ಶಿವಮೊಗ್ಗ ನಗರ ಜನರು ವದಂತಿಗಳಿಗೆ ಕಿವಿಗೊಡಬೇಡಿ, ಶಾಂತಿ ಕಾಪಾಡಲು ಬಿಗಿ ಬಂದೋ ಬಸ್ತ್ ವ್ಯವಸ್ಥೆ: ಐಜಿಪಿ ರವಿ

ಕಾನೂನು ಸುವ್ಯವಸ್ಥೆ ಕಾಪಾಡಲು ನೆರೆಯ ಜಿಲ್ಲೆಗಳಿಂದ ಪೊಲೀಸರನ್ನು ಕರೆಯಿಸಲಾಗಿದೆ. 148 ಪ್ರದೇಶಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಪೊಲೀಸ್ ಬಂದೋಬಸ್ತ್ ತೀವ್ರಗೊಳಿಸಲಾಗಿದೆ.

ಪೂರ್ವ ವಲಯ ಐಜಿಪಿ ರವಿ

ಪೂರ್ವ ವಲಯ ಐಜಿಪಿ ರವಿ

  • Share this:
ಶಿವಮೊಗ್ಗ(ಡಿಸೆಂಬರ್​.04): ಶಿವಮೊಗ್ಗ ನಗರದಲ್ಲಿ ಶಾಂತಿ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಶಿವಮೊಗ್ಗ ನಗರದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ 62 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ನಗರದಲ್ಲಿ ಬಜರಂಗ ದಳದ ಕಾರ್ಯಕರ್ತ ಮೇಲೆ ನಡೆದ ಹಲ್ಲೆಯ ನಂತರ, ನಗರದಲ್ಲಿ ಹಲವು ಅಹಿತಕರ ಘಟನೆಗಳು ನಡೆದಿದೆ. ಸಧ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಶಿವಮೊಗ್ಗ ನಗರದ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ ಪೂರ್ವ ವಲಯ ಐಜಿಪಿ ರವಿ ಅವರು ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು,ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ನಿಗಾ ಇರಿಸಲಾಗಿದೆ ಎಂದು ಹೇಳಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ನೆರೆಯ ಜಿಲ್ಲೆಗಳಿಂದ ಪೊಲೀಸರನ್ನು ಕರೆಯಿಸಲಾಗಿದೆ. 148 ಪ್ರದೇಶಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಪೊಲೀಸ್ ಬಂದೋಬಸ್ತ್ ತೀವ್ರಗೊಳಿಸಲಾಗಿದೆ. 9 ಚೆಕ್‍ ಪೋಸ್ಟ್​​ಗಳಲ್ಲಿ ಬೀಗಿ ಬಂದೋಬಸ್ತ್ ಮಾಡಲಾಗಿದೆ.

ಹೊರಗಿನಿಂದ ಬರುವವರ ಮೇಲೆ ನಿಗಾ ಇರಿಸಲಾಗಿದೆ. 22 ಚೀತಾ ಮತ್ತು 13 ಗಸ್ತು ಸಂಚಾರಿ ವಾಹನಗಳು ನಗರದಾದ್ಯಂತ ನಿಗಾ ಇರಿಸಿದೆ. ಯಾವುದೇ ಕಾರಣಕ್ಕೂ ಪರಿಸ್ಥಿತಿ ಬಿಗಡಾಯಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಎಲ್ಲಾ ಬೀಗಿ ಕ್ರಮಗಳನ್ನು ಕೈಗೊಂಡಿದ್ದಾರೆ. ಮುಂಜಾಗರೂಕತಾ ಕ್ರಮವಾಗಿ ನಗರ ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆ ವಿಧಿಸಲಾಗಿದೆ. ದೊಡ್ಡಪೇಟೆ, ಕೋಟೆ ಮತ್ತು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಫ್ರ್ಯೂ ಮುಂದುವರೆಸಲಾಗಿದೆ. ಶನಿವಾರ ಬೆಳಗ್ಗೆ 10 ಗಂಟೆವರೆಗೆ ಈ ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಫ್ರ್ಯೂ ಇರಲಿದೆ. ಹಾಲು, ಔಷಧಿ ಮತ್ತಿತರ ಅಗತ್ಯ ಸಾಮಾಗ್ರಿಗಳ ಪೂರೈಕೆಗೆ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ. ಜನರು ವದಂತಿಗಳಿಗೆ ಕಿವಿಗೊಡದೆ ಶಾಂತಿಯನ್ನು ಕಾಪಾಡಬೇಕೆಂದು  ಎಂದು ಮನವಿ ಮಾಡಿದರು.

ಇದನ್ನೂ ಓದಿ : ಗೋವು - ಗಂಗೆ ಸಂರಕ್ಷಣೆಯಾಗದ ಹೊರತು ಸ್ವದೇಸಿ ವಿಕಾಸ ಅಸಾಧ್ಯ; ಖ್ಯಾತ ಚಿಂತಕ ಕೆ.ಎನ್.ಗೋವಿಂದಾಚಾರ್ಯ

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ವದಂತಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ಎಚ್ಚರಿಕೆ ನೀಡಿದರು. ಸಾರ್ವಜನಿಕರಿಗೆ ಭೀತಿಯನ್ನು ಹುಟ್ಟಿಸುವ, ಯಾವುದೇ ವರ್ಗ ಅಥವಾ ಸಮುದಾಯದ ವಿರುದ್ಧ ಪ್ರಚೋದಿಸುವ ಬರಹಗಳನ್ನು ವಾಟ್ಸಪ್​​ ಫೇಸ್‍ಬುಕ್ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ಹರಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು  ಎಚ್ಚರಿಕೆ ನೀಡಿದ್ದಾರೆ.

ಸಧ್ಯಕ್ಕೆ ಶಿವಮೊಗ್ಗ ನಗರದಲ್ಲಿ ಶಾಂತಿಯ ವಾತಾವರಣವಿದೆ. ಇನ್ನು ಕಫ್ರ್ಯೂ ಹಿನ್ನೆಲೆಯಲ್ಲಿ ಗಾಂಧಿ ಬಜಾರ್ ನಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಸದಾ ಜನಜಂಗುಳಿಯಿಂದ ಇರುತ್ತಿದ್ದ ಗಾಂಧಿ ಬಜಾರ್ ಇಂದು ಜನರಲ್ಲಿದೆ ಗಾಂಧಿ ಬಜಾರ್ ನ ರಸ್ತೆಗಳು ಬೀಕೋ ಎನ್ನುತ್ತಿವೆ.
.
Published by:G Hareeshkumar
First published: