ಆಶಯವೇ ಬೇರೆ, ವಾಸ್ತವವೇ ಬೇರೆ; ಪ್ರಸ್ತುತ ರಾಜಕೀಯ ಸ್ಥಿತಿಯ ಮುಂದೆ ಮಂಕಾದ ರವಿಕೃಷ್ಣಾ ರೆಡ್ಡಿ ಪ್ರಾಮಾಣಿಕತೆ?


Updated:June 13, 2018, 4:49 PM IST
ಆಶಯವೇ ಬೇರೆ, ವಾಸ್ತವವೇ ಬೇರೆ; ಪ್ರಸ್ತುತ ರಾಜಕೀಯ ಸ್ಥಿತಿಯ ಮುಂದೆ ಮಂಕಾದ ರವಿಕೃಷ್ಣಾ ರೆಡ್ಡಿ ಪ್ರಾಮಾಣಿಕತೆ?

Updated: June 13, 2018, 4:49 PM IST
- ಶರತ್​ ಶರ್ಮ ಕಲಗಾರು, ನ್ಯೂಸ್​ 18 ಕನ್ನಡ

ಬೆಂಗಳೂರು, (ಜೂ 13): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಶೀರ್ವಾದವೇ ಅಂತಿಮ. ಆದರೆ ಜನಾಶೀರ್ವಾದ ಪಡೆಯುವ ಹಾದಿಗಳು ಮಾತ್ರ ಗತಕಾಲದಿಂದಲೂ ಒಂದೇ ರೂಪ ಹೊಂದಿದೆ. ಹಣ, ತೋಳ್ಬಲ, ಜಾತಿ ಈ ಮೂರನ್ನು ಬದಿಗಿಟ್ಟು ರಾಜಕೀಯದಲ್ಲಿ ಬೆಳೆಯುವ ಸಾಧ್ಯತೆಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಎಲ್ಲೋ ಅಲ್ಲೊಂದು ಇಲ್ಲೊಂದು ಎಂಬಂತೆ ಪ್ರಾಮಾಣಿಕವಾಗಿ ಜನಪರ ಕಾಳಜಿ ಹೊಂದಿದ ಜನ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಆದರೆ ಬಹುತೇಕ ಪ್ರಾಮಾಣಿಕ ಪ್ರಯತ್ನಗಳು ಸೋಲಿನಲ್ಲೇ ಅಂತ್ಯವಾಗುತ್ತಿದೆ.

ಪ್ರಜಾಪ್ರಭುತ್ವದ ಆಶಯಗಳು ಬೇರೆ, ವಾಸ್ತವ ಕಡು ಸತ್ಯಗಳು ಬೇರೆ ಎಂಬುದಕ್ಕೆ ಜ್ವಲಂತ ಉದಾಹರಣೆ ರವಿಕೃಷ್ಣಾ ರೆಡ್ಡಿ. ಸಾಮಾಜಿಕ ಕಾರ್ಯಕರ್ತ, ಜನಪರ ಚಿಂತಕ ರವಿಕೃಷ್ಣಾ ರೆಡ್ಡಿ ಈ ಬಾರಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ದಿಸಿದ್ದರು. ಅಮೆರಿಕಾದಲ್ಲಿ ಇಂಜಿನಿಯರ್​ ಆಗಿ ಕೆಲಸದಲ್ಲಿದ್ದು, ಕೈತುಂಬ ಹಣ ಗಳಿಸುತ್ತಿದ್ದ ರೆಡ್ಡಿ ಎಲ್ಲವನ್ನೂ ಬಿಟ್ಟು ಜನಪರ ಚಳವಳಿಗಳಲ್ಲಿ ಭಾಗಿಯಾದರು. ಸಾಮಾಜಿಕ ಪಿಡುಗಾದ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟಗಳನ್ನು ಮಾಡಿದರು. 2013ರಿಂದ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟರು.

2013ರ ವಿಧಾನಸಭೆ ಚುನಾವಣೆಯಲ್ಲಿ ಬಿಟಿಎಂ ಲೇಔಟ್​ ಕ್ಷೇತ್ರದಿಂದ ಸ್ಪರ್ದಿಸಿದ್ದ ರವಿಕೃಷ್ಣಾರೆಡ್ಡಿ, ರಾಮಲಿಂಗಾರೆಡ್ಡಿಯವರ ಜತೆ ಸೆಣೆಸಿ 7,000ಕ್ಕೂ ಅಧಿಕರ ಮತ ಗಳಿಸಿದ್ದರು. ಸಾಮಾಜಿಕ ಹೋರಾಟಗಾರ ರಾಮಲಿಂಗಾರೆಡ್ಡಿ ವಿರುದ್ಧ 7 ಸಾವಿರ ಮತ ಪಡೆಯುವುದು ಸುಲಭದ ಮಾತಾಗಿರಲಿಲ್ಲ. ರವಿಕೃಷ್ಣಾ ರೆಡ್ಡಿ ಭವಿಷ್ಯದಲ್ಲಿ ವಿಧಾನಸಭೆಗೆ ಕಾಲಿರಿಸುವ ಸಾಧ್ಯತೆ ಆಗ ದಟ್ಟವಾಗಿತ್ತು. ಅಷ್ಟಕ್ಕೇ ಸುಮ್ಮನಾಗದ ರೆಡ್ಡಿ, 2014ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮೀಣ ಜಿಲ್ಲೆಯಿಂದ ಸ್ಪರ್ಧಿಸಿದರು. ಡಿ.ಕೆ. ಶಿವಕುಮಾರ್​ ಸಹೋದರ ಡಿ.ಕೆ. ಸುರೇಶ್​ ವಿರುದ್ಧ ನಿಂತು ರೆಡ್ಡಿ, ಸುಮಾರು 17 ಸಾವಿರ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

2013ರಲ್ಲಿ ಬಿಟಿಎಂ ಲೇಔಟಿನಲ್ಲಿ ಸೋತ ನಂತರ ಸಾಮಾಜಿಕ ಹೋರಾಟಗಳಲ್ಲಿ ರವಿಕೃಷ್ಣಾರೆಡ್ಡಿ ನಿರಂತರ ಕೆಲಸಗಳನ್ನು ಮಾಡಿದರು. ಆದರೆ ಕ್ಷೇತ್ರದ ಜನರ ಬಳಿ ಹೆಚ್ಚಿನ ಒಡನಾಟ ಇಟ್ಟುಕೊಳ್ಳಲಿಲ್ಲ. ಮೊದಲ ಚುನಾವಣೆಯಲ್ಲಿ 7 ಸಾವಿರ ಮತ ಪಡೆದು, ನಿರೀಕ್ಷೆ ಮೂಡಿಸಿದ್ದ ರೆಡ್ಡಿ, ಈ ಬಾರಿ ಕ್ಷೇತ್ರವನ್ನು ಬದಲಾಯಿಸಿದರು. ಸುಮಾರು ಕಳೆದ ಒಂದೂವರೆ ವರ್ಷಗಳಿಂದ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದರು. ಜನರ ಜತೆ ಬೆರೆತರು. ಸುಮಾರು 18 ತಿಂಗಳ ಏಕಾಂಗಿ ಹೋರಾಟಕ್ಕೆ ಸಿಕ್ಕ ಪ್ರತಿಫಲ 1861 ಮತಗಳು!

ಪ್ರಾಮಾಣಿಕವಾದ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಚುನಾವಣಾ ಪ್ರಚಾರ ಮಾಡಿದ ರವಿಕೃಷ್ಣಾ ರೆಡ್ಡಿಗೆ ಹಲವು ತಡೆಗಳು ಉಂಟಾದವು. ಕೆಲವೆಡೆ ಆಗಂತುಕರಿಂದ ಹಲ್ಲೆಗಳಾದವು. ಕೇವಲ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದುದರಿಂದ ಜನರ ಗುರುತಿಸಲಿಲ್ಲ. ಕೆಲವೆಡೆ ಅವಮಾನವನ್ನು ಸಹ ಸಹಿಸಿದರು. ಅಷ್ಟಾದರೂ ಅವರಲ್ಲಿದ್ದ ಛಲ ಬತ್ತಿ ಹೋಗಲಿಲ್ಲ. ತಮ್ಮ ಹೋರಾಟವನ್ನು ಕಡೆಯ ಕ್ಷಣದವರೆಗೂ ಮಾಡಿದರು. ಚುನಾವಣಾ ಪ್ರಚಾರಕ್ಕಾಗಿ ಕೆಲ ಯುವಕರು ಕೆಲಸಗಳನ್ನು ಬಿಟ್ಟು ತಿಂಗಳುಗಳ ಕಾಲ, ಪ್ರಾಮಾಣಿಕವಾಗಿ ಕೆಲಸ ಮಾಡಿದರು. ಎಲ್ಲರ ಆಶಯವೂ ಒಂದೇ ಆಗಿತ್ತು. ವಿಧಾನಸಭೆಗೆ ಪ್ರಾಮಾಣಿಕ ವ್ಯಕ್ತಿಯೊಬ್ಬರನ್ನು ಕಳುಹಿಸುವ ಮೂಲಕ, ಜನರ ಸಮಸ್ಯೆಗಳಿಗೆ ಕಿವಿಗೊಡುವ ಶಾಸಕರನ್ನು ನಿರ್ಮಾಣ ಮಾಡುವುದು.

ಆದರೆ ಈ ಎಲ್ಲಾ ಆಶಯಗಳು ಇಂದಿನ ರಾಜಕೀಯದ ಅಬ್ಬರದಲ್ಲಿ ಕರಗಿಹೋಗಿದೆ. ಚುನಾವಣೆಗಾಗಿ ಕೆಲಸ ಬಿಟ್ಟು ಬಂದ ಹಲವು ಕಾರ್ಯಕರ್ತರಲ್ಲಿದ್ದ ಭರವಸೆಗಳಿಗೆ ಮಾಯದ ಗಾಯವಾಗಿದೆ. ಇಂದಿನ ರಾಜಕೀಯ ಸ್ಥಿತಿಯಲ್ಲಿ ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ ಎಂಬ ಮಾತುಗಳನ್ನು ರವಿಕೃಷ್ಣಾ ರೆಡ್ಡಿ ಜತೆ ಪ್ರಚಾರದಲ್ಲಿ ಭಾಗಿಯಾದ ವ್ಯಕ್ತಿಯೊಬ್ಬರು ಹೇಳುತ್ತಾರೆ. ಸೋಲು ಗೆಲುವುಗಳಾಚೆಗೆ ರವಿಕೃಷ್ಣಾ ರೆಡ್ಡಿಯವರ ಛಲವನ್ನು ಮೆಚ್ಚಲೇ ಬೇಕು. ನಿರಾಸೆಗೊಳ್ಳದೇ ರೆಡ್ಡಿಯಂಥ ಪ್ರಾಮಾಣಿಕ ವ್ಯಕ್ತಿಗಳು ಜನರೊಡನೆ ಬೆರೆತು ಇನ್ನೂ ಕೆಲ ವರ್ಷಗಳ ಕಾಲ ಕೆಲಸ ಮಾಡಿದರೆ, ಜನರ ನಿಲುವನ್ನು ಬದಲಿಸಬಹುದು.
Loading...

ಭವಿಷ್ಯದ ಸಾಧ್ಯಾಸಾಧ್ಯತೆಗಳ ಮೇಲೆ ಗಮನವಿಟ್ಟು ಜನಪರ ಕಳಕಳಿ ಇರುವ ನಾಯಕರು ಇಂದಿನ ಹೋರಾಟವನ್ನು ಮುಂದುವರೆಸಬೇಕಿದೆ. ಆ ಮೂಲಕ ಜನರ ನಿಜವಾದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚಿಸುವ ವ್ಯಕ್ತಿಗಳು ವಿಧಾನಸಭೆ ಏರಬೇಕಿದೆ. ಎಲ್ಲಾ ಹೋರಾಟಗಳ ಆರಂಭವೂ ಚಿಕ್ಕ ಪ್ರಮಾಣದಲ್ಲಿಯೇ ಆಗುತ್ತದೆ, ಆದರೆ ಹೋರಾಟ ನಿರಂತರವಾದರೆ ಯಶಸ್ವಿಯಾಗುತ್ತದೆ ಎಂಬ ಮಾತನ್ನು ರವಿಕೃಷ್ಣಾ ರೆಡ್ಡಿಯಂಥ ಹೋರಾಟಗಾರರು ಅರಿತರೆ ಭವಿಷ್ಯದ ರಾಜಕೀಯದಲ್ಲಿ ಯಶಸ್ಸು ಕಾರಣಬಹುದು.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...