ಚಾಮರಾಜನಗರ(ಫೆ. 26): ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯಾದರು ಕಪ್ ಗೆಲ್ಲಲೇಬೇಕು ಎಂದು ಅಭಿಮಾನಿಯೊಬ್ಬ ಮಹದೇಶ್ವರ ದೇವರ ಮೊರೆ ಹೋಗಿದ್ದಾನೆ. ಬಾಳೆ ಹಣ್ಣಿನ ಮೇಲೆ "ಈ ಸಲ ಕಪ್ ನಮ್ದೆ" ಎಂದು ಬರೆದು ಹಣ್ಣ-ದವನವನ್ನು ಮಹದೇಶ್ವರ ರಥಕ್ಕೆ ಎಸೆದು ಆರ್ಸಿಬಿಗೆ ಗೆಲುವಿಗೆ ಪ್ರಾರ್ಥಿಸಿದ್ದಾನೆ.
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಸತತ ಸೋಲಿನಿಂದ ಕಂಗೆಟ್ಟಿದೆ. ಒಮ್ಮೆಯೂ ಅದು ಟ್ರೋಫಿ ಎತ್ತಿಹಿಡಿಯಲು ಸಾಧ್ಯವಾಗಿಲ್ಲ. ಚಾಮರಾಜನಗರ ಜಿಲ್ಲೆಯ ಹನೂರಿನ ರಘು ಎಂಬ ಯುವ ಆರ್ಸಿಬಿಯ ಕಟ್ಟಾ ಅಭಿಮಾನಿ. ಈ ಸಲವಾದರೂ ತಮ್ಮ ನೆಚ್ಚಿನ ತಂಡ ಚಾಂಪಿಯನ್ ಆಗಲಿ ಎಂದು ಲಕ್ಷಾಂತರ ಅಭಿಮಾನಿಗಳಂತೆ ತವಕಿಸಿದ್ದಾರೆ. ಅದರಂತೆ ಮಹದೇಶ್ವರನಿಗೂ ಅವರು ಮೊರೆ ಹೋಗಿದ್ಧಾರೆ. ಮಹದೇಶ್ವರನ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳಲು ಹರಕೆ ಹೊರುತ್ತಾರೆ. ಹರಕೆ ಹೊತ್ತವರು ಬಾಳೆ ಹಣ್ಣು ಹಾಗೂ ತುಳಸಿ ಎರಡನ್ನು ಸೇರಿಸಿ ರಥದ ಮೇಲೆ ಎಸೆಯುತ್ತಾರೆ. ಇದೇ ಹಣ್ಣ-ದವನ ಎನ್ನುವುದು.
ಐಪಿಎಲ್ 11 ನೇ ಆವೃತ್ತಿಯಲ್ಲಿ ಆರ್’ಸಿಬಿ ಅಭಿಮಾನಿಗಳು ವಿರಾಟ್ ಪಡೆಯನ್ನು ಹುರಿದುಂಬಿಸಲು 'ಈ ಸಲ ಕಪ್ ನಮ್ದೇ' ಎಂಬ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡಿದ್ದರು.
ಇದನ್ನೂ ಓದಿ : ಜಿಲ್ಲಾಧಿಕಾರಿ ಖಡಕ್ ನಿರ್ದೇಶನದ ನಂತರ ರೈತನ ಜಮೀನಿಗೆ ಒಂದೇ ದಿನದಲ್ಲಿ ವಿದ್ಯುತ್ ಮರುಸಂಪರ್ಕ
ಇದು ಎಷ್ಟು ಪ್ರಸಿದ್ಧವಾಗಿತ್ತೆಂದರೆ ಎಬಿಡಿವಿಲಿಯರ್ಸ್ ಮಗನಿಂದ ಹಿಡಿದು ವಿರಾಟ್ ಕೊಹ್ಲಿ ಬಾಯಲ್ಲೂ 'ಈ ಸಲ ಕಪ್ ನಮ್ದೇ' ಎಂಬ ಘೋಷ ವಾಕ್ಯ ಸರಾಗವಾಗಿ ಹರಿದಾಡ ತೊಡಗಿತು. ಆದರೆ ಆರ್ಸಿಬಿ ತಂಡ ಸೋತು ಸುಣ್ಣವಾಗಿತ್ತು. 2019 ರಲ್ಲಿ ನಡೆದ 12 ನೇ ಆವೃತ್ತಿಯಲ್ಲಿ ಆರ್ಸಿಬಿ ಪ್ಲೇ ಆಫ್ ಹಂತಕ್ಕೆ ತಲುಪದೆ ಸೋತಿತ್ತು.
ಇದೀಗ ಅಭಿಮಾನಿಯೊಬ್ಬ ಮಹದೇಶ್ವರನ ಮೊರೆ ಹೋಗುವ ಮೂಲಕ ಮತ್ತೆ "ಈ ಸಲ ಕಪ್ ನಮ್ದೆ ಎಂಬ ಘೋಷಣೆಯ ಟ್ರೆಂಡ್ ಆರಂಭವಾಗಿದೆ.
(ವರದಿ : ಎಸ್ ಎಂ ನಂದೀಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ