HOME » NEWS » State » THOUSANDS GUAVA FARM WASHED OUT IN GADAG MALAPRABHA FLOOD SCT

ಗದಗದಲ್ಲಿ ಮಲಪ್ರಭಾ ನದಿ ಪ್ರವಾಹದಿಂದ ಕೊಚ್ಚಿ ಹೋಯ್ತು ಸಾವಿರಾರು ಎಕರೆ ಸೀಬೆ ತೋಟ

ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ವ್ಯಾಪ್ತಿಯಲ್ಲೇ 2 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಪೇರಳೆ ಹಣ್ಣು ಬೆಳೆಯಲಾಗುತ್ತಿದೆ. ಇಲ್ಲಿನ ಬೆಳೆ ಈ ಬಾರಿಯ ಮಲಪ್ರಭಾ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ.

news18-kannada
Updated:August 28, 2020, 8:05 AM IST
ಗದಗದಲ್ಲಿ ಮಲಪ್ರಭಾ ನದಿ ಪ್ರವಾಹದಿಂದ ಕೊಚ್ಚಿ ಹೋಯ್ತು ಸಾವಿರಾರು ಎಕರೆ ಸೀಬೆ ತೋಟ
guava
  • Share this:
ಗದಗ (ಆ. 28): ಅವರಿಬ್ಬರೂ ಕೃಷಿಯನ್ನೇ ನಂಬಿ ವಕೀಲ ವೃತ್ತಿಗೆ ಗುಡ್ ಬೈ ಹೇಳಿದ್ದರು. ಹಲವು ವರ್ಷಗಳಿಂದ ಸೀಬೆ ಹಣ್ಣು (ಪೇರಳೆ) ಬೆಳೆದು ಭರ್ಜರಿ ಲಾಭ ಪಡೆಯುತ್ತಿದ್ದರು. ಹೀಗಾಗಿ, ಈ ವಕೀಲರಲ್ಲದೆ ಸಾಕಷ್ಟು ಪದವೀಧರರು ಸೀಬೆ ಬೆಳೆ ನಂಬಿಯೇ ಕೃಷಿಯತ್ತ ಮುಖ ಮಾಡಿದ್ದರು. ಆದರೆ ಸತತ ಎರಡು ವರ್ಷಗಳಿಂದ ಮಲಪ್ರಭಾ ನದಿಯ ಪ್ರವಾಹ‌ಕ್ಕೆ ಇವರ ಬದುಕು ಮೂರಾಬಟ್ಟೆಯಾಗಿದೆ. ಜಮೀನಲ್ಲಿ ಬೆಳೆದ ಪೇರಳೆ ಬೆಳೆ ಎಲ್ಲವೂ ನೀರು ಪಾಲಾಗಿದೆ.

ಈ ಘಟನೆ ನಡೆದಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ.  ಕೊಣ್ಣೂರ, ವಾಸನ, ಬೂದಿಹಾಳ ಗ್ರಾಮಗಳ ರೈತರ ಬದುಕು ಮಲಪ್ರಭಾ ರಕ್ಕಸ ಪ್ರವಾಹಕ್ಕೆ ಕೊಚ್ಚಿ ಹೋಗಿ, ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಕೊಣ್ಣೂರ ಗ್ರಾಮದ ವ್ಯಾಪ್ತಿಯಲ್ಲೇ 2 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಪೇರಳೆ ಹಣ್ಣು ಬೆಳೆಯಲಾಗುತ್ತಿದೆ. ಈ ಮಣ್ಣಿನಲ್ಲಿ ರುಚಿಕಟ್ಟಾದ ಪೇರಳೆ ಬೆಳೆಯಲಾಗುತ್ತಿದೆ. ಹೀಗಾಗಿ ಇಲ್ಲಿನ ಪೇರಳೆ ಹಣ್ಣಿಗೆ ಭಾರಿ ಬೇಡಿಕೆ ಇದೆ. ಕಾಶ್ಮೀರ ಸೇರಿ ಹಲವು ರಾಜ್ಯಗಳಿಗೆ ಕೊಣ್ಣೂರ ಪೇರಳೆ ರಫ್ತು ಮಾಡಲಾಗುತ್ತಿದೆ.‌ ಅಷ್ಟೇ ಅಲ್ಲ ಗಲ್ಫ್‌ ರಾಷ್ಟ್ರಗಳಿಗೂ ಇಲ್ಲಿನ ಪೇರಳೆ ಹಣ್ಣು ರಫ್ತು ಮಾಡಲಾಗುತ್ತಿತ್ತು. ಅಷ್ಟೊಂದು ಗುಣಮಟ್ಟದ ಹಣ್ಣು ಬೆಳೆಯಲಾಗುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಈ ಹಣ್ಣು ಬೆಳೆಗಾರರಿಗೆ ಸಮಸ್ಯೆ ಹೆಚ್ಚಾಗಿದೆ. ನವಿಲು ತೀರ್ಥ ಡ್ಯಾಂನಿಂದ ಅಪಾರ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ರೈತರ ಬದುಕೇ ಮಲಪ್ರಭಾ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದೆ. ಪದೇ ಪದೇ ಹೀಗೆ ಪ್ರವಾಹ ಬಂದ್ರೆ ನಾವು ಬದುಕೋದಾದ್ರೂ ಹೇಗೆ ಅಂತ ಗೋಳಾಡುತ್ತಿದ್ದಾರೆ.

ಸೀಬೆ ತೋಟ ಮಾಡೋದು ಅಂದರೆ ಸುಮ್ನೆ ಅಲ್ಲ. ಒಳ್ಳೆಯ ಲಾಭ ಇದೆ ಅಂತ ನಂಬಿ ವಕೀಲರು, ಪದವೀಧರರು ವೃತ್ತಿ ಬದುಕು ಬಿಟ್ಟು ಪೇರಳೆ ತೋಟ ಮಾಡಿದ್ದಾರೆ. ಅದಕ್ಕಾಗಿ ಲಕ್ಷಾಂತರ ಸಾಲ ಮಾಡಿದ್ದಾರೆ. ಎರಡು ವರ್ಷದ ಹಿಂದೆ ಒಳ್ಳೆಯ ಲಾಭ ಕೂಡ ಪಡೆದಿದ್ದಾರೆ. ನದಿ ತೀರದಲ್ಲೇ ಜಮೀನುಗಳು ಇರೋದರಿಂದ ಮಲಪ್ರಭೆ ನಮಗೆ ವರವಾಗ್ತಾಳೆ ಅಂತ ರೈತರು ಅಂದುಕೊಂಡಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ರೈತರ ಮೇಲೆ ಮುನಿಸಿಕೊಂಡಿದ್ದಾಳೆ. ವರವಾಗಿದ್ದ ಮಲಪ್ರಭಾ ಈಗ ರೈತರ ಪಾಲಿಗೆ ಶಪವಾಗಿ ಮಾರ್ಪಟ್ಟಿದ್ದಾಳೆ. ಮೊನ್ನೆ ಬಂದ ಪ್ರವಾಹ‌ ಕೊಣ್ಣೂರ ಗ್ರಾಮದ ಸುತ್ತಲಿನ 2 ಸಾವಿರಕ್ಕೂ ಅಧಿಕ ಎಕರೆ ಪೇರಳೆ ತೋಟಗಳು ಜಲಪ್ರವಾಹದ ತೇಲಿ ಹೋಗಿವೆ. ಈಗ ಗಿಡದಲ್ಲಿ ಇದ್ದ ಹಣ್ಣುಗಳು ನೆಲಕ್ಕೆ ಉರುಳಿವೆ. ಇನ್ನೂ ಜಮೀನುಗಳಲ್ಲಿ ನೀರು ನಿಂತಿವೆ. ಹಣ್ಣುಗಳು ಕೊಳೆಯುತ್ತಿವೆ. ಇನ್ನೂ ವರ್ಷದಲ್ಲಿ ಮೂರ್ನಾಲ್ಕು ಬಾರಿ ಪ್ರವಾಹ ಬಂದ್ರೆ ತೋಟದಲ್ಲಿ ನೀರು ನಿಂತು ಇಡೀ ಗಿಡಗಳೇ ಹಾಳಾಗುತ್ತವೆ. ಹೀಗಾಗಿ ರೈತರು ಲಕ್ಷಾಂತರ ಸಾಲ ಮಾಡಿ ಕಷ್ಟಪಟ್ಟು ಬೆಳೆದ ಹಣ್ಣುಗಳ ಸ್ಥಿತಿ ನೋಡಿ ರೈತರು ಕಂಗಾಲಾಗಿದ್ದಾರೆ...
Youtube Video

ರೈತರಿಗೆ ಮಳೆ ಬಂದರೂ ಕಷ್ಟ, ಬರದೇ ಇದ್ದರೂ ಕಷ್ಟ. ಸತತ ಬರದಿಂದ ಬೆಂಡಾದ ರೈತರಿಗೆ ಎರಡು ವರ್ಷ ಚೆನ್ನಾಗಿ ಮಳೆಯಾಗಿದೆ ಅನ್ನೋ ಖುಷಿ ಇದೆ. ಆದರೆ, ಮಲಪ್ರಭಾ ನದಿಯ ಆರ್ಭಟಕ್ಕೆ ರೈತರ ಪೇರಳೆ ಹಣ್ಣಿನ ತೋಟಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ಪ್ರವಾಹ ಅನ್ನೋ ರಕ್ಕಸ ರೈತರ ಬದುಕಿಗೇ ಕೊಳ್ಳಿ ಇಟ್ಟಿದೆ. ಜಿಲ್ಲಾಡಳಿತ, ಸರ್ಕಾರ ಈಗಲಾದ್ರೂ ಬದುಕು ಕಳೆದುಕೊಂಡ ರೈತರ ನೆರವಿಗೆ ಬರಬೇಕಾಗಿದೆ.
Published by: Sushma Chakre
First published: August 28, 2020, 8:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories