ಚಾಮರಾಜನಗರ (ಜ.22): ದೇಶದಲ್ಲಿರುವ ಹುಲಿಗಳ (Tiger) ಸಂಖ್ಯೆ ಅಂದಾಜು ಮಾಡುವ ಪ್ರಕ್ರಿಯೆ ಶುರುವಾಗಿದೆ. ಪ್ರತಿ 5 ವರ್ಷಕ್ಕೊಮ್ಮೆ ಅಖಿಲ ಭಾರತ ಹುಲಿ ಅಂದಾಜು ಪ್ರಕ್ರಿಯೆ ನಡೆಯುತ್ತಿದ್ದು 2018 ರಲ್ಲಿ ನಡೆದ ಹುಲಿ ಅಂದಾಜು ಪ್ರಕ್ರಿಯೆಯಲ್ಲಿ ದೇಶದಲ್ಲಿ 2967, ಕರ್ನಾಟಕದಲ್ಲಿ 574 ಹಾಗು ಬಂಡೀಪುರದಲ್ಲಿ 173 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. ಈ ಬಾರಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವ ನಿರೀಕ್ಷೆ ಇದ್ದು ಈಗಾಗಲೇ ಮೂರನೇ ಹಂತದಲ್ಲಿ ಕ್ಯಾಮೆರಾ ಟ್ರ್ಯಾಪ್ (Camera Trap) ಮೂಲಕ ಹುಲಿಗಳ ಸಂಖ್ಯೆ ಅಂದಾಜಿಸುವ ಕಾರ್ಯ ಮುಗಿದಿದ್ದು ನಾಲ್ಕನೇ ಹಾಗೂ ಅಂತಿಮ ಹಂತದ ಅಂದಾಜು ಪ್ರಕ್ರಿಯೆಯನ್ನು ಇದೀಗ ಆರಂಭಿಸಲಾಗಿದೆ
ಇದೇ ಮೊದಲ ಬಾರಿಗೆ ಎಂ.ಸ್ಟ್ರೈಪ್ಸ್
ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳಿರುವ ಅರಣ್ಯ ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಬಂಡೀಪುರ ಹುಲಿರಕ್ಷಿತ ಹುಲಿಗಳ ಸಂಖ್ಯೆ ಅಂದಾಜಿಸುವ ನಾಲ್ಕನೇ ಹಂತದ ಪ್ರಕ್ರಿಯೆ ಇಂದಿನಿಂದ ಆರಂಭಿಸಲಾಗಿದ್ದು , ಫೆಬ್ರುವರಿ 8 ರವರೆಗೆ ನಡೆಯಲಿದೆ. ಹುಲಿ ಸಂಖ್ಯೆ ಅಂದಾಜಿಸುವ ಪ್ರಕ್ರಿಯೆಗೆ ಇದೇ ಮೊದಲ ಬಾರಿಗೆ ಎಂ.ಸ್ಟ್ರೈಪ್ಸ್ (Management System for Tiger, Intensive Patrolling and Ecological Status) ಎನ್ನುವ ಎಕಾಲಜಿಕಲ್ ಆಪ್ ಬಳಸಲಾಗುತ್ತಿದ್ದು ಇದರಿಂದ ಅಂದಾಜು ಪ್ರಕ್ರಿಯೆಯಲ್ಲಿ ಹೆಚ್ಚಿನ ಮಟ್ಟದ ನಿಖರತೆ ಸಿಗಲಿದೆ ಎನ್ನುತ್ತಾರೆ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್
ಏನಿದರ ವಿಶೇಷತೆ
ಎಂಸ್ಟ್ರೈಪ್ಸ್ ಆ್ಯಪ್ ನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗು ಭಾರತೀಯ ವನ್ಯಜೀವಿವ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು, ಬಂಡೀಪುರದಲ್ಲಿ40 ಮೊಬೈಲ್ ಗಳಿಗೆ ಎಂಸ್ಟ್ರೈಪ್ಸ್ ತಂತ್ರಾಂಶ ಅಳವಡಿಸಲಾಗಿದೆ. ಅಂದಾಜು ಪ್ರಕ್ರಿಯೆಗೆ ನಿಯೋಜಿಸಲಾಗಿರುವ ಅರಣ್ಯ ಅಧಿಕಾರಿಗಳು ಹಾಗು ಸಿಬ್ಬಂದಿ ಲಭ್ಯವಾಗುವ ಮಾಹಿತಿಗಳನ್ನು ಈ ಆ್ಯಪ್ ನಲ್ಲಿ ದಾಖಲಿಸಲಿದ್ದಾರೆ. ಈ ಹಿಂದೆ ಅಂದಾಜು ಪ್ರಕ್ರಿಯೆಯಲ್ಲಿ ಕಂಡು ಬರುವ ಮಾಹಿತಿಗಳನ್ನು ನಿಗಧಿತ ಫಾರಂ ಗಳಲ್ಲಿ ಭರ್ತಿ ಮಾಡಿ ಅವುಗಳನ್ನು ಕ್ರೋಢೀಕರಿಸಲಾಗುತ್ತಿತ್ತು. ಇದಕ್ಕೆ ಮೂರ್ನಾಲ್ಕು ತಿಂಗಳ ಸಮಯ ಬೇಕಾಗುತ್ತಿತ್ತು. ಆದರೆ ಎಂಸ್ಟ್ರೈಪ್ಸ್ ಆ್ಯಪ್ ಬಳಸುತ್ತಿರುವುದರಿಂದ ಕಂಡು ಬರುವ ಮಾಹಿತಿಗಳನ್ನು ಸ್ಥಳದಲ್ಲೇ ಭರ್ತಿ ಮಾಡಿ ಆಯಾ ದಿನವೇ ಕಂಪ್ಯೂಟರ್ ನಲ್ಲಿ ದಾಖಲಿಸಿ ನಿಗಧಿತ ಅವಧಿಯೊಳಗೆ ಟೈಗರ್ ಸೆಲ್ ಗೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ
ಇದನ್ನು ಓದಿ: ಅಪರೂಪದ ಅಳಿವಿನಂಚಿನಲ್ಲಿರುವ ಕಡಲಾಮೆಯ ಸಂತಾನೋತ್ಪತ್ತಿಗೆ ಜಾಗವಾದ ಕಾರವಾರ ಕಡಲತೀರ
ಮೂರು ಬ್ಲಾಕ್ ವಿಂಗಡಣೆ
ಈಗ ಆರಂಭಿಸಲಾಗಿರುವ ನಾಲ್ಕನೇ ಹಂತದ ಹುಲಿ ಅಂದಾಜಿಸುವ ಪ್ರಕ್ರಿಯೆಯಲ್ಲಿ ಮಾಂಸಾಹಾರಿ ಪ್ರಾಣಿಗಳು ಮತ್ತು ಸಸ್ಯಹಾರಿ ಆನೆ ಮತ್ತು ಕಾಟಿ ಓಡಾಟಗಳ ಕುರಿತಾದ ಗುರುತುಗಳು ಅವುಗಳ ಹಿಕ್ಕೆ, ಲದ್ದಿ, ಪಾದದ ಗುರುತು, ಪರಚಿದ ಗುರುತು ಗಳನ್ನು ಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತದೆ ಅಲ್ಲದೆ ಕರಡಿ ಆನೆ ಸಂಬಾರ ಜಿಂಕೆಗಳ ಮಲ ಸಂಗ್ರಹಿಸಲು ಅವಶ್ಯವಿರುವ ಜಿಪ್ ಲೈನ್ ಕವರ್ ಗಳನ್ನು ಒದಗಿಸಲಾಗಿದೆ. ಬಂಡೀಪುರ ಅರಣ್ಯವನ್ನು ಮೂರು ಬ್ಲಾಕ್ ಗಳನ್ನಾಗಿ ವಿಂಗಡಿಸಲಾಗಿದ್ದು 112 ಗಸ್ತುಗಳಲ್ಲಿ ಅಂದಾಜು ಪ್ರಕ್ರಿಯೆ ಕಾರ್ಯ ನಡೆಯಲಿದೆ
ಇದನ್ನು ಓದಿ: Dehliಯ ರಾಜ್‍ಪಥ್‍ನಲ್ಲಿ ಈ ಬಾರಿ ಕರ್ನಾಟಕದ ಕರಕುಶಲ ವಸ್ತುಗಳ ತೊಟ್ಟಿಲು ಸ್ತಬ್ದಚಿತ್ರ ಪ್ರದರ್ಶನ
2018 ರಲ್ಲಿ ವರ್ಷಗಳ ಹಿಂದೆ ಕೈಗೊಂಡಿದ್ದ ನಾಲ್ಕನೇ ಅಖಿಲ ಭಾರತ ಮಟ್ಟದ ಹುಲಿ ಅಂದಾಜು ಪ್ರಕ್ರಿಯೆಯಲ್ಲಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 173 ಹುಲಿಗಳನ್ನು ಗುರುತಿಸಲಾಗಿತ್ತು ಈ ಬಾರಿ ಈ ಬಾರಿ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿರುವ ನಿರೀಕ್ಷೆ ಇದ್ದು ರಾಜ್ಯದಲ್ಲೇ ಮೊದಲ ಸ್ಥಾನ ಗಳಿಸುವ ಸಾಧ್ಯತೆಗಳಿವೆ
ಹುಲಿ ಅಂದಾಜು ಪ್ರಕ್ರಿಯೆ ಸಂದರ್ಭದಲ್ಲಿ ಕಾಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಹೊರಗಿನಿಂದ ಬಂದವರಿಂದ ಕೊರೋನಾ ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ಈ ಬಾರಿಯ ಅಂದಾಜು ಕಾರ್ಯದಲ್ಲಿ ಸ್ವಯಂಸೇವಕರ ಸೇವೆ ಬಳಸಿಕೊಳ್ಳುತ್ತಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ