ಬಡತನದಲ್ಲೂ ವಿಶೇಷ ಚೇತನದ ಮಗನಿಗೆ ಪ್ರೀತಿಯ ಆರೈಕೆ; ಹುಬ್ಬಳ್ಳಿಯ ಈ ತಾಯಿಗೊಂದು ಸಲಾಂ

ಕಿತ್ತು ತಿನ್ನುವ ಬಡತನವಿದ್ದರೂ ಮಗುವಿನ ಪಾಲನೆಯಲ್ಲಿ ತಾಯಿ ಪಡುತ್ತಿರುವ ಕಷ್ಟವನ್ನು ನೋಡಿದರೆ ಕರಳು ಕಿತ್ತು ಬರುತ್ತೆ.‌ ಆದರೆ, ಅವರಲ್ಲಿನ ತಾಯಿ ಪ್ರೀತಿ ಮಾತ್ರ ಬತ್ತಿಲ್ಲ

ಮಗನಿಗೆ ಊಟ ಮಾಡಿಸುತ್ತಿರುವ ತಾಯಿ

ಮಗನಿಗೆ ಊಟ ಮಾಡಿಸುತ್ತಿರುವ ತಾಯಿ

  • Share this:
ಹುಬ್ಬಳ್ಳಿ(ಮೇ. 10): ಹುಬ್ಬಳ್ಳಿಯಲ್ಲಿ ನಡೆದಿದ್ದ ಭೀಕರ ಲಾಠಿ ಚಾರ್ಜ್‌ನಿಂದ ಕುಟುಂಬವೊಂದು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿತ್ತು. ಮನೆಗೆ ಆಸರೆಯಾಗಿದ್ದ ವ್ಯಕ್ತಿಯ ಬಲಿ ಪಡೆದಿತ್ತು. ಆದರೆ, ದುರಂತಕ್ಕೆ ಅಳುಕದ ತಾಯಿ ವಿಕಲಚೇತನ ಮಗನ ಸೇವೆ ಮಾಡುತ್ತಾ ವಿಧಿಗೆ ಸವಾಲೆಸೆದಿದ್ದಾಳೆ‌. ತಾಯಿ‌ ಪ್ರೀತಿ ಏನು ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿ ನಿಂತಿದ್ದಾಳೆ.

ಹುಬ್ಬಳ್ಳಿಯಲ್ಲಿ 2001 ರಂದು ವಿಹಿಂಪ ನಾಯಕ ಅಶೋಕ್ ಸಿಂಘಾಲ್ ಅವರ ರಥಯಾತ್ರೆ ವೇಳೆ ದೊಡ್ಡ ಗಲಭೆ ನಡೆದಿತ್ತು. ಲಾಠಿಚಾರ್ಜ್‌ನಲ್ಲಿ ಅಂಬಾಲಾಲ್ ಎಂಬುವರು ಮೃತಪಟ್ಟಿದ್ದರು. ಕಡಲೆಕಾಯಿ ವ್ಯಾಪಾರ ಮಾಡಲು ಹೋಗಿದ್ದ ಬಡ ವ್ಯಾಪಾರಿ ಅಂಬಾಲಾಲ್ ಪೊಲೀಸರ ಲಾಠಿ ಏಟಿಗೆ ಬಲಿಯಾಗಿದ್ದರು. ಆ ಕರಾಳ ಘಟನೆ ನಡೆದು 18 ವರ್ಷ ಕಳೆದರೂ ಕುಟುಂಬ ಕಣ್ಣೀರು ನಿಂತಿಲ್ಲ. ಪತಿ ನಿಧನದ ನಂತರ ಪತ್ನಿ ಹೇಮಾ ಸಂಕಷ್ಟಕ್ಕೆ ಸಿಲುಕಿದರು. ಪತಿ ನಿಧನರಾದಾಗ ಹೇಮಾ ಅವರು ತುಂಬು ಗರ್ಭಿಣಿಯಾಗಿದ್ದರು. ಹೆರಿಗೆ ನೋವು ಒಂದು ಕಡೆಯಾದರೆ ಇನ್ನೊಂದು ಕಡೆ ಪತಿಯ ಸಾವಿನ ನೋವು.

ಈ ದುಃಖದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ದುರ್ಘಟನೆಯ ನೋವಿನಿಂದ ಆಚೆ ಬರಲಾಗದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಗಾಯದ ಮೇಲೆ ಬರೆ ಎಂಬಂತೆ ಹೇಮಾ ಅವರಿಗೆ ವಿಕಲಚೇತನ ಮಗು ಜನಿಸಿದೆ. ಒಂದೆಡೆ ಪತಿಯ ಅಗಲಿಕೆ ಇನ್ನೊಂದೆಡೆ ವಿಕಲಚೇತನ ಮಗನನ್ನ ಸಾಕಲು ಹೇಮಾರವರು ಕಳೆದ 18 ವರ್ಷಗಳಿಂದ ಹರಸಾಹಸ ಪಡುತ್ತಿದ್ದಾರೆ. ಮಗನಿಗೆ ಸರ್ಕಾರದಿಂದ ಬರುವ 1,200 ರೂಪಾಯಿ ಪಿಂಚಣಿಯೇ ಇವರ ಜೀವನಾಧಾರ‌. ಅದರಲ್ಲೇ ಸಂಸಾರ ಸಾಗಿಸುತ್ತಿದ್ದಾರೆ.

ಕಿತ್ತು ತಿನ್ನುವ ಬಡತನವಿದ್ದರೂ ಮಗುವಿನ ಪಾಲನೆಯಲ್ಲಿ ತಾಯಿ ಪಡುತ್ತಿರುವ ಕಷ್ಟವನ್ನು ನೋಡಿದರೆ ಕರಳು ಕಿತ್ತು ಬರುತ್ತೆ.‌ ಆದರೆ, ಅವರಲ್ಲಿನ ತಾಯಿ ಪ್ರೀತಿ ಮಾತ್ರ ಬತ್ತಿಲ್ಲ.‌ ವಿಕಲಚೇತನ ಮಗನನ್ನು ಬಹಳ ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಸೀಲ್ ಡೌನ್ ಬ್ಯಾರಿಕೇಡ್ ತೆರವಿಗೆ ಬಂದ ಎಂಪಿ ಜಾಧವ್ : ಶೇಮ್​ ಶೇಮ್​ ಎಂದ ಪುರಸಭಾ ಸದಸ್ಯರು

ಕಳೆದ 18 ವರ್ಷಗಳಿಂದ ಕೈ ತುತ್ತು ಕೊಟ್ಟು ಮಗನ ಸೇವೆ ಮಾಡುತ್ತಿದ್ದಾರೆ. ಯಾರ ಬಳಿಯೂ ಕೈಚಾಚದೆ‌ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಮಗನ ಸೇವೆಗೆ ತನ್ನ ಬದುಕು ಮುಡಿಪಾಗಿಟ್ಟ ಈ ತಾಯಿಗೆ ವಿಶ್ವ ತಾಯಂದಿರ ದಿನದಂದು ಹೃತ್ಪೂರ್ವಕ ನಮನಗಳು.
First published: