ಆನೇಕಲ್(ಅಕ್ಟೋಬರ್. 13): ನಂದಿನಿ ಕೆಎಂಎಫ್ ಸಂಸ್ಥೆಯ ವಿಶ್ವಾಸಾರ್ಹ ಬ್ರಾಂಡ್. ರಾಜ್ಯದಲ್ಲಿಯೇ ನಂದಿನ ಹೆಸರಿನ ಹಾಲು, ಮೊಸಲು, ತುಪ್ಪ ಸೇರಿದಂತೆ ಇತರೆ ಉತ್ಪನ್ನಗಳು ಉತ್ತಮ ಗುಣಮಟ್ಟಕ್ಕೆ ಹೆಸರು ವಾಸಿಯಾಗಿದ್ದು, ತನ್ನದೇ ಆದ ಅಸಂಖ್ಯಾತ ಗ್ರಾಹಕರು ಒಳಗೊಂಡಿದೆ. ಇಂತಹ ಬ್ರಾಂಡಿನ ಸಾವಿರಾರು ಅವಧಿ ಮೀರಿದ ಹಾಲಿನ ಪ್ಯಾಕೇಟ್ಗಳನ್ನು ರಸ್ತೆ ಬದಿಯಲ್ಲಿ ಎಸೆಯಲಾಗಿದ್ದು, ಕೊರೋನಾ ಆತಂಕದಲ್ಲಿರುವ ಸಾರ್ವಜನಿಕರಿಗೆ ಮತ್ತಷ್ಟು ಭೀತಿ ಮೂಡಿಸಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹುಸ್ಕೂರು ರಸ್ತೆ ಬದಿಯಲ್ಲಿ ಅವಧಿ ಮೀರಿದ ಸಾವಿರಾರು ನಂದಿನ ಹಾಲಿನ ಪ್ಯಾಕೇಟ್ ಎಸೆಯಲಾಗಿದೆ. ಕೊರೋನಾ ಹಾವಳಿಯಿಂದಾಗಿ ಅದೆಷ್ಟೋ ಮಂದಿ ಒಪ್ಪೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ. ಹಾಲು ಮಾರಾಟವಾಗದಿದ್ದರೆ ಬಡ ಅನಾಥ ಮಕ್ಕಳಿಗೆ ಹಾಲು ನೀಡಿದ್ದರೆ ಪುಣ್ಯ ಬರುತ್ತಿತ್ತು. ಅದು ಬಿಟ್ಟು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಏನೂ ಅರಿಯದ ಹಸು, ನಾಯಿಯಂತಹ ಮೂಕ ಪ್ರಾಣಿಗಳು ಸೇವಿಸುವುದರಿಂದ ಆನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಒಮ್ಮೆ ಹೀಗೆ ಮಾಡಿದ್ದರೆ ಪರವಾಗಿಲ್ಲ. ಆದರೆ, ಅಗ್ಗಿಂದಾಗ್ಗೆ ರಾತ್ರಿ ವೇಳೆ ಪದೇ ಪದೇ ಹಾಲಿನ ಪ್ಯಾಕೇಟ್ ಗಳನ್ನು ರಸ್ತೆ ಬದಿ ತಂದು ಎಸೆದು ಹೋಗುತ್ತಿದ್ದು, ಹಾಲಿನ ಪ್ಯಾಕೇಟ್ಗಳ ದುರ್ನಾತದಿಂದ ಸಾರ್ವಜನಿಕರಿಗೂ ರೋಗ ರುಜಿನಗಳು ಬರುವ ಸಾಧ್ಯತೆ ಇದೆ ಎಂದು ಸ್ಥಳೀಯರಾದ ಮುನಿರಾಜು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ಹೊಸಕೋಟೆ, ಮಾರತ್ ಹಳ್ಳಿ ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಸಂಚಾರ ಮಾಡುವ ಹುಸ್ಕೂರು ರಸ್ತೆ ಬದಿಯಲ್ಲಿಯೇ ಅವಧಿ ಮೀರಿದ ಸಾವಿರಾರು ಲೀಟರ್ ನಂದಿನಿ ಹಾಲಿನ ಪ್ಯಾಕೇಟ್ಗಳನ್ನು ಎಸೆಯಲಾಗಿದ್ದು, ಕೆಟ್ಟು ಗಬ್ಬುನಾರುತ್ತಿದೆ. ಇದರಿಂದ ಇಡೀ ವಾತಾವರಣ ಕಲುಷಿತಗೊಂಡಿದೆ. ಸಾಲದಕ್ಕೆ ರಸ್ತೆ ಬದಿಯಲ್ಲಿಯೇ ಸಿಕ್ಕ ಸಿಕ್ಕ ಕಡೆ ಕಸ ಕಡ್ಡಿಯನ್ನು ಸುರಿದು ಹೋಗುತ್ತಿದ್ದಾರೆ.
ಇದನ್ನೂ ಓದಿ : ವರುಣನ ಅಬ್ಬರಕ್ಕೆ ಸಾವಿನ ಮನೆಯಾದ ಕಲಬುರ್ಗಿ ; ಕೆಲವೇ ದಿನಗಳ ಅಂತರದಲ್ಲಿ 10 ಸಾವು
ಹೊಟೇಲ್, ಚಿಕನ್ ಮಟನ್ ಅಂಗಡಿ ತ್ಯಾಜ್ಯವನ್ನು ತಂದು ಸುರಿಯುವುದು ಸಾಮಾನ್ಯವಾಗಿದೆ. ಪ್ರಶ್ನೆ ಮಾಡುವವರು ಯಾರು ಇಲ್ಲದಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಬದಿಗಳಲ್ಲಿ ತ್ಯಾಜ್ಯ ಸುರಿಯುವವರ ಮೇಲೆ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ