ಬಿಎಸ್​ವೈ ಅಬ್ಬರದ ಪ್ರಚಾರ, ಕಾಂಗ್ರೆಸ್​ ನಾಯಕರ ತಾತ್ಸಾರ, ಗೊಂದಲದಲ್ಲಿದೆ ಜೆಡಿಎಸ್​ ಲೆಕ್ಕಾಚಾರ; ಇದು ಉಪಚುನಾವಣಾ ಸಮಾಚಾರ

Karnataka ByPolls: ರಾಜಕೀಯ ಡೊಂಬರಾಟದ ಮಧ್ಯೆ ಯಾರಿಗೆ ಮತ ಚಲಾಯಿಸಬೇಕು? ಸುಪ್ರೀಂ ಕೋರ್ಟ್​ನಿಂದಲೇ ಅನರ್ಹರೆನ್ನಿಸಿಕೊಂಡವರನ್ನು ಗೆಲ್ಲಿಸಬೇಕಾ? ಅಥವಾ ಸೋಲಿಸುವ ಮೂಲಕ ಪಾಠ ಕಲಿಸಬೇಕಾ?ಎಂಬುದು ರಾಜ್ಯದ ಜನತೆಗೆ ಸ್ಪಷ್ಟವಾಗಿದೆ. ಇದರ ಫಲಿತಾಂಶಕ್ಕೆ ಡಿಸೆಂಬರ್​ 9 ವರೆಗೆ ಕಾಯಲೇಬೇಕಿರುವುದು ಅನಿವಾರ್ಯ.

Rajesh Duggumane | news18-kannada
Updated:December 4, 2019, 3:15 PM IST
ಬಿಎಸ್​ವೈ ಅಬ್ಬರದ ಪ್ರಚಾರ, ಕಾಂಗ್ರೆಸ್​ ನಾಯಕರ ತಾತ್ಸಾರ, ಗೊಂದಲದಲ್ಲಿದೆ ಜೆಡಿಎಸ್​ ಲೆಕ್ಕಾಚಾರ; ಇದು ಉಪಚುನಾವಣಾ ಸಮಾಚಾರ
ಸಿದ್ದರಾಮಯ್ಯ, ಬಿಎಸ್​ವೈ, ಕುಮಾರಸ್ವಾಮಿ
  • Share this:
ನಾಳೆ ಬಹುನಿರೀಕ್ಷಿತ ಕರ್ನಾಟಕ ಉಪಚುನಾವಣೆ ಸಮರ. 15 ಕ್ಷೇತ್ರಗಳ ಪೈಕಿ ಅನರ್ಹರಾದ ರಾಣೆಬೆನ್ನೂರಿನ ಆರ್​. ಶಂಕರ್​ ಹಾಗೂ ಶಿವಾಜಿ ನಗರ ಕ್ಷೇತ್ರದ ರೋಷನ್​ ಬೇಗ್​ ಹೊರತುಪಡಿಸಿ ಉಳಿದ ಎಲ್ಲ 13 ಅನರ್ಹರು ಸ್ಪರ್ಧೆಯಲ್ಲಿದ್ದಾರೆ. ಮುಖ್ಯಮಂತ್ರಿ ಬಿಎಸ್​ವೈಗೆ ಇದು ಮಾಡು ಇಲ್ಲವೇ ಮಡಿ ಚುನಾವಣೆ. ಆಪರೇಷನ್​ ಕಮಲ ನಡೆಸುವ ಮೂಲಕ ತಮ್ಮ ಸರ್ಕಾರವನ್ನು ಉರುಳಿಸಿದ ಬಿಜೆಪಿಯನ್ನು ಸೋಲಿಸಿ ಪ್ರತಿಷ್ಠೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಕಾಂಗ್ರೆಸ್​ ಇದ್ದರೆ, ಜೆಡಿಎಸ್​ಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಹೀಗಾಗಿ ಈ ಉಪಚುನಾವಣೆ ಎಲ್ಲ ಪಕ್ಷಗಳ ಪಾಲಿಗೂ ಬಹುಮುಖ್ಯವಾದ ಪರೀಕ್ಷೆಯಾಗಿದೆ.

ಅನರ್ಹ ಶಾಸಕರ ಕುರಿತು ಸುಪ್ರೀಂ ತೀರ್ಪು ಪ್ರಕಟವಾದ ದಿನದಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಚಾರ ನಡೆಸುತ್ತಿರುವ ಸಿಎಂ ಬಿ.ಎಸ್. ಯಡಿಯೂರಪ್ಪ,‘ಉಪಚುನಾವಣೆ ನಡೆಯುತ್ತಿರುವ ಹದಿನೈದೂ ಕ್ಷೇತ್ರಗಳಲ್ಲಿ ಗೆಲುವು ನಮ್ಮದೇ’ ಎಂದು ಅಬ್ಬರಿಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​ ‘ಬಿಜೆಪಿ ಹಗಲು ಕನಸು ಕಾಣುತ್ತಿದೆ. ಅನರ್ಹರಿಗೆ ಸೋಲು ಕಟ್ಟಿಟ್ಟ ಬುತ್ತಿ’ ಎಂದು ಟಾಂಗ್ ನೀಡುತ್ತಿದೆ. ಹೋದಲ್ಲಿ ಬಂದಲ್ಲೆಲ್ಲಾ ಕಾಂಗ್ರೆಸ್​ ವಿಪಕ್ಷ ನಾಯಕ ಸಿದ್ದರಾಮಯ್ಯ ಅನರ್ಹರ ಕುರಿತು ಕೆಂಡ ಕಾರುತ್ತಿದ್ದಾರೆ. ಇನ್ನೂ ಮಾಜಿ ಸಿಎಂ ಕುಮಾರಸ್ವಾಮಿಯ ಕಣ್ಣೀರಂತು ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

ಈ ಮಧ್ಯೆ ಯಾರಿಗೆ ಮತ ಚಲಾಯಿಸಬೇಕು? ಸುಪ್ರೀಂ ಕೋರ್ಟ್​ನಿಂದಲೇ ಅನರ್ಹರೆನ್ನಿಸಿಕೊಂಡವರನ್ನು ಗೆಲ್ಲಿಸಬೇಕಾ? ಅಥವಾ ಸೋಲಿಸುವ ಮೂಲಕ ಪಾಠ ಕಲಿಸಬೇಕ?ಎಂಬುದು ರಾಜ್ಯದ ಜನತೆಗೆ ಸ್ಪಷ್ಟವಾಗಿದೆ. ಇದರ ಫಲಿತಾಂಶಕ್ಕೆ ಡಿಸೆಂಬರ್​ 9 ವರೆಗೆ ಕಾಯಲೇಬೇಕಿರುವುದು ಅನಿವಾರ್ಯ.

ಬಿಎಸ್​ವೈ ದಾಳ:

ಬಿ.ಎಸ್. ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದವರು. ಪಕ್ಷಕ್ಕಾಗಿ ಇಷ್ಟೆಲ್ಲ ಶ್ರಮವಹಿಸಿದ ಮೇಲೆ ಮುಖ್ಯಮಂತ್ರಿಯಾಗುವ ಕನಸು ಕಾಣುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬುದು ಕಮಲ ಕಾರ್ಯಕರ್ತರ ಅಭಿಪ್ರಾಯ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಹೊರತಾಗಿಯೂ ಸರ್ಕಾರ ರಚಿಸುವಲ್ಲಿ ಬಿಎಸ್​ವೈ ವಿಫಲರಾಗಿದ್ದರು.

ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಏಕೈಕ ಅಜೆಂಡಾದಿಂದಾಗಿ ಕಾಂಗ್ರೆಸ್​-ಜೆಡಿಎಸ್​ ಪಕ್ಷಗಳು ಮೈತ್ರಿ ಸಾಧಿಸಿ ಸರ್ಕಾರ ರಚನೆ ಮಾಡಿದ್ದರು. ಆದರೂ, ಬಿಎಸ್​ವೈ ಸುಮ್ಮನೆ ಕೂರದೆ ತೆರೆಯ ಹಿಂದೆ ತಮ್ಮ ರಾಜಕೀಯ ದಾಳವನ್ನು ಉರುಳಿಸುವಲ್ಲಿ ಯಶಸ್ವಿಯಾಗಿದ್ದರು.

ಕಾಂಗ್ರೆಸ್​​-ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ರೆಬೆಲ್​ ಶಾಸಕರನ್ನು ಗುರುತಿಸಿ ಗಾಳ ಹಾಕಿದ್ದು, ಅಪರೇಷನ್ ಕಮಲ ನಡೆಸುವ ಮೂಲಕ ಮೈತ್ರಿ ಸರ್ಕಾರವನ್ನು ಉರುಳಿಸಿದ್ದು, ಬಿಎಸ್​ವೈ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ಹಾಗೂ ಅಂದಿನ ಸ್ಪೀಕರ್​ ರಮೇಶ್​ ಕುಮಾರ್​ ಸಾಮೂಹಿಕ ರಾಜೀನಾಮೆ ನೀಡಿದ ಎಲ್ಲಾ ಶಾಸಕರನ್ನು ಅನರ್ಹಗೊಳಿಸಿ ಆದೇಶಿಸಿದ್ದು ಇಂದು ಇತಿಹಾಸ.ಬಿಎಸ್​ವೈ ಪಾಲಿಗೆ ಇದು ಮಾಡು ಇಲ್ಲವೆ ಮಡಿ ಚುನಾವಣೆ:

ಅನರ್ಹರನ್ನು ಗೆಲ್ಲಿಸುವ ಸಂಪೂರ್ಣ ಜವಾಬ್ದಾರಿಯನ್ನು ಬಿಎಸ್​ವೈ ಹೊತ್ತುಕೊಂಡಿದ್ದಾರೆ. ಅವರಿಗೆ ಟಿಕೆಟ್​ ಕೊಡಿಸಿ, ಅವರ ಪರ ಎಡಬಿಡದೆ ಪ್ರಚಾರ ಮಾಡುತ್ತಿದ್ದಾರೆ. ಕಳೆದ 20 ದಿನಗಳಿಂದ ಬಿಎಸ್​ವೈ ತಲೆಯಲ್ಲಿ ಓಡುತ್ತಿರುವ ಏಕೈಕ ವಿಚಾರ ಎಂದರೆ ಉಪಚುನಾವಣೆಯನ್ನು ಗೆಲ್ಲುವುದು ಮತ್ತು ಆ ಮೂಲಕ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವುದು.

ಹೌದು, ಬಿಎಸ್​ವೈ ಕಳೆದ 20 ದಿನಗಳಿಂದ ಒಂದೇ ಒಂದು ದಿನವೂ ರೆಸ್ಟ್​ ತೆಗೆದುಕೊಂಡಿಲ್ಲ. ಪ್ರತಿ ಕ್ಷೇತ್ರಕ್ಕೆ ತೆರಳಿ ‘ಅನರ್ಹರನ್ನು ಅರ್ಹರನ್ನಾಗಿ ಮಾಡಿ’, ‘ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ ಅನರ್ಹರನ್ನು ಗೆಲ್ಲಿಸಿ’ ಎಂದು ಮತದಾರರ ಬಳಿ ಅಂಗಲಾಚುತ್ತಿದ್ದಾರೆ. ಈ ಮೂಲಕ ಮುಂದಿನ ಮೂರು ವರ್ಷವೂ ತಾವೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಆಡಳಿತ ಸಂಪೂರ್ಣ ಸ್ಥಬ್ದ:

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಹೀಗೆ ಆಡಳಿತ ವರ್ಗದ ಪ್ರತಿಯೊಬ್ಬರೂ ಉಪಚುನಾವಣೆ ಕಣದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಅವರ ಕಣ್ಣಿಗೆ ಈಗ ಕಾಣುತ್ತಿರುವುದು ಕೇವಲ 15 ಕ್ಷೇತ್ರಗಳು ಮಾತ್ರ. ಇದನ್ನು ಬಿಟ್ಟು, ಮತ್ಯಾವ ಕ್ಷೇತ್ರಗಳ ಬಗ್ಗೆಯೂ ಇವರು ಚಿಂತೆ ಮಾಡುತ್ತಿಲ್ಲ. ಈ ವಿಚಾರದ ಬಗ್ಗೆ ಮತದಾರ ಕೋಪಗೊಂಡಿದ್ದಾನೆ. ನೆರೆಗೆ ತುತ್ತಾದವರ ಬಾಳು ಇನ್ನೂ ಸಮಸ್ಥಿತಿಗೆ ಬಂದಿಲ್ಲ, ಸರಿಯಾದ ಪರಿಹಾರವೂ ಸಿಗದೆ ಈಗಲೂ ಎಲ್ಲರೂ ತಾತ್ಕಾಲಿಕ ಶೆಡ್​ನಲ್ಲೇ ಜೀವನ ಸಾಗಿಸಬೇಕಾದ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಿರಾಶ್ರಿತರ ಸಮಸ್ಯೆಗೆ ಸ್ಪಂದಿಸಬೇಕಾಗಿದ್ದ ಜನ ಪ್ರತಿನಿಧಿಗಳು ಕೇವಲ 15 ಕ್ಷೇತ್ರಗಳ ಮೇಲೆ ಗಮನ ಹರಿಸಿದರೆ ಹೇಗೆ? ಎನ್ನುವ ಪ್ರಶ್ನೆ ಸಾಮಾನ್ಯರದ್ದು.

ಚುನಾವಣೆ ಕುರಿತು ಕಾಂಗ್ರೆಸ್​​ನ ಕೆಲವು ನಾಯಕರಲ್ಲಿ ತಾತ್ಸಾರವೇಕೆ?:

ಒಂದೆಡೆ ಬಿಜೆಪಿ ಅಬ್ಬರದ ಪ್ರಚಾರ ನಡೆಸಿದ್ದರೆ, ಮತ್ತೊಂದೆಡೆ ಕಾಂಗ್ರೆಸ್​ ಸಹ ‘ಅನರ್ಹರನ್ನು ಸೋಲಿಸಿ ರಾಜ್ಯದ ಮರ್ಯಾದೆ ಉಳಿಸಿ’ ಎನ್ನುವ ಘೋಷವಾಕ್ಯದೊಂದಿಗೆ ಪ್ರಚಾರ ಆರಂಭಿಸಿದೆ. ಪಕ್ಷಕ್ಕೇ ದ್ರೋಹ ಬಗೆದ ಅನರ್ಹರನ್ನು ಸೋಲಿಸಿ ಎಂದು ರಾಜ್ಯದ ಜನತೆ ಎದುರು ಮನವಿ ಮಾಡುತ್ತಿದ್ದಾರೆ. ಈ ಮೂಲಕ ಅನರ್ಹರನ್ನು ಸೋಲಿಸಲು ಕಾಂಗ್ರೆಸ್ ಟೊಂಕ ಕಟ್ಟಿ ನಿಂತಿರುವುದು ಸ್ಪಷ್ಟವಾಗುತ್ತಿದೆ.

ಆದರೆ, ಕಾಂಗ್ರೆಸ್​​ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹೊರತುಪಡಿಸಿ ಬೇರೆ ಯಾವ ನಾಯಕರೂ ಚುನಾವಣಾ ಪ್ರಚಾರದಲ್ಲಿ ಉತ್ಸಾಹ ತೋರದಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ.

ಈ ಹಿಂದೆ ‘ನಮ್ಮ ಭೇಟಿ ಇನ್ನು ರಣರಂಗದಲ್ಲಿ’ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್​ ವಿರುದ್ಧ ಗುಡುಗಿದ್ದ ಕಾಂಗ್ರೆಸ್​ ಟ್ರಬಲ್​ ಶೂಟರ್​ ಡಿಕೆ ಶಿವಕುಮಾರ್​ ಜೈಲಿನಿಂದ ಬಂದ ನಂತರ ಸಂಪೂರ್ಣ ಸೈಲೆಂಟ್​ ಆಗಿದ್ದಾರೆ. ಇನ್ನು, ಐಟಿ ದಾಳಿ ನಂತರ ಜಿ ಪರಮೇಶ್ವರ್​ ಕೂಡ ಕೊಂಚ ಭಯ ಬಿದ್ದಂತೆ ಕಾಣುತ್ತಿದ್ದು, ಚುನಾವಣಾ ಕಣದಿಂದಲೇ ಕಣ್ಮರೆಯಾಗಿದ್ದಾರೆ. ಹೀಗಾಗಿ ಪ್ರಚಾರ ಕಾರ್ಯದಲ್ಲಿ ಸಿದ್ದರಾಮಯ್ಯ ಹಾಗೂ ಗುಂಡೂರಾವ್​ಗೆ ಸರಿಯಾದ ಸಾಥ್​ ಸಿಗುತ್ತಿಲ್ಲ ಎನ್ನಲಾಗುತ್ತಿದೆ.

ಚುನಾವಣೆಯಲ್ಲಿ ಗೆದ್ದರೆ ಸಿದ್ದರಾಮಯ್ಯಗೆ ಹೆಸರು:

ಈ ಬಾರಿಯ ಉಪಚುನಾವಣೆ ಕಾಂಗ್ರೆಸ್​ಗೆ ಪ್ರತಿಷ್ಠೆಯ ಕಣವಾಗಿದೆ. ಇದನ್ನು ಸವಾಲಾಗಿ ಸ್ವೀಕರಿಸಿದವರಲ್ಲಿ ಸಿದ್ದರಾಮಯ್ಯ ಹಾಗೂ ದಿನೇಶ್​ ಗುಂಡೂರಾವ್​ ಮೊದಲಿಗರಾಗಿ ನಿಲ್ಲುತ್ತಾರೆ. ಒಂದೊಮ್ಮೆ ಫಲಿತಾಂಶ ಕಾಂಗ್ರೆಸ್​ ಪರವಾಗಿ ಬಂದರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ಹೈಕಮಾಂಡ್​ ಸಿದ್ದರಾಮಯ್ಯ ಹಾಗೂ ದಿನೇಶ್​ ಗುಂಡೂರಾವ್​ಗೆ ಹೆಚ್ಚು ಮಣೆ ಹಾಕಲಿದೆ ಎನ್ನಲಾಗಿದೆ.

ಬೆರಳೆಣಿಕೆ ಕ್ಷೇತ್ರದ ಮೇಲೆ ಮಾತ್ರ ಜೆಡಿಎಸ್​ ಕಣ್ಣು:

ಉಪಚುನಾವಣೆ ನಡೆಯುತ್ತಿರುವುದು 15 ಕ್ಷೇತ್ರಗಳಿಗಾದರೂ ಜೆಡಿಎಸ್ ಗಮನ ಹರಿಸುತ್ತಿರುವುದು ಬೆರಳೆಣಿಕೆ ಕ್ಷೇತ್ರಗಳ ಮೇಲೆ ಮಾತ್ರ. ಕೆ.ಆರ್​.ಪೇಟೆ, ಹುಣಸೂರು, ಯಶವಂತಪುರ, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್​ ಅರ್ಹ ಎನ್ನುವಂಥ ಅಭ್ಯರ್ಥಿಗಳನ್ನು ಇಳಿಸಿದೆ. ಉಳಿದ ಕಡೆಗಳಲ್ಲಿ ಸ್ಪರ್ಧೆಗೆ ಇಳಿದವರು ನಾಮಕವಾಸ್ತೆ ಎಂಬಂತಾಗಿದೆ.

ಗೊಂದಲದ ಗೂಡಾದ ಜೆಡಿಎಸ್:

ಜೆಡಿಎಸ್​​ ಪಾಳಯ ಇನ್ನೂ ಗೊಂದಲದ ಗೂಡಾಗಿಯೇ ಇದೆ. ಇದಕ್ಕೆ ಕಾರಣ, ಜೆಡಿಎಸ್​ ವರಿಷ್ಠ ಎಚ್.​ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.​ಡಿ. ಕುಮಾರಸ್ವಾಮಿ ನೀಡುವ ಹೇಳಿಕೆಗಳು.

ಉಪಚುನಾವಣೆ ಮುಗಿದ ನಂತರ ಸರ್ಕಾರ ಮುಂದುವರಿಯಲಿದೆ ಎಂದು ಎಚ್.​ಡಿ. ಕುಮಾರಸ್ವಾಮಿ ಹೇಳಿದ್ದರು. ನಂತರ ಇದಕ್ಕೆ ಸ್ಪಷ್ಟನೆ ನೀಡುವ ಕೆಲಸವನ್ನೂ ಅವರು ಮಾಡಿದ್ದರು. ಒಂದೊಮ್ಮೆ ಬಿಜೆಪಿಗೆ ಹಿನ್ನಡೆಯಾದರೆ, ಜೆಡಿಎಸ್​ನವರು ಬಿಎಸ್​ವೈಗೆ ಬೆಂಬಲ ನೀಡಿದರೂ ಅಚ್ಚರಿ ಇಲ್ಲ.

ಸರ್ಕಾರ ಉಳಿಸಿಕೊಳ್ಳಲು ಬೇಕು ಏಳು ಸ್ಥಾನ:

ಅನರ್ಹ ಶಾಸಕರಿಂದ ತೆರವಾದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಮಾತ್ರ ನಾಳೆ ಮತದಾನ ನಡೆಯುತ್ತಿದೆ. ಹಾಗಾಗಿ ಸರಳ ಬಹುಮತ ಸಾಧಿಸಲು ಬೇಕಾಗಿದ್ದು 112 ಸ್ಥಾನಗಳು. ಒಂದೊಮ್ಮೆ ಬಿಜೆಪಿ 7ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಸರ್ಕಾರ ಉಳಿಯಲಿದೆ.
First published: December 4, 2019, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading