ಹನುಮಂತ ಹುಟ್ಟಿದ್ದೆಲ್ಲಿ? ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವೆ ತಾರಕಕ್ಕೇರಿದ ಹನುಮ ಜನ್ಮಭೂಮಿ ವಿವಾದ !

ಕೊಪ್ಪಳ ಜಿಲ್ಲೆಯ ಆನೆಗುಂಡಿ ಬಳಿಯ ಕಿಷ್ಕಿಂದಾದಲ್ಲಿನ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯ ಜನಿಸಿದ್ದ ಎಂದೇ ಇಲ್ಲಿನ ಭಕ್ತರು ನಂಬಿದ್ದರು. ಆದರೆ ತಿರುಮಲ ತಿರುಪತಿ ದೇವಸ್ಥಾನದ ಸಮಿತಿಯೊಂದು ಹನುಮ ಜನ್ಮಭೂಮಿ ತಿರುಮಲ ಎಂದೂ, ಅದನ್ನು ನಿರೂಪಿಸುವ ಸಾಕ್ಷ್ಯಾಧಾರಗಳನ್ನು ಸಮಿತಿ ಪ್ರಕಟ ಪಡಿಸುವುದುದಾಗಿಯೂ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಮಬಂಟ ಹನುಮಂತ ಎಲ್ಲಿ ಹುಟ್ಟಿದ್ದ ಎನ್ನುವುದು ಸದ್ಯ ಅತೀ ಚರ್ಚಿತ ವಿಚಾರವಾಗಿಬಿಟ್ಟಿದೆ. ಅದರಲ್ಲೂ ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಒಂದು ವಿವಾದವನ್ನೇ ಸೃಷ್ಟಿಸಿದೆ. ಕೊಪ್ಪಳ ಜಿಲ್ಲೆಯ ಆನೆಗುಂಡಿ ಬಳಿಯ ಕಿಷ್ಕಿಂದಾದಲ್ಲಿನ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯ ಜನಿಸಿದ್ದ ಎಂದೇ ಇಲ್ಲಿನ ಭಕ್ತರು ನಂಬಿದ್ದರು. ಆದರೆ ತಿರುಮಲ ತಿರುಪತಿ ದೇವಸ್ಥಾನದ ಸಮಿತಿಯೊಂದು ಹನುಮ ಜನ್ಮಭೂಮಿ ತಿರುಮಲ ಎಂದೂ, ಅದನ್ನು ನಿರೂಪಿಸುವ ಸಾಕ್ಷ್ಯಾಧಾರಗಳನ್ನು ಸಮಿತಿ ಪ್ರಕಟ ಪಡಿಸುವುದುದಾಗಿಯೂ ತಿಳಿಸಿದೆ.

ಇದಕ್ಕೆ ಉತ್ತರವಾಗಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ಹನುಮ ಜನಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ. ಕೊಪ್ಪಳದ ಅಂಜನಾದ್ರಿ ಬೆಟ್ಟ ಆತನ ಕರ್ಮಸ್ಥಾನ ಎಂದಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೆ ಹೊಸಾ ತಿರುವು ಕೊಟ್ಟಿದೆ.

ರಾಮಾಯಣದಲ್ಲಿ ಹನುಮ ಸೀತೆಗೆ ತಾನು ಗೋಕರ್ಣದ ಸಮುದ್ರತೀರದಲ್ಲಿ ಜನಿಸಿದ್ದಾಗಿ ತಿಳಿಸುತ್ತಾನೆ. ಅದರ ಆಧಾರದ ಮೇಲೆ ಹನುಮ ಜನ್ಮಭೂಮಿ ಗೋಕರ್ಣವೇ ಎಂದು ಶ್ರೀ ರಾಘವೇಶ್ವರ ಸ್ವಾಮೀಜಿ ಟೈಮ್ಸ್​ ಆಫ್ ಇಂಡಿಯಾ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಏಪ್ರಿಲ್ 21ರಂದು ಹನುಮ ಜನ್ಮಸ್ಥಾನದ ಕುರಿತು ಪುರಾವೆಗಳನ್ನು ಪ್ರಸ್ತುತ ಪಡಿಸುವುದಾಗಿ ಟಿಟಿಡಿಯ ವಿಶೇಷ ಸಮಿತಿ ತಿಳಿಸಿದೆ. ಈ ಕುರಿತು ತಾವು ಒಂದು ಕಿರುಹೊತ್ತಗೆಯನ್ನೇ ರಚಿಸಿದ್ದು ಶೇಷಾಚಲಂ ಪರ್ವತಶ್ರೇಣಿಯ ಏಳು ಬೆಟ್ಟಗಳಲ್ಲಿ ಒಂದಾದ ಅಂಜನಾದ್ರಿಯೇ ಹನುಮ ಜನ್ಮಭೂಮಿ ಎಂದು ಭೌಗೋಳಿಕ ಸಾಕ್ಷಿಗಳನ್ನೂ ನೀಡುತ್ತೇವೆ ಎಂದಿದ್ದಾರೆ.

2020ರ ಡಿಸೆಂಬರ್ ತಿಂಗಳಲ್ಲಿ ಹನುಮ ಜನ್ಮಸ್ಥಳದ ಬಗ್ಗೆ ಸಂಶೋಧನೆ ನಡೆಸಲು ಸ್ವತಂತ್ರ ಸಮಿತಿಯೊಂದು ರಚನೆಯಾಗಿತ್ತು. ಟಿಟಿಡಿಯ ವಿಶೇಷ ಸಮಿತಿಯಲ್ಲಿ ವೇದ ಪಾರಂಗತರು, ಪುರಾತತ್ವ ತಜ್ಞರು ಮತ್ತು ಓರ್ವ ಇಸ್ರೊ ವಿಜ್ಞಾನಿ ಕೂಡಾ ಇದ್ದು ವೇದ, ಭೌಗೋಳಿಕ ಮತ್ತು ವೈಜ್ಞಾನಿಕ ಆಧಾರದ ಮೇಲೆ ತಮ್ಮ ವಾದ ಮಂಡಿಸುತ್ತೇವೆ ಎಂದಿದ್ದಾರೆ.

ಒಟ್ಟಿನಲ್ಲಿ ಏಪ್ರಿಲ್ 21ರಂದು ಹನುಮನ ಜನ್ಮಭೂಮಿ ಯಾವುದು ಎನ್ನುವ ವಿವಾದಕ್ಕೆ ತೆರೆ ಬೀಳುತ್ತದಾ ಅಥವಾ ಈ ಹಗ್ಗಜಗ್ಗಾಟ ಮತ್ತಷ್ಟು ಮುಂದುವರೆಯುತ್ತದಾ ಕಾದು ನೋಡಬೇಕಿದೆ. ರಾಮಜನ್ಮಭೂಮಿ ವಿವಾದ ಸುದೀರ್ಘ ಕಾಲ ನಡೆದಿದ್ದನ್ನು ನೋಡಿರುವ  ಭಕ್ತರು ಹನುಮ ಜನ್ಮಭೂಮಿ ವಿವಾದ ಬೇಗನೇ ಇತ್ಯರ್ಥವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
Published by:Soumya KN
First published: