Rajyotsava Award 2021: ನಿಮ್ಮ ನಡುವೆ ಇರುವ ಸಾಧಕರನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ನೀವೇ ಶಿಫಾರಸು ಮಾಡಬಹುದು: ಹೇಗೆ ಗೊತ್ತಾ?

ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೂ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶಿಸಬಹುದಾಗಿದೆ, ತಾವು ಪ್ರಶಸ್ತಿಗೆ ಶಿಫಾರಸು ಮಾಡುವ ವ್ಯಕ್ತಿಗಳ ಹೆಸರನ್ನು ಕಳುಹಿಸಲು ಅಕ್ಟೋಬರ್ 15 ನೇ ತಾರೀಖಿನವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಬೆಂಗಳೂರು, (ಸೆಪ್ಟೆಂಬರ್ 25): ನವೆಂಬರ್ ಒಂದರಂದು 66ನೇ ಕರ್ನಾಟಕ ರಾಜ್ಯೋತ್ಸವ (66th Kannada Rajyotsava) ಆಚರಣೆಯನ್ನು ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (Rajyotsava Award 2021) ಪ್ರದಾನ ಮಾಡಲಾಗುವುದು. ಈ ಬಾರಿಯ ವಿಶೇಷವೆಂದರೆ, ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಗುರುತಿಸಿ ಆನ್​ಲೈನ್ ಮೂಲಕ ಅವರ ಹೆಸರು ಶಿಫಾರಸು ಮಾಡಲು ಸಾರ್ವಜನಿಕರಿಗೇ ಅವಕಾಶ ಕಲ್ಪಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ (Kannada And Culture Minister V Sunil Kumar) ಹೇಳಿದ್ದಾರೆ.

    ಈ ವರ್ಷ 66 ಅರ್ಹ ಸಾಧಕರನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಸಾರ್ವಜನಿಕರು ಯಾರೇ ಆಗಲಿ ಅವರು ಸೇವಾ ಸಿಂಧು ಪೋರ್ಟಲ್ ಮೂಲಕ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಿದ್ಧಪಡಿಸಲಾಗಿರುವ ವಿಶೇಷ ನಮೂನೆಯ ಅರ್ಜಿಯಲ್ಲಿ ಮೂರು ಹೆಸರುಗಳನ್ನು ಶಿಫಾರಸು ಮಾಡಬಹುದಾಗಿದೆ. ಈ ಮೂವರು ಸಾಧಕರುಗಳ ಹೆಸರು, ಅವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ, ಅವರ ಊರು , ವಿಳಾಸ, ಸಂಪರ್ಕ ಸಂಖ್ಯೆಇತ್ಯಾದಿ ವಿವರಗಳನ್ನು ಒದಗಿಸಲು ಈ ಅರ್ಜಿ ನಮೂನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

    ರಾಜ್ಯದ ಮೂಲೆ ಮೂಲೆಯಲ್ಲಿ ವಾಸ ಮಾಡುತ್ತಿರುವ ಹಾಗೂ ಎಲೆಮರೆ ಕಾಯಿಯಂತೆ ತಮ್ಮ, ತಮ್ಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ, ಮಾಡುತ್ತಿರುವ ವ್ಯಕ್ತಿಗಳನ್ನು ಅವರ ಸುತ್ತ ಮುತ್ತಲೂ ಇರುವವರು ಗುರುತಿಸಿ ಅವರ ಸಾಧನೆಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ನಮಗೆ ತಲುಪಿಸಿದರೆ, ಅದನ್ನು ತಜ್ಞರ ಸಮಿತಿಗೆ ನೀಡಲಾಗುತ್ತದೆ, ಅದನ್ನು ಅವರು ಪರಿಶೀಲನೆ ಮಾಡಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಎಂದು ಪರಿಗಣಿಸಿದರೆ ಖಂಡಿತ ಅವರಿಗೆ ಪ್ರಶಸ್ತಿ ಸಿಗುವಂತಾಗುತ್ತದೆ. ಅದರ ಜೊತೆಗೆ ಈ ಪ್ರತಿಷ್ಠಿತ ಪ್ರಶಸ್ತಿಗೆ ನೇರವಾಗಿ ಸಾರ್ವಜನಿಕರೇ ಸಾಧಕರನ್ನು ಆಯ್ಕೆ ಮಾಡಿದಂತಾಗುತ್ತದೆ. ಕ್ರೀಡೆ ಹೊರತುಪಡಿಸಿದರೆ ಉಳಿದ ಸಾಧಕರು ಕನಿಷ್ಠ 60 ವರ್ಷ ಮೇಲ್ಪಟ್ಟವರಾಗಿರಬೇಕು ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

    ಇಂತಹ ಪ್ರಯೋಗ ಇದೇ ಮೊದಲ ಬಾರಿಗೆ ಮಾಡಲಾಗುತ್ತಿದ್ದು, ಇದು ಅತ್ಯಂತ ಪಾರದರ್ಶಕ ಹಾಗೂ ಪ್ರಜಾಪ್ರಭುತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ನಡೆಯುತ್ತಿರುವುದು ವಿಶೇಷವಾಗಿದೆ ಎಂದು ಸಚಿವ ಸುನೀಲ್ ಕುಮಾರ್ ಅವರು ಹೇಳಿದ್ದಾರೆ. ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೂ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶಿಸಬಹುದಾಗಿದೆ, ತಾವು ಪ್ರಶಸ್ತಿಗೆ ಶಿಫಾರಸು ಮಾಡುವ ವ್ಯಕ್ತಿಗಳ ಹೆಸರನ್ನು ಕಳುಹಿಸಲು ಅಕ್ಟೋಬರ್ 15 ನೇ ತಾರೀಖಿನವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

    ಇದನ್ನು ಓದಿ: HDK Vs Siddaramaiah: ಸುಳ್ಳನ್ನು ಪದೇಪದೆ ಹೇಳುತ್ತಾ ಜನರನ್ನು ದಾರಿ ತಪ್ಪಿಸುವ ʼಸಿದ್ದಕಲೆʼ ಅವರಿಗೆ ಚೆನ್ನಾಗಿ ಸಿದ್ಧಿಸಿದೆ; ಸಿದ್ದರಾಮಯ್ಯ ವಿರುದ್ಧ ಎಚ್ಡಿಕೆ ಕಿಡಿ

    ಕನ್ನಡ ರಾಜ್ಯೋತ್ಸವ ಪ್ರಶಸ್ತಿ

    ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ 1ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವಧನ, 25 ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಾಮಾನ್ಯವಾಗಿ ಅಕ್ಟೋಬರ್ 31ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಕಟಿಸುತ್ತಾರೆ. ರಾಜ್ಯೋತ್ಸವ ಪ್ರಶಸ್ತಿಯನ್ನು 1966 ರಿಂದ ಕೊಡಲು ಪ್ರಾರಂಭಿಸಲಾಯಿತು. ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.
    Published by:HR Ramesh
    First published: