ತಂಬಾಕು ಬಳಕೆಯಿಂದ ಬಾಗಲಕೋಟೆಯಲ್ಲಿ ಹೆಚ್ಚಾದ ಬಾಯಿ ಕ್ಯಾನ್ಸರ್ ಪ್ರಮಾಣ; ಕಣ್ಮುಚ್ಚಿ ಕುಳಿತ ಆರೋಗ್ಯ ಇಲಾಖೆ

ಅಂಗಡಿಯಲ್ಲಿ ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುತ್ತೆ ಎಂದು ನಾಮಫಲಕಗಳನ್ನು ಹಾಕಿಲ್ಲ‌. ಹೀಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ನಿಯಮಗಳನ್ನು ಗಾಳಿಗೆ ತೂರಿ ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ.

ಗುಟ್ಕಾ ಮಾರಾಟ ಮಾಡುತ್ತಿರುವ ಅಂಗಡಿಗಳು

ಗುಟ್ಕಾ ಮಾರಾಟ ಮಾಡುತ್ತಿರುವ ಅಂಗಡಿಗಳು

  • Share this:
ಬಾಗಲಕೋಟೆ(ಫೆ.01) : ಬಾಗಲಕೋಟೆ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿರೋದು ಆತಂಕ ಸೃಷ್ಟಿಸಿದೆ. 

ಬಾಗಲಕೋಟೆ ತಂಬಾಕು ನಿಯಂತ್ರಣ ಕೋಶ ಸರ್ಕಾರಕ್ಕೆ ಸಲ್ಲಿಸಿದ ಅಂಕಿಸಂಖ್ಯೆ ಪ್ರಕಾರ 2018ರ ಎಪ್ರಿಲ್ ನಿಂದ ಡಿಸೆಂಬರ್ ವರೆಗೆ ಅಂದ್ರೆ 9 ತಿಂಗಳ ವರದಿ ಪ್ರಕಾರ ಬಾಯಿ ಕ್ಯಾನ್ಸರ್-52, ಸ್ತನ ಕ್ಯಾನ್ಸರ್-06, ಗರ್ಭ ಕೋಶದ ಕ್ಯಾನ್ಸರ್-08, ಇತರೆ ಕ್ಯಾನ್ಸರ್-89 ಇದ್ದಾರೆ. ಅದೇ  2019 ಎಪ್ರಿಲ್ ನಿಂದ ಡಿಸೆಂಬರ್ ವರೆಗೆ 9 ತಿಂಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. 9 ತಿಂಗಳ ವರದಿ ಹೊಲಿಕೆ ಮಾಡಿ ನೋಡಿದಲ್ಲಿ ಕಳೆದ 2018 ಕ್ಕಿಂತ 2019 ರಲ್ಲಿ 243 ಕ್ಯಾನ್ಸರ್ ರೋಗಿಗಳ ಸಂಖ್ಯೆ ಏರಿಕೆಯಾಗಿದೆ.

2019ರ ಎಪ್ರಿಲ್ ನಿಂದ ಡಿಸೆಂಬರ್ ವರೆಗೆ ಬಾಯಿ ಕ್ಯಾನ್ಸರ್-106, ಸ್ತನ ಕ್ಯಾನ್ಸರ್-54,ಗರ್ಭ ಕೋಶದ ಕ್ಯಾನ್ಸರ್-53 ಹಾಗೂ ಇತರೆ ಕ್ಯಾನ್ಸರ್-185 ಸೇರಿ ಒಟ್ಟು -398 ಕ್ಯಾನ್ಸರ್ ರೋಗಿಗಳ ಪತ್ತೆಯಾಗಿದೆ. ಇನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳಲ್ಲಿ ಪ್ರತಿ ತಿಂಗಳು ಕನಿಷ್ಠ 6 ರೋಗಿಗಳಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಜೊತೆಗೆ ಶಾಲೆ, ಸರ್ಕಾರಿ ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿನ ಅಂಗಡಿಗಳಲ್ಲಿ ಗುಟ್ಕಾ ಚೀಟುಗಳನ್ನು ಜೋತು ಹಾಕಿ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ.

ತಂಬಾಕು ನಿಯಂತ್ರಣ ಕಾಯ್ದೆ ಪ್ರಕಾರ ಶಾಲಾ ಆವರಣದ 100 ಮೀಟರ್ ನೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಹಾಗೂ ಅಂಗಡಿಗಳಲ್ಲಿ ಗುಟ್ಕಾ ಚೀಟುಗಳನ್ನು ಜೋತು ಹಾಕಬಾರದಂತಿದೆ. ಇನ್ನು ಅಂಗಡಿಯಲ್ಲಿ ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುತ್ತೆ ಎಂದು ನಾಮಫಲಕಗಳನ್ನು ಹಾಕಿಲ್ಲ‌. ಹೀಗಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ನಿಯಮಗಳನ್ನು ಗಾಳಿಗೆ ತೂರಿ ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ. ತಂಬಾಕು ಉತ್ಪನ್ನಗಳು ಜನರಿಗೆ ಸುಲಭವಾಗಿ ದೊರೆಯುವದರಿಂದ ವ್ಯಸನಿಗಳ ಸಂಖ್ಯೆಯೂ ಹೆಚ್ಚಾಗಿ, ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಇನ್ನು ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಓಪನ್ ಆಗಿ ಗುಟ್ಕಾ, ಮಾವಾ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ಮಾಡಿ ನಿಯಂತ್ರಣ ಹಾಕದೇ ಕೈಕಟ್ಟಿ ಕುಳಿತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ ಸುಲಭವಾಗಿ ದೊರೆಯುವ ಗುಟ್ಕಾ, ಮಾವಾ ಇದರಿಂದ ಕ್ಯಾನ್ಸರ್ ಬರುತ್ತೆ ಅನ್ನೋ ನಾಮಫಲಕದ ಜೊತೆಗೆ ಅಕ್ರಮವಾಗಿ ಬಾಗಲಕೋಟೆ ನಗರದ ಕೆಲವೆಡೆ ಮನೆಯಲ್ಲಿ ತಯಾರಿಸಿ ಗೌಪ್ಯವಾಗಿ  ಜೊತೆಗೆ ಪಂಕಾ ಮಸೀದಿ ಬಳಿ ಅಂಗಡಿಯಲ್ಲಿ ಮಾವಾವನ್ನು ಪೋಲಿಸರ ಕಣ್ಣೆದುರಲ್ಲೇ ಮಾರಾಟವಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ರಾಜಾರೋಷವಾಗಿ ಗುಟ್ಕಾ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ :  ಅಂಗನವಾಡಿಗೆ ಅವಧಿ ಮೀರಿದ ಮಸಾಲೆ ಪೌಡರ್​ ವಿತರಣೆ; ಮಕ್ಕಳ ಜೀವದ ಬಗ್ಗೆ ಅಧಿಕಾರಿಗಳಿಗೆ ಇಲ್ವಾ ಕಾಳಜಿ..!

ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದರೂ ಹೇಳೋರಿಲ್ಲ, ಕೇಳೊರಿಲ್ಲ ಎನ್ನುವ ಪರಿಸ್ಥಿತಿಯಿದೆ. ಮಾರಕ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಭಯ ಪಡುವಂತಾಗಿದೆ.

(ವರದಿ: ರಾಚಪ್ಪ ಬನ್ನಿದಿನ್ನಿ)
First published: