news18-kannada Updated:January 16, 2021, 7:18 AM IST
ವಾಹನದ ಬಂಪರ್ ಕಚ್ಚಿ ಎಳೆಯುತ್ತಿರುವ ಹುಲಿ.
ಆನೇಕಲ್: ಅವರು ಕಾನನ ನಡುವೆ ವನ್ಯಜೀವಿಗಳನ್ನು ಕಂಡು ಖುಷಿಪಡಲು ಅಲ್ಲಿಗೆ ತೆರಳಿದ್ದರು. ಆನೆ, ಜಿಂಕೆ, ಕಾಡೆಮ್ಮೆ, ಕರಡಿ ಸಿಂಹ ಸೇರಿದಂತೆ ಅಪರೂಪದ ವನ್ಯಜೀವಿಗಳನ್ನು ಕಣ್ತುಂಬಿಕೊಂಡು ಮುಂದೆ ಸಾಗಿದ್ದರು. ಅಷ್ಟರಲ್ಲಿ ಎದುರಾಯ್ತು ನೋಡಿ ವ್ಯಾಘ್ರ ಹುಲಿ. ಎಂತಹವರನ್ನು ಒಂದು ಕ್ಷಣ ತನ್ನತ್ತ ಸೆಳೆಯುವ ವನ್ಯಜೀವಿ. ಹಾಗಾಗಿ ಹುಲಿಯನ್ನು ಸಮೀಪದಿಂದ ನೋಡಲು ಅವರು ವಾಹನ ನಿಲ್ಲಿಸಿದ್ದಾರೆ. ಬಳಿಕ ಚಾಲಕ ಎಷ್ಟೇ ಪ್ರಯತ್ನಪಟ್ಟರು ವಾಹನ ಸ್ಟಾರ್ಟ್ ಆಗಲಿಲ್ಲ. ಇದನ್ನು ಕಂಡು ವ್ಯಾಘ್ರಗೊಂಡ ಹುಲಿರಾಯ ವಾಹನದ ಮೇಲೆ ದಾಳಿ ಮಾಡಿದ್ದಾನೆ. ವ್ಯಾಘ್ರ ಹುಲಿರಾಯ ಮಹೇಂದ್ರ ಜೈಲೋ ವಾಹನದ ಹಿಂಬದಿ ಬಂಪರ್ ಅನ್ನು ಕಚ್ಚಿ ಹಿಂದಕ್ಕೆ ಎಳೆದಿದೆ. ಇದರಿಂದ ವಾಹನದಲ್ಲಿದ್ದ ಪ್ರಯಾಣಿಕರು ಜೀವ ಕೈಗೆ ಬಂದಂತಾಗಿದೆ. ಈ ಘಟನೆ ನಡೆದಿರುವುದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಫಾರಿಯಲ್ಲಿ.
ಹೌದು, ಕಳೆದ ವರ್ಷ ನವೆಂಬರ್ ತಿಂಗಳ ಎರಡನೇ ವಾರದಲ್ಲಿ ನಡೆದಿರುವ ಘಟನೆ ಇದಾಗಿದೆ . ಅಂದು ಮೂರು ಮಂದಿ ವಿಐಪಿ ಪ್ರವಾಸಿಗರನ್ನು ಮಹೇಂದ್ರಾ ಜೈಲೋ ವಾಹನದಲ್ಲಿ ಸಫಾರಿ ವೀಕ್ಷಣೆಗೆ ಕರೆದೊಯ್ಯಲಾಗಿತ್ತು. ಆನೆ, ಸಿಂಹ, ಕರಡಿ, ಜಿಂಕೆ ಸಫಾರಿ ವೀಕ್ಷಣೆ ಬಳಿಕ ಹುಲಿ ಸಫಾರಿಗೆ ಹೊರಟಿದ್ದಾರೆ. ಇನ್ನೂ ಹುಲಿ ಸಫಾರಿ ಪ್ರದೇಶಕ್ಕೆ ಎಂಟ್ರಿ ಕೊಟ್ಟ ತಕ್ಷಣ ರಸ್ತೆ ಪಕ್ಕದಲ್ಲಿಯೇ ಬಿಂದಾಸ್ ಆಗಿ ಬೆಂಗಾಲ್ ಟೈಗರ್ ಪೋಸ್ ಕೊಟ್ಟಿದ್ದಾನೆ. ಪ್ರವಾಸಿಗರು ಚಾಲಕನಿಗೆ ಹುಲಿ ಸಮೀಪವೇ ಕಾರು ನಿಲ್ಲಿಸುವಂತೆ ತಿಳಿಸಿದ್ದಾರೆ. ಅದರಂತೆ ಚಾಲಕ ಹುಲಿ ಪಕ್ಕವೇ ಕಾರು ನಿಲ್ಲಿಸಿದ್ದಾರೆ. ಸಮೀಪದಿಂದ ಹುಲಿಯನ್ನು ಕಂಡು ರೋಮಾಂಚನಗೊಂಡ ಪ್ರವಾಸಿಗರು ಮುಂದಕ್ಕೆ ಚಲಿಸುವಂತೆ ಚಾಲಕನಿಗೆ ತಿಳಿಸಿದ್ದಾರೆ. ಆದರೆ ಈ ವೇಳೆ ಬ್ಯಾಟರಿ ಕೈ ಕೊಟ್ಟಿದ್ದರಿಂದ ವಾಹನ ಸ್ಟಾರ್ಟ್ ಆಗಲಿಲ್ಲ. ಏನಾಗಿದೆ ಎಂದು ಕಾರಿನಿಂದ ಕೆಳಗೆ ಇಳಿದು ನೋಡಲು ವ್ಯಾಘ್ರನ ಭಯ. ಬಳಿಕ ಬೇರೊಂದು ವಾಹನ ತರುವಂತೆ ಹೇಳಿ ಕಾರಿನಲ್ಲಿಯೇ ಮೌನವಾಗಿ ಕುಳಿತುಕೊಂಡಿದ್ದಾರೆ.
ಇದನ್ನು ಓದಿ: ರಾಜ್ಯದಲ್ಲಿ ಶುರುವಾದ ಮೀಸಲಾತಿ ದಂಗಲ್; ಪಂಚಮಸಾಲಿ, ಕುರುಬ ಸಮಾಜದ ಪಾದಯಾತ್ರೆಯಿಂದ ಇಕ್ಕಟ್ಟಿಗೆ ಸಿಲುಕುತ್ತಾರಾ ಸಿಎಂ ಬಿಎಸ್ವೈ?
ಸಾಮಾನ್ಯವಾಗಿ ಸಫಾರಿಗೆ ಆಗಮಿಸುವ ವಾಹನಗಳು ತುಂಬಾ ಹೊತ್ತು ಪ್ರಾಣಿಗಳ ಬಳಿ ನಿಲ್ಲುವುದಿಲ್ಲ. ಅಂತಹುದರಲ್ಲಿ ವ್ಯಾಘ್ರನ ಸಮೀಪವೇ ವಾಹನ ನಿಂತಿರುವುದನ್ನು ಕಂಡು ವ್ಯಾಘ್ರಗೊಂಡ ಹುಲಿರಾಯ ವಾಹನದ ಮೇಲೆ ದಾಳಿ ಮಾಡಿದಲ್ಲದೆ ಕಾರಿನ ಹಿಂಬದಿ ಬಂಪರ್ ಅನ್ನು ತನ್ನ ಮೊನಚಾದ ಕೊರೆ ಹಲ್ಲುಗಳಿಂದ ಕೀಳಲು ಪ್ರಯತ್ನಿಸಿದೆ. ಈ ವೇಳೆ ಪ್ರವಾಸಿಗರು ಭಯಗೊಂಡಿದ್ದು, ಬೇರೊಂದು ವಾಹನ ಬಂದ ಬಳಿಕ ಪ್ರಾಣಿ ಪಾಲಕರ ನೆರವಿನಿಂದ ಹುಲಿಗಳನ್ನು ಪಂಜರದತ್ತ ಓಡಿಸಿ ಕೆಟ್ಟು ನಿಂತಿದ್ದ ವಾಹನವನ್ನು ಎಳೆದೊಯ್ಯಲಾಗಿದೆ.
ಕೆಟ್ಟು ನಿಂತ ಸಫಾರಿ ವಾಹನದ ಮೇಲೆ ದಾಳಿ ನಡೆಸಿದ್ದು, ಸುಮಾರು ಹತ್ತು ವರ್ಷದ ಸುರೇಶ್ ಎಂಬ ಹುಲಿಯಾಗಿದ್ದು, ಅಪರೂಪಕ್ಕೊಮ್ಮೆ ಸಫಾರಿ ಪ್ರದೇಶದಲ್ಲಿ ಹುಲಿ- ಸಿಂಹಗಳು ಸಫಾರಿ ವಾಹನಗಳಿಗೆ ಅಡ್ಡ ಬರುವುದು, ವಾಹನಗಳ ಮೇಲೆ ದಾಳಿಯಂತಹ ಕಿರಿ ಕಿರಿ ಮಾಡುತ್ತವೆ. ಉಳಿದಂತೆ ಅವುಗಳ ಪಾಡಿಗೆ ವಿಹರಿಸುತ್ತವೆ. ಆದರೂ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಸಫಾರಿಗೆ ತೆರಳುವ ಎಲ್ಲಾ ವಾಹನಗಳಿಗೆ ಹಿಂದೆ ಮುಂದೆ ಮತ್ತು ಕಿಟಕಿಗಳಿಗೆ ಮೇಶ್ ಅಳವಡಿಸಲಾಗಿದೆ ಎಂದು ಉದ್ಯಾನವನದ ಅಧಿಕಾರಿಗಳು ಹೇಳುತ್ತಾರೆ.
Published by:
HR Ramesh
First published:
January 16, 2021, 7:18 AM IST