news18-kannada Updated:January 22, 2021, 6:11 AM IST
D Raghavendra
ಮಂಗಳೂರು (ಜ. 21): ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಕೂ, ಭಾರತೀಯ ಕ್ರಿಕೆಟ್ ತಂಡಕ್ಕೂ ಎಲ್ಲಿಲ್ಲದ ನಂಟು. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಆದಿಯಾಗಿ ಎಲ್ಲಾ ದಿಗ್ಗಜ ಕಲಿಗಳು ಸುಬ್ರಹ್ಮಣ್ಯನ ಮುಂದೆ ತಲೆ ಬಾಗಿದವರೆ. ಪ್ರಸ್ತುತ ಇರುವ ತಂಡದಲ್ಲೂ ಒಬ್ಬ ಕ್ರೀಡಾಳು ಭಾರತೀಯ ಕ್ರಿಕೆಟ್ ತಂಡ ದೇಶ ಇರಲೀ, ವಿದೇಶೀ ನೆಲದಲ್ಲಿ ಆಟವಾಡಲು ಹೋಗುವ ಮೊದಲು ಕುಕ್ಕೆ ಸುಬ್ರಹ್ಮಣ್ಯ ವಿಶೇಷ ಸೇವೆ ಸಲ್ಲಿಸುತ್ತಾರೆ. ಮನೀಶ್ ಪಾಂಡೆ, ಕೆ.ಎಲ್.ರಾಹುಲ್ ಸೇರಿದಂತೆ ಬಹುತೇಕ ಎಲ್ಲಾ ಕ್ರಿಕೆಟಿಗರು ಕುಕ್ಕೆ ಸುಬ್ರಹ್ಮಣ್ಯ ಬಂದು ತಮ್ಮ ಯಶಸ್ಸಿನ ಮೆಟ್ಟಿಲನ್ನು ಗಟ್ಟಿಗೊಳಿಸಿದವರೇ. ಭಾರತ ತಂಡದ ಈಗಿನ ಹೊಸ ತಂಡದಲ್ಲೂ ಹೆಚ್ಚಿನ ಸಂಖ್ಯೆಯ ಕ್ರೀಡಾಳುಗಳು ಸುಬ್ರಹ್ಮಣ್ಯ ಸ್ವಾಮಿಯ ಭಕ್ತರೇ ಆಗಿದ್ದಾರೆ. ಈ ತಂಡದಲ್ಲಿರುವ ಸದಸ್ಯರೋರ್ವರು ಕಳೆದ ಇಪ್ಪತ್ತು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಬಂದು ಪ್ರಾರ್ಥನೆ ಮಾಡಿ, ತಮ್ಮ ಇಷ್ಟಾರ್ಥ ಪೂರೈಸಿಕೊಂಡವರಾಗಿದ್ದಾರೆ. ಹೌದು ಭಾರತೀಯ ಕ್ರಿಕೆಟ್ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ಡಿ.ರಾಘವೇಂದ್ರ ಕುಕ್ಕೆ ಸುಬ್ರಹ್ಮಣ್ಯದ ಅಪ್ಪಟ ಭಕ್ತರಾಗಿದ್ದಾರೆ. ತಮ್ಮ ತಂಡ ಪ್ರತೀ ಬಾರಿ ಆಡುವ ಆಟಕ್ಕೆ ಮೊದಲು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ತಂಡ ಹೆಸರಿನಲ್ಲಿ ಪೂಜೆ ಸಲ್ಲಿಸುತ್ತಾರೆ. ಗೆದ್ದು ಬಂದ ಬಳಿಕ ಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುವುದು ರಾಘವೇಂದ್ರ ಅವರ ಬದ್ಧತೆಯಾಗಿದೆ.
ಕಳೆದ ಇಪ್ಪತ್ತು ವರ್ಷಗಳಿಂದ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ರಾಘವೇಂದ್ರ ಇಂದು ವಿಶ್ವದ ಅತ್ಯಂತ ಪ್ರಸಿದ್ಧ ಥ್ರೋಡೌನ್ ಸ್ಪೆಷಲಿಸ್ಟ್ ಆಗಲು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಆಶೀರ್ವಾದವೂ ಇದೆ. ಕುಮುಟಾದ ತನ್ನ ಮನೆಯಿಂದ ಹೊರ ಬಂದು ಬೆಂಗಳೂರಿಗೆ ಸೇರಿದ್ದ ರಾಘವೇಂದ್ರ ಒಪ್ಪತ್ತಿನ ಊಟಕ್ಕೂ ಪರದಾಡಿದ ದಿನಗಳು ಸಾಕಷ್ಟಿವೆ. ಎಳವೆಯಲ್ಲೇ ಕ್ರಿಕೆಟ್ ನ ಹುಚ್ಚು ತಲೆಗೆ ಹಚ್ಚಿಸಿಕೊಂಡಿದ್ದ ರಾಘವೇಂದ್ರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ನೋಡಿಯೇ ತನ್ನ ಪ್ರತಿಭೆಯನ್ನು ಹೆಚ್ಚಿಸಿಕೊಂಡವರು. ಕ್ರೀಡಾಂಗಣದ ಹೊರಗೆ ಬಂದ ಬಾಲನ್ನು ಹೆಕ್ಕಿಕೊಡುತ್ತಿದ್ದ ರಾಘವೇಂದ್ರ ಇದೀಗ ದೇಶ-ವಿದೇಶಗಳ ಕ್ರಿಕೆಟ್ ತಂಡಕ್ಕೆ ಬೇಕಾದ ಕ್ರೀಡಾಳುವಾಗಿದ್ದಾರೆ.
ಮೊದಲ ಬಾರಿಗೆ ಕುಕ್ಕೆಗೆ ಬಂದಾಗ ಕುಕ್ಕೆಯ ಛತ್ರದ ಹೊರಗೆ ಚಾಪೆ ಹಾಕಿ ಮಲಗಿದ್ದ ರಾಘವೇಂದ್ರ ಕುಕ್ಕೆ ಸುಬ್ರಹ್ಮಣ್ಯ ಕೃಪೆಗೆ ಪಾತ್ರರಾಗಿ ಇಂದು ಆಕಾಶದೆತ್ತರಕ್ಕೆ ಬೆಳೆದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರಲು ಸಾಧ್ಯವಾಗದ ಸಂದರ್ಭದಲ್ಲಿ ಕ್ಷೇತ್ರದ ಸಿಬ್ಬಂದಿಗಳ ಮೂಲಕ ಭಾರತೀಯ ತಂಡದ ಹೆಸರಿನಲ್ಲಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ,ಆಸ್ಟ್ರೇಲಿಯಾ ದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತೀಯ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧ ಗೆಲುವು ಸಾಧಿಸಿದ ತಕ್ಷಣವೇ ಕುಕ್ಕೆ ಸುಬ್ರಹ್ಮಣ್ಯದ ಪ್ರೊಟೋಕಾಲ್ ಸಿಬ್ಬಂದಿ ಪ್ರಮೋದ್ ಗೆ ದೂರವಾಣಿ ಕರೆಮಾಡಿ ತಂಡದ ಹೆಸರಿನಲ್ಲಿ ಸುಬ್ರಹ್ಮಣ್ಯ ನಿಗೆ ಸೇವೆ ಸಲ್ಲಿಸಲು ತಿಳಿಸಿದ್ದಾರೆ.ತನ್ನ ಅಪಾರ ಚಾಕಚಕ್ಯತೆಯ ಥ್ರೋಡೌನ್ ಬಾಲಿಂಗ್ ನಿಂದ ವಿದೇಶೀ ತಂಡಗಳಿಂದಲೂ ಬೇಡಿಕೆ ಪಡೆಯುತ್ತಿರುವ ರಾಘವೇಂದ್ರ ಎಷ್ಟೇ ಎತ್ತರಕ್ಕೆ ಬೆಳೆದರೂ ಕುಕ್ಕೆ ಸುಬ್ರಹ್ಮಣ್ಯ ದ ನಂಟು ಮರೆತಿಲ್ಲ. ವಿದೇಶದಿಂದ ತಂಡ ವಾಪಾಸ್ಸಾಗುವ ತಕ್ಷಣವೇ ಕ್ಷೇತ್ರಕ್ಕೆ ಭೇಟಿ ನೀಡುವ ಇವರ ಬದ್ಧತೆಗೆ ಸಲಾಂ ಹೇಳಲೇ ಬೇಕು.
ವರದಿ: ಅಜಿತ್ ಕುಮಾರ್
Published by:
Seema R
First published:
January 22, 2021, 6:11 AM IST