ಹಟಯೋಗಿ ತೇಜಸ್ವಿಗೆ ಇಂದು 81ನೇ ಹುಟ್ಟುಹಬ್ಬದ ಸಂಭ್ರಮ; ಪೂರ್ಣಚಂದ್ರನಿಲ್ಲದ ಮೂಡಿಗೆರೆಯಲ್ಲಿ ಎಲ್ಲವೂ ನಿರುತ್ತರ!

news18
Updated:September 8, 2018, 4:43 PM IST
ಹಟಯೋಗಿ ತೇಜಸ್ವಿಗೆ ಇಂದು 81ನೇ ಹುಟ್ಟುಹಬ್ಬದ ಸಂಭ್ರಮ; ಪೂರ್ಣಚಂದ್ರನಿಲ್ಲದ ಮೂಡಿಗೆರೆಯಲ್ಲಿ ಎಲ್ಲವೂ ನಿರುತ್ತರ!
news18
Updated: September 8, 2018, 4:43 PM IST
 -ವೀರೇಶ್ ಜಿ ಹೊಸೂರ್, ನ್ಯೂಸ್ 18 ಕನ್ನಡ

ಚಿಕ್ಕಮಗಳೂರು,(ಸೆ.08): ಅವರ ಹೆಸರು ಕೇಳಿದರೆ ಓದುಗ ಪ್ರಪಂಚದ ಕಣ್ಣುಗಳಲ್ಲಿ ವಿಶಿಷ್ಠವಾದ ತೇಜಸ್ಸು ಮೂಡುತ್ತದೆ. ಯಾಕೆಂದರೆ, ಆ ಹೆಸರಿನ ಅಸಲಿ ತಾಕತ್ತೇ ಅಂತಹದ್ದು. ಕಾಂಕ್ರೀಟ್ ಕಾಡುಗಳಿಂದ ದೂರವಿದ್ದು, ತಮ್ಮ ಪಾಡಿಗೆ ತಾವು ಬದುಕಿ, ಬರೆದು ಒಂದು ತಲೆಮಾರನ್ನೇ ಪ್ರಭಾವಿಸಿದ ಅವರು ಬದುಕಿನ ಜೀವಂತ ದಂತಕಥೆ. ಹುಟ್ಟಿದ್ದು ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಾದರೂ ತಮ್ಮ ಬದುಕು ಸವೆಸಿದ್ದು ಮಾತ್ರ ಕಾಫಿನಾಡಿನ ಮೂಡಿಗೆರೆಯಲ್ಲಿ. ಹೌದು, ತಮ್ಮ ವಿಶಿಷ್ಠ ಬರವಣಿಗೆಯ ಮೂಲಕ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಎಬ್ಬಿಸಿದ, ನಡೆದಾಡುವ ಚೈತನ್ಯ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಅವರಿಂದು ನಮ್ಮೊಂದಿಗಿಲ್ಲ. ಆದರೆ ಅವರ ಸರಳ ಜೀವನ, ಬರವಣಿಗೆಯ ಶೈಲಿ ಎಂದೆಂದಿಗೂ ಜೀವಂತ.ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಹಿತ್ಯ ಲೋಕದಲ್ಲಿ ಅವರ ಹೆಸರು ಅಜರಾಮರ. ಅಪ್ಪನಂತೆ ಸಾಹಿತ್ಯ ಕ್ಷೇತ್ರದಲ್ಲಿಯೇ ತಮ್ಮನ್ನ ಗುರುತಿಸಿಕೊಂಡವರು. ಅವರಿಂದು ನಮ್ಮೊಂದಿಗಿಲ್ಲದಿದ್ದರೂ, ಬರವಣಿಗೆ, ಸೌಮ್ಯ ಸ್ವಭಾವದ ವ್ಯಕ್ತಿತ್ವ, ನೇರ ನಡೆ-ನುಡಿ, ಬದುಕು ಕಟ್ಟಿಕೊಂಡ ರೀತಿ-ನೀತಿಗಳಿಂದ ಇಂದಿಗೂ ಜೀವಂತ. ಆದರೆ ಇಂದು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿರುವ ಅವರ ಮನೆ ತೇಜಸ್ವಿ ಇಲ್ಲದೆ ಸೊರಗಿದೆ. ಅವರು ಕುಳಿತುಕೊಂಡು ಬರೆಯತ್ತಿದ್ದ ಕುರ್ಚಿ ಖಾಲಿಯಾಗಿದೆ. ಅವರು ಬಳಸುತ್ತಿದ್ದ ವಸ್ತುಗಳೆಲ್ಲವೂ ಮೂಲೆ ಸೇರಿವೆ. ನಿತ್ಯ ಓಡಾಡಲು ಬಳಸುತ್ತಿದ್ದ ಜಜಾಜ್ ಸ್ಕೂಟರ್ ನಿಂತಲ್ಲೇ ನಿಂತಿದೆ. ಪ್ರಾಣಿ ಪಕ್ಷಿಗಳ ಮೊಗದಲ್ಲೂ ನುಗುವೆಂಬುದೇ ಇಲ್ಲ. ಆದರೆ, ಅವರ ಕೊಠಡಿ ಮಾತ್ರ ಅವರು ನಿಧನ ಹೊಂದಿದ ದಿನ ಹೇಗಿತ್ತೋ ಇಂದಿಗೂ ಹಾಗೇ ಇದೆ. ಒಂದೇ ಒಂದು ವಸ್ತು ಆಕಡೆ ಈಕಡೆ ಕೂಡ ಕದಲಲಿಲ್ಲ. ಎಲ್ಲದರ ನಡುವೆ ಅವರ ಧರ್ಮಪತ್ನಿ ರಾಜೇಶ್ವರಿ ಕೂಡ ಬರುವ  ಅಭಿಮಾನಿಗಳಿಂದಲೇ  ಅವರು ಜೀವಂತವಾಗಿದ್ದಾರೆಂದು ತೇಜಸ್ವಿಯಂತೆ ಕಾಂಕ್ರೀಟ್ ಕಾಡುಗಳಿಂದ ದೂರ ಉಳಿದು ಅದೇ ಮನೆಯಲ್ಲೇ ಬದುಕುತ್ತಿದ್ದಾರೆ.ತೇಜಸ್ವಿಯವರ ಕುತೂಹಲಭರಿತ ಸಾಹಸಗಳು, ಪತ್ರಗಳು, ಹವ್ಯಾಸ, ಬಿರಿಯಾನಿ ಪ್ರೀತಿ, ಫಿಶಿಂಗ್, ಫೋಟೋಗ್ರಫಿ ಎಂಬ ತಪಸ್ಸಿನ ಜೊತೆ ಅವರ ಬದುಕಿನ ಶೈಲಿಯನ್ನು ಇಂದಿಗೂ ಅವರ ಮಡದಿ ಹಾಗೂ ಸ್ನೇಹಿತರ ಗುಂಪು ನೆನೆಯುತ್ತದೆ. ನನಗೆ ಯಾವುದೇ ಪ್ರಶಸ್ತಿ ಬೇಡ, ಓದುಗರ ಮನಸ್ಸಿಗೆ ಹೋದರೆ  ಸಾಕು ಎನ್ನುತ್ತಿದ್ದರಂತೆ ತೇಜಸ್ವಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ, ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಿಂದ ದೂರವಾಣಿ ಕರೆ ಮಾಡಿ ನಿಮಗೆ ಪ್ರಶಸ್ತಿ ಬಂದಿದೆ ಎಂದಾಗ ತೇಜಸ್ವಿಯವರು ನನಗೆ ಆಗಲೇ ಬಂದಿದೆಯಲ್ಲಾ, ಮತ್ಯಾಕೆ ಎಂದು ಪ್ರಶ್ನಿಸಿದ್ದರಂತೆ. ಇನ್ನು ತೇಜಸ್ವಿ ಪತ್ನಿ ರಾಜೇಶ್ವರಿ ತಮ್ಮ ಪತಿಯ ಬಗೆ ಮತ್ತೊಂದು ಪುಸ್ತಕ ಬರೆಯಲು ಶುರುಮಾಡಿದ್ದಾರೆ. 'ತೇಜಸ್ವಿಯೂ ಬಿರಿಯಾನಿ ಪ್ರೀತಿಯೂ' ಎಂಬ ಶೀಷಿಕೆಯಡಿ ಪುಸ್ತಕ ಬರೆಯಲು ಶುರುಮಾಡಿದ್ದೇನೆ ಅಂತಾರೆ ರಾಜೇಶ್ವರಿ.


Loading...

ಪೂರ್ಣ ಚಂದ್ರ ತೇಜಸ್ವಿ ಹುಟ್ಟಿದ್ದು  1938 ರ ಸೆಪ್ಟೆಂಬರ್ 8 ರಂದು. ತಂದೆ  ರಾಷ್ಟ್ರಕವಿ  ಕುವೆಂಪು, ತಾಯಿ ಹೇಮಾವತಿ. ರಾಜೇಶ್ವರಿ ಅವರನ್ನು  ಮನದನ್ನೆಯಾಗಿ ಸ್ವೀಕರಿಸಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ತೇಜಸ್ವಿ, ತನ್ನ ತಂದೆಯಂತೆಯೇ ಸಾಹಿತ್ಯಿಕ ಕೃಷಿಯಲ್ಲಿ ತೊಡಗಿಕೊಂಡರು. ಕರ್ವಾಲೊ, ಚಿದಂಬರ ರಹಸ್ಯ, ಅಣ್ಣನ ನೆನೆಪು, ಕಿರಗೂರಿನ ಗಯ್ಯಾಳಿಗಳು, ಜುಗಾರಿ ಕ್ರಾಸ್ ತೇಜಸ್ವಿ ಅವರ ಪ್ರಮುಖ ಕೃತಿಗಳಾಗಿವೆ. ತೇಜಸ್ವಿ ಅವರಿಗೆ ಪ್ರತಿಷ್ಠಿತ  ಪಂಪ ಪ್ರಶಸ್ತಿ, ಕೇಂದ್ರ  ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿವೆ. ಇಂತಹ ಹಟಯೋಗಿ ತೇಜಸ್ವಿ ಕಾಲವಾಗಿದ್ದು 2007 ರ  ಏಪ್ರಿಲ್ 5 ರಂದು.ಒಟ್ಟಾರೆ, ಬರವಣಿಗೆಯ ಜೊತೆ ತನ್ನ ಸರಳತೆಯಿಂದಲೇ ಮತ್ತಷ್ಟು ಖ್ಯಾತಿ ಗಳಿಸಿದ್ದ ತೇಜಸ್ವಿಯವರ ಜೀವನ ಶೈಲಿ ಪ್ರತಿಯೊಬ್ಬರಿಗೂ ಮಾದರಿಯಾಗುವಂತದ್ದು. ಮೂಡಿಗೆರೆಯ ಅವರ ಮನೆಗೆ ಹೋದರೆ  ಇಂದಿಗೂ ತೇಜಸ್ವಿ ಇಲ್ಲ ಎಂದು ಅನ್ನಿಸುವುದೇ ಇಲ್ಲ. ಅಲ್ಲಿ ಬೀಸುವ ಗಾಳಿಗೂ ಗೊತ್ತು ತೇಜಸ್ವಿ ಅಂದರೆ ಯಾರು ಅಂತಾ. ಅವರ ಬರವಣಿಗೆ ಹಾಗೂ ಸಾಧಾರಣ ಜೀವನ ಶೈಲಿಯಿಂದ ಅವರು ಜೀವಂತ ದಂತಕಥೆ ಅಂದರೆ ತಪ್ಪಲ್ಲ.
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ