Mysore Dasara: ಅಭಿಮನ್ಯು ಸಾರಥ್ಯದಲ್ಲೇ ಅಂಬಾರಿ ಮೆರವಣಿಗೆ, ದಸರಾ ಗಜಪಡೆಗಳ ಪಟ್ಟಿ ಬಿಡುಗಡೆ

ಈ ಬಾರಿ ನಾಯಕ ಅಭಿಮನ್ಯು ಸೇರಿದಂತೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ 14 ಆನೆಗಳ (Elephant) ಪಟ್ಟಿಯನ್ನು ಮೈಸೂರು ವನ್ಯಜೀವಿ ವಿಭಾಗ ಬಿಡುಗಡೆ ಮಾಡಿದೆ. ಇದರಲ್ಲಿ ಅಭಿಮನ್ಯು ಜೊತೆಗೆ 4 ಹೆಣ್ಣಾನೆಗಳು ಹಾಗೂ ಇತರೇ ಹಿರಿಯ, ಕಿರಿಯ ಆನೆಗಳು ಭಾಗಿಯಾಗಲಿವೆ.

ದಸರಾ ಗಜಪಡೆ ನಾಯಕ ಅಭಿಮನ್ಯು (ಕೃಪೆ: Internet)

ದಸರಾ ಗಜಪಡೆ ನಾಯಕ ಅಭಿಮನ್ಯು (ಕೃಪೆ: Internet)

  • Share this:
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Myosre Dasara) ಮಹೋತ್ಸವಕ್ಕೆ ಸಿದ್ಧತೆ ಆರಂಭವಾಗಿದೆ. 2022ರ ದಸರಾ ಮಹೋತ್ಸವದಲ್ಲಿ ಅಂಬಾರಿ (Ambari) ಮೆರವಣಿಗೆ ಗಜರಾಜ ಅಭಿಮನ್ಯು (Abhimanyu) ನೇತೃತ್ವದಲ್ಲೇ ನಡೆಯಲಿದೆ. ಈ ಬಾರಿ ನಾಯಕ ಅಭಿಮನ್ಯು ಸೇರಿದಂತೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ 14 ಆನೆಗಳ (Elephant) ಪಟ್ಟಿಯನ್ನು ಮೈಸೂರು ವನ್ಯಜೀವಿ ವಿಭಾಗ ಬಿಡುಗಡೆ ಮಾಡಿದೆ. ಇದರಲ್ಲಿ ಅಭಿಮನ್ಯು ಜೊತೆಗೆ 4 ಹೆಣ್ಣಾನೆಗಳು ಹಾಗೂ ಇತರೇ ಹಿರಿಯ, ಕಿರಿಯ ಆನೆಗಳು ಭಾಗಿಯಾಗಲಿವೆ. ನಾಳೆ ಅಂದರೆ ಆಗಸ್ಟ್ 7 ರಂದು ಮೈಸೂರು ಜಿಲ್ಲೆ ಹುಣಸೂರು (Hunsur) ತಾಲೂಕಿನ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯ ದೊಡ್ಡಹೆಜ್ಜೂರು ಗ್ರಾಮದಿಂದ ಗಜಪಯಣ ಆರಂಭವಾಗಲಿದೆ. ಮೊದಲ ತಂಡದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸಲಿವೆ.

ಅಭಿಮನ್ಯು ನೇತೃತ್ವದಲ್ಲೇ ಅಂಬಾರಿ ಮೆರವಣಿಗೆ

ಈ ಬಾರಿಯೂ ಗಜನಾಯಕ ಅಭಿಮನ್ಯು ನೇತೃತ್ವದಲ್ಲೇ ವಿಶ್ವವಿಖ್ಯಾತ ಅಂಬಾರಿ ಮೆರವಣಿಗೆ ನೆರವೇರಲಿದೆ. 57 ವರ್ಷದ ಅಭಿಮನ್ಯು ಹಿರಿಯ ಆನೆಯಾಗಿದ್ದು, ಈಗಾಗಲೇ ಅಂಬಾರಿ ಹೊತ್ತು ಅನುಭವ ಇದೆ. ಅಲ್ಲದೇ ಮಾವುತನ ಮಾತು ಕೇಳುವ ಆನೆ ಅಂತಾನೇ ಹೆಸರು ಪಡೆದಿರುವ ಅಭಿಮನ್ಯು, ಇತರೇ ಆನೆಗಳನ್ನು ಸಂಭಾಳಿಸಲಿದೆ.



ಗಜಪಡೆಯಲ್ಲಿ ಯಾರ್ಯಾರು ಇದ್ದಾರೆ?

ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಈ ಬಾರಿ 14 ಆನೆಗಳು ಇರಲಿವೆ. ಅಂಬಾರಿ ಹೊರುವ ಅಭಿಮನ್ಯು(57), ಭೀಮ (22), ಗೋಪಾಲಸ್ವಾಮಿ (39), ಅರ್ಜುನ (63), ವಿಕ್ರಮ (59), ಧನಂಜಯ (44), ಕಾವೇರಿ (45), ಗೋಪಿ (41), ವಿಜಯ (63), ಚೈತ್ರ (49), ಲಕ್ಷ್ಮೀ (21) ಸೇರಿದಂತೆ 14 ಆನೆಗಳಿವೆ.

ಇದನ್ನೂ ಓದಿ: DK Shivakumar: ಸಿದ್ದರಾಮೋತ್ಸವಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್‌ನಲ್ಲೇ ಪ್ಲಾನ್! ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ ಡಿಕೆಶಿ?

ಗಜಪಡೆಯಲ್ಲಿ ಹಲವು ವಿಶೇಷತೆ

ಇನ್ನು ಇದರಲ್ಲಿ ಬಂಡೀಪುರದ ರಾಮಪುರ ಆನೆ ಶಿಬಿರದ ಪಾರ್ಥಸಾರಥಿ (18), ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದ ಶ್ರೀರಾಮ (40) ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದ ಮಹೇಂದ್ರ (39) ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿವೆ. ಇದರಲ್ಲಿ ಪಾರ್ಥಸಾರಥಿ ಅತಿ ಚಿಕ್ಕ ವಯಸ್ಸಿನ ಆನೆಯಾಗಿದೆ.

ನಾಳೆ ಗಜಪಡೆಗಳ ಆಗಮನ

ಆಗಸ್ಟ್ 7 ರಂದು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯ ದೊಡ್ಡಹೆಜ್ಜೂರು ಗ್ರಾಮದಿಂದ ಗಜಪಯಣ ಆರಂಭವಾಗಲಿದೆ. ಮೊದಲ ತಂಡದಲ್ಲಿ  9 ಆನೆಗಳು ಮೈಸೂರಿಗೆ ಆಗಮಿಸಲಿವೆ. ಮೊದಲ ಹಂತದಲ್ಲಿ ಅರ್ಜುನ ಹಾಗೂ ಅಭಿಮನ್ಯು ಆನೆ ಸೇರಿದಂತೆ 9 ಆನೆಗಳು ಆಗಸ್ಟ್ 7ರ ಭಾನುವಾರ ಬೆಳಗ್ಗೆ 9 ಗಂಟೆ 01 ನಿಮಿಷದಿಂದ 9 ಗಂಟೆ 35 ನಿಮಿಷದ ಶುಭ ಮುಹೂರ್ತದಲ್ಲಿ ವೀರನ ಹೊಸಹಳ್ಳಿಯಲ್ಲಿ ಪೂಜೆ ಸಲ್ಲಿಸುವ ಜೊತೆಗೆ ಗಜ ಪಯಣ ನಡೆಸಲಿವೆ.

ದಸರಾ ಆನೆಗಳಿಗೆ ಅದ್ಧೂರಿ ಸ್ವಾಗತ

ಗಜ ಪೂಜೆಯ ನಂತರ ಮೊದಲ ಹಂತದಲ್ಲಿ ಆಗಮಿಸುವ 9 ಅನೆಗಳ ಗಜ ಪಡೆಯನ್ನು ಲಾರಿಗಳ ಮೂಲಕ ಮೈಸೂರಿನ ಅರಣ್ಯ ಭವನಕ್ಕೆ ಕರೆತರಲಾಗುವುದು. ಅರಣ್ಯ ಭವನದಲ್ಲಿ 3 ದಿನಗಳ ತಾತ್ಕಾಲಿಕ ವಾಸ್ತವ್ಯ ಹೂಡಲಿರುವ ಗಜಪಡೆಯನ್ನು ಆಗಸ್ಟ್ 10 ರಂದು ಅರಣ್ಯ ಭವನದಲ್ಲಿ ಪೂಜೆ ಸಲ್ಲಿಸಿ ಅರಮನೆಗೆ ಕರೆತಂದು ಅಲ್ಲಿ ಅರಮನೆ ಮುಂಬಾಗದ ಜಯ ಮಾರ್ತಾಂಡ ದ್ವಾರದಲ್ಲಿ ಶುಭ ಲಗ್ನದಲ್ಲಿ ಪೂಜೆ ಸಲ್ಲಿಸಿ ಅರಮನೆ ಪ್ರವೇಶ ಮಾಡಿಕೊಳ್ಳಲಾಗುವುದು.

ಇದನ್ನೂ ಓದಿ: Srirangapatna: ಶ್ರೀರಂಗಪಟ್ಟಣ ಮಸೀದಿ ವಿವಾದಕ್ಕೆ ಮತ್ತೆ ಜೀವ, ಮುಸ್ಲಿಮರಿಂದ ನಾಳೆ ಬೃಹತ್ ಜಾಥಾ

ಆನೆ ಸ್ವಾಗತಕ್ಕೆ ಗಣ್ಯರ ದಂಡು

ಇನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಹಂಗಾಮಿ ಮೇಯರ್ ಸುನಂದಾ ಪಾಲನೇತ್ರ, ಶಾಸಕ ಹೆಚ್.ಪಿ.ಮಂಜುನಾಥ್ ಸೇರಿದಂತೆ ಇನ್ನಿತರರು ಈ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Published by:Annappa Achari
First published: