ಬೆಂಗಳೂರು(ಡಿ.24): ಕಾರಣಾಂತರಗಳಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ-ಬಿಎಂಟಿಸಿ ಕೋಟ್ಯಾಂತರ ರೂಪಾಯಿ ನಷ್ಟದಲ್ಲಿ ಮುಳುಗಿದೆ. ಭಾರೀ ನಷ್ಟದಿಂದ ಅಕ್ಷರಶಃ ಮುಳಗಿದ ಹಡಗಿನಂತಾಗಿದೆ ಬಿಎಂಟಿಸಿ ಸಂಸ್ಥೆ. ಪರಿಸ್ಥಿತಿ ಹೀಗಿದ್ದರೂ ಸಹ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ನೆರವಿಗೆ ಬರುತ್ತಿಲ್ಲ ಎನ್ನಲಾಗಿದೆ. ಸಾರಿಗೆ ಸಚಿವರಾಗಿರುವ ಲಕ್ಷ್ಮಣ ಸವದಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಬಿಎಂಟಿಸಿ ಸಂಸ್ಥೆಗೆ ಇಂತಹ ದಯನೀಯ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಚಿವರ ನಿರ್ಲಕ್ಷ್ಯ ಹಾಗೂ ಅನಗತ್ಯ ನಿರ್ಧಾರಗಳಿಂದ ಬಿಬಿಎಂಟಿ ಬರ್ಬಾದ್ ಆಯ್ತಾ ಎಂಬ ಅನುಮಾನವೂ ಸಹ ಮೂಡಿದೆ.
ಯಾಕೆಂದರೆ ನೌಕರರಿಗೆ ಸಂಬಳ ನೀಡಲು, ಸ್ಟೇರ್ ಪಾರ್ಟ್ಸ್, ಬ್ಯಾಟರಿ, ಡೀಸೆಲ್ ಖರೀದಿ ಮಾಡಲು ಸದ್ಯಕ್ಕೆ ಬಿಎಂಟಿಸಿ ಬಳಿ ಹಣ ಇಲ್ಲವಂತೆ. ಹೌದು, ಇದು ಸದ್ಯದ ಬಿಎಂಟಿಸಿ ಪರಿಸ್ಥಿತಿಯಾಗಿದೆ ಎಂದು ತಿಳಿದು ಬಂದಿದೆ. ಹಣದ ಕೊರತೆಯಿಂದಾಗಿ ಬಿಎಂಟಿಸಿ ಅಧಿಕಾರಿಗಳು ಸಾಲ ಪಡೆಯಲು ಬಿಎಂಟಿಸಿ ಬಸ್, ಡಿಪೋ, ಟಿಟಿಎಂಸಿಗಳನ್ನು ಅಡಮಾನ ಇಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೊಸ ಸ್ವರೂಪದ ಕೊರೋನಾ ವೈರಸ್ ಭೀತಿ; ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಡೆತ
ಆರ್ಥಿಕ ಸಂಕಷ್ಟದಿಂದಾಗಿ 230 ಕೋಟಿ ರೂಪಾಯಿ ಸಾಲ ಪಡೆಯಲು ಬಿಎಂಟಿಸಿ ಅಧಿಕಾರಿಗಳು ಬ್ಯಾಂಕ್ಗಳಿಗೆ ಲಗ್ಗೆ ಇಟ್ಟಿದ್ದಾರೆ. ಬಸ್, ಭೂಮಿ ಮತ್ತು ಟಿಟಿಎಂಸಿಗಳನ್ನ ಅಡಮಾನವಿಟ್ಟು ಸಾಲ ಪಡೆದುಕೊಳ್ಳಲು ಮುಂದಾಗಿದ್ದಾರೆ. ಬಿಎಂಟಿಸಿ ಅಧಿಕಾರಿಗಳು ಕಡಿಮೆ ಬಡ್ಡಿದರಲ್ಲಿ ಸಾಲ ನೀಡುವ ಬ್ಯಾಂಕ್ಗಳ ಬಾಗಿಲು ತಟ್ಟಿದ್ದಾರೆ.
ನಮ್ಮ ಷರತ್ತುಗಳ ಅನ್ವಯ ಆಸಕ್ತ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಗಳು ಟೆಂಡರ್ನಲ್ಲಿ ಭಾಗವಹಿಸಿ ಕಡಿಮೆ ಬಡ್ಡಿದರದ ಸಾಲ ನೀಡುವಂತೆ ಬಿಎಂಟಿಸಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
ನಷ್ಟದ ಸುಳಿಯಲಿ ಬಿಎಂಟಿಸಿ :
2012-13ನೇ ಸಾಲು- 147 ಕೋಟಿ ನಷ್ಟ
2013-14ನೇ ಸಾಲು- 147 ಕೋಟಿ ನಷ್ಟ
2014-15ನೇ ಸಾಲು- 64 ಕೋಟಿ ನಷ್ಟ
2015-16ನೇ ಸಾಲು- 13 ಕೋಟಿ ನಷ್ಟ
2016-17ನೇ ಸಾಲು- 260 ಕೋಟಿ ನಷ್ಟ
2017-18ನೇ ಸಾಲು- 216 ಕೋಟಿ ನಷ್ಟ
2018-19ನೇ ಸಾಲು- 300 ಕೋಟಿ ನಷ್ಟ
2020ನೇ ಸಾಲಿನಲ್ಲಿ 500 ಕೋಟಿ ನಷ್ಟವಾಗಿದೆ.
2020ನೇ ವರ್ಷದಲ್ಲಿ ಬಿಎಂಟಿಸಿ ಸಂಸ್ಥೆಗೆ ಅತೀ ಹೆಚ್ಚು ನಷ್ಟ ಸಂಭವಿಸಿದೆ. ಇದಕ್ಕೆ ಮುಖ್ಯ ಕಾರಣ ಕೊರೋನಾ ಮತ್ತು ಲಾಕ್ಡೌನ್ ಆಗಿದೆ ಎನ್ನಲಾಗಿದೆ. ಈ ವರ್ಷದ ಮಾರ್ಚ್ ತಿಂಗಳಿನಲ್ಲೇ ಕೊರೋನಾ ಅಟ್ಟಹಾಸ ಮಿತಿಮೀರಿತ್ತು. ಹೀಗಾಗಿ ಸಂಪೂರ್ಣ ಲಾಕ್ಡೌನ್ ಮಾಡಲಾಗಿತ್ತು. ಇದರಿಂದಾಗಿ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಬ್ಧಗೊಂಡು, ನೆಲಕಚ್ಚಿದವು. ಈ ಕಾರಣದಿಂದಾಗಿ ಈ ವರ್ಷ ಲಾಭದ ಬದಲಾಗಿ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ