• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕಲ್ಯಾಣ ಕರ್ನಾಟಕಕ್ಕೆ ತಿರುಪತಿ ಮತ್ತಷ್ಟು ಹತ್ತಿರ ; ಹೊಸ ವರ್ಷಕ್ಕೆ ವಿಮಾನ ಸೇವೆ ಕೊಡುಗೆ

ಕಲ್ಯಾಣ ಕರ್ನಾಟಕಕ್ಕೆ ತಿರುಪತಿ ಮತ್ತಷ್ಟು ಹತ್ತಿರ ; ಹೊಸ ವರ್ಷಕ್ಕೆ ವಿಮಾನ ಸೇವೆ ಕೊಡುಗೆ

ಸ್ಟಾರ್ ಏರ್ ವಿಮಾನ

ಸ್ಟಾರ್ ಏರ್ ವಿಮಾನ

ಕಲ್ಯಾಣ ಕರ್ನಾಟಕದ ಜನತೆಗೆ ಹೊಸ ವರ್ಷಕ್ಕೆ ಮತ್ತೊಂದು ವಿಮಾನ ಕೊಡುಗೆ ರೂಪದಲ್ಲಿ ಸಿಗುತ್ತಿದೆ. 2021ರ ಜನವರಿಯಿಂದ ಕಲಬುರ್ಗಿಯಿಂದ ತಿರುಪತಿಗೆ ವಿಮಾನ ಸೇವೆ ಆರಂಭಗೊಳ್ಳುತ್ತಿದೆ

  • Share this:

ಕಲಬುರ್ಗಿ(ಡಿಸೆಂಬರ್​. 16): ಕಲ್ಯಾಣ ಕರ್ನಾಟಕಕ್ಕೂ ತಿರುಪತಿಗೂ ಅವಿನಾಭಾವ ಸಂಬಂಧ. ಒಂದು ಕಾಲಕ್ಕೆ ತಿರುಪತಿ ಮೇಲೆ ದಾಳಿ ನಡೆದಂತಹ ಸಂದರ್ಭದಲ್ಲಿ ಕ್ಷೇತ್ರದ ಸಂರಕ್ಷಣೆಗೆ ನಿಂತವರು ಸುರಪುರ ಸಂಸ್ಥಾನದ ದೊರೆಗಳು. ಅದೇ ಕಾರಣಕ್ಕೆ ವಿಜಯದಶಮಿ ಸಂದರ್ಭದಲ್ಲಿ ತಿರುಪತಿಯಲ್ಲಿ ನಡೆಯುವ ಬ್ರಹ್ಮತ್ಸವದಲ್ಲಿ ಮೊದಲ ಪೂಜೆ ನಡೆಯುವುದು ಸುರಪುರ ದೊರೆಗಳದ್ದು. ಈಗಲೂ ಸಹ ಸುರಪುರ ಸಂಸ್ಥಾನವನ್ನು ಪ್ರತಿನಿಧಿಸುವವರಿಗೆ ಅಗ್ರ ಪೂಜೆಯ ಭಾಗ್ಯ ಕಲ್ಪಿಸಲಾಗಿದೆ. ಹೀಗಾಗಿ ತಿರುಪತಿಯಲ್ಲಿ ಕಲ್ಯಾಣ ಕರ್ನಾಟಕದ ಜನತೆಯ ಬಗ್ಗೆ ಒಂದಷ್ಟು ಪ್ರೀತ್ಯಾದರಗಳಿವೆ. ಪ್ರತಿ ವರ್ಷವೂ ಬ್ರಹ್ಮೋತ್ಸವ ಇತ್ಯದಿಗಳ ಸಂದರ್ಭದಲ್ಲಿ ಕಲ್ಯಾಣ ಕರ್ನಾಟದಿಂದ ಹಲವಾರು ಜನ ಭಾಗಿಯಾಗುತ್ತಾರೆ. ಕಲಬುರ್ಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಬಹುತೇಕ ಭಾಗಗಳಿಂದ ತಿರುಪತಿಗೆ ನೇರವಾಗಿ ಬಸ್ ಗಳಿಲ್ಲ. ಎಲ್ಲರೂ ರೈಲು ಅಥವಾ ಖಾಸಗಿ ವಾಹನಗಳ ಮೇಲೆ ಅವಲಂಬಿತರಾಗಿದ್ದಾರೆ. ತಿರುಪತಿಗೆ ತೆರಳಲು ಹೆಚ್ಚು ಸಮಯ ವ್ಯಯಿಸುವುದು ಅನಿವಾರ್ಯವಾಗಿದ್ದ ಸಂದರ್ಭದಲ್ಲಿಯೇ ತಿರುಪತಿ ತಿಮ್ಮಪ್ಪ ಕಲ್ಯಾಣ ಕರ್ನಾಟಕದ ಜನತೆಗೆ ಮತ್ತಷ್ಟು ಹತ್ತಿರವಾಗಿದ್ದಾನೆ. ಕೇವಲ 1 ಗಂಟೆ 5 ನಿಮಿಷದಲ್ಲಿ ಕಲಬುರ್ಗಿಯಿಂದ ತಿರುಪತಿಗೆ ಹೋಗೋ ಅವಕಾಶವನ್ನು ಜನ ಪಡೆದಿದ್ದಾರೆ.


ಕಲ್ಯಾಣ ಕರ್ನಾಟಕದ ಜನತೆಗೆ ಹೊಸ ವರ್ಷಕ್ಕೆ ಮತ್ತೊಂದು ವಿಮಾನ ಕೊಡುಗೆ ರೂಪದಲ್ಲಿ ಸಿಗುತ್ತಿದೆ. 2021ರ ಜನವರಿಯಿಂದ ಕಲಬುರ್ಗಿಯಿಂದ ತಿರುಪತಿಗೆ ವಿಮಾನ ಸೇವೆ ಆರಂಭಗೊಳ್ಳುತ್ತಿದೆ. ಸ್ಟಾರ್ ಏರ್ ಕಲಬುರ್ಗಿಯಿಂದ ತಿರುಪತಿಗೆ ವಿಮಾನ ಸೇವೆ ಆರಂಭಿಸಲು ತೀರ್ಮಾನಿಸಿದೆ. ಜನವರಿ 11 ರಿಂದ ವಾರದಲ್ಲಿ ನಾಲ್ಕು ದಿನಗಳ ಕಾಲ ತಿರುಪತಿಗೆ ವಿಮಾನಯಾನದ ಸೌಲಭ್ಯ ಸಿಗಲಿದೆ.ಕಲ್ಯಾಣ ಕರ್ನಾಟಕ ಭಾಗದಿಂದ ತಿರುಪತಿಗೆ ವಿಮಾನ ಸೇವೆ ಆರಂಭಿಸಬೇಕೆಂಬ ಬಹುದಿನಗಳ ಕನಸು ಕೊನೆಗೂ ನನಸಾದಂತಾಗಿದೆ.


ಪ್ರತಿ ಸೋಮವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ವಿಮಾನ ಸಂಚಾರ ನಡೆಯಲಿದೆ. ಕಲಬುರ್ಗಿಯಿಂದ ತಿರುಪತಿಗೆ ಬೆಳಿಗ್ಗೆ 9:55 ಗಂಟೆಗೆ ಹೊರಡುವ ವಿಮಾನ, ಬೆಳಿಗ್ಗೆ 11 ಗಂಟೆಗೆ ತಿರುಪತಿಯನ್ನು ತಲುಪಲಿದೆ. ಅದೇ ರೀತಿ ತಿರುಪತಿಯಿಂದ ಮಧ್ಯಾಹ್ನ 2:25 ಕ್ಕೆ ಹೊರಟು, 3:30 ರ ವರೆಗೆ ಕಲಬುರ್ಗಿಗೆ ಬಂದು ತಲುಪಲಿದೆ. ವಾರದ ನಾಲ್ಕು ದಿನಗಳ ಕಾಲ ವಿಮಾನ ಸೌಲಭ್ಯವಿದ್ದು, ಈ ಭಾಗದ ಜನತೆಯನ್ನು ಹರ್ಷಚಿತ್ತರನ್ನಾಗಿಸಿದೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಸ್ಟಾರ್ ಏರ್ ನಿಂದ ಸೇವೆ ಆರಂಭಗೊಳ್ಳುತ್ತಿರುವುದಕ್ಕೆ ಕಲಬುರ್ಗಿಯ ಜೊತೆಗೆ ಕಲ್ಯಾಣ ಕರ್ನಾಟಕದ ಜನತೆ ಸಂತಸ ವ್ಯಕ್ತಪಡಿಸಿದೆ.


ಇದನ್ನೂ ಓದಿ : ಅನ್ನದಾತರ ಪರ ಹೆಜ್ಜೆ ಇಟ್ಟ ಕೇಂದ್ರ ಸರ್ಕಾರ ; ಕಬ್ಬು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ


ತಿರುಪತಿಗೂ ಕಲ್ಯಾಣ ಕರ್ನಾಟಕದ ಜನತೆಗೂ ನೂರಾರು ವರ್ಷಗಳ ಸಂಬಂಧವಿದೆ. ವಿಜಯದಶಮಿಯ ಸಂದರ್ಭದಲ್ಲಿ ತಿರುಪತಿಯಲ್ಲಿ ಕಲ್ಯಾಣ ಕರ್ನಾಟಕದ ಸುರಪುರ ಸಂಸ್ಥಾನದ ದೊರೆಗಳಿಗೆ ಅಗ್ರ ಪಂಕ್ತಿಯ ಪೂಜೆ ಮಾಡುವ ಅವಕಾಶ ಕೊಡಲಾಗಿದೆ. ಈ ಭಾಗದಿಂದ ತಿರುಪತಿಗೆ ಹೋಗಲು ನಾನಾ ಕಷ್ಟ ಬೀಳಬೇಕಾಗಿತ್ತು. ತಿರುಪತಿಗೆ ನೇರ ವಿಮಾನ ಸೇವೆ ಆರಂಭಿಸಿರುವುದರಿಂದ ಕಲ್ಯಾಣ ಕರ್ನಾಟಕದ ಜನತೆಗೆ ತಿಮ್ಮಪ್ಪನ ದರ್ಶನ ಬೇಗನೆ ಸಿಗುವ ಅವಕಾಶ ಸಿಕ್ಕಂತಾಗಿದೆ ಎಂದು ಸುರಪುರದ ನಿವಾಸಿ ಟಿ.ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ.


ಈಗಾಗಲೇ ರಾಜಧಾನಿ ಬೆಂಗಳೂರು ಮತ್ತು ದೆಹಲಿಗಳಿಗೂ ಕಲಬುರ್ಗಿಯಿಂದ ವಿಮಾನ ಸೇವೆ ಪ್ರಾರಂಭಗೊಂಡಿದ್ದು, ಪ್ರಯಾಣಿಕರ ವ್ಯಾಪಕ ಸ್ಪಂದನೆಯಿಂದಾಗಿ ವಿಮಾನಗಳ ಸಂಖ್ಯೆಯೂ ಹೆಚ್ಚಳವಾಗಲಾರಂಭಿಸಿವೆ. ತಿರುಪತಿಯ ನಂತರ ಮುಂದಿನ ದಿನಗಳಲ್ಲಿ ಮುಂಬೈಗೂ ವಿಮಾನ ಸೇವೆ ಆರಂಭಿಸುವ ಚಿಂತನೆ ನಡೆದಿದೆ.


ವರದಿ : ಶಿವರಾಮ ಅಸುಂಡಿ, ಕಲಬುರ್ಗಿ

Published by:G Hareeshkumar
First published: