಂದುವರಿಯುತ್ತಿದೆ. ಆದರೂ, ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ಹೀಗಾಗಿ ಮಳೆಗಾಲ ಬಂತೆಂದರೆ ಈ ಭಾಗದ ಜನ ಆತಂಕದಲ್ಲಿಯೇ ದಿನದೂಡುವಂತಾಗಿರುವುದು ವಿಪರ್ಯಾಸ.

  ಬೆಂಗಳೂರಿನಲ್ಲಿ‌ ನಿನ್ನೆ ಎಲ್ಲೆಲ್ಲಿ ಎಷ್ಟು ಮಳೆ?

  • ಅತಿ‌ಹೆಚ್ಚು ಮಳೆ ದಾಖಲಾಗಿದ್ದು ವಿದ್ಯಾರಣ್ಯಪುರ - 56 ಮಿಮೀ.

  • ಚೌಡೇಶ್ವರಿ ನಗರ, ಬಿಳೇಕಳ್ಳಿ - 46 ಮಿಮೀ.

  • ದೊಡ್ಡಬೊಮ್ಮಸಂದ್ರ - 45 ಮಿಮೀ, ಅಟ್ಟೂರು - 40 ಮಿಮೀ.

  • ಸಂಪಂಗಿರಾಮನಗರ - 35 ಮಿಮೀ, ಯಲಹಂಕ-30 ಮಿಮೀ.

  • ಲಕ್ಕಸಂದ್ರ, ಯಶವಂತಪುರ - 28 ಮಿಮೀ, ಜಕ್ಕೂರು - 25 ಮಿಮೀ.

  • ಬೊಮ್ಮನಹಳ್ಳಿ, ಸಾರಕ್ಕಿ ಕೋರಮಂಗಲ - 24 ಮಿಮೀ ಮಳೆ


  ಮುಂದಿನ ‌ಎರಡು‌ ದಿನ‌ ಸಿಲಿಕಾನ್ ಭಾರಿ‌ ಮಳೆ ಮುನ್ಸೂಚನೆ.!

  ನಿನ್ನೆ ಮಧ್ಯಾನ್ನ 12 ಗಂಟೆಯಿಂದ ಆರಂಭವಾದ ಮಳೆ ರಾಜ್ಯ ರಾಜಧಾನಿ ಬೆಂಗಳೂರನ್ನು ಹೈರಾಣಾಗಿಸಿದೆ. ನಿನ್ನೆ ರಾತ್ರಿಯ ವರೆಗೆ ನಗರದ ವಿವಿಧೆಡೆ ಸರಾಸರಿ 18 ಮಿಮೀ ನಷ್ಟು ಮಳೆಯಾಗಿದೆ. ಮಲ್ಲೇಶ್ವರ, ಮೈಸೂರು ರಸ್ತೆ,ಶಿವಾಜಿನಗರ, ರಾಜಾಜಿ ನಗರ,ಪ್ಯಾಲೇಸ್ ರಸ್ತೆ, ಪ್ಯಾಲೇಸ್ ಗುಟ್ಟುಹಳ್ಳಿ ,ಕೆ ಜಿ ರಸ್ತೆ ಸೇರಿ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದು ಇದ್ರಿಂದ ರಸ್ತೆ ದಾಟಲು‌ ಜನ ಮತ್ತು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

  ಮಳೆಗಾಲದ ಸಿದ್ದತೆ ಮರೆತೇ ಬಿಡ್ತಾ ಬಿಬಿಎಂಪಿ?;

  ಮಳೆಗಾಲ ಆರಂಭಕ್ಕೂ ಮುನ್ನ ಬಿಬಿಎಂಪಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಸಭೆಗಳನ್ನು ನಡೆಸುವುದು ವಾಡಿಕೆ. ಆದರೆ, ಈ ಸಭೆಗಳಲ್ಲಿ ತೆಗೆದುಕೊಳ್ಳುವ ಯಾವ ತೀರ್ಮಾನಗಳೂ ಸಹ ಜಾರಿಯಾಗದಿರುವುದು ವಿಪರ್ಯಾಸ. ಈಗಾಗಲೇ ನಗರದಲ್ಲಿ ನಾನಾ ಕಾಮಗಾರಿಗಳಿಂದ ರಸ್ತೆಗಳು ಹದೆಗಟ್ಟಿದ್ದು, ಮುಖ್ಯ ರಸ್ತೆಗಳು ಗುಂಡಿಮಯವಾಗಿದೆ. ಮಳೆ ಬಂದರೇ ರಸ್ತೆಯೇ ಕಾಣಿಸಲ್ಲ.. ಬರೀ ನೀರು. ಇನ್ನು ಗುಂಡಿಗೆ ಗಾಡಿ ಇಳಿದ್ರೆ ಜೀವಕ್ಕೆ ಅಪಾಯ ಎನ್ನುವಂತಹ ಸ್ಥಿತಿ ಇದ್ದು, ಜನ ಭಯದಲ್ಲೇ ರಸ್ತೆಗೆ ಇಳಿಯುವಂತಾಗಿದೆ.

  ಇದನ್ನೂ ಓದಿ: Karnataka Weather Today: ರಾಜ್ಯದಲ್ಲಿ ಇಂದು ಸಹ ಭಾರೀ ಮಳೆಯ ನಿರೀಕ್ಷೆ- ಇಂದಿನ ಹವಾಮಾನ ವರದಿ ಹೀಗಿದೆ.

  ನಗರದ ವಿವಿಧ ಅಂಡರ್ ಪಾಸ್ ಗಳಲ್ಲಿ ಮಳೆ ನೀರು ನಿಂತು ಯಪರೂಪಿ ಆಗಿವೆ. ಕೆ.ಆರ್. ಸರ್ಕಲ್, ಶಿವಾನಂದ ಸರ್ಕಲ್, ಓಕಳೀಪುರ, ಬಾಪೂಜಿನಗರ, ಹಂಪಿನಗರ ಸೇರಿ ವಿವಿದೆಡೆ ಅಂಡರ್ ಪಾಸ್ ನಿನ್ನೆಯ ಮಳೆಗೆ ಬ್ಲಾಕ್ ಆಗಿತ್ತು. ಮೂರು ಅಡಿಗೂ ಹೆಚ್ಚು ನೀರು ನಿಂತಿದ್ದರಿಂದ ವಾಹನ ಸವಾರರು ಸಮಸ್ಯೆಯನ್ನು ಎದುರಿಸಬೇಕಾಗಿತ್ತು. ಪ್ರತಿ ಬಾರಿ ಮಳೆ ಬಂದಾಗ್ಲೂ ಇಲ್ಲಿನ ರಸ್ತೆ ಮತ್ತು ಅಂಡರ್​ಪಾಸ್​ಗಳಲ್ಲಿ ನೀರು ನಿಲ್ಲುತ್ತದೆ. ಹೀಗಾಗಿ ‌ಮಳೆ ಕಾಮಗಾರಿ ಅಂತ ಕೋಟಿ ಕೋಟಿ ಹಣ ಖರ್ಚು ಮಾಡೋದು ಎಲ್ಲಿಗೆ ಹೋಗುತ್ತೆ? ಎಂಬುದು ಜನ ಸಾಮಾನ್ಯರ ಪ್ರಶ್ನೆ. ಸಮಸ್ಯೆ ಬಗೆಹರಿಯಲ್ಲ.‌ ಆದರೆ, ಕಾಮಗಾರಿ ಮಾತ್ರ ಪ್ರತಿ ವರ್ಷ ನಡೆಯುತ್ತದೆ ಅಂದರೆ ಅರ್ಥ ಏನು? ಎಂಬ ಸಾಮಾನ್ಯ ಪ್ರಶ್ನೆಗೆ ಬಿಬಿಎಂಪಿ ಅಧಿಕಾರಿಗಳೇ ಉತ್ತರಿಸಬೇಕಿದೆ.
  Published by:MAshok Kumar
  First published: