ಡಿಜೆ ಹಳ್ಳಿ ಗಲಭೆ ಸಂಬಂಧ ಇಂದು ಮತ್ತೆ 7 ಎಫ್​ಐಆರ್ ಸೇರಿ ಒಟ್ಟು 29 ಪ್ರಕರಣ ದಾಖಲು; ಸಿಸಿಬಿಯಿಂದ 206 ಆರೋಪಿಗಳ ಬಂಧನ

ಘಟನೆ ನಡೆದ ಸ್ಥಳದಲ್ಲಿರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವುಗಳ ಪರಿಶೀಲನೆ ಬಳಿಕ ಮತ್ತಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಅಲ್ಲದೇ ಘಟನೆ ಸಂಬಂಧ ಮತ್ತಷ್ಟು ಎಫ್​ಐಆರ್​ಗಳು ದಾಖಲಾಗುವ ಸಾಧ್ಯತೆಯೂ ಸಹ ಇದೆ.

ಡಿಜೆ ಹಳ್ಳಿಯಲ್ಲಿ ಗಲಭೆ ನಡೆದ ದೃಶ್ಯ

ಡಿಜೆ ಹಳ್ಳಿಯಲ್ಲಿ ಗಲಭೆ ನಡೆದ ದೃಶ್ಯ

  • Share this:
ಬೆಂಗಳೂರು; ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಇದುವರೆಗೂ 29 ಎಫ್​ಐಆರ್ ದಾಖಲಾಗಿವೆ. ಇಂದು ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ 7 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಕಿಡಿಗೇಡಿಗಳು ಮನೆಯ ಒಳಗೆ ನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದು, ಹಣ ಹಾಗೂ ನಗದನ್ನು ದೋಚಿರುವುದನ್ನು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಇದರ ಜೊತೆಗೆ ಮನೆಯ ಮುಂಭಾಗ ನಿಲ್ಲಿಸಿದ್ದ ವಾಹನಗಳಿಗೂ ಸಹ ಬೆಂಕಿ ಹಚ್ಚಿದ್ದಾರೆ. ಹಾಗಾಗಿ‌ ಕಿಡಿಗೇಡಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದು ಪೊಲೀಸರು ಎಫ್​ಐಆರ್ ದಾಖಲು ಮಾಡಿದ್ದಾರೆ.

ನಿನ್ನೆಯವರೆಗೂ ಡಿಜೆ ಹಳ್ಳಿಯಲ್ಲಿ 11 ಹಾಗೂ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ 11 ಎಫ್​ಐಆರ್​​ಗಳು ದಾಖಲಾಗಿದ್ದವು. ‌ಇಂದು ದಾಖಲಾದ ಎಲ್ಲಾ ಎಫ್​ಐಆರ್​ಗಳಲ್ಲಿಯೂ ಅನಾಮಧೇಯ ವ್ಯಕ್ತಿಗಳನ್ನು ಆರೋಪಿಗಳಾಗಿ ಮಾಡಲಾಗಿದೆ. ಒಂದು ಕಡೆ ಸಿಸಿಬಿ ಪೊಲೀಸರು ಒಟ್ಟು 7 ತಂಡಗಳನ್ನು ರಚನೆ ಮಾಡಿಕೊಂಡಿದ್ದು, ಇದುವರೆಗೂ 206 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದರೆ ಜೈಲು ಬಳಿ ಗಲಾಟೆ ಮಾಡುವ ಸಾಧ್ಯತೆ ಇರುವ ಕಾರಣಕ್ಕೆ, ಮುನ್ನೆಚ್ಚರಿಕೆಯಾಗಿ 80 ಜನ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಕಳುಹಿಸಿಕೊಡಲಾಗಿದೆ.

ಇದನ್ನು ಓದಿ: ಶಂಕರಾಚಾರ್ಯರ ಪುತ್ಥಳಿಗೆ ಹಸಿರು ಬಾವುಟ ಪ್ರಕರಣಕ್ಕೆ ತೆರೆ; ಕುಡಿದ ನಶೆಯಲ್ಲಿ ಕೃತ್ಯ, ತಪ್ಪೊಪ್ಪಿಕೊಂಡ ಆರೋಪಿ

ಇತ್ತ ಸಿಸಿಬಿ ಪೊಲೀಸರು ಸುಮಾರು 20ಕ್ಕೂ ಹೆಚ್ಚು ಆರೋಪಿಗಳನ್ನು 5 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಾ ಇದ್ದಾರೆ. ಅದ್ರಲ್ಲಿ ಎಸ್​ಡಿಪಿಐ ಮುಖಂಡ ಹಾಗೂ ಕಾರ್ಯಕರ್ತರು ಸಹ ಇದ್ದು, ಸಿಸಿಬಿ ಪೊಲೀಸರು ಬಹಳ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಘಟನೆ ನಡೆದ ಸ್ಥಳದಲ್ಲಿರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವುಗಳ ಪರಿಶೀಲನೆ ಬಳಿಕ ಮತ್ತಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಅಲ್ಲದೇ ಘಟನೆ ಸಂಬಂಧ ಮತ್ತಷ್ಟು ಎಫ್​ಐಆರ್​ಗಳು ದಾಖಲಾಗುವ ಸಾಧ್ಯತೆಯೂ ಸಹ ಇದೆ.
Published by:HR Ramesh
First published: