ಬೆಂಗಳೂರು: ಅಭಿವೃದ್ದಿ, ತಂತ್ರಜ್ಞಾನ (Technology) , ಮುಗಿಲೆತ್ತರದ ಕಟ್ಟಡಗಳು, ಜನರ ಮೋಜು ಮಸ್ತಿ ಪ್ರತಿಯೊಂದು ಸಹ ಎಲ್ಲೋ ಒಂದು ಕಡೆ ನಮ್ಮಂತೆ ಬದುಕಲು ಹಕ್ಕಿರುವ ಪ್ರಾಣಿ-ಪಕ್ಷಿ ಸಂಕುಲಗಳ ಪ್ರಾಣಕ್ಕೇ ಕುತ್ತು ತಂದಿವೆ ಎನ್ನಬಹುದು. ಮೊಬೈಲ್ (Mobile) ತರಂಗಗಳು ಬಂದ ಮೇಲೆ ನಮ್ಮ ಮನೆಯ ಹತ್ತಿರದಲ್ಲಿ ಕಾಣುತ್ತಿದ್ದ ಗುಬ್ಬಚ್ಚಿಗಳು (sparrow) ಕಣ್ಮರೆಯಾಗಿವೆ, ಪ್ಲಾಸ್ಟಿಕ್‌ನಂತಹ ತ್ಯಾಜ್ಯಗಳನ್ನು ತಿಂದು ಜಾನುವಾರು, ಪ್ರಾಣಿಗಳಲ್ಲಿ ಇನ್ನಿಲ್ಲದ ಸಮಸ್ಯೆ ಶುರುವಾಗುತ್ತಿದೆ. ರಾಜಧಾನಿ ಬೆಂಗಳೂರಲ್ಲಿ ಈ ಸಮಸ್ಯೆ ತುಂಬಾ ಸಾಮಾನ್ಯವಾಗಿವೆ. ಪ್ರತಿನಿತ್ಯ ಹತ್ತಾರು ಪಕ್ಷಿಗಳು (Birds) ಸುಖಾಸುಮ್ಮನೆ ಸಾಯುತ್ತಿವೆ. ಮೊದಲಿಗೆ ಪಕ್ಷಿಗಳ ಸಾವಿಗೆ ಗಾಳಿಪಟ ಹಾರಿಸಲು ಬಳಕೆ ಮಾಡುವ 'ಮಾಂಜಾ' ದಾರ ಪ್ರಮುಖ ಕಾರಣ ಎಂದು ಅದನ್ನು ನಿಷೇಧಿಸಲಾಯಿತು. ಆದರೆ ಈ ನಿಷೇಧ ಇನ್ನೂ ಕಾಗದದ ಮೇಲೆ ಮಾತ್ರ ಇದೆ ಎನ್ನಬಹುದು.
ಸಿಲಿಕಾನ್ ಸಿಟಿಯಲ್ಲಿ ಪಕ್ಷಿಗಳ ಸಾವಿಗೆ ಕಾರಣವೇನು?
ಬೆಂಗಳೂರಿನ ಪಕ್ಷಿಗಳಿಗೆ ಮಾಂಜಾ ದಾರ ಮಾತ್ರವಲ್ಲದೇ ಇನ್ನಿತರ ಪ್ರಮುಖ ಅಂಶಗಳು ಅವುಗಳ ಸಾವಿಗೆ ಕಾರಣ ಎನ್ನಲಾಗಿದೆ. ನಗರದಲ್ಲಿ ಪಕ್ಷಿಗಳ ರಕ್ಷಣೆಯ ಕುರಿತು ಕಳೆದ ಆರು ತಿಂಗಳ ದತ್ತಾಂಶ ಮಾಂಜಾ ದಾರದ ಜೊತೆಗೆ ಎತ್ತರದ ಕಟ್ಟಡಗಳ ಗಾಜಿನ ಕಿಟಕಿ ಫಲಕಗಳು, ಪ್ಲಾಸ್ಟಿಕ್ ತ್ಯಾಜ್ಯ, ವಿದ್ಯುತ್ ತಂತಿಗಳು ಪುಟ್ಟ ಪ್ರಾಣಿಗಳಿಗೆ ಸಂಚಕಾರ ತರುತ್ತಿವೆ ಎಂದು ಬೆಂಗಳೂರು ಮಿರರ್ ಪತ್ರಿಕೆ ವರದಿ ಮಾಡಿದೆ.
ಮಾಂಜಾ ದಾರದಿಂದಲೇ ಹೆಚ್ಚು ಪಕ್ಷಿ ಸಾವು
ನಗರದ ವಿವಿಧ ಪ್ರಾಣಿ ರಕ್ಷಣಾ ಕೇಂದ್ರಗಳ ಪ್ರಕಾರ, ಬೆಂಗಳೂರಿನಲ್ಲಿ ಕಳೆದ ಆರು ತಿಂಗಳಿನಿಂದ ಸುಮಾರು 4,000 ಪಕ್ಷಿಗಳನ್ನು ರಕ್ಷಿಸಲಾಗಿದೆ. ಅಪಾಯಕಾರಿ ಮಾಂಜಾ ದಾರ ಮಾರಾಟ, ಬಳಕೆ ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದರಿಂದ ಪಕ್ಷಿಗಳ ಸಾವಿಗೆ ಈ ಅಂಶ ಇನ್ನೂ ಸಹ ಅಗ್ರಸ್ಥಾನದಲ್ಲಿದೆ.
ಇದರ ನಂತರ ಬೆಂಗಳೂರಿನಲ್ಲಿ ಗಾಜಿನ ಕಿಟಕಿಗಳಿಗೆ ಪಕ್ಷಿಗಳು ಬಡಿದುಕೊಂಡು ಗಾಯಗೊಳ್ಳುತ್ತಿವೆ, ಕೆಲವೊಮ್ಮೆ ಅವುಗಳ ಸಾವು ಕೂಡ ಸಂಭವಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಗಾಜಿನ ಕಿಟಕಿಗೆ ಡಿಕ್ಕಿ ಹೊಡೆಯುತ್ತಿವೆ ಪಕ್ಷಿಗಳು
ಬೆಂಗಳೂರಿನಲ್ಲಿ ಕಾಂಕ್ರೀಟ್ ಕಟ್ಟಡಗಳಿಗೆ ಬರವೇ ಇಲ್ಲ ಬಿಡಿ. ಅದು ಕೂಡ ಮುಗಿಲೆತ್ತರದ ಕಟ್ಟಡಗಳು. ಈ ಕಟ್ಟಡಗಳೇ ಪುಟ್ಟ ಪಕ್ಷಿಗಳ ಸಾವಿಗೆ ಕಾರಣವಾಗಿವೆ. ಕಳೆದ ಆರು ತಿಂಗಳಿನಿಂದ ನಗರದಲ್ಲಿ ಬಹುಮಹಡಿ ಕಟ್ಟಡಗಳ ಗಾಜಿನ ಕಿಟಕಿಗಳಿಗೆ ಡಿಕ್ಕಿ ಹೊಡೆದು ಕನಿಷ್ಠ 130 ಪಕ್ಷಿಗಳು ನೆಲಕ್ಕೆ ಬಿದ್ದಿವೆ ಎಂದು ವರದಿ ಹೇಳಿದೆ.
ಹೀಗೆ ಪಕ್ಷಿಗಳು ಗಾಜಿನ ಕಿಟಕಿಗೆ ಡಿಕ್ಕಿ ಹೊಡೆದಾಗಲೆಲ್ಲಾ ಅವುಗಳ ಬಾಯಿಯಲ್ಲಿ ರಕ್ತ ಬರುವುದು, ಕೊಕ್ಕು ಮುರಿದು ಹೋಗುವ ಅವಘಡಗಳು ಸಂಭವಿಸುತ್ತಲೇ ಇರುತ್ತವೆ.
ಇಂತಹ ಪ್ರಕರಣಗಳು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಬಿಟ್ಟಿವೆ ಎಂದು ಏವಿಯನ್ ಮತ್ತು ಸರೀಸೃಪ ಪುನರ್ವಸತಿ ಕೇಂದ್ರದ (ಎಆರ್‌ಆರ್‌ಸಿ) ರಕ್ಷಣಾ ವ್ಯವಸ್ಥಾಪಕಿ ಸುಬಿಕ್ಷಾ ವೆಂಕಟೇಶ್ ಹೇಳಿದರು.
ಪಕ್ಷಿಗಳಿಗೆ ಉಂಟಾಗುವ ಅಪಾಯ ತಪ್ಪಿಸಲು ಕ್ರಮ ಅಗತ್ಯ
ಕಿಟಕಿಗೆ ಪರದೆಗಳನ್ನು ಎಳೆಯುವುದು ಪಕ್ಷಿಗಳಿಗೆ ಉಂಟಾಗುವ ಗಾಯಗಳನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕೆಲವು ಕ್ರಮಗಳಾಗಿವೆ ಎಂದು ರಕ್ಷಣಾ ಕೇಂದ್ರಗಳು ತಿಳಿಸಿವೆ.
"ಗಾಜಿನ ಫಲಕಗಳು, ಹೆಚ್ಚಾಗಿ ಸುತ್ತಲಿನ ಸಸ್ಯವರ್ಗವನ್ನು ಪ್ರತಿಬಿಂಬಿಸುವುದಿಲ್ಲ. ಪಕ್ಷಿಗಳು ಅದನ್ನು ತಡೆಗೋಡೆ ಎಂದು ಅರಿಯದೇ ಅವುಗಳಿಗೆ ಬಂದು ಡಿಕ್ಕಿ ಹೊಡೆಯುತ್ತವೆ. ಒಂದೇ ಸ್ಥಳದಿಂದ ನಮಗೆ ಪದೇ ಪದೇ ಘರ್ಷಣೆ ಪ್ರಕರಣಗಳು ಬಂದರೆ, ಅದಕ್ಕೆ ಪರಿಹಾರ ಕಂಡುಕೊಳ್ಳುವಂತೆ ನಾವು ಕಟ್ಟಡ ಮಾಲೀಕರಿಗೆ ಸೂಚಿಸುತ್ತೇವೆ" ಎಂದು ಪಕ್ಷಿ ರಕ್ಷಣಾ ಕೇಂದ್ರ ತಿಳಿಸಿದೆ.
ಮಾಂಜಾ ದಾರ ಸಂಬಂಧಿ 1,567 ಪ್ರಕರಣಗಳು ದಾಖಲು
ಗಾಯಗೊಂಡ ಪಕ್ಷಿಗಳ ರಕ್ಷಣೆ ಮಾಡಿರುವ ಪ್ರಕರಣಗಳಲ್ಲಿ ಮಾಂಜಾದಾರಕ್ಕೆ ಸಿಕ್ಕಿ ಗಾಯಗೊಂಡ ಮತ್ತು ಸ್ಥಳಾಂತರಗೊಂಡ ಮರಿಗಳ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಆರು ತಿಂಗಳುಗಳಲ್ಲಿ, ಈ ಎರಡು ಕಾರಣಗಳು ಒಟ್ಟು ಶೇ. 50% ರಷ್ಟು ಹೆಚ್ಚಾಗಿವೆ. ಮಾಂಜಾ ದಾರ ಸಂಬಂಧಿ ಗಾಯಗಳಲ್ಲಿ 1,567 ಪ್ರಕರಣಗಳು ವರದಿಯಾಗಿದ್ದು, ಸ್ಥಳಾಂತರಗೊಂಡ ಪಕ್ಷಿಗಳಲ್ಲಿ 514 ಪ್ರಕರಣಗಳು ಬೆಳಕಿಗೆ ಬಂದಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ