news18-kannada Updated:December 29, 2020, 3:29 PM IST
ಪ್ರಾತಿನಿಧಿಕ ಚಿತ್ರ.
ಬೆಂಗಳೂರು; ನಗರದಲ್ಲಿ ತಾಯಿ ಮತ್ತು ಮಗು ಸೇರಿ ಮೂವರಿಗೆ ಬ್ರಿಟನ್ ರೂಪಾಂತರಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಎಲ್ಲರನ್ನೂ ಐಸೋಲೇಷನ್ ವಾರ್ಡ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಮಹಿಳೆಯ ವಾಹನ ಚಾಲಕ, ಮನೆಗೆಲಸದವರನ್ನು ಭೇಟಿ ಮಾಡಿ, ಪ್ರತ್ಯೇಕವಾಗಿರಿಸಲಾಗಿದ್ದು, ಪರೀಕ್ಷೆ ನಡೆಸಲಾಗಿದೆ ಎಂದರು.
ದೇಶದ 10 ಪ್ರಯೋಗಾಲಯಗಳಲ್ಲಿ ಈ ಮಾದರಿಯ ಪರೀಕ್ಷೆ ನಡೆಯುತ್ತಿದೆ. ಅದರಲ್ಲಿ ಎರಡು ನಮ್ಮ ರಾಜ್ಯದಲ್ಲಿವೆ. ಇದರ ಪರೀಕ್ಷೆ ಮಾಡಿದವರಲ್ಲಿ 27 ಜನರಿಗೆ ಕೋವಿಡ್ ದೃಢಪಟ್ಟಿದೆ. ವಂಶವಾಹಿ ಪರೀಕ್ಷೆ ನಂತರ ಮೂವರಿಗೆ ಬ್ರಿಟನ್ ರೂಪಾಂತರ ಸೋಂಕು ತಗುಲಿರುವುದು ಗೊತ್ತಾಗಿದೆ ಎಂದು ಮಾಹಿತಿ ನೀಡಿದರು.
ನಿಮ್ಹಾನ್ಸ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಕೋವಿಡ್ ಬಂದಿರುವ 27 ಮಂದಿಯನ್ನು ಐಸೋಲೇಷನ್ ವಾರ್ಡ್ನಲ್ಲಿ ಇರಿಸಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ ಎಂದರು.
ಈ 27 ವ್ಯಕ್ತಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಭೇಟಿ ಮಾಡಿ ಅವರನ್ನೂ ಐಸೋಲೇಷನ್ ವಾರ್ಡ್ಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರ್ಗಸೂಚಿಯಂತೆ 28 ದಿನಗಳ ಕಾಲ ಐಸೋಲೇಟ್ ಮಾಡಲಾಗುವುದು ಎಂದರು.
ಇಂಗ್ಲೆಂಡ್ನಿಂದ ಈ ವ್ಯಕ್ತಿಗಳ ಜೊತೆ ಬಂದ ಉಳಿದ ಪ್ರಯಾಣಿಕರ ವಿವರಗಳನ್ನೂ ನಾಗರಿಕ ವಿಮಾನಯಾನ ಸಚಿವಾಲಯದಿಂದ ಪಡೆದುಕೊಂಡಿದ್ದೇವೆ. ಭೇಟಿ ಮಾಡಿ ಅವರ ಆರೋಗ್ಯದ ಪರಿಸ್ಥಿತಿಯನ್ನೂ ತಿಳಿದುಕೊಳ್ಳಲಾಗಿದೆ. ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಇದನ್ನು ಓದಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಕಠಿಣ ಸಂದೇಶ ರವಾನಿಸಿದ ನ್ಯಾಯಾಲಯ
ನಾಪತ್ತೆಯಾದವರ ಬಗ್ಗೆ ಗೃಹ ಸಚಿವರೊಂದಿಗೆ ಮಾತನಾಡಿದ್ದೇನೆ. 48 ಗಂಟೆಗಳಲ್ಲಿ ಪತ್ತೆ ಮಾಡಿಕೊಡುತ್ತೇವೆ. 280ಕ್ಕೂ ಹೆಚ್ಚು ಜನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಮತ್ತೆ ಲಾಕ್ಡೌನ್ ಅಗತ್ಯವಿಲ್ಲ. ಈಗ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಸಾವಿರಾರು ಜನರ ಪೈಕಿ ಕೇವಲ ಮೂವರಿಗೆ ರೂಪಾಂತರ ಸೋಂಕು ತಗುಲಿದೆ. ಎಲ್ಲರನ್ನೂ ಐಸೋಲೇಷನ್ ಮಾಡಿದ್ದೇವೆ. ಸೋಂಕು ಹರಡದಂತೆ ಎಚ್ಚರ ವಹಿಸಿರುವುದರಿಂದ ಮತ್ತೆ ಲಾಕ್ಡೌನ್, ಸೀಲ್ ಡೌನ್ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
Published by:
HR Ramesh
First published:
December 29, 2020, 3:29 PM IST