ಕಲಘಟಗಿಯ ಬೆಂಡಲಗಟ್ಟಿಯಲ್ಲಿ ಹುಲಿ ಪ್ರತ್ಯಕ್ಷ- ವ್ಯಾಘ್ರನನ್ನು ಕಂಡು ಭಯಭೀತರಾಗಿರುವ ಜನ

ಹುಲಿಯನ್ನು ಹುಡುಕಲು ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. 14 ಸಿಬ್ಬಂಧಿಗಳಿರುವ ಎರಡು ತಂಡಗಳು ಆಪರೇಷನ್‌ ಟೈಗರ್‌ ಕಾರ್ಯಾಚರಣೆ ಪ್ರಾರಂಭಿಸಿವೆ.

ದ್ರೋನ್​​​ ನಲ್ಲಿ ಸೆರೆಯಾದ ಹುಲಿ

ದ್ರೋನ್​​​ ನಲ್ಲಿ ಸೆರೆಯಾದ ಹುಲಿ

  • Share this:
ಹುಬ್ಬಳ್ಳಿ(ಫೆ.11) : ಕಲಘಟಗಿಯ ಬೆಂಡಲಗಟ್ಟಿ ಗ್ರಾಮದಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದೆ. ಹೊಲಗದ್ದೆಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ವ್ಯಾಘ್ರ ಜನರಲ್ಲಿ ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆಪರೇಷನ್‌ ಟೈಗರ್‌ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಬೆಂಡಲಗಟ್ಟಿ ಗ್ರಾಮದ ಹೊಲವೊಂದರಲ್ಲಿ ಹುಲಿ ಕಾಣಿಸಿಕೊಂಡಿದೆ. ವಿಶ್ವನಾಥ ವೈದ್ಯ ಎಂಬುವವರ ಗೋವಿನ ಜೋಳದ ಹೊಲದಲ್ಲಿ ಹುಲಿ ಅವಿತು ಕುಳಿತಿದೆ. ಮೊದಲು ಚಿರತೆ ಇರಬಹುದೆಂದು ಬಾವಿಸಿದ್ದ ಗ್ರಾಮಸ್ಥರು ಹೊಲದಿಂದ ಕಾಡಿನತ್ತ ಓಡಿಸಲು ಮುಂದಾಗಿದ್ದರು. ಆದರೆ ಏಕಾಏಕಿ ಎದುರಾದ ವ್ಯಾಘ್ರನನ್ನು ಕಂಡು ದಂಗಾಗಿದ್ದಾರೆ.

ಪ್ರಾಣ ಉಳಿಸಿಕೊಂಡು ಮನೆ ಸೇರಿದ್ದಾರೆ. ಮೊದಲ ಬಾರಿಗೆ ಗ್ರಾಮದ ಸುತ್ತಮುತ್ತ ಹುಲಿಯನ್ನು ಕಂಡು ಭಯಭೀತರಾಗಿದ್ದಾರೆ. ಸದ್ಯಕ್ಕೆ ಹುಲಿರಾಯ ಯಾವುದೇ ಪ್ರಾಣಿ ಅಥವಾ ಮನುಷ್ಯರ ಮೇಲೆ ದಾಳಿ ಮಾಡಿಲ್ಲ. ಆದರೂ ವ್ಯಾಘ್ರನನ್ನು ಕಣ್ಮುಂದೆ ಕಂಡಿರುವ ಬೆಂಡಲಗಟ್ಟಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳ ರೈತರು ಹೊಲಗಳಿಗೆ ಹೋಗಲು ಭಯ ಪಡುತ್ತಿದ್ದಾರೆ.

ಹುಲಿ ಬಂದಿರುವು ವಿಷಯವನ್ನು ಬೆಂಡಲಗಟ್ಟಿ ಗ್ರಾಮದ ಪ್ರತ್ಯಕ್ಷದರ್ಶಿಗಳು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕಲಘಟಗಿ ಅರಣ್ಯ ಇಲಾಖೆ ಸಿಬ್ಬಂದಿ ದ್ರೋನ್​​​​​​​​ ಕ್ಯಾಮರಾ ಬಳಸಿ ಹುಲಿಯ ಹುಡುಕಾಟ ನಡೆಸಿದ್ದಾರೆ. ದ್ರೋನ್​​​ನಲ್ಲಿ ವ್ಯಾಘ್ರನ ಚಲನವಲನಗಳು ಸೆರೆಯಾಗಿವೆ. ನಾಲ್ಕರಿಂದ ಐದು ವರ್ಷ ವಯಸ್ಕ ಹುಲಿಯ ಓಡಾಟ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹುಲಿಯನ್ನು ಹುಡುಕಲು ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. 14 ಸಿಬ್ಬಂಧಿಗಳಿರುವ ಎರಡು ತಂಡಗಳು ಆಪರೇಷನ್‌ ಟೈಗರ್‌ ಕಾರ್ಯಾಚರಣೆ ಪ್ರಾರಂಭಿಸಿವೆ. ಗ್ರಾಮದ ಸುತ್ತಮುತ್ತಲಿನ ಹೊಲಗಳು ಮತ್ತು ಗುಡ್ಡ ಪ್ರದೇಶದಲ್ಲಿ ಹುಲಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಧಾರವಾಡ ವಲಯ ಸಂರಕ್ಷಣಾಧಿಕಾರಿ ಬಸವರಾಜ್ ಇಳಿಗೇರ್‌ ಮತ್ತು ಕಲಘಟಗಿ ವಲಯ ಅರಣ್ಯಾಧಿಕಾರಿ ಶ್ರೀಕಾಂತ್ ಪಾಟೀಲ್‌ ನೇತ್ರತ್ವದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಇದನ್ನೂ ಓದಿ : ಚೌಡಹಳ್ಳಿ ಹುಲಿ ಸೆರೆ ಕಾರ್ಯಾಚರಣೆ ನಡುವೆಯೇ ಕೊತ್ತನಹಳ್ಳಿ ಬಾಳೆತೋಟದಲ್ಲಿ 4 ಹುಲಿಗಳು ಪ್ರತ್ಯಕ್ಷ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶದಿಂದ ಕಲಘಟಗಿ ಸರಹದ್ದಿಗೆ ಹುಲಿ ಪ್ರವೇಶಿಸಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಬೆಂಡಲಗಟ್ಟಿ ಹೊಲದ ಸುತ್ತಮುತ್ತ ಹುಡುಕಾಟ ನಡೆದಿದ್ದು ಹುಲಿ ಕಾಣಿಸುತ್ತಿಲ್ಲ. ದಟ್ಟವಾದ ಹುಲ್ಲು, ಕುರುಚಲು ಗಿಡಗಳು ಅಥವಾ ಜೋಳದ ಹೊಲದಲ್ಲಿ ಅವಿತು ಕೊಂಡಿರಬಹುದು ಎನ್ನಲಾಗುತ್ತಿದೆ. ಹೀಗಾಗಿ ಬೆಂಡಲಗಟ್ಟಿ ಸೇರಿದಂತೆ ಸುತ್ತಲಿನ ಪ್ರದೇಶಗಳ ರೈತರಿಗೆ ಹೊಲಗಳಿಗೆ ಹೋಗದಂತೆ ಅರಣ್ಯ ಇಲಾಖೆ ಮುನ್ಸೂಚನೆ ನೀಡಿದೆ.

ಆದಷ್ಟು ಬೇಗ ಹುಲಿ ಅವಿತಿರುವ ಜಾಗವನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ಅರವಳಿಕೆ ಮತ್ತು ಹುಲಿ ಬೋನು ತರಿಸಿರುವ ಅರಣ್ಯ ಸಿಬ್ಬಂದಿ ವ್ಯಾಘ್ರ ಸೆರೆಗೆ ಕಸರತ್ತು ನಡೆಸುತ್ತಿದ್ದಾರೆ.
First published: