ಬಳ್ಳಾರಿ (ಡಿ.17): ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು (3 Students) ನೀರುಪಾಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ (Hosapete) ಹೊರವಲಯದಲ್ಲಿ ನಡೆದಿದೆ. ಯಶವಂತ್, ಅಂಜಿನಿ, ಗುರುರಾಜ್ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಮೃತ ದುರ್ದೈವಿಗಳು ಹೊಸಪೇಟೆಯ ಎಂಜಿ ನಗರ (MG Nagara), ಗುಂಡಾ ಗ್ರಾಮ ಮತ್ತು ಕೊಪ್ಪಳದ (Koppala) ಹೊಸ ನಿಂಗಾಪುರದ ವಿದ್ಯಾರ್ಥಿಗಳಾಗಿದ್ದಾರೆ. ಇನ್ನು ಮೂವರು ವಿದ್ಯಾರ್ಥಿಗಳು ಈಜಿ ಹೊರಗೆ ಬಂದಿದ್ದಾರೆ.
ಈಜಲು ತೆರಳಿದ್ದ 6 ವಿದ್ಯಾರ್ಥಿಗಳು
ಕಾಲುವೆಯಲ್ಲಿ ಈಜಲು ಒಟ್ಟು 6 ವಿದ್ಯಾರ್ಥಿಗಳು ಹೋಗಿದ್ದರು. ಮೂವರು ವಾಪಾಸ್ ಬಂದ್ರೆ, ಇನ್ನೂ ಮೂವರು ನೀರು ಪಾಲಾಗಿದ್ದಾರೆ. ಹೊಸಪೇಟೆಯ ವಿಜಯನಗರ ಕಾಲೇಜ್ನಲ್ಲಿ ಇಬ್ಬರು ಪಿಯುಸಿ ಓದುತ್ತಿದ್ದರೆ, ಒಬ್ಬ ಪದವಿ ವಿದ್ಯಾರ್ಥಿಯಾಗಿದ್ದ. ಹೊಸಪೇಟೆಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬದುಕುಳಿದ ಮೂವರು ವಿದ್ಯಾರ್ಥಿಗಳನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಪೊಲೀಸರು ಕರೆತಂದಿದ್ದಾರೆ.
ಬೀದರ್ನಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು
ಇತ್ತೀಚಿಗರ ಕಾರಂಜಾ ಜಲಾಶಯದ ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ನೀರುಪಾಲಾದ ಇಬ್ಬರು ಸ್ನೇಹಿತರ ಶವ ಪತ್ತೆಯಾಗಿತ್ತು. ಕಟ್ಟಿ ತೂಗಾಂವ್ ಗ್ರಾಮದ ಯುವಕ ಬಸವರಾಜ ಬುದೆ (16) ಹಾಗೂ ಕಣಜಿ ಗ್ರಾಮದ ಸಾಯಿನಾಥ ಸಂಗನಬಶೆಟ್ಟೆ (17) ಮೃತಪಟ್ಟ ಬಾಲಕರು.
ನೀರಲ್ಲಿ ಕೊಚ್ಚಿ ಹೋದ ಯುವಕರು
ಹಳ್ಳಿಖೇಡ್ (ಬಿ) ಗ್ರಾಮದ ಶಾಲೆಯಲ್ಲಿ ಈ ಇಬ್ಬರೂ ಸ್ನೇಹಿತರು ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದರು. ಇವರು ಇನ್ನಿಬ್ಬರು ಗೆಳೆಯರೊಂದಿಗೆ ಈಜಾಡಲು ಸಮೀಪದ ಕಾರಂಜಾ ಜಲಾಶಯದ ಬಲದಂಡೆ ಕಾಲುವೆಗೆ ಭಾನುವಾರ ಹೋಗಿದ್ದರು. ಜಲಾಶಯದಿಂದ ಕಾಲುವೆಗೆ ನೀರು ಬಿಟ್ಟಿರುವ ಪರಿಣಾಮ ಹರಿವು ಹೆಚ್ಚಾಗಿತ್ತು. ನೀರಿನ ರಭಸಕ್ಕೆ ಸಿಲುಕಿ ಶಿವಲಿಂಗ ಹಾಗೂ ಸಾಯಿನಾಥ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ.
ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಸಿಪಿಐ ವೀರಣ್ಣ ದೊಡ್ಡಮನಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದರು. ಘಟನೆ ಬಗ್ಗೆ ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಹಾರಕ್ಕೆ ಶಾಸಕರ ಆಗ್ರಹ
ಮೃತರ ಎರಡು ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಸರ್ಕಾರ ಇದೊಂದು ವಿಶೇಷ ಪ್ರಕರಣವೆಂದು ಭಾವಿಸಿ ಎರಡೂ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಕೊಡಬೇಕು. ಮುಂದಿನ ದಿನಗಳಲ್ಲಿ ಕಾಲುವೆ ನೀರು ಬಿಡುವ ಮುನ್ನ ಜಿಲ್ಲಾಡಳಿತ ಜನರಿಗೆ ಮಾಹಿತಿ ನೀಡಬೇಕು ಶಾಸಕ ಈಶ್ವರ ಖಂಡ್ರೆ ಆಗ್ರಹಿಸಿದ್ದರು.
ಐವರು ವಿದ್ಯಾರ್ಥಿಗಳು ನೀರುಪಾಲು
ಕೃಷ್ಣಾ: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕೃಷ್ಣಾ ನದಿಯಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳು ಶುಕ್ರವಾರ ಮೃತಪಟ್ಟಿದ್ದಾರೆ. ಮೃತರೆಲ್ಲರೂ 13 ರಿಂದ 15 ವರ್ಷ ಒಳಗಿನವರಾಗಿದ್ದಾರೆ. ಈವರೆಗೆ ಎರಡು ಮೃತದೇಹಗಳು ಪತ್ತೆಯಾಗಿದ್ದು, ಉಳಿದವರ ದೇಹಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಯನಮಲಕುದೂರು ಬಳಿ ಸ್ನಾನಕ್ಕೆಂದು ಏಳು ವಿದ್ಯಾರ್ಥಿಗಳು ನದಿಗೆ ತೆರಳಿದ್ದರು. ಈ ವೇಳೆ ಐವರು ನೀರಿನಲ್ಲಿ ಮುಳುಗಿದ್ದಾರೆ. ಇಬ್ಬರು ಬಾಲಕರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ಈಜುಗಾರರು ಮತ್ತು ಮೀನುಗಾರರು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Mobile Ban: ರಾಜ್ಯದ ದೇವಾಲಯಗಳಲ್ಲಿ ಮೊಬೈಲ್ ಬಳಕೆಗೆ ಬ್ರೇಕ್! ಶೀಘ್ರವೇ ಫೋನ್ ಬ್ಯಾನ್ ರೂಲ್ಸ್ ಜಾರಿ!?
ಬಾಲು, ಕಾಮೇಶ್, ಮುನ್ನಾ, ಶೇಕ್ ಬಾಜಿ ಮತ್ತು ಹುಸೇನ್ ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.ಇವರೆಲ್ಲರೂ ವಿಜಯವಾಡದ ಪಟಮಾತಲಂಕಾ ಮೂಲದವರಾಗಿದ್ದು, ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 8 ಮತ್ತು 9 ನೇ ತರಗತಿಯಲ್ಲಿ ಓದುತ್ತಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ