ರಾಜ್ಯ ರಾಜಕಾರಣದಲ್ಲಿ ಪವರ್ ಆಟ; ಸಿಎಂ ರೇಸ್​ನಲ್ಲಿ ಮೂವರು

ಸಿದ್ದರಾಮಯ್ಯ ನಂತರ ಕಾಂಗ್ರೆಸ್​ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರ ಕೊಡಲು ಮೂವರು ಕಾಂಗ್ರೆಸ್ ಮುಖಂಡರು ಸಿದ್ದರಾಗಿ ತಂತ್ರಗಳನ್ನ ಹೆಣೆಯುತ್ತಿದ್ದಾರೆ.

news18
Updated:May 2, 2019, 9:39 AM IST
ರಾಜ್ಯ ರಾಜಕಾರಣದಲ್ಲಿ ಪವರ್ ಆಟ; ಸಿಎಂ ರೇಸ್​ನಲ್ಲಿ ಮೂವರು
ಸಿದ್ದರಾಮಯ್ಯ
  • News18
  • Last Updated: May 2, 2019, 9:39 AM IST
  • Share this:
ಬೆಂಗಳೂರು(ಮೇ 01): ರಾಜ್ಯ ರಾಜಕಾರಣದಲ್ಲಿ ಪವರ್ ಗೇಮ್ ಭರ್ಜರಿಯಾಗಿ ನಡೆಯುತ್ತಿದೆ. ಇದು ಕುಮಾರಸ್ವಾಮಿ ವರ್ಸಸ್ ಸಿದ್ದರಾಮಯ್ಯ ನಡುವಿನ ಗೇಮ್ ಅಲ್ಲ. ಆಪರೇಷನ್ ಕಮಲ ಮಾಡುತ್ತಿರುವ ಬಿಜೆಪಿಯ ಗೇಮ್ ಕೂಡ ಅಲ್ಲ. ದೇವೇಗೌಡರು ಆಡಲಿರುವ ಆಟವೂ ಅಲ್ಲ. ಇದು ಕಾಂಗ್ರೆಸ್​ನೊಳಗೆಯೇ ನಡೆಯುತ್ತಿರುವ ಆಂತರಿಕ ಕದನ. ಸಿಎಂ ಸ್ಥಾನಕ್ಕಾಗಿ ಮೂವರು ಪ್ರಭಾವಿ ಕಾಂಗ್ರೆಸ್ ಮುಖಂಡರ ನಡುವೆ ನಡೆಯುತ್ತಿರುವ ಪೈಪೋಟಿ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ನಂತರದಲ್ಲಿ ಕಾಂಗ್ರೆಸ್​ನ ಚುಕ್ಕಾಣಿ ಯಾರ ಕೈಗೆ ಹೋಗುತ್ತದೆ ಎಂಬುದಕ್ಕೆ ಉತ್ತರ ತಿಳಿಯಲು ಈ ಆಟ ಮುಗಿಯುವವರೆಗೂ ಕಾಯಬೇಕು. ಈ ಮೂವರೂ ಕೂಡ ಅವರವರ ಶಕ್ತ್ಯಾನುಸಾರ ಒಳಗಿಂದೊಳಗೆ ಪ್ರಹಾರ ಮಾಡುತ್ತಿದ್ದಾರೆ. ಇದು ಆರೋಪ ಪ್ರತ್ಯಾರೋಪಗಳಲ್ಲ, ಸಂಪೂರ್ಣ ರಾಜಕೀಯ ನಡೆಗಳ ಮೂಲಕ ಆಡುತ್ತಿರುವ ಚೆಸ್ ಗೇಮ್.

ಸಿದ್ದರಾಮಯ್ಯ ನಂತರದಲ್ಲಿ ಕಾಂಗ್ರೆಸ್​ನಿಂದ ಯಾರು ಸಿಎಂ ಅಭ್ಯರ್ಥಿ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಓಡಾಡುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಈಗ ಸಿಎಂ ಆಗುವ ಯಾವ ಸಂಭವವೂ ಇಲ್ಲ. ಜಿ. ಪರಮೇಶ್ವರ್ ಅವರಿಗೂ ಬಹುತೇಕ ಅವಕಾಶದ ಬಾಗಿಲು ಮುಚ್ಚಿದಂತಿದೆ. ಈ ಹಿನ್ನೆಲೆಯಲ್ಲಿ ಮೂವರು ಪ್ರಬಲ ನಾಯಕರು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟು ಆಡುತ್ತಿದ್ದಾರೆ.

1) ಡಿಕೆ ಶಿವಕುಮಾರ್:

ಎಸ್ಸೆಂ ಕೃಷ್ಣ ಸರಕಾರದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲೇ ಮಂತ್ರಿಗಿರಿ ಪಡೆದ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಅತ್ಯಂತ ಅನುಭವಿ ನಾಯಕರಲ್ಲೊಬ್ಬರು. ಸಿದ್ದರಾಮಯ್ಯ ಸಿಎಂ ಆದ ವೇಳೆಯೇ ಇವರೂ ಆ ಸ್ಥಾನದ ಮೇಲೆ ಕಣ್ಣಿಟ್ಟಿದ್ದವರು. ಈಗ ಸಾಕಷ್ಟು ಮಾಗಿದ್ದಾರೆ. ಹೆಚ್ಚು ಛಾತಿ ಬೆಳೆಸಿಕೊಂಡಿದ್ದಾರೆ. ತಂತ್ರಗಳನ್ನ ಹೆಣೆಯಲು ಕಲಿತಿದ್ದಾರೆ. ಇವರಿಗೆ ಒಕ್ಕಲಿಗ ಸಮುದಾಯದ ಜಾತಿ ಬಲ ಇದೆ. ಹಣ ಬಲ, ಅಧಿಕಾರ ಬಲ ಹಾಗೂ ಮೇಲಾಗಿ ಹೈಕಮಾಂಡ್ ಬಲ ಇವರಿಗಿದೆ. ಕಳೆದ 10 ವರ್ಷಗಳಿಂದಲೂ ಇವರು ಸಿಎಂ ಸ್ಥಾನಕ್ಕೆ ರಣತಂತ್ರ ರೂಪಿಸುತ್ತಾ ಬಂದಿದ್ದಾರೆ. ಈಗ ಮುಖ್ಯಮಂತ್ರಿ ಕುರ್ಚಿಗೆ ಇವರು ಪಂಚವಾರ್ಷಿಕ ಯೋಜನೆ ಹಮ್ಮಿಕೊಂಡಿದ್ದಾರೆ. ಅಂದರೆ, ಇನ್ನೈದು ವರ್ಷದಲ್ಲಿ ಸಿಎಂ ಆಗಲು ಪೂರಕವಾಗಿ ಏನೇನು ಮಾಡಬೇಕು ಅದೆಲ್ಲವನ್ನೂ ಸದ್ದಿಲ್ಲದೆ ಮಾಡುತ್ತಿದ್ದಾರೆ. ಹೈಕಮಾಂಡ್ ಏನೇ ಜವಾಬ್ದಾರಿ ಕೊಟ್ಟರೂ ಅದನ್ನು ಮುಂದೆ ನಿಂತು ನಿರ್ವಹಿಸುತ್ತಾರೆ. ಉತ್ತರ ಕರ್ನಾಟಕದ ಭಾಗಗಳ ಮೇಲೂ ತಮ್ಮ ಪ್ರಭಾವ ಬೀರಿ ತಮ್ಮದು ರಾಜ್ಯವ್ಯಾಪಿ ಇರುವ ನಾಯಕತ್ವ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ.

2) ಎಂಬಿ ಪಾಟೀಲ್:

ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದ ಎಂ.ಬಿ. ಪಾಟೀಲ್ ಅವರು ಅನಾಯಾಸವಾಗಿ ಮಂತ್ರಿಗಿರಿ ಪಡೆದವರು. ಲಿಂಗಾಯತ ಸಮುದಾಯದ ಇವರಿಗೂ ಜಾತಿಬಲ, ಹಣಬಲ ಇದೆ. ಸಿಎಂ ಸ್ಥಾನಕ್ಕೆ ಇವರು ಕಣ್ಣಿಟ್ಟಿದ್ದರಿಂದಲೇ ಪ್ರತ್ಯೇಕ ಲಿಂಗಾಯದ ಧರ್ಮದ ಹೋರಾಟಕ್ಕೆ ಕೈಹಾಕಿದ್ದು ಎನ್ನಲಾಗುತ್ತಿದೆ. ಲಿಂಗಾಯತರಲ್ಲಿ ಯಡಿಯೂರಪ್ಪ ಬಿಟ್ಟು ಪರ್ಯಾಯ ನಾಯಕರು ಇಲ್ಲ. ಹೀಗಾಗಿ, ಪ್ರಬಲ ಲಿಂಗಾಯತ ಸಮುದಾಯಕ್ಕೆ ಪರ್ಯಾಯ ನಾಯಕನಾಗಲು ಇವರು ಲಿಂಗಾಯತ ಹೋರಾಟಕ್ಕೆ ಬೆಂಬಲ ಕೊಟ್ಟರೆನ್ನಲಾಗಿದೆ. ವೀರಶೈವರಿಗಿಂತ ಲಿಂಗಾಯತರ ಪ್ರಮಾಣ ಹೆಚ್ಚಿರುವುದರಿಂದ ತಾನು ಲಿಂಗಾಯತರ ಪಾಲಿಗೆ ಹೀರೋ ಆಗುವ ಲೆಕ್ಕಾಚಾರ ಎಂ.ಬಿ. ಪಾಟೀಲ್ ಅವರದ್ದಾಗಿತ್ತು.

3) ಸತೀಶ್ ಜಾರಕಿಹೊಳಿ:ಜಾರಕಿಹೊಳಿ ಕುಟುಂಬದ ಅತ್ಯಂತ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರು ಮುಂಬೈ-ಕರ್ನಾಟಕದ ಭಾಗದಲ್ಲಿ ಸಾಕಷ್ಟು ಪ್ರಭಾವಶಾಲಿಯಾಗಿದ್ದಾರೆ. ಪ್ರಬಲ ವಾಲ್ಮೀಕಿ ಸಮುದಾಯದ ಬೆಂಬಲ ಇವರಿಗಿದೆ. ಡಿಕೆಶಿ, ಎಂಬಿಪಿಯಂತೆ ಇವರಿಗೂ ಹಣಬಲವಿದೆ. ಜೊತೆಗೆ, ತಮ್ಮ ವೈಯಕ್ತಿಕ ಸಂಘಟನೆಯ ಬೆಂಬಲವೂ ಇವರಿಗಿದೆ. ಮೈತ್ರಿ ಸರಕಾರ ಬಂದಾಗಿನಿಂದ ಸತೀಶ್ ಜಾರಕಿಹೊಳಿ ಅವರಲ್ಲಿ ಸಿಎಂ ಆಗುವ ಕನಸು ಚಿಗುರೊಡೆದಿದೆ. ಇನ್ನತ್ತು ವರ್ಷದಲ್ಲಿ ಮುಖ್ಯಮಂತ್ರಿಯಾಗುವ ಗುರಿ ಇಟ್ಟುಕೊಂಡಿದ್ದಾರೆ. ಹಾಗೆ ಅವರು ಹೇಳಿಕೆಯನ್ನೂ ನೀಡಿದ್ಧಾರೆ. ಸಿದ್ದರಾಮಯ್ಯ ಕೂಡ ಜಾರಕಿಹೊಳಿ ಅವರು ಸಿಎಂ ಕ್ಯಾಂಡಿಡೇಟ್ ಎಂದು ಹೇಳಿದ್ದು ಗಮನಾರ್ಹವಾಗಿದೆ.

ಮೂವರ ನಡುವೆ ಆಟ:

ರಾಜಕೀಯ ತಂತ್ರಗಾರಿಕೆಯನ್ನು ಮೈಗೂಡಿಸಿಕೊಂಡಿರುವ ಡಿಕೆಶಿ ಅವರು ತಮ್ಮ ಪ್ರತಿಸ್ಪರ್ಧಿಗಳಿಬ್ಬರನ್ನೂ ಹಣಿಯಲು ಗೇಮ್ ಪ್ಲಾನ್ ಮಾಡಿದರು. ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಹೊರಟಿದ್ದು ತಪ್ಪಾಯಿತು ಎಂದು ಡಿಕೆ ಶಿವಕುಮಾರ್ ಪದೇ ಪದೇ ಹೇಳುತ್ತಿರುವುದು ಒಂದು ತಂತ್ರವೇ ಆಗಿದೆ. ಲಿಂಗಾಯತ ಹೋರಾಟದಿಂದ ಎಂ.ಬಿ. ಪಾಟೀಲ್ ಹೀರೋ ಆಗುವುದನ್ನು ತಪ್ಪಿಸುವುದು ಇವರ ಉದ್ಧೇಶ. ಎಂಬಿಪಿ ಧರ್ಮ ಒಡೆದು ಪಾಪ ಮಾಡಿದರು ಎಂದು ಬಿಂಬಿಸುವುದು ಡಿಕೆಶಿ ಇರಾದೆಯಾಗಿರಬಹುದು.

ಹಾಗೆಯೇ ಸತೀಶ್ ಜಾರಕಿಹೊಳಿ ಅವರ ಬಲ ಕುಗ್ಗಿಸಲು ಡಿಕೆಶಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬಳಕೆ ಮಾಡಿದರು. ಬೆಳಗಾವಿಯ ರಾಜಕಾರಣದಲ್ಲಿ ಡಿಕೆಶಿ ಬೆಂಬಲದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಾರಕಿಹೊಳಿ ಕುಟುಂಬಕ್ಕೆ ಸವಾಲಾಗಿ ಪರಿಣಮಿಸಿದರು.

ಕಾಲಗತಿಸಿದಂತೆ, ಡಿಕೆಶಿ ಅವರ ತಂತ್ರಗಾರಿಕೆಯನ್ನು ಸ್ಪಷ್ಟವಾಗಿ ಅರಿತ ಎಂಬಿ ಪಾಟೀಲ್ ಮತ್ತು ಸತೀಶ್ ಜಾರಕಿಹೊಳಿ ಈಗ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಲಿಂಗಾಯತ ಧರ್ಮ ಹೋರಾಟಕ್ಕೆ ಕೈಹಾಕಿದ್ದು ತಪ್ಪೇನಿಲ್ಲ. ಇದಕ್ಕೆ ಕ್ಷಮೆ ಕೇಳುವಂಥದ್ದೇನು ಇಲ್ಲ. ತಮ್ಮದಲ್ಲದ ವಿಚಾರಕ್ಕೆ ಡಿಕೆಶಿ ಯಾಕೆ ಕೈ ಹಾಕುತ್ತಿದ್ದಾರೆ ಎಂದು ಎಂ.ಬಿ. ಪಾಟೀಲ್ ಪ್ರಶ್ನಿಸುತ್ತಿದ್ದಾರೆ.

ಇನ್ನು, ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಅವರು ಮೊದಲಿನಷ್ಟು ಆವೇಶವಾಗಿ ವರ್ತಿಸುತ್ತಿಲ್ಲ. ಡಿಕೆಶಿ ಅವರ ಸದ್ದು ಅಡಗಿಸಲು ತಮ್ಮ ಸೋದರ ರಮೇಶ್ ಜಾರಕಿಹೊಳಿ ಅವರಿಗೆ ಕುಮ್ಮಕ್ಕು ನೀಡಿದ್ದೇ ಸತೀಶ್ ಜಾರಕಿಹೊಳಿ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಈ ಮೂವರು ಪ್ರಬಲ ಸಮುದಾಯಗಳ ನಾಯಕರ ಮಧ್ಯೆ ನಡೆಯುತ್ತಿರುವ ಪೈಪೋಟಿಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲಕಾರಿಯಾಗಲಿದೆ.

(ವರದಿ: ಚಿದಾನಂದ ಪಟೇಲ್)
First published:May 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading