MC Managuli: ದೇವೇಗೌಡರ ಜೊತೆಗಿನ ಮನಗೂಳಿ ಸ್ನೇಹಕ್ಕೆ ಸಾಕ್ಷಿಯಾಗಿದೆ ಈ ಪ್ರತಿಮೆ

1994ರಲ್ಲಿ ಜನತಾದಳದಿಂದ ಶಾಸಕರಾಗಿ ಆಯ್ಕೆಯಾದ ನಂತರ ಗೊಲಗೇರಿ ಗ್ರಾಮಸ್ಥರು ಸನ್ಮಾನಿಸಿ ಗುತ್ತಿ ಬಸವಣ್ಣ ಯೋಜನೆ ಜಾರಿಗೆ ಆಗ್ರಹಿಸಿದ್ದರು.  ಆಗ, ಗ್ರಾಮಸ್ಥರಿಗೆ ಸ್ಪಂದಿಸಿದ್ದ ಎಂ. ಸಿ. ಮನಗೂಳಿ, ಈ ಯೋಜನೆ ಮಂಜೂರಾಗುವ ವರೆಗೂ ತಾವು ಚಪ್ಪಲಿ ಧರಿಸುವುದಿಲ್ಲ ಎಂದು ಪಣ ತೊಟ್ಟಿದ್ದರು. 

ಮನಗೂಳಿ-ದೇವೇಗೌಡರ ಪ್ರತಿಮೆ

ಮನಗೂಳಿ-ದೇವೇಗೌಡರ ಪ್ರತಿಮೆ

  • Share this:
ವಿಜಯಪುರ(ಜ. 29):  ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ನಿನ್ನೆಯಷ್ಟೇ ನಿಧನರಾದ ಮಾಜಿ ಸಚಿವ ಎಂ. ಸಿ. ಮನಗೂಳಿ ಮಧ್ಯೆ ಅವಿನಾಭಾವ ಸಂಬಂಧವಿತ್ತು.  ಇದಕ್ಕೆ ಸಾಕ್ಷಿ ಎಂಬಂತೆ ಇವರಿಬ್ಬರೂ ಜೊತೆಯಾಗಿರುವ ಪ್ರತಿಮೆಯೊಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೊಲಗೇರಿಯಲ್ಲಿದೆ.  2014ರ ಫೆಬ್ರವರಿ 12ರಂದು ನಡೆದ ಕಾರ್ಯಕ್ರಮದಲ್ಲಿ ಈ ಪ್ರತಿಮೆಯನ್ನು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಉದ್ಘಾಟಿಸಿದ್ದರು.  ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಗದಗ ತೋಂಟದಾರ್ಯ ಶ್ರೀಗಳು, ಜೆಡಿಎಸ್ ಮುಖಂಡರಾದ ಬಸವರಾಜ ಹೊರಟ್ಟಿ ಸೇರಿದಂತೆ ಅನೇಕ ನಾಯಕರು ಅಂದು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

ರಾಜಕಾರಣಿಗಳಿಬ್ಬರ ಸ್ನೇಹದ ಸಂಕೇತವಾಗಿ ನಿರ್ಮಿಸಿದ ಈ ಪ್ರತಿಮೆಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಮನಗೂಳಿ ಅವರ ಹೆಗಲ ಮೇಲೆ ಕೈ ಹಾಕಿ ಮಾತನಾಡುತ್ತಿರುವ ದೃ಼ಶ್ಯವಿದೆ.  ಇದು ಮನಗೂಳಿ ಅವರು ದೇವೇಗೌಡ ಅವರೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ರಾಜಕೀಯ ನಾಯಕರಿಬ್ಬರು ಬದುಕಿರುವಾಗಲೇ ಈ ಮೂರ್ತಿ ಪ್ರತಿಷ್ಠಾಪಿಸಲೂ ಪ್ರಮುಖ ಕಾರಣವೂ ಇದೆ.

ಪ್ರತಿಮೆ ಸ್ಥಾಪಿಸಲು ಕಾರಣವೇನು?

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಬರಪೀಡಿತವಾಗಿತ್ತು.  ಕುಡಿಯುವ ನೀರಿಗಾಗಿಯೂ ಇಲ್ಲಿನ ಜನ ಪರಿತಪಿಸುವ ಪರಿಸ್ಥಿತಿ ಇತ್ತು.  1994ರಲ್ಲಿ ಜನತಾದಳದಿಂದ ಶಾಸಕರಾಗಿ ಆಯ್ಕೆಯಾದ ನಂತರ ಗೊಲಗೇರಿ ಗ್ರಾಮಸ್ಥರು ಸನ್ಮಾನಿಸಿ ಗುತ್ತಿ ಬಸವಣ್ಣ ಯೋಜನೆ ಜಾರಿಗೆ ಆಗ್ರಹಿಸಿದ್ದರು.  ಆಗ, ಗ್ರಾಮಸ್ಥರಿಗೆ ಸ್ಪಂದಿಸಿದ್ದ ಎಂ. ಸಿ. ಮನಗೂಳಿ, ಈ ಯೋಜನೆ ಮಂಜೂರಾಗುವ ವರೆಗೂ ತಾವು ಚಪ್ಪಲಿ ಧರಿಸುವುದಿಲ್ಲ ಎಂದು ಪಣ ತೊಟ್ಟಿದ್ದರು.

MC Managuli Death: ಶಾಸಕ ಎಂ.ಸಿ ಮನಗೂಳಿ ಇನ್ನಿಲ್ಲ; ಗ್ರಾಮ ಸೇವಕರಾಗಿದ್ದ ಮನಗೂಳಿ ಮುತ್ಯಾ ರಾಜಕೀಯ ಜೀವನ ಇಲ್ಲಿದೆ

ಛಲಬಿಡದ ತ್ರಿವಿಕ್ರಮನಂತೆ ಎಂ. ಸಿ. ಮನಗೂಳಿ ಮನವರಿಕೆ ಮಾಡಿಕೊಟ್ಟ ಪರಿಣಾಮ ಎಚ್. ಡಿ. ದೇವೇಗೌಡರು ಪ್ರಧಾನಿಯಾದ ಸಂದರ್ಭದಲ್ಲಿ ಈ ಯೋಜನೆಗೆ ಮಂಜೂರಾತಿ ಸಿಕ್ಕಿತು.  ಆಗ, ನಾಲ್ಕು ವರ್ಷಗಳ ನಂತರ ಎಂ. ಸಿ. ಮನಗೂಳಿ ಚಪ್ಪಲಿ ಧರಿಸಿದರು.  ಎಚ್. ಡಿ. ದೇವೇಗೌಡರ ಈ ಋಣ ತೀರಿಸಲು ಮತ್ತು ಎಂ. ಸಿ. ಮನಗೂಳಿ ಅವರು ದೇವೇಗೌಡರ ಜೊತೆ ಹೊಂದಿರುವ ಸ್ನೇಹ, ಅವಿನಾಭಾವ ಸಂಬಂಧದ ಪ್ರತೀಕವಾಗಿ ಇವರಿಬ್ಬರ ಮೂರ್ತಿಯನ್ನು ನಿರ್ಮಿಸಲು ಗ್ರಾಮಸ್ಥರು ನಿರ್ಧರಿಸಿದರು.

ಗುತ್ತಿ ಬಸವಣ್ಣ ಏತ ನೀರಾವರಿಯಿಂದ ಜಮೀನಿಗೆ ನೀರು ಹರಿದ ಕಾರಣ ಈ ಭಾಗದ ರೈತರೆಲ್ಲರೂ ಸೇರಿ ಹಣ ಸಂಗ್ರಹಿಸಿ ಸುಮಾರು ರೂ.20 ಲಕ್ಷ ಸಂಗ್ರಹಿಸಿ 12.02.2014ರಲ್ಲಿ ಎಚ್. ಡಿ. ದೇವೇಗೌಡ ಮತ್ತು ಎಂ. ಸಿ. ಮನಗೂಳಿ ಅವರ ಪ್ರತಿಮೆ ಸ್ಥಾಪಿಸಿದ್ದು ಈಗ ಇತಿಹಾಸ ಅಷ್ಟೇ ಅಲ್ಲ, ಜೆಡಿಎಸ್ ನಾಯಕರಿಬ್ಬರ ಗುರು-ಶಿಷ್ಯರ ಸಂಬಂಧ, ಸ್ನೇಹಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ಈ ಭಾಗದ ರೈತ ಮುಖಂಡ ದೇವರಮನಿ.

ಜನತಾದಳ ವಿಭಜನೆಯಾದಾಗ ಬಹುತೇಕ ಶಾಸಕರು ರಾಮಕೃಷ್ಣ ಹೆಗಡೆ ಮತ್ತು ಜೆ. ಎಚ್. ಪಟೇಲರ ಜೆಡಿಯು ಜೊತೆ ಗುರುತಿಸಿಕೊಂಡಿದ್ದರೂ, ಎಂ. ಸಿ. ಮನಗೂಳಿ ಮಾತ್ರ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಜೆಡಿಎಸ್ ಪರ ತಮ್ಮ ಕೊನೆಯ ಉಸಿರು ಇರುವ ತನಕ ನಿಂತಿದ್ದು ಅವರ ಸ್ವಾಮಿ ನಿಷ್ಠೆಗೆ ಸಾಕ್ಷಿಯಾಗಿದೆ. ಅಂದ ಹಾಗೆ, ಮಾಜಿ ಪ್ರಧಾನಿ ದೇವೇಗೌಡರ ಮೊದಲ ಪ್ರತಿಮೆ ಬಹುಶಃ ಇದೇ ಆಗಿದೆ.
Published by:Latha CG
First published: