ಜಮೀನು ಸಮೀಕ್ಷೆ ಮಾಡದಿದ್ದರೆ ಪ್ರಧಾನಿ ಬಳಿಗೆ ಎತ್ತಿನಬಂಡಿ ಮೆರವಣಿಗೆ: ಶಿವಪೂರ ರೈತರ ಎಚ್ಚರಿಕೆ
Shivapura villagers: ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಶಿವಪೂರ ಗ್ರಾಮದಲ್ಲಿ ರೈತರ ಜಮೀನಿಗೆ ಸರಿಯಾದ ಪಹಣಿ ಸಿಗದ ಕಾರಣ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜಮೀನು ರೀಸರ್ವೆ ಮಾಡದಿದ್ದರೆ ಪ್ರಧಾನಿ ಬಳಿಗೆ ಎತ್ತಿನಬಂಡಿ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಯಾದಗಿರಿ: ಆಡಳಿತದ ನಿಷ್ಕಾಳಜಿಯಿಂದಾಗಿ ಯಾದಗಿರಿ ಜಿಲ್ಲೆಯ ಶಿವಪೂರ ಗ್ರಾಮದ (Shivapura village of Vadagera taluk in Yadagiri district) ಅನ್ನದಾತರು ಸರಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಧಿಕಾರಿ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯತನದಿಂದ ಅನ್ನದಾತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಕಂದಾಯ ಅಧಿಕಾರಿಗಳ ನಿಷ್ಕಾಳಜಿಗೆ ರೈತರು ಸರಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವಪೂರ ಗ್ರಾಮದಲ್ಲಿ ಸುಮಾರು ವರ್ಷ ಕಳೆದರೂ ಸಮಸ್ಯೆ ಮಾತ್ರ ನೀಗಿಲ್ಲ. ಮೊದಲಿನಿಂದಲೂ ಈ ಗ್ರಾಮದ ಜಮೀನು ಬಗ್ಗೆ ಪಹಣಿಯಲ್ಲಿ ರೈತರು ಭೂಮಿ ಹೊಂದಿದಷ್ಟು ಹೊಂದಾಣಿಕೆ ಆಗುತ್ತಿಲ್ಲ. ಇಡೀ ಗ್ರಾಮದ ರೈತರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ವೇ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಶಿವಪೂರ ರೈತರ ಬಗ್ಗೆ ಕಾಳಜಿ ತೋರಿಲ್ಲ. ಇದರಿಂದ ಬಡ ರೈತರು ಸರಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಪ್ರಧಾನಿ ಬಳಿ ಎತ್ತಿನಬಂಡಿ:
ಜಮೀನು ಸರ್ವೇ ಮಾಡಿ ಸಮಸ್ಯೆ ಪರಿಹರಿಸಬೇಕೆಂದು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿವರೆಗೆ ಶಾಶ್ವತ ಸಮಸ್ಯೆಗೆ ಅಧಿಕಾರಿಗಳು ಮುಕ್ತ ಕಲ್ಪಿಸಿಲ್ಲ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವಪೂರ ಗ್ರಾಮದ ಇಡೀ ಊರಿನ ರೈತರು ರೈತರ ಜಮೀನು ಮರುಸರ್ವೆ ಮಾಡಲು ಒತ್ತಾಯಿಸಿದ್ದಾರೆ. ಶಿವಪೂರ ಗ್ರಾಮದ ರೈತರು ಹೆಚ್ಚು ಜಮೀನು ಹೊಂದಿದ್ದರೂ ಪಹಣಿಯಲ್ಲಿ ಕಡಿಮೆ ಜಮೀನು ನಮೂದಾಗಿದೆ. ರೈತರ ಜಮೀನಿಗು ಹಾಗೂ ಪಹಣಿಗು ಸರಿಯಾಗಿ ಹೊಂದಾಣಿಕೆ ಆಗುತ್ತಿಲ್ಲ. ಹೆಚ್ಚು ಜಮೀನು ಹೊಂದಿದ್ದರೂ ಬೆಳೆ ನಷ್ಟವಾದರೆ, ಇಲ್ಲವೇ ಸರಕಾರದ ಬ್ಯಾಂಕ್ ಸೌಲಭ್ಯ ಪಡೆಯಬೇಕಾದರೆ ಜಮೀನು ಹೊಂದಿದಷ್ಟು ಸೌಲಭ್ಯ ಸಿಗುತ್ತಿಲ್ಲ. ಪಹಣಿಯಲ್ಲಿ ಇದ್ದಷ್ಟು ಮಾತ್ರ ಸೌಲಭ್ಯ ಪಡೆಯುವಂತಾಗಿದೆ. ಅಧಿಕಾರಿಗಳು ಸರ್ವೇ ಮಾಡಿ ಸಮಸ್ಯೆ ಬಗೆ ಹರಿಸದಿದ್ದರೆ ಪ್ರಧಾನಿ ಬಳಿ ಹೋಗಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಶಿವಪೂರ ಗ್ರಾಮದ ರೈತ ಬಸವರಾಜಪ್ಪಗೌಡ ಮಾತನಾಡಿ, “ಸಾಹೆಬ್ರೆ ನಾವು ಬಹಳ ತೊಂದರೆ ಎದುರಿಸುತ್ತಿದ್ದೇವೆ. ನಾವು ಭೂಮಿ ಹೊಂದಿದಷ್ಟು ಪಹಣಿಯಲ್ಲಿ ನಮೂದಾಗಿಲ್ಲ. ಪಹಣಿ ಹೊಂದಾಣಿಕೆ ಆಗುತ್ತಿಲ್ಲ. ಸರಕಾರದ ಬೆಳೆ ಹಾನಿ ಪರಿಹಾರ ಕೂಡ ಪಹಣಿಯಲ್ಲಿ ಇದ್ದಷ್ಟು ಭೂಮಿಗೆ ಮಾತ್ರ ಬರುತ್ತಿದೆ. ಬೆಳೆ ಹಾನಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾದರೂ ಕಡಿಮೆ ಬೆಳೆ ಹಾನಿ ಪರಿಹಾರ ಬರುತ್ತಿದೆ. ಅದೇ ರೀತಿ ಬ್ಯಾಂಕ್ ಸಾಲ ಪಡೆದು ಕೃಷಿ ಮಾಡಬೇಕೆಂದರೂ ಹೆಚ್ಚಿನ ಸಾಲ ಸಿಗುತ್ತಿಲ್ಲ. ಇದರಿಂದ ನಾವು ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದೇವೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಹತ್ತಿರ ಹೋದರೂ ಜಮೀನು ರಿ ಸರ್ವೇ ಮಾಡಿಲ್ಲ. ಇದೇ ರೀತಿ ಅಲಕ್ಷ್ಯ ಮಾಡಿದರೆ ನಾವು ರೈತರೆಲ್ಲರು ಸೇರಿ ಎತ್ತಿನಬಂಡಿ ಕಟ್ಟಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಹತ್ತಿರ ಹೋಗುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳ ಸ್ಪಷ್ಟನೆ:
ರೈತರ ನೋವಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದನೆ ಮಾಡುವ ಕಾರ್ಯ ಮಾಡಿಲ್ಲ. ಇದರಿಂದ ಅನ್ನದಾತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಜಿಲ್ಲಾಧಿಕಾರಿ ಡಾ. ರಾಗಾಪ್ರಿಯಾ ಮಾತನಾಡಿ, ಶಿವಪೂರ ಗ್ರಾಮದ ರೈತರ ಸಮಸ್ಯೆ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ರೈತರು ಈ ಬಗ್ಗೆ ನಮ್ಮ ಗಮನಕ್ಕೆ ತಂದರೆ ಜಮೀನು ಸರ್ವೇ ಮಾಡಿಸಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ವರದಿ: ನಾಗಪ್ಪ ಮಾಲಿಪಾಟೀಲ
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ