ಬಳಸಿ ಬಿಸಾಡುವ ವಸ್ತುಗಳಿಗೆ ಹೊಸ ರೂಪ ಕೊಡ್ತಾರೆ ಈ ಮಹಿಳೆ

news18
Updated:January 12, 2018, 7:53 PM IST
ಬಳಸಿ ಬಿಸಾಡುವ ವಸ್ತುಗಳಿಗೆ ಹೊಸ ರೂಪ ಕೊಡ್ತಾರೆ ಈ ಮಹಿಳೆ
news18
Updated: January 12, 2018, 7:53 PM IST
- ರಾಜೇಂದ್ರ ಸಿಂಗನಮನೆ, ನ್ಯೂಸ್ 18 ಕನ್ನಡ  

ಶಿರಸಿ ( ಜ.12) : ಬಳಸಿ ಬಿಸಾಡುವ ವಸ್ತುಗಳು ಕೈಚಳಕದ ಮೂಲಕ ಜೀವ ಪಡೆಯುತ್ತವೆ. ಕಾಲಡಿ ಕಸವಾಗುವ ವಸ್ತುಗಳು ಕೊರಳಿನ ಆಭರಣವಾಗುತ್ತವೆ. ಒಣಗಿದ ಬೀಜಗಳೂ ಕಲಾರೂಪದ ಫಲ ನೀಡುತ್ತವೆ. ಹೀಗೆ ನಿರುಪಯುಕ್ತ ಸಾಮಗ್ರಿಗಳನ್ನು ಕುಶಲತೆಯಲ್ಲಿ ಬಂಧಿಸಿ ಅದಕ್ಕೊಂದು ಕಲಾರೂಪ ನೀಡುತ್ತ ಕರಕುಶಲ ವಸ್ತುಗಳ ರಚನೆಯಲ್ಲಿ ಸಾಧನೆ ಮಾಡುತ್ತಿರುವ ಗ್ರಾಮೀಣ ಮಹಿಳೆಯೊಬ್ಬರು ಸಮಾಜದ ಇತರರಿಗೂ ಮಾದರಿಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲಗಾರ ಒಡ್ಡು ಗ್ರಾಮದ ಕೃಷಿ ಮೂಲದ ಮಹಿಳೆ ಕುಸುಮ ಭಟ್ಟರದ್ದು 73ರ ಪ್ರಾಯದಲ್ಲೂ ಬತ್ತದ ಉತ್ಸಾಹ. ನಿರುಪಯುಕ್ತ ವಸ್ತುಗಳ ಪಟ್ಟಿಗೆ ಸೇರಿರುವ ಅಡಕೆ ಸಿಪ್ಪೆ, ಹೊಂಬಾಳೆ, ಮೆಣಸಿನ ಗುಂಜು, ಬಳಸಿ ಬೀಸಾಡುವ ತರಕಾರಿ ಬೀಜ, ಟೂತ್‍ಪೇಸ್ಟ್ , ಟ್ಯೂಬ್‍ಗಳು ಇವರ ಕೈಕಾರ್ಯದ ಮೂಲಕ  ಕೌಶಲ್ಯಯುತ ವಸ್ತುಗಳಾಗಿ ಮಾರ್ಪಡುತ್ತವೆ. ಅನುಪಯುಕ್ತ ವಸ್ತುಗಳು ಕುಸುಮ ಅವರ ಕುಶಲತೆಯ ಗರಡಿಯಲ್ಲಿ ಪಳಗಿ ಹೊಸ ರೂಪ ಪಡೆಯುತ್ತವೆ.

ಕಸವೇ ಇಲ್ಲಿ ರಸ...

ನಿರುಪಯುಕ್ತ ವಸ್ತುಗಳು ಕುಸುಮ ಭಟ್ಟರ ಕುಶಲಕಲೆಯ ಜೀವಾಳವಾಗಿವೆ. ಮನೆಯ ಒಳಹೊರಗೆ ಸಿಗುವ ಅನುಪಯುಕ್ತ ವಸ್ತುಗಳು ಇವರ ಕಲೆಗೆ ಪೂರಕವಾಗಿವೆ. ಹುಲ್ಲಿನಿಂದ ಭತ್ತದವರೆಗೆ, ಹೊಂಬಾಳೆಯಿಂದ ಅಡಕೆ ವರೆಗೆ ಎಲ್ಲವೂ ಇವರ ಕಲಾ ಶ್ರೀಮಂತಿಕೆಯನ್ನು ಸಮೃದ್ಧಗೊಳಿಸುತ್ತವೆ. ಹೊಂಬಾಳೆಯಿಂದ ಹೊರೆಬುಟ್ಟಿ, ವರಗಾಯಿ, ಗಧೆ, ಬಿತ್ತಕ್ಕಿ ಬಟ್ಟಲು, ಪಂಚಪೌಳಿ, ಅಕ್ಷತೆ ಬಟ್ಟಲು, ಉಪಚಾರ ಬಟ್ಟಲು, ದೀಪದ ಬುಡ್ಡಿ, ತುಪ್ಪದ ಶಮೆ, ತಾಂಬೂಲ ಬಟ್ಟಲು, ಗೊಂಬೆ, ಕುಂಭ, ನವಿಲುಗಳನ್ನು ತಯಾರಿಸಿದ್ದಾರೆ. ತರಕಾರಿಗಳಾದ ಮೊಗೆಕಾಯಿ, ಗೋವೆ ಬೀಜಗಳಿಂದ ಮೊಗ್ಗಿನ ಜಡೆ, ಸೊಂಟದಪಟ್ಟಿ, ಬಾಜರ್‍ಬಂಧಿ, ಕಿವಿ ಓಲೆ, ಕೆನ್ನೆ ಸರಪಳಿ, ಬೋಚಲಮುತ್ತು, ದಂಡೆ ಮಾಡಿರುವ ಇವರು ಭತ್ತದಿಂದ ಮೂರು ಹೆಡೆಯ ನಾಗರವನ್ನು ರಚಿಸಿ ಬೆರಗು ಮೂಡಿಸಿದ್ದಾರೆ.

ನಿರ್ಲಕ್ಷ್ಯವೇ?.....ಲಕ್ಷ್ಯ...

ಇತರರು ನಿರ್ಲಕ್ಷ್ಯ ಮಾಡಿದ ವಸ್ತುಗಳನ್ನು ತಾವು ನಿರ್ಲಕ್ಷಿಸದೆ ಅದನ್ನೇ ಬಂಡವಾಳ ಮಾಡಿ `ಲಕ್ಷ'ವನ್ನಾಗಿಸಿಕೊಂಡ ಕುಸುಮ ಭಟ್ಟರು, ಕೃಷಿಕರಿಂದ ನಿರ್ಲಕ್ಷಕ್ಕೊಳಗಾದ ಅಡಕೆ ಸಿಪ್ಪೆಗೂ ಕಲಾಸಿರಿವಂತಿಯಲ್ಲಿ ಮರುಜೀವ ನೀಡಿದ್ದಾರೆ. ಅತ್ಯಾಕರ್ಷಕ ಮಾಲೆ, ವಿವಿಧಾಕೃತಿಯ ಗಿಡಗಳಾಗಿ ಅಡಕೆ ಸಿಪ್ಪೆ ಮಾರ್ಪಾಟಾಗಿದೆ.  ಮಾತ್ರೆಯ ಹೊರ ಕವಚವನ್ನು ಬಳಸಿ ಮನಸ್ಸಿಗೆ ಮುದ ನೀಡುವ ಹೂವನ್ನಾಗಿಸಿದ್ದಾರೆ. ಸಿಗರೇಟ್ ಪ್ಯಾಕ್‍ನಿಂದ ನಾಯಿ, ಹುಲ್ಲು ಕಡ್ಡಿಯಿಂದ ಹೂಬುಟ್ಟಿ, ಮಾಲೆ, ಬಟ್ಟಲು ಸೇರಿದಂತೆ ಗೀಚಿ ಬದಿಗೆಸೆದ ಬೆಂಕಿ ಕಡ್ಡಿಯಿಂದ ಕೊರಳ ಮಾಲೆ, ಕಸಗೆ ಹರಳಿನಿಂದ ಕುಕ್ಕೆಗಳನ್ನು ಮಾಡಿ ಗಮನ ಸೆಳೆದಿದ್ದಾರೆ.

ಕುಸುಮಾ ಭಟ್ಟರ  ಕೈಯಲ್ಲಿ ಅರಳಿದ ಬಾತುಕೋಳಿ


ಇವರೇನು ಈ ಕಲೆಗಾಗಿಯೇ ಸಮಯ ಮೀಸಲಿಟ್ಟವರಲ್ಲ. ಮನೆಯ ಕೆಲಸದ ಬಿಡುವಿನ ವೇಳೆಯಲ್ಲಿ ಕೈಕೆಲಸ ಮಾಡಿ ಕರಕುಶಲತೆಯ ತವರನ್ನು ನಿರ್ಮಿಸಿಕೊಂಡಿದ್ದಾರೆ. 500ಕ್ಕೂ ಹೆಚ್ಚು ಬಗೆಬಗೆಯ ಕರಕುಶಲ ಉತ್ಪನ್ನ ಇವರಲ್ಲಿದೆ. ಉತ್ಸವ, ಮೇಳಗಳ ಸಂದರ್ಭದಲ್ಲಿ ಇವರು ರಚಿಸಿರುವ ವಸ್ತುಗಳ ಪ್ರದರ್ಶನ ನಡೆಸುವ ಪರಿಣಾಮ ಜನಾಕರ್ಷಣೆ ಪಡೆದಿದ್ದಾರೆ. ಇವರ ಕರಕುಶಲತೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು ಸ್ವರ್ಣವಲ್ಲೀ ಕೃಷಿ ಜಯಂತಿ, ಮಾರಿಗುಡಿ ನವರಾತ್ರಿ ಉತ್ಸವ, ಡೇರೆಮೇಳ, ಫಲಪುಷ್ಪ ಮೇಳಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಲಾಸಕ್ತಿಯ ಮನಸ್ಸಿದ್ದರೆ ಕಸದಿಂದಲೂ ರಸ ಪಡೆಯಬಹುದು ಎಂಬುದಕ್ಕೆ ಕುಸುಮ ಭಟ್ಟರು ನಿದರ್ಶನರಾಗಿದ್ದಾರೆ.
First published:January 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ