Udupi: ಭಿಕ್ಷೆ ಬೇಡಿದ ಲಕ್ಷಗಟ್ಟಲೇ ಹಣವನ್ನು ದೇವಾಲಯಗಳಿಗೆ ದಾನ ನೀಡಿದ ವೃದ್ಧೆ

ಇತ್ತೀಚೆಗೆ ಜೀರ್ಣೋದ್ಧಾರಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೂ 1.5 ಲಕ್ಷ ರೂ.ಗಳನ್ನು ಕಾಣಿಕೆ ಸಮರ್ಪಿಸಿದ್ದಾರೆ. ಗುರುವಾರ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನಕ್ಕೆ 1 ಲಕ್ಷ ರೂ.ಗಳನ್ನು ಭೋಜನ ನಿಧಿಗೆ ಸಮರ್ಪಿಸಿದ್ದಾರೆ. ತನ್ನ ವೈಯಕ್ತಿಕ ಖರ್ಚಿಗೆ ಸ್ವಲ್ಪ ಹಣ ಇರಿಸಿಕೊಂಡು ಉಳಿದೆಲ್ಲವನ್ನು ಈಕೆ ದಾನ ಮಾಡುತ್ತಾ ಬಂದಿದ್ದಾರೆ.

ದೇವಾಲಯಗಳಿಗೆ ಹಣ ದಾನ ಮಾಡಿದ ವೃದ್ಧೆ

ದೇವಾಲಯಗಳಿಗೆ ಹಣ ದಾನ ಮಾಡಿದ ವೃದ್ಧೆ

  • Share this:
ಉಡುಪಿ(ಫೆ.05): 'ಭವತಿ ಭಿಕ್ಷಾಂದೇಹಿ' ಎಂದು ಧಾರ್ಮಿಕ ಕ್ಷೇತ್ರಗಳಲ್ಲಿ ಭಿಕ್ಷೆ ಬೇಡಿದ ಹಣವನ್ನು ಅಜ್ಜಿಯೊಬ್ಬರು ದೇವಾಲಯಗಳಿಗೆ ದಾನ ಮಾಡುತ್ತಾರೆ‌. ಅನ್ನದಾನವೇ ಶ್ರೇಷ್ಠದಾನ ಎಂದು ನಂಬಿರುವ ಈಕೆ, ಭಿಕ್ಷೆ ಬೇಡಿ ಲಕ್ಷ -ಲಕ್ಷ ಹಣವನ್ನ ದಾನ ಕೊಟ್ಟು ಮಹಾಕಾರ್ಯ ಮೆರೆದಿದ್ದಾರೆ. ಅಯ್ಯಪ್ಪ ವ್ರತಧಾರಿಯಾದ ಈ ವೃದ್ಧೆಯನ್ನು ಕರಾವಳಿಯ ಬಹುತೇಕ ದೇವಾಲಯಗಳಲ್ಲಿ ಜನ ಕಾಣುತ್ತಾರೆ. ಭವತಿ ಭಿಕ್ಷಾಂದೇಹಿ ಎಂದು ಜನರ ಮುಂದೆ ಕೈಚಾಚುವ ಈಕೆಗೆ ಜನರು, ಪ್ರಯಾಣಿಕರು ಅಷ್ಟೋ ಇಷ್ಟೋ ಹಣ ಕೊಡುತ್ತಾರೆ. ಯಾರೋ ಭಿಕ್ಷುಕಿ ಎಂದು ಮರೆತುಬಿಡುತ್ತಾರೆ. ಆದರೆ ಯಾವ ಧನಿಕನಿಗೂ ಇಲ್ಲದ ಹೃದಯ ಶ್ರೀಮಂತಿಕೆ ಈ ವೃದ್ದೆಗೆ ಇದೆ ಅನ್ನೋದು ಈಗ  ಸಾಬೀತಾಗಿದೆ.

ನೂರಲ್ಲ.. ಸಾವಿರವಲ್ಲ.. ಬರೋಬ್ಬರಿ ಒಂದು ಲಕ್ಷ ರೂಪಾಯಿಯನ್ನು ಈಕೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಗುರುನರಸಿಂಹ ದೇವರ ಸನ್ನಿಧಾನಕ್ಕೆ ದಾನ ನೀಡಿದ್ದಾರೆ. ದೇವಸ್ಥಾನದ ಅನ್ನಸಂತರ್ಪಣೆ ಗೆ ಈ ಹಣವನ್ನು ಬಳಸಿಕೊಳ್ಳುವಂತೆ ಕೋರಿದ್ದಾರೆ. ಭಿಕ್ಷೆ ಬೇಡಿದ ಹಣವನ್ನು ದೇವರಿಗೆ ಸಮರ್ಪಿಸುವ ಈಕೆಯ ಹೃದಯ ವೈಶಾಲ್ಯತೆ ಕಂಡು ಪರಿಸರದ ಜನರು ಬೆಕ್ಕಸ ಬೆರಗಾಗಿದ್ದಾರೆ.

ಹೌದು, ಅಯ್ಯಪ್ಪ ಭಕ್ತೆಯಾದ ಈ ವ್ರತಧಾರಿ ವೃದ್ಧೆಯ ಹೆಸರು ಅಶ್ವತಮ್ಮ. ಕುಂದಾಪುರದ ಗಂಗೊಳ್ಳಿ ನಿವಾಸಿಯಾಗಿರವ  ಇಳಿವಯಸ್ಸಿನ  ವೃದ್ಧೆ ಯಾಗಿರುವ ಈಕೆ ಕರಾವಳಿಯ ನಾನಾ ದೇವಸ್ಥಾನಗಳ ಆವರಣಗಳಲ್ಲಿ ಮತ್ತು ಟೋಲ್ಗೇಟ್ ನಲ್ಲಿ ಜನರಿಂದ ಹಣವನ್ನು ಸಂಗ್ರಹಿಸುತ್ತಾರೆ. ಮಾಮೂಲಾಗಿ ಭಿಕ್ಷುಕರಿಗೆ ನೀಡುವಂತೆ ಈಕೆಗೂ ಎಲ್ಲರೂ ಹಣ ನೀಡುತ್ತಾರೆ. ಹೀಗೆ ಸಂಗ್ರಹವಾದ ಹಣದಲ್ಲಿ ಈಕೆ ಸುಮಾರು ಐದು ಲಕ್ಷಕ್ಕೂ ಅಧಿಕ ಹಣವನ್ನು ದಾನವಾಗಿ ವಿವಿಧ ದೇವಾಲಯಗಳಿಗೆ ಕೊಟ್ಟಿದ್ದಾರೆ.

ಕೋಲಾರದಲ್ಲಿ ಮಾವಿಗೆ ರೋಗಬಾಧೆ ಕಾಟ; ಬೆಳೆ ಉಳಿಸಲು ಕೀಟನಾಶಕ ಸಿಂಪಡಿಸುತ್ತಿರುವ ಬೆಳೆಗಾರರು

ಮೊದಲು ತನ್ನೂರು ಕಂಚುಗೋಡುವಿನಲ್ಲಿರುವ ದೇವಸ್ಥಾನಕ್ಕೆ 1.5ಲಕ್ಷ ರೂಪಾಯಿ ದೇಣಿಗೆಯೊಂದಿಗೆ ಈ ದಾನ ಪ್ರಕ್ರಿಯೆ ಆರಂಭವಾಗಿತ್ತು. ನಂತರ ಶಬರಿಮಲೆಯ ಪಂಪಾ ಕ್ಷೇತ್ರದಲ್ಲಿ 1ಲಕ್ಷ ರೂ. ವೆಚ್ಚದಲ್ಲಿ ಅನ್ನದಾನ ನಡೆಸಲಾಗಿದೆ. ಅಯ್ಯಪ್ಪ ಸ್ವಾಮಿ ಬೆಳೆದ ಸ್ಥಳವಾದ ಪಂದಳ ಕ್ಷೇತ್ರದಲ್ಲಿ 30ಸಾವಿರ ರೂ. ವೆಚ್ಚದಲ್ಲಿ ಅನ್ನದಾನ ಮಾಡಿದ್ದಾರೆ.

ಇತ್ತೀಚೆಗೆ ಜೀರ್ಣೋದ್ಧಾರಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೂ 1.5 ಲಕ್ಷ ರೂ.ಗಳನ್ನು ಕಾಣಿಕೆ ಸಮರ್ಪಿಸಿದ್ದಾರೆ. ಗುರುವಾರ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನಕ್ಕೆ 1 ಲಕ್ಷ ರೂ.ಗಳನ್ನು ಭೋಜನ ನಿಧಿಗೆ ಸಮರ್ಪಿಸಿದ್ದಾರೆ. ತನ್ನ ವೈಯಕ್ತಿಕ ಖರ್ಚಿಗೆ ಸ್ವಲ್ಪ ಹಣ ಇರಿಸಿಕೊಂಡು ಉಳಿದೆಲ್ಲವನ್ನು ಈಕೆ ದಾನ ಮಾಡುತ್ತಾ ಬಂದಿದ್ದಾರೆ. ಕೊರೋನಾದಿಂದ ದೇಶ ಮುಕ್ತವಾಗಲಿ, ಶಬರಿಮಲೆಗೆ ಕವಿದಿರುವ ಕತ್ತಲು ದೂರವಾಗಲಿ ಎಂದು ಹರಕೆಯನ್ನೂ ಹೊತ್ತಿದ್ದಾರೆ.

ಈಕೆಯ ಪತಿ ಹಾಗೂ ಪುತ್ರ ತೀರಿಕೊಂಡ ನಂತರ ಈಕೆ ಈ ಹಣ ಸಂಗ್ರಹ ಕೆಲಸ ಆರಂಭಿಸಿದ್ದಾರೆ. ಈಕೆಗೆ ಆರು ಮಂದಿ ಮೊಮ್ಮಕ್ಕಳೂ ಇದ್ದಾರೆ. ದೇವರ ಹೆಸರಲ್ಲಿ ದುಡಿದ ಹಣವನ್ನು ದೇವರಿಗೇ ಸಂದಾಯ ಮಾಡುವ ಈ ವೃದ್ದೆಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದೇವಾಲಯಗಳಿಗೆ ದಾನ ಮಾಡುತ್ತಿರುವ ವೃದ್ಧೆ ಇದೀಗ ಕರಾವಳಿಯ ಶಬರಿಯಾಗಿದ್ದಾರೆ.
Published by:Latha CG
First published: